ಇಂಡಿಯ ಒಕ್ಕೂಟಕ್ಕೆ ಚುನಾವಣೆಯಲ್ಲಿ ನೈತಿಕ ಗೆಲುವು: ಅಖಿಲೇಶ್ ಯಾದವ್
ನವದೆಹಲಿ, ಜುಲೈ 2: ಲೋಕಸಭೆ ಚುನಾವಣೆಯು ದೇಶದಲ್ಲಿ ಕೋಮು ರಾಜಕೀಯವನ್ನು ಅಂತ್ಯಗೊಳಿಸಿದೆ ಮತ್ತು ಇಂಡಿಯ ಒಕ್ಕೂಟಕ್ಕೆ ನೈತಿಕ ವಿಜಯ ಸಿಕ್ಕಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಹೇಳಿದ್ದಾರೆ.
ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅವರು, ಚುನಾವಣಾ ಫಲಿತಾಂಶ ಪ್ರಕಟವಾದ ಜೂನ್ 4, ಕೋಮು ರಾಜಕೀಯದಿಂದ ಸ್ವಾತಂತ್ರ್ಯ ಸಿಕ್ಕ ದಿನ. ಇಂಡಿಯ ಒಕ್ಕೂಟ ಭಾರತದ ಪರವಾಗಿದೆ ಎಂದು ಇಡೀ ದೇಶ ಅರ್ಥ ಮಾಡಿಕೊಂಡಿದೆ. ಈ ಚುನಾವಣೆ ಇಂಡಿಯ ಒಕ್ಕೂಟಕ್ಕೆ ನೈತಿಕ ಗೆಲುವು; ಸಕಾರಾತ್ಮಕ ರಾಜಕೀಯದ ಗೆಲುವು. ಪಿಡಿಎ, ಸಾಮಾಜಿಕ ನ್ಯಾಯ ಚಳವಳಿಯ ಗೆಲುವು. 2024 ರ ಸಂದೇಶವು ಇಂಡಿಯ ಒಕ್ಕೂಟದ ಜವಾಬ್ದಾರಿಯನ್ನುಹೆಚ್ಚಿಸಿದೆ,ʼ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಳಿದರು.
ʻಚುನಾವಣೆಯಲ್ಲಿ ಕೋಮು ರಾಜಕೀಯ ಶಾಶ್ವತವಾಗಿ ಸೋತಿದೆ. ಸಂವಿಧಾನ ಪರ ಜನರು ಗೆದ್ದಿದ್ದಾರೆ, ಸಂವಿಧಾನ ಗೆದ್ದಿದೆ... ಇದು ಮೇಲು-ಕೀಳು ರಾಜಕಾರಣದ ಅಂತ್ಯ’ ಎಂದು ಹೇಳಿದರು. ಫೈಜಾಬಾದ್‌ನಲ್ಲಿ ಬಿಜೆಪಿಯ ಸೋಲನ್ನು ಉಲ್ಲೇಖಿಸಿದ ಅವರು, ʻಇದು ಬಹುಶಃ ಶ್ರೀರಾಮನ ಆಶಯವಾಗಿದೆ. ಹೋಯಿ ವಹಿ ಜೋ ರಾಮ್ ರಚಿ ರಖಾ (ರಾಮ್ ಏನು ಯೋಜಿಸಿದ್ದನೋ ಅದು ಸಂಭವಿಸುತ್ತದೆ),ʼ ಎಂದು ಅಖಿಲೇಶ್ ಹೇಳಿದರು. ಫೈಜಾಬಾದ್ ಸಂಸದ ಮತ್ತು ಎಸ್‌ಪಿ ನಾಯಕ ಅವಧೇಶ್ ಕುಮಾರ್ ಯಾದವ್ ಪಕ್ಕದಲ್ಲಿದ್ದರು.
ʻಉತ್ತರ ಪ್ರದೇಶದ ಎಲ್ಲ 80 ಲೋಕಸಭೆ ಸ್ಥಾನಗಳನ್ನು ಗೆದ್ದರೂ, ಇವಿಎಂಗಳನ್ನು ನಂಬುವುದಿಲ್ಲ. ಇಂಡಿಯ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ, ಇವಿಎಂಗಳನ್ನು ತೆಗೆದುಹಾಕಲಾಗುತ್ತದೆ,ʼ ಎಂದು ಹೇಳಿದರು.
ʻಮಾದರಿ ನೀತಿ ಸಂಹಿತೆ ಜಾರಿಗೊಂಡಾಗ, ಸರ್ಕಾರ ಮತ್ತು ಚುನಾವಣೆ ಆಯೋಗ ನಿರ್ದಿಷ್ಟ ಜನರಿಗೆ ಒಲವು ತೋರಿತ್ತು. ಆ ಸಂಸ್ಥೆ ಬಗ್ಗೆ ಪ್ರಶ್ನೆಯೊಂದು ಮೂಡಿದೆ. ನಾನು ಹಿಂದೆ ಇವಿಎಂಗಳನ್ನು ನಂಬಲಿಲ್ಲ; ಇಂದು ನಂಬುವುದಿಲ್ಲ. ಮತ್ತು ಎಲ್ಲ 80 ಸ್ಥಾನಗಳನ್ನು ಗೆದ್ದರೂ, ಇವಿಎಂಗಳನ್ನು ನಂಬುವುದಿಲ್ಲ. ಇವಿಎಂಗಳ ಪ್ರಶ್ನೆ ಬಗೆಹರಿದಿಲ್ಲ. ಸಮಾಜವಾದಿಗಳು ಆ ಬಗ್ಗೆ ದೃಢವಾಗಿದ್ದೇವೆ,ʼ ಎಂದು ಯಾದವ್ ಹೇಳಿದರು.
ಚುನಾವಣೆ ಆಯೋಗದ ನಿಷ್ಪಕ್ಷಪಾತತೆ ಬಗ್ಗೆ ಪ್ರಶ್ನೆಗಳನ್ನು ಎತ್ತದಿದ್ದರೆ ಉತ್ತಮ ಎಂದು ಸ್ಪೀಕರ್ ಓಂ ಬಿರ್ಲಾ ಅವರು ಹೇಳಿದರು.