
ಎಲ್ಲೆ ಮೀರಿದ ಬೆಂಬಲಿಗ ಶಾಸಕರ ಮಾತು; ಸಿದ್ದು-ಡಿಕೆಶಿ ಶೀತಲ ಸಮರಕ್ಕೆ ಬೀಳುವುದೇ ತೆರೆ?
ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆ ಜಟಾಪಟಿಯು ಶಾಸಕರ ಬಹಿರಂಗ ಹೇಳಿಕೆಗಳಿಂದಾಗಿ ಬೀದಿರಂಪವಾಗಿದೆ. ಇದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರಿಗೂ ಮುಜುಗರ ತಂದೊಡ್ಡಿದೆ.
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಶೀತಲ ಸಮರವು ಬೆಂಬಲಿಗ ಶಾಸಕರ ಎಲ್ಲೆ ದಾಟಿದ ಹೇಳಿಕೆಗಳು ಹಾದಿರಂಪ-ಬೀದಿರಂಪದಂತಾಗಿದೆ. ಲಕ್ಷ್ಮಣ ರೇಖೆ ದಾಟುವಂತಹ ಅಶಿಸ್ತಿನ ಹೇಳಿಕೆಗಳು ಈಗಾಗಲೇ "ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ" ಆಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಅಧಿಕಾರ ಹಂಚಿಕೆ ಒಪ್ಪಂದವಾಗಿತ್ತು ಎಂಬ ವಾದಗಳು ಹರಿದಾಡುತ್ತಿದ್ದವು. ಮುಖ್ಯಮಂತ್ರಿ ಕುರ್ಚಿಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೆಣೆಯುವ ಪ್ರತಿಯೊಂದು ತಂತ್ರಕ್ಕೂ ಸಿಎಂ ಸಿದ್ದರಾಮಯ್ಯ ಅವರು ಪ್ರತಿತಂತ್ರ ರೂಪಿಸುತ್ತಿರುವುದು ನಾಯಕತ್ವ ಬದಲಾವಣೆ ವಿಚಾರವನ್ನು ಕಗ್ಗಂಟಾಗಿಸಿದೆ. ಈ ಮಧ್ಯೆ, ಫೆ.26 ರಂದು ದೆಹಲಿಯಲ್ಲಿ ಹೈಕಮಾಂಡ್ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂಬ ಮಾತುಗಳು ಡಿಕೆಶಿ ಪಾಳಯದಲ್ಲಿ ಕೇಳಿಬರುತ್ತಿದ್ದು, ತೀವ್ರ ಕುತೂಹಲ ಮೂಡಿಸಿದೆ. ಆದರೆ, ಸಭೆಯ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.
ಮುಜುಗರ ಸೃಷ್ಟಿಸಿದ ಹೇಳಿಕೆಗಳು
ಎರಡೂ ಬಣಗಳಲ್ಲಿ ಶಾಸಕರ ದಿನಕ್ಕೊಂದು ಹೇಳಿಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮುಜುಗರ ತಂದಿದೆ. ಕೆಲ ಶಾಸಕರ ಹೇಳಿಕೆಗಳು ಎರಡು ಬಣಗಳ ನಡುವೆ ಬಿಕ್ಕಟ್ಟು ವಿಸ್ತರಿಸಲು ಕಾರಣವಾಗುತ್ತಿದೆ. ಇದರಿಂದ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಇದನ್ನೇ ದಾಳವನ್ನಾಗಿಸಿಕೊಂಡ ವಿರೋಧ ಪಕ್ಷಗಳು ಜಾಲತಾಣಗಳ ಮೂಲಕ ಟೀಕೆ-ಟಿಪ್ಪಣಿಗಳ ಸುರಿಮಳೆ ಸುರಿಸುತ್ತಿವೆ.
