
ಋತುಚಕ್ರ ರಜೆ ಆದೇಶ: ನೀಡಿದ್ದ ತಡೆಯಾಜ್ಞೆಯನ್ನು ಗಂಟೆಗಳಲ್ಲೇ ಹಿಂಪಡೆದ ಹೈಕೋರ್ಟ್
ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ಪೀಠವು ಮಂಗಳವಾರ ಬೆಳಿಗ್ಗೆ ಈ ಅರ್ಜಿಯ ವಿಚಾರಣೆ ನಡೆಸಿ ಮೊದಲು ತಡೆ ನೀಡಿ ನಂತರ ತೆರವು ಮಾಡಿತು.
ರಾಜ್ಯದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ ಒಂದು ದಿನದ ‘ವೇತನ ಸಹಿತ ಋತುಚಕ್ರ ರಜೆ’ (Menstrual Leave) ನೀಡುವ ಸರ್ಕಾರದ ಮಹತ್ವದ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು, ಕರ್ನಾಟಕ ಹೈಕೋರ್ಟ್ ಕೆಲವೇ ಗಂಟೆಗಳ ಅಂತರದಲ್ಲಿ ಹಿಂಪಡೆದ ಅಪರೂಪದ ಘಟನೆ ಮಂಗಳವಾರ (ಡಿ.9) ನಡೆದಿದೆ.
ಬೆಳಗ್ಗೆ ತಡೆ - ಸಂಜೆ ತೆರವು: ಏನಿದು ಹೈಡ್ರಾಮಾ?
ರಾಜ್ಯ ಕಾರ್ಮಿಕ ಇಲಾಖೆಯು ನವೆಂಬರ್ 20ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ‘ಬೆಂಗಳೂರು ಹೋಟೆಲುಗಳ ಸಂಘ’ದ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ಪೀಠವು ಮಂಗಳವಾರ ಬೆಳಿಗ್ಗೆ ಈ ಅರ್ಜಿಯ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು, ಸರ್ಕಾರದ ಅಧಿಸೂಚನೆಗೆ ‘ಮಧ್ಯಂತರ ತಡೆ’ (Interim Stay) ನೀಡಿ ಆದೇಶಿಸಿತ್ತು. ಅಲ್ಲದೆ, ತಡೆಯಾಜ್ಞೆ ತೆರವು ಕೋರಿ ಸರ್ಕಾರ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿತ್ತು. ಆದರೆ, ಕಲಾಪ ಮುಗಿಯುವ ಹಂತದಲ್ಲಿ ಪ್ರಕರಣ ತಿರುವು ಪಡೆದುಕೊಂಡಿತು. ತಡೆಯಾಜ್ಞೆ ಆದೇಶ ಹೊರಬಿದ್ದ ತಕ್ಷಣವೇ ಎಚ್ಚೆತ್ತ ರಾಜ್ಯ ಸರ್ಕಾರ, ತಕ್ಷಣವೇ ನ್ಯಾಯಪೀಠದ ಗಮನ ಸೆಳೆಯಿತು.
ಸರ್ಕಾರದ ಪ್ರಬಲ ಆಕ್ಷೇಪವೇನು?
ಸಂಜೆಯ ವೇಳೆಗೆ ನ್ಯಾಯಪೀಠದ ಮುಂದೆ ಹಾಜರಾದ ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು, ಬೆಳಗ್ಗೆ ನೀಡಲಾದ ತಡೆಯಾಜ್ಞೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರದ ಅಥವಾ ಪ್ರತಿವಾದಿಗಳ ವಾದವನ್ನು ಆಲಿಸದೆಯೇ ಏಕಾಏಕಿ ತಡೆ ನೀಡಿರುವುದು ಸರಿಯಲ್ಲ. ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಮತ್ತು ರಾಜ್ಯ ಕಾನೂನು ಆಯೋಗದ ಶಿಫಾರಸಿನ ಮೇರೆಗೆ ಸರ್ಕಾರ ಈ ನೀತಿಯನ್ನು ರೂಪಿಸಿದೆ. ಸಂವಿಧಾನದ 142ನೇ ವಿಧಿಯಡಿ ಸರ್ಕಾರ ತನ್ನ ಅಧಿಕಾರ ಬಳಸಿ ಮಹಿಳಾ ಪರವಾದ ಕ್ರಮ ಕೈಗೊಂಡಿದೆ. ಇದು ಸಂಪೂರ್ಣ ಕಾನೂನುಬದ್ಧವಾಗಿದೆ," ಎಂದು ಎಜಿ ಶಶಿಕಿರಣ ಶೆಟ್ಟಿ ಪ್ರಬಲವಾಗಿ ಪ್ರತಿಪಾದಿಸಿದರು.
ತಡೆಯಾಜ್ಞೆ ವಾಪಸ್
ಸರ್ಕಾರದ ಪರ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರು, ಬೆಳಿಗ್ಗೆ ನೀಡಿದ್ದ ತಡೆಯಾಜ್ಞೆಯನ್ನು ಹಿಂಪಡೆದರು. ಉಭಯ ಪಕ್ಷಕಾರರ ವಿಸ್ತೃತ ವಾದವನ್ನು ಆಲಿಸಿದ ನಂತರ ಮಧ್ಯಂತರ ಆದೇಶದ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿ, ವಿಚಾರಣೆಯನ್ನು ಬುಧವಾರಕ್ಕೆ (ಡಿ.10) ಮುಂದೂಡಿದ್ದಾರೆ.
ಏನಿದು ವಿವಾದ?
ರಾಜ್ಯದ ಖಾಸಗಿ ಮತ್ತು ಇತರೆ ವಲಯಗಳಲ್ಲಿ ಕೆಲಸ ಮಾಡುವ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿನ ನೋವು ಮತ್ತು ತೊಂದರೆಗಳನ್ನು ಪರಿಗಣಿಸಿ, ತಿಂಗಳಿಗೆ ಒಂದು ದಿನದ ವೇತನ ಸಹಿತ ರಜೆ ನೀಡಬೇಕು ಎಂದು ಸರ್ಕಾರ ಆದೇಶಿಸಿತ್ತು. ಆದರೆ, ಹೋಟೆಲ್ ಮಾಲೀಕರ ಸಂಘವು ಈ ಆದೇಶವನ್ನು ವಿರೋಧಿಸಿದ್ದು, "ಇದು ಸಂವಿಧಾನದ 14ನೇ ವಿಧಿಗೆ ವಿರುದ್ಧವಾಗಿದೆ ಮತ್ತು ಇದರಿಂದ ಉದ್ಯಮಕ್ಕೆ ತೊಂದರೆಯಾಗುತ್ತದೆ," ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದೆ.

