
ಇಂಡಿಯಾ ಬಣದ ನಾಯಕರು ಸ್ಪೀಕರ್ ಓಂ ಬಿರ್ಲಾಗೆ ಮನವಿ ನೀಡಿದರು.
ದೀಪಂ ವಿವಾದದ ಕಿಡಿ: ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ವಾಗ್ದಂಡನೆ ಅಸ್ತ್ರ ಪ್ರಯೋಗಿಸಿದ 'ಇಂಡಿಯಾ ಬಣʼ
ಡಿಎಂಕೆ ಸಂಸದೀಯ ಪಕ್ಷದ ನಾಯಕಿ ಕನಿಮೊಳಿ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ನ್ಯಾಯಮೂರ್ತಿ ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ನೋಟಿಸ್ ನೀಡಿದರು.
ತಮಿಳುನಾಡಿನ ಮಧುರೈನಲ್ಲಿರುವ ತಿರುಪರಕುಂದ್ರಂ ಬೆಟ್ಟದಲ್ಲಿ ಕಾರ್ತಿಗೈ ದೀಪ ಹಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದ ಆದೇಶ ಇದೀಗ ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರ ವಿರುದ್ಧ ಪ್ರತಿಪಕ್ಷಗಳ 'ಇಂಡಿಯಾ' ಒಕ್ಕೂಟದ 120ಕ್ಕೂ ಹೆಚ್ಚು ಸಂಸದರು ಒಗ್ಗೂಡಿ ವಾಗ್ದಂಡನೆ ನಿರ್ಣಯ ಮಂಡಿಸಲು ಮುಂದಾಗಿದ್ದಾರೆ. ನ್ಯಾಯಾಂಗದ ಅಧಿಕಾರ ವ್ಯಾಪ್ತಿ ಮೀರಿದ ವರ್ತನೆ ಮತ್ತು ಸೈದ್ಧಾಂತಿಕ ಪಕ್ಷಪಾತದ ಗಂಭೀರ ಆರೋಪಗಳನ್ನು ನ್ಯಾಯಮೂರ್ತಿಗಳ ಮೇಲೆ ಹೊರಿಸಲಾಗಿದೆ.
ಮಂಗಳವಾರ (ಡಿ.9) ಲೋಕಸಭೆಯಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು. ಡಿಎಂಕೆ ಸಂಸದೀಯ ಪಕ್ಷದ ನಾಯಕಿ ಕನಿಮೊಳಿ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ನ್ಯಾಯಮೂರ್ತಿ ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ನೋಟಿಸ್ ನೀಡಿದರು. ಈ ವೇಳೆ ಕನಿಮೊಳಿ ಅವರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಸಿಪಿಐ(ಎಂ) ಸಂಸದ ಸು. ವೆಂಕಟೇಸನ್ ಸೇರಿದಂತೆ ಹಲವು ಪ್ರಮುಖ ವಿಪಕ್ಷ ನಾಯಕರು ಸಾಥ್ ನೀಡಿದರು.
ಈ ನೋಟಿಸ್‌ಗೆ ಒಟ್ಟು 107 ಲೋಕಸಭಾ ಸಂಸದರು ಮತ್ತು ರಾಜ್ಯಸಭಾ ಸದಸ್ಯರು ಸೇರಿದಂತೆ ಒಟ್ಟು 120ಕ್ಕೂ ಹೆಚ್ಚು ಸದಸ್ಯರು ಸಹಿ ಹಾಕಿದ್ದು, ಇದು ನ್ಯಾಯಾಂಗದ ವಿರುದ್ಧದ ಅತಿದೊಡ್ಡ ರಾಜಕೀಯ ನಡೆಗಳಲ್ಲಿ ಒಂದಾಗಿದೆ.
ನ್ಯಾಯಮೂರ್ತಿಗಳ ವಿರುದ್ಧದ ಗಂಭೀರ ಆರೋಪಗಳೇನು?
ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಡಿಸೆಂಬರ್ 1 ರಂದು ನೀಡಿದ ಆದೇಶದಲ್ಲಿ, ಶತಮಾನಗಳಷ್ಟು ಹಳೆಯದಾದ ದರ್ಗಾ ಇರುವ ತಿರುಪರಕುಂದ್ರಂ ಬೆಟ್ಟದ ಮೇಲೆ ಹಿಂದೂ ಭಕ್ತರು ಕಾರ್ತಿಗೈ ದೀಪವನ್ನು ಹಚ್ಚಲು ಅನುಮತಿ ನೀಡಿದ್ದರು. ಈ ಆದೇಶವು "ನ್ಯಾಯಾಂಗದ ಅಧಿಕಾರ ವ್ಯಾಪ್ತಿ ಮೀರಿದ ವರ್ತನೆ" ಎಂದು ವಿಪಕ್ಷಗಳು ಆರೋಪಿಸಿವೆ. ಸಲ್ಲಿಸಲಾದ ನೋಟಿಸ್‌ನಲ್ಲಿ, ನ್ಯಾಯಮೂರ್ತಿಗಳು ಸಂವಿಧಾನದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಮತ್ತು ಅವರ ತೀರ್ಪುಗಳು ನಿರ್ದಿಷ್ಟ ರಾಜಕೀಯ ಸಿದ್ಧಾಂತದಿಂದ ಪ್ರಭಾವಿತವಾಗಿವೆ ಎಂದು ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ, ನ್ಯಾಯಮೂರ್ತಿಗಳು ನಿರ್ದಿಷ್ಟ ಸಮುದಾಯದ ವಕೀಲರಿಗೆ ಮತ್ತು ಹಿರಿಯ ವಕೀಲ ಎಂ. ಶ್ರೀಚರಣ್ ರಂಗನಾಥನ್ ಅವರಿಗೆ ಅನಗತ್ಯ ಒಲವು ತೋರುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಲಾಗಿದೆ.