ಒಂದೆಡೆ, ಡಿಕೆಶಿ ಆಪ್ತ ಶಾಸಕರ ಹೇಳಿಕೆಗಳು ಅವರ ಸಿಎಂ ಸ್ಥಾನದ ಹಾದಿಯನ್ನು ಕಠಿಣಗೊಳಿಸಿದರೆ, ಮತ್ತೊಂದೆಡೆ ಸಿದ್ದರಾಮಯ್ಯ ಅವರ ʼಸ್ಥಿರ ಆಡಳಿತʼಕ್ಕೂ ಧಕ್ಕೆ ತರುತ್ತಿದೆ ಎನ್ನುವುದು ರಾಜಕೀಯ ವಿಶ್ಲೇಷಕರ ವಾದ.
ಡಿಕೆಶಿ ಆಪ್ತರ ಹೇಳಿಕೆಗಳೇನು?
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತ ವಲಯದ ಶಾಸಕರು ನೀಡುತ್ತಿರುವ ಪ್ರತಿ ಹೇಳಿಕೆಗಳು ಅವರಿಗೇ "ಮಗ್ಗುಲ ಮುಳ್ಳಾಗಿ" ಪರಿಣಮಿಸುತ್ತಿವೆ. ಅಧಿಕಾರಕ್ಕಾಗಿ ದೆಹಲಿಗೆ ಓಡಾಡುತ್ತಿರುವ ಶಾಸಕರಾದ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಮದ್ದೂರು ಶಾಸಕ ಕದಲೂರು ಉದಯ್, ಮಂಡ್ಯ ಶಾಸಕ ಗಣಿಗ ರವಿ ಸೇರಿದಂತೆ ಇತರರು ಸಾರ್ವಜನಿಕವಾಗಿ ನಾಯಕತ್ವ ಬದಲಾವಣೆ ಕುರಿತಂತೆ ನೀಡುತ್ತಿರುವ ಹೇಳಿಕೆಗಳು ಡಿಸಿಎಂ ಡಿ.ಕೆ. ಶಿವಕುಮಾರ್ ಅಸಮಾಧಾನಕ್ಕೆ ಕಾರಣವಾಗಿವೆ.
ಸಾರ್ವಜನಿಕ ವೇದಿಕೆಗಳಲ್ಲಿ "ಡಿ.ಕೆ. ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ" ಅಥವಾ "ಅಧಿಕಾರ ಹಂಚಿಕೆ ಆಗಲೇಬೇಕು" ಎಂಬ ಹೇಳಿಕೆಗಳನ್ನು ನೀಡುತ್ತಿರುವುದು ಪಕ್ಷದ ಶಿಸ್ತಿಗೂ ಧಕ್ಕೆ ತರುತ್ತಿದೆ.
ಇನ್ನೆರಡು ದಿನಗಳಲ್ಲಿ ಡಿಕೆಶಿ ಸಿಎಂ ಆಗುತ್ತಾರೆ ಎಂಬ ಬಾಲಿಶ ಹೇಳಿಕೆ ನೀಡಿದ್ದ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧವೇ ಡಿಸಿಎಂ ಡಿ.ಕೆ. ಶಿವಕುಮಾರ್ ಗರಂ ಆಗಿದ್ದರು. "ನಿಮ್ಮ ಹೇಳಿಕೆಗಳೇ ನಮಗೆ ಕಷ್ಟವಾಗುತ್ತಿವೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರೂ ಇಕ್ಬಾಲ್ ಹುಸೇನ್ ಮಾತ್ರ ಹೇಳಿಕೆಗಳಿಂದ ದೂರ ಸರಿದಿರಲಿಲ್ಲ. ಈಗಾಗಲೇ ಪಕ್ಷದ ಶಿಸ್ತು ಮೀರಿದ್ದಕ್ಕೆ ಇಕ್ಬಾಲ್ ಹುಸೇನ್ ಹಾಗೂ ಶಿವಗಂಗಾ ಬಸವರಾಜ್ ಇಬ್ಬರೂ ನೋಟಿಸ್ ಪಡೆದಿದ್ದರು.
