
ಸಾಂದರ್ಭಿಕ ಚಿತ್ರ
ಸಾರ್ವಜನಿಕರೇ ಗಮನಿಸಿ; ಜನವರಿ 27ರಂದು ಬ್ಯಾಂಕ್ ನೌಕರರ ಮುಷ್ಕರ
ಪ್ರಸ್ತುತ ಬ್ಯಾಂಕ್ ನೌಕರರಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ರಜೆ ನೀಡಲಾಗುತ್ತಿದೆ . ಉಳಿದ ಎರಡು ಶನಿವಾರಗಳನ್ನು ರಜಾ ದಿನಗಳೆಂದು ಘೋಷಿಸಲು 2024ರ ಮಾರ್ಚ್‌ನಲ್ಲಿ ನಡೆದ ವೇತನ ಪರಿಷ್ಕರಣೆ ಒಪ್ಪಂದದ ವೇಳೆ ಭಾರತೀಯ ಬ್ಯಾಂಕ್‌ಗಳ ಸಂಘ (IBA) ಸಮ್ಮತಿಸಿತ್ತು .
ವಾರಕ್ಕೆ ಐದು ದಿನಗಳ ಕೆಲಸದ ಅವಧಿಯನ್ನು ಜಾರಿಗೆ ತರಬೇಕು ಎಂಬ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಜನೆವರಿ 27 ರಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದೆ . ಈ ಮುಷ್ಕರವು ಯಶಸ್ವಿಯಾದಲ್ಲಿ ಸತತ ಮೂರು ದಿನಗಳ ಕಾಲ ಸಾರ್ವಜನಿಕ ವಲಯದ ಬ್ಯಾಂಕಿಂಗ್ ಸೇವೆಗಳಲ್ಲಿ ಭಾರಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ .
ಸತತ ಮೂರು ದಿನ ಬ್ಯಾಂಕ್ ರಜೆ ಸಂಭವ
ಜನೆವರಿ 25 ರಂದು ಭಾನುವಾರ ಮತ್ತು ಜನೆವರಿ 26 ರಂದು ಗಣರಾಜ್ಯೋತ್ಸವದ ನಿಮಿತ್ತ ಈಗಾಗಲೇ ಬ್ಯಾಂಕುಗಳಿಗೆ ರಜೆ ಇದೆ . ಒಂದು ವೇಳೆ ಜನೆವರಿ 27 ರಂದು ನೌಕರರು ಮುಷ್ಕರ ನಡೆಸಿದರೆ, ಸತತ ಮೂರು ದಿನಗಳ ಕಾಲ ಬ್ಯಾಂಕುಗಳು ಮುಚ್ಚಿರುತ್ತವೆ, ಇದು ಹಣಕಾಸು ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ .
ನೌಕರರ ಸಂಘಟನೆಗಳ ವಾದವೇನು?
ಪ್ರಸ್ತುತ ಬ್ಯಾಂಕ್ ನೌಕರರಿಗೆ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ರಜೆ ನೀಡಲಾಗುತ್ತಿದೆ . ಉಳಿದ ಎರಡು ಶನಿವಾರಗಳನ್ನು ರಜಾ ದಿನಗಳೆಂದು ಘೋಷಿಸಲು 2024ರ ಮಾರ್ಚ್‌ನಲ್ಲಿ ನಡೆದ ವೇತನ ಪರಿಷ್ಕರಣೆ ಒಪ್ಪಂದದ ವೇಳೆ ಭಾರತೀಯ ಬ್ಯಾಂಕ್‌ಗಳ ಸಂಘ (IBA) ಸಮ್ಮತಿಸಿತ್ತು . ಆದರೆ ಸರ್ಕಾರ ಈ ಬೇಡಿಕೆಯನ್ನು ಜಾರಿಗೆ ತರಲು ವಿಳಂಬ ಮಾಡುತ್ತಿದೆ ಎಂದು ಯುಎಫ್‌ಬಿಯು ಆರೋಪಿಸಿದೆ .
ನೌಕರರ ಸಂಘಟನೆಯು ತನ್ನ ಪ್ರಕಟಣೆಯಲ್ಲಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದೆ
ಶನಿವಾರ ರಜೆ ನೀಡಿದರೆ ಕೆಲಸದ ಅವಧಿಯಲ್ಲಿ ಯಾವುದೇ ನಷ್ಟವಾಗುವುದಿಲ್ಲ, ಏಕೆಂದರೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಹೆಚ್ಚುವರಿ 40 ನಿಮಿಷ ಕೆಲಸ ಮಾಡಲು ನೌಕರರು ಒಪ್ಪಿದ್ದಾರೆ . ಆರ್‌ಬಿಐ (RBI), ಎಲ್‌ಐಸಿ (LIC) ಮತ್ತು ಸರ್ಕಾರಿ ಕಚೇರಿಗಳು ಈಗಾಗಲೇ ವಾರಕ್ಕೆ 5 ದಿನಗಳ ಕಾಲ ಕೆಲಸ ಮಾಡುತ್ತಿವೆ . ಶನಿವಾರದಂದು ಷೇರು ಮಾರುಕಟ್ಟೆ ಮತ್ತು ವಿದೇಶಿ ವಿನಿಮಯ ಮಾರುಕಟ್ಟೆಗಳು ಕೂಡ ಕಾರ್ಯನಿರ್ವಹಿಸುವುದಿಲ್ಲ .
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ
ಬ್ಯಾಂಕ್ ನೌಕರರ ಈ ಬೇಡಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. #5DayBankingNow ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ನಡೆಸಲಾದ ಅಭಿಯಾನವು ಎಕ್ಸ್ (X) ಪ್ಲಾಟ್‌ಫಾರ್ಮ್‌ನಲ್ಲಿ ಸುಮಾರು 2.85 ಲಕ್ಷಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಕಂಡಿದೆ . ದೇಶದ ಒಂಬತ್ತು ಪ್ರಮುಖ ಬ್ಯಾಂಕ್ ಯೂನಿಯನ್‌ಗಳ ಒಕ್ಕೂಟವಾಗಿರುವ ಯುಎಫ್‌ಬಿಯು, ಸಾರ್ವಜನಿಕ ವಲಯದ ಬ್ಯಾಂಕ್‌ಗಳ ನೌಕರರು ಮತ್ತು ಅಧಿಕಾರಿಗಳನ್ನು ಪ್ರತಿನಿಧಿಸುತ್ತಿದೆ.
ಒಂದು ವೇಳೆ ಸರ್ಕಾರವು ನೌಕರರ ಬೇಡಿಕೆಗೆ ಸ್ಪಂದಿಸದಿದ್ದರೆ, ಜನೆವರಿ ತಿಂಗಳ ಕೊನೆಯ ವಾರದಲ್ಲಿ ಬ್ಯಾಂಕಿಂಗ್ ಸೇವೆಗಳಿಗಾಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ .

