2026ರ ಜನವರಿ 1ರಿಂದ 8ನೇ ವೇತನ ಆಯೋಗ, ಬ್ಯಾಂಕಿಂಗ್ ನಿಯಮಗಳು, ಸೋಶಿಯಲ್ ಮೀಡಿಯಾ ನಿರ್ಬಂಧಗಳು ಮತ್ತು ಎಲ್‌ಪಿಜಿ ಬೆಲೆಗಳಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ.

2026ರ ಜನವರಿ 1ರಿಂದ ದೇಶಾದ್ಯಂತ ಹಲವು ಹೊಸ ನೀತಿಗಳು ಮತ್ತು ನಿಯಮಗಳು ಜಾರಿಗೆ ಬರಲಿವೆ. ಇದು ರೈತರು, ಸಂಬಳ ಪಡೆಯುವ ಉದ್ಯೋಗಿಗಳು ಮತ್ತು ಸಾಮಾನ್ಯ ಜನಜೀವನದ ಮೇಲೆ ನೇರ ಪರಿಣಾಮ ಬೀರಲಿದೆ. ಬ್ಯಾಂಕಿಂಗ್, ಸೋಶಿಯಲ್ ಮೀಡಿಯಾ, ಇಂಧನ ದರ ಮತ್ತು ಸರ್ಕಾರಿ ಯೋಜನೆಗಳಲ್ಲಿ ಆಗಲಿರುವ ಪ್ರಮುಖ ಬದಲಾವಣೆಗಳ ವಿವರ ಇಲ್ಲಿದೆ.

1. ಬ್ಯಾಂಕಿಂಗ್ ನಿಯಮಗಳಲ್ಲಿ ಬದಲಾವಣೆ

• ಕ್ರೆಡಿಟ್ ಸ್ಕೋರ್ ಅಪ್‌ಡೇಟ್: ಇನ್ನು ಮುಂದೆ ಕ್ರೆಡಿಟ್ ಬ್ಯೂರೋಗಳು ಗ್ರಾಹಕರ ಡೇಟಾವನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಾಗಿ ಪ್ರತಿ ವಾರ (Weekly) ಅಪ್‌ಡೇಟ್ ಮಾಡಬೇಕಾಗುತ್ತದೆ. ಇದರಿಂದ ಸಾಲದ ಮಾಹಿತಿ ಹೆಚ್ಚು ನಿಖರವಾಗಿರಲಿದೆ.

• ಬಡ್ಡಿ ದರ ಇಳಿಕೆ: ಎಸ್‌ಬಿಐ, ಪಿಎನ್‌ಬಿ ಮತ್ತು ಎಚ್‌ಡಿಎಫ್‌ಸಿಯಂತಹ ಪ್ರಮುಖ ಬ್ಯಾಂಕುಗಳು ಈಗಾಗಲೇ ಸಾಲದ ಬಡ್ಡಿ ದರಗಳನ್ನು ಕಡಿತಗೊಳಿಸಿದ್ದು, ಇದರ ಲಾಭ ಜನವರಿ ಇಂದ ಸಿಗಲಿದೆ. ಎಫ್‌ಡಿ (FD) ಬಡ್ಡಿ ದರಗಳಲ್ಲೂ ಪರಿಷ್ಕರಣೆಯಾಗಲಿದೆ.

• ಪಾನ್-ಆಧಾರ್ ಕಡ್ಡಾಯ: ಬ್ಯಾಂಕಿಂಗ್ ಮತ್ತು ಸರ್ಕಾರಿ ಸೇವೆಗಳನ್ನು ಪಡೆಯಲು ಪಾನ್-ಆಧಾರ್ ಲಿಂಕ್ ಮಾಡುವುದು ಕಡ್ಡಾಯ. ಇಲ್ಲದಿದ್ದರೆ ಸೇವೆಗಳು ಸ್ಥಗಿತಗೊಳ್ಳಬಹುದು.

• ಸಿಮ್ ವೆರಿಫಿಕೇಶನ್: ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸಿಗ್ನಲ್‌ನಂತಹ ಆಪ್‌ಗಳಲ್ಲಿ ವಂಚನೆ ತಡೆಯಲು ಸಿಮ್ ಕಾರ್ಡ್ ಪರಿಶೀಲನಾ ನಿಯಮಗಳನ್ನು ಕಠಿಣಗೊಳಿಸಲಾಗಿದೆ.

2. ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ

• 8ನೇ ವೇತನ ಆಯೋಗ: 7ನೇ ವೇತನ ಆಯೋಗದ ಅವಧಿ ಮುಗಿಯುತ್ತಿದ್ದು, ಜನವರಿ 1, 2026 ರಿಂದ 8ನೇ ವೇತನ ಆಯೋಗ ಜಾರಿಗೆ ಬರುವ ನಿರೀಕ್ಷೆಯಿದೆ. ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ರಚನೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ.

