ಮಹಿಳಾ ಸಾರಿಗೆ ನೌಕರರಿಗೆ ಸಿಹಿಸುದ್ದಿ- ಋತುಚಕ್ರ ರಜೆ ಬಗ್ಗೆ ಅಧಿಕೃತ ಆದೇಶ
x

ಸಾಂದರ್ಭಿಕ ಚಿತ್ರ 

ಮಹಿಳಾ ಸಾರಿಗೆ ನೌಕರರಿಗೆ ಸಿಹಿಸುದ್ದಿ- ಋತುಚಕ್ರ ರಜೆ ಬಗ್ಗೆ ಅಧಿಕೃತ ಆದೇಶ

18 ರಿಂದ 52 ವರ್ಷ ವಯೋಮಿತಿಯೊಳಗಿನ ನಿಗಮದ ಎಲ್ಲಾ ಮಹಿಳಾ ನೌಕರರು ಈ ರಜೆ ಪಡೆಯಲು ಅರ್ಹರಾಗಿರುತ್ತಾರೆ. ಈ ಸೌಲಭ್ಯ ಒಪ್ಪಂದ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮಹಿಳೆಯರಿಗೂ ಲಭ್ಯವಿರಲಿದೆ.


Click the Play button to hear this message in audio format

ರಾಜ್ಯದ ಸಾರಿಗೆ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ 'ಋತುಚಕ್ರ ರಜೆ' ನೀಡಲು ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಕುರಿತು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ನಿಗಮದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅರ್ಹ ಮಹಿಳಾ ಸಿಬ್ಬಂದಿಗೆ ಈ ಸೌಲಭ್ಯ ಅನ್ವಯವಾಗಲಿದೆ. ಆ ಮೂಲಕ ಹೊಸವರ್ಷಕ್ಕೆ ಸರ್ಕಾರದಿಂದ ಬಂಪರ್‌ ಗಿಫ್ಟ್‌ ಸಿಕ್ಕಂತಾಗಿದೆ.

ಸುತ್ತೋಲೆಯಲ್ಲಿ ಏನಿದೆ?

18 ರಿಂದ 52 ವರ್ಷ ವಯೋಮಿತಿಯೊಳಗಿನ ನಿಗಮದ ಎಲ್ಲಾ ಮಹಿಳಾ ನೌಕರರು ಈ ರಜೆ ಪಡೆಯಲು ಅರ್ಹರಾಗಿರುತ್ತಾರೆ. ಈ ಸೌಲಭ್ಯವು ಕಾಯಂ ನೌಕರರು ಮಾತ್ರವಲ್ಲದೆ, ಒಪ್ಪಂದ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮಹಿಳೆಯರಿಗೂ ಲಭ್ಯವಿರಲಿದೆ.

ವಿಶೇಷವೆಂದರೆ, ಈ ರಜೆಯನ್ನು ಪಡೆಯಲು ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣಪತ್ರವನ್ನು ಒದಗಿಸುವ ಅಗತ್ಯವಿರುವುದಿಲ್ಲ. ಸಾಂದರ್ಭಿಕ ರಜೆ (CL) ಮಂಜೂರು ಮಾಡುವ ಅಧಿಕಾರ ಹೊಂದಿರುವ ಸಕ್ಷಮ ಪ್ರಾಧಿಕಾರಿಯೇ ಈ ಋತುಚಕ್ರ ರಜೆಯನ್ನೂ ಮಂಜೂರು ಮಾಡಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಜೆ ಪಡೆಯಲು ಕೆಲವೊಂದು ನಿಯಮಗಳಿವೆ

  • ಪ್ರತಿ ತಿಂಗಳಿಗೆ ಒಂದು ದಿನದಂತೆ ವರ್ಷಕ್ಕೆ ಒಟ್ಟು 12 ದಿನಗಳ ರಜೆ ಸಿಗಲಿದೆ.
  • ಆಯಾ ತಿಂಗಳ ರಜೆಯನ್ನು ಅದೇ ತಿಂಗಳಲ್ಲೇ ಬಳಸಿಕೊಳ್ಳಬೇಕು.
  • ಒಂದು ತಿಂಗಳ ರಜೆಯನ್ನು ಮುಂದಿನ ತಿಂಗಳಿಗೆ ವರ್ಗಾಯಿಸಲು ಅಥವಾ ಸಂಯೋಜಿಸಲು ಅವಕಾಶ ಇರುವುದಿಲ್ಲ.
  • ಹಾಜರಾತಿ ಪುಸ್ತಕದಲ್ಲಿ ಈ ರಜೆಯನ್ನು ಪ್ರತ್ಯೇಕವಾಗಿಯೇ ನಮೂದಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಈಗಾಗಲೇ ರಾಜ್ಯ ಸರ್ಕಾರವು ಕಾರ್ಮಿಕ ಇಲಾಖೆಯ ಮೂಲಕ ಖಾಸಗಿ ಮತ್ತು ಸರ್ಕಾರಿ ವಲಯದ ಮಹಿಳಾ ನೌಕರರಿಗೆ ಈ ರಜೆ ಘೋಷಿಸಿತ್ತು. ಇದೀಗ ಸಾರಿಗೆ ನಿಗಮವೂ ತನ್ನ ನೌಕರರಿಗೆ ಈ ಸೌಲಭ್ಯ ವಿಸ್ತರಿಸಿರುವುದು ಮಹಿಳಾ ಸಿಬ್ಬಂದಿ ವರ್ಗದಲ್ಲಿ ಹರ್ಷ ತಂದಿದೆ.

Read More
Next Story