ಆದರೆ, ಸಿಎಂ ಪರವಾಗಿ ವಕಾಲತು ವಹಿಸಿದ್ದ ಯತೀಂದ್ರ ಸಿದ್ದರಾಮಯ್ಯ ಹಾಗೂ ಎಚ್.ಸಿ. ಮಹದೇವಪ್ಪ ಅವರಿಗೆ ಯಾವುದೇ ನೋಟಿಸ್ ನೀಡದಿರುವುದು ಸ್ವತಃ ಡಿಕೆಶಿ ಬಣದ ಶಾಸಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಡಿಕೆಶಿ ಅವರ ಈ ನಡೆ ಚರ್ಚೆಗೂ ಕಾರಣವಾಗಿದೆ. ಖುದ್ದು ಡಿಕೆಶಿಯವರೇ ತಮ್ಮ ಬೆಂಬಲಿಗರ ಬಾಯಲ್ಲಿ ಇಂತಹ ಮಾತುಗಳನ್ನು ಆಡಿಸುತ್ತಿದ್ದಾರೆ ಎಂಬ ಗುಸು ಗುಸು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಸಿಎಂ ಬಣದವರ ಹೇಳಿಕೆ ಏನು?
ಡಿಕೆಶಿ ಆಪ್ತರ ಹೇಳಿಕೆಗಳಿಗೆ ಪ್ರತಿಯಾಗಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು "ನಮ್ಮ ತಂದೆಯೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ" ಎಂದು ಬಹಿರಂಗವಾಗಿ ಹೇಳಿದ್ದರು. ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್‌ನಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದಿದ್ದರು. ಇದಲ್ಲದೇ ಸಚಿವ ಎಚ್.ಸಿ. ಮಹದೇವಪ್ಪ ಅವರ 'ನಾಯಿ-ಬಾಲ' ಎಂಬ ಹೇಳಿಕೆಗಳು ಡಿಕೆಶಿ ಬಣದ ಕೆಂಗಣ್ಣಿಗೆ ಗುರಿಯಾಗಿದ್ದವು. ಇದರ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಮತ್ತು ಕೆ.ಎನ್. ರಾಜಣ್ಣ ಅವರು ದೆಹಲಿಗೆ ಹೋಗಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿರುವುದು ನಾಯಕತ್ವ ಬದಲಾವಣೆ ಬಿಕ್ಕಟ್ಟನ್ನು ಕುತೂಹಲದಿಂದ ನೋಡುವಂತಾಗಿತ್ತು.
ಇತ್ತೀಚೆಗೆ ಸಿದ್ದರಾಮಯ್ಯನವರು "ನನ್ನನ್ನು ಮುಗಿಸಲು ಪಟ್ಟಭದ್ರ ಹಿತಾಸಕ್ತಿಗಳು ಸಂಚು ಮಾಡುತ್ತಿವೆ" ಎಂದು ಭಾವನಾತ್ಮಕ ಪೋಸ್ಟ್ ಮಾಡಿದ್ದರು. ಇದಕ್ಕೆ ಡಿಕೆಶಿ ಬಣದ ಶಾಸಕರು "ಪಕ್ಷ ನಿಮಗೆ ಎಲ್ಲವನ್ನೂ ನೀಡಿದೆ, ಹೊಟ್ಟೆಕಿಚ್ಚು ಪಡಲು ಇಲ್ಲಿ ಏನಿದೆ?" ಎಂದು ತಿರುಗೇಟು ನೀಡಿದ್ದರು. ಇದು ಕೂಡ ಉಭಯ ಬಣಗಳ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿತ್ತು.
ಶಾಸಕರ ಈ ಹೇಳಿಕೆಗಳಿಗೆ ಕಾರಣವೇನು?
