
ಎಐ ಆಧಾರಿತ ಚಿತ್ರ
ಎಸ್‌ಬಿಐನಲ್ಲಿ 996 ಹುದ್ದೆಗಳ ಬೃಹತ್ ನೇಮಕಾತಿ: ಪರೀಕ್ಷೆಯಿಲ್ಲದೆ ಆಯ್ಕೆ, 45 ಲಕ್ಷದವರೆಗೆ ವಾರ್ಷಿಕ ವೇತನ!
ಬ್ಯಾಂಕ್‌ನ ಸಂಪತ್ತು ನಿರ್ವಹಣಾ ವಿಭಾಗದಲ್ಲಿನ ಸಂಪತ್ತು ವಿಭಾಗದ ಉಪಾಧ್ಯಕ್ಷ 506, ಸಹಾಯಕ ಉಪಾಧ್ಯಕ್ಷ 206 ಹಾಗೂ ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ 284 ಹುದ್ದೆಗಳು ಸೇರಿದಂತೆ ಒಟ್ಟು 996 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗುತ್ತಿಗೆ ಆಧಾರದ ಮೇಲೆ ಸ್ಪೆಷಲಿಸ್ಟ್ ಕೇಡರ್ ಆಫೀಸರ್ (SCO) ಗಾಗಿ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಅನುಭವಿ ವೃತ್ತಿಪರರು ಮತ್ತು ಪದವೀಧರರಿಗೆ ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕಿನೊಂದಿಗೆ ಕೆಲಸ ಮಾಡಲು ಇದು ಒಂದು ಅದ್ಭುತ ಅವಕಾಶವಾಗಿದೆ.
ದೇಶಾದ್ಯಂತ ಇರುವ ಬ್ಯಾಂಕ್‌ನ ವಿವಿಧ ಶಾಖೆಗಳಲ್ಲಿನ ಸಂಪತ್ತು ನಿರ್ವಹಣಾ ವಿಭಾಗದಲ್ಲಿನ ಉಪಾಧ್ಯಕ್ಷ, ಸಹಾಯಕ ಉಪಾಧ್ಯಕ್ಷ ಹಾಗೂ ಗ್ರಾಹಕ ಸಂಬಂಧ ಕಾರ್ಯನಿರ್ವಾಹಕರ ಹುದ್ದೆಗಳ ಒಟ್ಟು 996 ಖಾಲಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಜನವರಿ 5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಎಷ್ಟು ಹುದ್ದೆಗಳು ಖಾಲಿ ?
ಬ್ಯಾಂಕ್‌ನ ಸಂಪತ್ತು ನಿರ್ವಹಣಾ ವಿಭಾಗದಲ್ಲಿನ ಸಂಪತ್ತು ವಿಭಾಗದ ಉಪಾಧ್ಯಕ್ಷ 506, ಸಹಾಯಕ ಉಪಾಧ್ಯಕ್ಷ 206 ಹಾಗೂ ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ 284 ಹುದ್ದೆಗಳು ಸೇರಿದಂತೆ ಒಟ್ಟು 996 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ವೇತನ ಹಾಗೂ ಅರ್ಹತೆ
ಆಯ್ಕೆಯಾಗುವ ಮೂರು ಹುದ್ದೆಗಳ ಪೈಕಿ ವಿಭಾಗದ ಉಪಾಧ್ಯಕ್ಷ ಅಭ್ಯರ್ಥಿಗಳಿಗೆ ವಾರ್ಷಿಕ 30-45 ಲಕ್ಷ ರೂ. ಸಹಾಯಕ ಉಪಾಧ್ಯಕ್ಷ ಹುದ್ದೆಗೆ ವಾರ್ಷಿಕ 20-30 ಲಕ್ಷ ರೂಪಾಯಿ ಹಾಗೂ ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ ಹುದ್ದಗಳಿಗೆ 4-6 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ. ಎಲ್ಲಾ ಹುದ್ದೆಗಳಿಗೆ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಕಡ್ಡಾಯವಾಗಿ ಪೂರೈಸಿರಬೇಕು. ಗ್ರಾಹಕ ಸಂಬಂಧ ಕಾರ್ಯನಿರ್ವಾಹಕರ (CRE) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿಚಕ್ರ ವಾಹನ ಚಾಲನಾ ಪರವಾನಗಿ ಕಡ್ಡಾಯವಾಗಿ ಹೊಂದಿರಬೇಕು.
ಉಪಾಧ್ಯಕ್ಷ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರಮುಖ ಬ್ಯಾಂಕ್‌ಗಳು ಅಥವಾ ಮಾರಾಟ, ಮಾರ್ಕೆಟಿಂಗ್ ಹಾಗೂ ಸಂಪತ್ತು ನಿರ್ವಹಣೆಯಲ್ಲಿ ಕನಿಷ್ಠ 6 ವರ್ಷಗಳ ಅನುಭವ, ಸಹಾಯಕ ಉಪಾಧ್ಯಕ್ಷ ಹುದ್ದೆಗೆ ಕನಿಷ್ಠ 3 ವರ್ಷಗಳ ಅನುಭವ ಹಾಗೂ ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ ಹುದ್ದೆಗೆ ಚಾಲನಾ ಪರವಾನಗಿ ಹೊಂದಿರುವ ಹೊಸಬರು ಸಹ ಅರ್ಜಿ ಸಲ್ಲಿಸಬಹುದು.