ಸ್ಟಾಲಿನ್ ವಿರೋಧ ಮತ್ತು ಕೋಮು ಸೌಹಾರ್ದತೆಯ ಆತಂಕ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ವಿಪಕ್ಷಗಳ ಈ ನಡೆಯನ್ನು ಸ್ವಾಗತಿಸಿದ್ದಾರೆ. ನ್ಯಾಯಮೂರ್ತಿಗಳ ಆದೇಶವು "ತೀವ್ರ ಕಳವಳಕಾರಿ" ಎಂದು ಬಣ್ಣಿಸಿರುವ ಸ್ಟಾಲಿನ್, ಇದು ಬಹುಧರ್ಮೀಯ ಪವಿತ್ರ ತಾಣದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಅಪಾಯವಿದೆ ಎಂದು ಹೇಳಿದ್ದಾರೆ. ಮುಸ್ಲಿಂ ಸಂಘಟನೆಗಳ ವಿರೋಧದ ನಡುವೆಯೂ, ದರ್ಗಾಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕೆಂದು ಷರತ್ತು ವಿಧಿಸಿ ದೀಪ ಹಚ್ಚಲು ನ್ಯಾಯಾಲಯ ಅನುಮತಿ ನೀಡಿತ್ತು. ಆದರೆ, ಇದು ಒಂದು ಧರ್ಮಕ್ಕೆ ಮಾತ್ರ ಆದ್ಯತೆ ನೀಡಿದಂತಾಗಿದೆ ಮತ್ತು ಸಂವಿಧಾನದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ತಂದಿದೆ ಎಂಬುದು ಆಡಳಿತಾರೂಢ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳ ವಾದವಾಗಿದೆ.
ಇದು ನ್ಯಾಯಾಂಗದ ಮೇಲಿನ ದಾಳಿ
ಇನ್ನೊಂದೆಡೆ, ಆಡಳಿತಾರೂಢ ಬಿಜೆಪಿ ಈ ನಿರ್ಣಯವನ್ನು ತೀವ್ರವಾಗಿ ಖಂಡಿಸಿದೆ. ಇದು "ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ಹಲ್ಲೆ" ಮತ್ತು ಪ್ರಾಮಾಣಿಕ ನ್ಯಾಯಾಧೀಶರನ್ನು ಬೆದರಿಸುವ ತಂತ್ರ ಎಂದು ಬಿಜೆಪಿ ತಿರುಗೇಟು ನೀಡಿದೆ. ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯಿಸಿ, ಶತಮಾನಗಳ ಹಿಂದೂ ಸಂಪ್ರದಾಯವನ್ನು ಎತ್ತಿಹಿಡಿದ ನ್ಯಾಯಾಧೀಶರನ್ನು ಗುರಿಯಾಗಿಸಲಾಗುತ್ತಿದೆ. ತೀರ್ಪು ಡಿಎಂಕೆ ಸರ್ಕಾರದ ವಿರುದ್ಧ ಬಂದಿದೆ ಎಂಬ ಒಂದೇ ಕಾರಣಕ್ಕೆ ದ್ವೇಷ ಮತ್ತು ಜಾತಿ ಆಧಾರಿತ ರಾಜಕಾರಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ನ್ಯಾಯಾಧೀಶರಾಗಿದ್ದರೆ ವಿಪಕ್ಷಗಳು ಹೀಗೆ ಮಾಡುತ್ತಿದ್ದವೇ ಎಂದು ಅವರು ಪ್ರಶ್ನಿಸಿದ್ದಾರೆ.
ವಾಗ್ದಂಡನೆ ಪ್ರಕ್ರಿಯೆ
ಸಂವಿಧಾನದ 124(4) ವಿಧಿ ಮತ್ತು ನ್ಯಾಯಾಧೀಶರ (ತನಿಖಾ) ಕಾಯ್ದೆ 1968ರ ಪ್ರಕಾರ, ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರನ್ನು ಪದಚ್ಯುತಗೊಳಿಸುವುದು ಸುಲಭದ ಮಾತಲ್ಲ. ಇದಕ್ಕೆ ಸಂಸತ್ತಿನ ಉಭಯ ಸದನಗಳಲ್ಲಿ ಹಾಜರಿರುವ ಮತ್ತು ಮತ ಚಲಾಯಿಸುವ ಮೂರನೇ ಎರಡರಷ್ಟು ಸದಸ್ಯರ ಬಹುಮತದ ಅಗತ್ಯವಿರುತ್ತದೆ. ಪ್ರಸ್ತುತ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎನ್‌ಡಿಎ ಒಕ್ಕೂಟ ಸ್ಪಷ್ಟ ಬಹುಮತ ಹೊಂದಿರುವುದರಿಂದ, ಈ ನಿರ್ಣಯ ಅಂಗೀಕಾರವಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಸ್ಪೀಕರ್ ಅವರು ಈ ನೋಟಿಸ್ ಅನ್ನು ಅಂಗೀಕರಿಸಿದರೆ, ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಬೇಕಾಗುತ್ತದೆ. ಸದ್ಯಕ್ಕೆ ಇದು ತಮಿಳುನಾಡಿನಲ್ಲಿ ರಾಜಕೀಯ ಮತ್ತು ಕೋಮು ಆಧಾರಿತ ಚರ್ಚೆಯನ್ನು ತೀವ್ರಗೊಳಿಸಿದೆ.