ಸಿಎಂ ಹಾಗೂ ಡಿಸಿಎಂ ಬಣದ ಶಾಸಕರು ತಮ್ಮ ನಾಯಕರ ಬಗ್ಗೆ ವಕಾಲತು ವಹಿಸುತ್ತಿರುವುದರ ಹಿಂದೆ ಅಧಿಕಾರ ಹಿಡಿಯುವ ಹಪಾಹಪಿ ಇದೆ ಎನ್ನಲಾಗಿದೆ. ಅಧಿಕಾರ ಹಾಗೂ ಮುಂಬರುವ ಚುನಾವಣೆಗಳಲ್ಲಿ ಲಾಭವಾಗಬಹುದು ಎಂಬ ನಿರೀಕ್ಷೆಯೇ ಶಾಸಕರ ನಿಷ್ಠೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಆಪ್ತರಿಂದ ಪದೇ ಪದೇ ಹೇಳಿಕೆ ಕೊಡಿಸುವ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಬಹುದು ಎಂಬುದು ಉಭಯ ಬಣದ ನಾಯಕರ ತಂತ್ರವಾಗಿದೆ. ಆದರೆ, ಅಂತಿಮವಾಗಿ ಇದು ಸರ್ಕಾರ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ. ವಿರೋಧ ಪಕ್ಷಗಳ ಟೀಕೆಗೂ ಗುರಿಯಾಗಲಿದೆ ಎಂದು ಎನ್ನಲಾಗಿದೆ.
ಅಹಿಂದಕ್ಕೂ ಮುಜುಗರ
ಅಹಿಂದ ಹೆಸರಿನ ಮೂಲಕವೇ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷವು ಇದೀಗ ಕುರ್ಚಿ ರಗಳೆಯ ಜೊತೆಗೆ ಜಾತಿಗಳ ಮುಖವಾಡವನ್ನೂ ಅಂಟಿಸಿಕೊಂಡಿದೆ. ಇತ್ತೀಚೆಗೆ ಸಿದ್ದರಾಮಯ್ಯ ಅವರ ಭಾವನಾತ್ಮಕ ಪೋಸ್ಟ್ (ನನ್ನನ್ನು ಮುಗಿಸಲು ಪಟ್ಟಭದ್ರ ಹಿತಾಸಕ್ತಿಗಳು ಸಂಚು ಮಾಡುತ್ತಿವೆ) ಡಿಕೆಶಿ ಬಣದ ಶಾಸಕರ ಟೀಕೆಗೆ ಗುರಿಯಾಗಿತ್ತು. "ಒಕ್ಕಲಿಗರ ಮೇಲೆ ನಿಮಗೆ ಅಷ್ಟೊಂದು ಪ್ರೀತಿ ಇರುವುದೇ ನಿಜವಾದರೆ, ತಕ್ಷಣವೇ ಕುರ್ಚಿ ಬಿಟ್ಟುಕೊಡಿ" ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣದ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದರು.
ಈ ನಡುವೆ ದಲಿತ ನಾಯಕರನ್ನು ಸಿಎಂ ಮಾಡುವ ಬಗ್ಗೆಯೂ ಚರ್ಚೆಗಳು ಗರಿಗೆದರಿರುವುದು ಸಿಎಂ ರೇಸ್‌ನಲ್ಲಿರುವ ಡಿಕೆಶಿ ಮತ್ತು ಸಿದ್ದರಾಮಯ್ಯ ಇಬ್ಬರಿಗೂ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಜಾತಿಗಳ ಮೂಲಕವೂ ಕುರ್ಚಿ ಗುದ್ದಾಟ ನಡೆಯುತ್ತಿರುವುದು ಅಹಿಂದ ಹೆಸರಿನ ಕಾಂಗ್ರೆಸ್‌ಗೂ ಮುಜುಗರ ಉಂಟು ಮಾಡಿವೆ ಎನ್ನುತ್ತಾರೆ ವಿಶ್ಲೇಷಕರು.