ವಯೋಮಿತಿ
ಸಂಪತ್ತು ವಿಭಾಗದ ಉಪಾಧ್ಯಕ್ಷ ಹುದ್ದೆಗೆ ಕನಿಷ್ಠ 26 ರಿಂದ ಗರಿಷ್ಠ 42 ವರ್ಷಗಳು, ಸಹಾಯಕ ಉಪಾಧ್ಯಕ್ಷ ಹುದ್ದೆಗೆ ಕನಿಷ್ಠ 23 ರಿಂದ ಗರಿಷ್ಠ 35 ವರ್ಷಗಳು ಹಾಗೂ ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ20 ರಿಂದ ಗರಿಷ್ಠ 35 ವರ್ಷಗಳು ವಯೋಮಿತಿ ನಿಗದಿಪಡಿಸಿದ್ದು, ಸರ್ಕಾರಿ ನಿಯಮಗಳ ಪ್ರಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯೋಜನಗಳು ಮತ್ತು ಭತ್ಯೆ
ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊಬೈಲ್ ಮತ್ತು ಸಂಚಾರದ ಭತ್ಯೆ, ವೈದ್ಯಕೀಯ ಭತ್ಯೆ, ಪ್ರತಿ ಹಣಕಾಸು ವರ್ಷಕ್ಕೆ 30 ದಿನಗಳ ರಜೆ ನೀಡಲಾಗಿದ್ದು, ನೇಮಕ ಒಪ್ಪಂದವು 5 ವರ್ಷಗಳ ಅವಧಿಯವರೆಗೂ ಇರಲಿದೆ. ಕಾರ್ಯಕ್ಷಮತೆಯ ಆಧಾರದ ಮೇಲೆ ಒಪ್ಪಂದವನ್ನು ನವೀಕರಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆ
ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಹೆಸರನ್ನು ಶಾರ್ಟ್‌ಲಿಸ್ಟಿಂಗ್ ಮಾಡಿ, ಸಂದರ್ಶನದ ಮೂಲಕ ಆಯ್ಕೆಮಾಡಲಾಗುವುದು. ಸಂದರ್ಶನಕ್ಕೆ 100 ಅಂಕಗಳನ್ನು ನಿಗದಿಪಡಿಸಲಾಗಿದ್ದು, ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಅಂತಿಮ ಆಯ್ಕೆ ಮಾಡಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.
ಅರ್ಜಿ ಸಲ್ಲಿಸುವುದು ಹೇಗೆ ?
* ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ವಯಸ್ಸು ಮತ್ತು ಅರ್ಹತಾ ಮಾನದಂಡಗಳನ್ನು ನೀವು ಪೂರೈಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
* ದಾಖಲೆಗಳನ್ನು ಸ್ಕ್ಯಾನ್ ಮಾಡಿ ನಿಮ್ಮ ಛಾಯಾಚಿತ್ರ, ಸಹಿ, ರೆಸ್ಯೂಮ್, ಐಡಿ ಪುರಾವೆ ಮತ್ತು ಶೈಕ್ಷಣಿಕ ಅನುಭವ ಪ್ರಮಾಣಪತ್ರಗಳನ್ನು ಪಿಡಿಎಫ್ ಸ್ವರೂಪದಲ್ಲಿ ಸ್ಕ್ಯಾನ್ ಮಾಡಿಡಿ.
* ಅಧಿಸೂಚನೆಯಲ್ಲಿ ನೀಡಲಾದ ಲಿಂಕ್‌ಗೆ ಭೇಟಿ ನೀಡಿ ಮತ್ತು “ಹೊಸ ನೋಂದಣಿ” ಮೇಲೆ ಕ್ಲಿಕ್ ಮಾಡಿ.
* ನಿಮ್ಮ ವೈಯಕ್ತಿಕ, ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿ.
* ನಿಮ್ಮ ಫೋಟೋ, ಸಹಿ ಮತ್ತು ಇತರ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
* ಡೆಬಿಟ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಆನ್‌ಲೈನ್‌ನಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಿ.
* ಅಂತಿಮ ಸಲ್ಲಿಕೆಯ ನಂತರ, ಅರ್ಜಿ ನಮೂನೆಯ ಪ್ರಿಂಟ್ ತೆಗೆದುಕೊಳ್ಳಬೇಕು.
ಅರ್ಜಿ ಶುಲ್ಕ
ಅರ್ಜಿಸಲ್ಲಿಸುವ ಸಾಮಾನ್ಯ, ಹಿಂದುಳಿದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 750 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

