ನಾಡಗೀತೆಯಲ್ಲಿ ದ್ರಾವಿಡ ಪದ ಕೈಬಿಟ್ಟ ವಿವಾದ | ರಾಜ್ಯಪಾಲರ ವಿರುದ್ಧ ಕಿಡಿಕಾರಿದ ಸಿಎಂ ಸ್ಟಾಲಿನ್
ರಾಜ್ಯಪಾಲರೇ, ನೀವು ಆರ್ಯರೇ? ದ್ರಾವಿಡ ಪದವನ್ನು ತೆಗೆದುಹಾಕುವುದು ತಮಿಳುನಾಡಿನ ಕಾನೂನಿಗೆ ವಿರುದ್ಧ ಎಂದು ಸ್ಟಾಲಿನ್ ಎಚ್ಚರಿಕೆ ನೀಡಿದ್ದಾರೆ
ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ರಾಜ್ಯಪಾಲರಾಗಿ ಮುಂದುವರಿಯುವ ಉದ್ದೇಶವಿದ್ದರೆ ಸಾಂವಿಧಾನಿಕ ನಿಯಮಗಳ ಪ್ರಕಾರ ವಿಭಜಕ ಶಕ್ತಿಗಳಿಂದ ಮುಕ್ತರಾಗಬೇಕು ಮತ್ತು ರಾಜಭವನವನ್ನು ರಾಜಕೀಯ ಪಕ್ಷದ ಕಚೇರಿಯಾಗಿ ಪರಿವರ್ತಿಸುವುದನ್ನು ಕೈಬಿಡಬೇಕು ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ತಮಿಳು ನಾಡಗೀತೆ ಹಾಡುವ ಸಂದರ್ಭದಲ್ಲಿ ದ್ರಾವಿಡ ನಾಲ್ ತಿರುನಾಡು ಎಂಬ ಪದಗುಚ್ಛವನ್ನು ಕೈಬಿಡಲಾಗಿದ್ದು, ಈ ಹಿನ್ನೆಲೆ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ವಿರುದ್ಧ ಸಿಎಂ ಎಂಕೆ ಸ್ಟಾಲಿನ್ ಕಿಡಿಕಾರಿದ್ದಾರೆ.
ಕೂಡಲೇ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹ ಮಾಡಿರುವ ಅವರು, ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಹಾಡಲಾದ ತಮಿಳು ನಾಡಗೀತೆಯ ಸಂದರ್ಭದಲ್ಲಿ, ನಾಡಗೀತೆಯಲ್ಲಿನ ‘ದ್ರಾವಿಡ’ ಪದವನ್ನು ಕೈಬಿಟ್ಟಿರುವ ಸಂಗತಿ ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿದೆ. ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ರಾಜ್ಯಪಾಲ ಆರ್.ಎನ್.ರವಿ ದೇಶದ ಐಕ್ಯತೆಯನ್ನು ಅವಮಾನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
‘ರಾಜ್ಯಪಾಲರೇ, ನೀವು ಆರ್ಯರೇ?
‘ರಾಜ್ಯಪಾಲರೇ, ನೀವು ಆರ್ಯರೇ? ದ್ರಾವಿಡ ಪದವನ್ನು ತೆಗೆದುಹಾಕುವುದು ತಮಿಳುನಾಡಿನ ಕಾನೂನಿಗೆ ವಿರುದ್ಧವಾಗಿದೆ. ಕಾನೂನಿನ ಪ್ರಕಾರ ನಡೆದುಕೊಳ್ಳದ ಮತ್ತು ಕಾನೂನಿನ ಇಚ್ಛೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಯು ಆ ಹುದ್ದೆಯನ್ನು ಅಲಂಕರಿಸಲು ಯೋಗ್ಯನಲ್ಲ. ಭಾರತವನ್ನು ಸಂಭ್ರಮಿಸುವ ನೆಪದಲ್ಲಿ ರಾಜ್ಯಪಾಲರು ದೇಶದ ಏಕತೆ ಮತ್ತು ಈ ನೆಲದಲ್ಲಿ ವಾಸಿಸುವ ವಿವಿಧ ಜನಾಂಗದ ಜನರನ್ನು ಅವಮಾನಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ದ್ರಾವಿಡ ಅಲರ್ಜಿಯಿಂದ ಬಳಲುತ್ತಿರುವ ರಾಜ್ಯಪಾಲರು ರಾಷ್ಟ್ರಗೀತೆಯಲ್ಲಿ ʼದ್ರಾವಿಡʼ ಪದವನ್ನು ಬಿಡಲು ಕೇಳುತ್ತಾರೆಯೇ? ಎಂದು ಪ್ರಶ್ನಿಸಿರುವ ಸಿಎಂ ಸ್ಟಾಲಿನ್, ತಮಿಳುನಾಡು ಮತ್ತು ತಮಿಳುನಾಡಿನ ಜನರ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸುತ್ತಿರುವ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.
"ದ್ರಾವಿಡರನ್ನು ಕಂಡರೆ ಅಸಹನೆ ಹೊಂದಿರುವ ರಾಜ್ಯಪಾಲರು, ರಾಷ್ಟ್ರಗೀತೆಯಲ್ಲಿರುವ ದ್ರಾವಿಡ ಪದವನ್ನು ಕೈಬಿಡಲು ಕೇಳುತ್ತಾರೆಯೇ? ಉದ್ದೇಶಪೂರ್ವಕವಾಗಿಯೇ ಅವರು ತಮಿಳುನಾಡು ಮತ್ತು ಇಲ್ಲಿನ ಜನರ ಭಾವನೆಗಳನ್ನು ಅವಮಾನಿಸಿದ್ದು, ಕೇಂದ್ರ ಸರ್ಕಾರ ಕೂಡಲೇ ಅವರನ್ನು ವಾಪಸ್ ಕರೆಸಿಕೊಳ್ಳಬೇಕು" ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯಪಾಲ ರವಿ, ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ. "ಗೌರವಾನ್ವಿತ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ನನ್ನ ವಿರುದ್ಧ ಜನಾಂಗೀಯ ನಿಂದನೆ ಆರೋಪದ ಟ್ವೀಟ್ ಮಾಡಿದ್ದಾರೆ. ತಮಿಳ್ ತಾಯಿ ವಾಜತ್ತುಗೆ ಅಗೌರವ ತೋರುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ನಾನು ಪೂರ್ಣ ತಮಿಜ್ ತಾಯಿ ವಾಜ್ತುವನ್ನು ಪಠಿಸುತ್ತೇನೆ ಎಂದು ಅವರಿಗೆ ಚೆನ್ನಾಗಿ ತಿಳಿದಿದೆ. ಪ್ರತಿ ಕಾರ್ಯವನ್ನು ಗೌರವದಿಂದ, ಹೆಮ್ಮೆ ಮತ್ತು ನಿಖರತೆಯಿಂದ ಮಾಡಿದ್ದೇನೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.