• ತುಟ್ಟಿಭತ್ಯೆ (DA) ಏರಿಕೆ: ಜನವರಿಯಿಂದ ತುಟ್ಟಿಭತ್ಯೆ ಹೆಚ್ಚಳವಾಗಲಿದ್ದು, ಹಣದುಬ್ಬರದ ನಡುವೆ ಉದ್ಯೋಗಿಗಳ ಕೈಸೇರುವ ಸಂಬಳ ಹೆಚ್ಚಾಗಲಿದೆ.

3. ಸೋಶಿಯಲ್ ಮೀಡಿಯಾ ಮತ್ತು ಮಕ್ಕಳು

16 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಸುವುದರ ಮೇಲೆ ಕೇಂದ್ರ ಸರ್ಕಾರ ಕಠಿಣ ನಿಯಮಗಳನ್ನು ತರಲು ಯೋಜಿಸುತ್ತಿದೆ. ಆಸ್ಟ್ರೇಲಿಯಾ ಮತ್ತು ಮಲೇಷ್ಯಾ ಮಾದರಿಯಲ್ಲಿ ವಯಸ್ಸಿನ ಮಿತಿ ಮತ್ತು ಪೋಷಕರ ನಿಯಂತ್ರಣ (Parental Controls) ಕಡ್ಡಾಯವಾಗುವ ಸಾಧ್ಯತೆ ಇದೆ.

4. ರೈತರಿಗೆ ಹೊಸ ನಿಯಮಗಳು

• ಪಿಎಂ-ಕಿಸಾನ್ ಐಡಿ: ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ರೈತರಿಗೆ ವಿಶಿಷ್ಟ ಐಡಿಗಳನ್ನು ನೀಡಲಾಗುತ್ತಿದೆ. ಪಿಎಂ-ಕಿಸಾನ್ ಹಣ ಪಡೆಯಲು ಈ ಐಡಿ ಕಡ್ಡಾಯ.

• ಬೆಳೆ ವಿಮೆ: ಕಾಡು ಪ್ರಾಣಿಗಳಿಂದ ಬೆಳೆ ನಾಶವಾದರೆ ಇನ್ನು ಮುಂದೆ ವಿಮೆ ಪರಿಹಾರ ಸಿಗಲಿದೆ. ಆದರೆ, ಬೆಳೆ ನಾಶವಾದ 72 ಗಂಟೆಗಳ ಒಳಗೆ ವರದಿ ಮಾಡುವುದು ಕಡ್ಡಾಯ.

5. ಮಾಲಿನ್ಯ ತಡೆಗೆ ಕಠಿಣ ಕ್ರಮ

• ದೆಹಲಿ ಮತ್ತು ನೋಯ್ಡಾದಂತಹ ನಗರಗಳಲ್ಲಿ ಮಾಲಿನ್ಯ ತಡೆಗಟ್ಟಲು ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಣಿಜ್ಯ ವಾಹನಗಳ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಪೆಟ್ರೋಲ್ ಚಾಲಿತ ಡೆಲಿವರಿ ವಾಹನಗಳ ಸಂಚಾರಕ್ಕೂ ಮಿತಿ ಹೇರಲು ಚಿಂತನೆ ನಡೆಸಲಾಗಿದೆ.

6. ಎಲ್‌ಪಿಜಿ ಬೆಲೆ ಮತ್ತು ಐಟಿಆರ್ (ITR)

• ಗ್ಯಾಸ್ ಸಿಲಿಂಡರ್ ಬೆಲೆ: ಪ್ರತಿ ತಿಂಗಳ ಮೊದಲ ದಿನದಂತೆ ಜನವರಿ 1 ರಂದು ಎಲ್‌ಪಿಜಿ ಮತ್ತು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಗಳು ಪರಿಷ್ಕರಣೆಯಾಗಲಿವೆ.

• ಹೊಸ ಐಟಿಆರ್ ಫಾರ್ಮ್: ಜನವರಿಯಲ್ಲಿ ಹೊಸ ಆದಾಯ ತೆರಿಗೆ ರಿಟರ್ನ್ (ITR) ಫಾರ್ಮ್ ಪರಿಚಯಿಸುವ ಸಾಧ್ಯತೆ ಇದೆ. ಇದು ಬ್ಯಾಂಕಿಂಗ್ ವಹಿವಾಟುಗಳ ವಿವರಗಳೊಂದಿಗೆ ಮೊದಲೇ ಭರ್ತಿಯಾಗಿ ಬರಲಿದ್ದು, ಸಲ್ಲಿಕೆ ಪ್ರಕ್ರಿಯೆ ಸುಲಭವಾಗಲಿದೆ.

Next Story