ವಿರೋಧ ಪಕ್ಷಗಳಿಗೆ ಅಸ್ತ್ರ
ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇಂತಹ ಹೇಳಿಕೆಗಳನ್ನೇ ಬಳಸಿಕೊಂಡು ಕಾಂಗ್ರೆಸ್ ಸರ್ಕಾರದಲ್ಲಿ ಸಮನ್ವಯತೆ ಇಲ್ಲ ಎಂದು ಲೇವಡಿ ಮಾಡುತ್ತಿದ್ದಾರೆ. "ಈ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳಿಗಿಂತ ಕುರ್ಚಿ ಉಳಿಸಿಕೊಳ್ಳುವುದೇ ಮುಖ್ಯವಾಗಿದೆ" ಎಂದು ಟೀಕಿಸುತ್ತಿದ್ದಾರೆ. ಆಪ್ತ ಶಾಸಕರ ಪ್ರತಿ ಹೇಳಿಕೆಯೂ ವಿರೋಧ ಪಕ್ಷಗಳಿಗೆ, ಸರ್ಕಾರದ ವಿರುದ್ಧ ಮಾತನಾಡಲು ಹೊಸ ವಿಷಯವನ್ನು ಒದಗಿಸುತ್ತಿದೆ.
ಈ ಬಗ್ಗೆ ರಾಜಕೀಯ ವಿಶ್ಲೇಷಕ ಬಿ. ಸಮೀವುಲ್ಲಾ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, "ಶಿಸ್ತು ಉಲ್ಲಂಘನೆ ನೋಟಿಸ್ ಬಳಿಕ ಎರಡು ಬಣಗಳು ಮೊದಲು ಸುಮ್ಮನಿದ್ದವು. ಯತೀಂದ್ರ ಸಿದ್ದರಾಮಯ್ಯ ಅವರು ಮೊದಲು ಹೇಳಿಕೆ ನೀಡುವ ಮೂಲಕ ಇಡೀ ವ್ಯವಸ್ಥೆಯನ್ನೇ ಬದಲಿಸಿದರು. ಮೊದಲು ಶಿಸ್ತು ಉಲ್ಲಂಘನೆ ಮಾಡಿದ್ದು ಸಿದ್ದರಾಮಯ್ಯ ಅವರ ಬಣ. ಹೀಗಿದ್ದರೂ, ಅವರ ಬಣಕ್ಕೆ ನೋಟಿಸ್ ಜಾರಿಯಾಗಿಲ್ಲ. ಹೀಗಾಗಿ ಸಹಜವಾಗಿ ಮತ್ತೊಂದು ಬಣ ಹೇಳಿಕೆ ನೀಡುವುದನ್ನು ಶುರು ಮಾಡಿದೆ. ಸದ್ಯಕ್ಕೆ ಡಿಕೆಶಿ ಬಣ ಮೌನವಾಗಿದ್ದರೂ, ನಾಯಕತ್ವ ಬದಲಾವಣೆಯ ಭಯಕ್ಕೆ ಸಿದ್ದರಾಮಯ್ಯ ಅವರ ಬಣದ ಶಾಸಕರು ವಿದೇಶಿ ಪ್ರವಾಸದ ಮೂಲಕ ಹೈಕಮಾಂಡ್‌ಗೆ ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ. ಒಟ್ಟಿನಲ್ಲಿ ಎರಡು ಬಣಗಳ ಹೇಳಿಕೆಗಳು ಶೀತಲ ಸಮರಕ್ಕೆ ಇನ್ನಷ್ಟು ತುಪ್ಪ ಸುರಿಯುತ್ತಿವೆ. ಫೆಬ್ರವರಿ 26ರ ಹೈಕಮಾಂಡ್ ಸಭೆಯ ಬಳಿಕ ನಾಯಕತ್ವ ಬದಲಾವಣೆಯ ಸ್ಪಷ್ಟ ಚಿತ್ರಣ ದೊರೆಯಲಿದೆ" ಎಂದರು.

