ಇಕ್ಬಾಲ್‌ಗೆ ಮಾತಿನ ಚಟ, ಯಾರೂ ಸೀರಿಯಸ್ ಆಗಿ ತಗೊಳ್ಬೇಡಿ: ಆಪ್ತನ ವಿರುದ್ಧವೇ ಡಿಕೆಶಿ ಗರಂ
x

"ಇಕ್ಬಾಲ್‌ಗೆ ಮಾತಿನ ಚಟ, ಯಾರೂ ಸೀರಿಯಸ್ ಆಗಿ ತಗೊಳ್ಬೇಡಿ": ಆಪ್ತನ ವಿರುದ್ಧವೇ ಡಿಕೆಶಿ ಗರಂ

ರಾಮನಗರದಲ್ಲಿ ಶನಿವಾರ ಮಾತನಾಡಿದ್ದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್, "ಡಿ.ಕೆ. ಶಿವಕುಮಾರ್ ಅವರಿಗೆ 6 ಮತ್ತು 9 ಅದೃಷ್ಟ ಸಂಖ್ಯೆಗಳು. ಹೀಗಾಗಿ ಬಹುತೇಕ ಜನವರಿ 6ರಂದೇ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗುವ ಸಾಧ್ಯತೆಯಿದೆ," ಎಂದು ಭವಿಷ್ಯ ನುಡಿದಿದ್ದರು.


Click the Play button to hear this message in audio format

ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಮತ್ತೆ ಜೋರಾಗಿರುವ ಬೆನ್ನಲ್ಲೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಮ್ಮದೇ ಆಪ್ತ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ರಾಮನಗರದಲ್ಲಿ ಶನಿವಾರ ಮಾತನಾಡಿದ್ದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್, "ಡಿ.ಕೆ. ಶಿವಕುಮಾರ್ ಅವರಿಗೆ 6 ಮತ್ತು 9 ಅದೃಷ್ಟ ಸಂಖ್ಯೆಗಳು. ಹೀಗಾಗಿ ಬಹುತೇಕ ಜನವರಿ 6ರಂದೇ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗುವ ಸಾಧ್ಯತೆಯಿದೆ," ಎಂದು ಭವಿಷ್ಯ ನುಡಿದಿದ್ದರು. ಇದಕ್ಕೂ ಮೊದಲು ಅವರು ಡಿಸೆಂಬರ್ 7 ಅಥವಾ 8 ರಂದು ಡಿಕೆಶಿ ಸಿಎಂ ಆಗುತ್ತಾರೆ ಎಂದೂ ಹೇಳಿಕೆ ನೀಡಿದ್ದರು.

ಡಿಕೆಶಿ ಪ್ರತಿಕ್ರಿಯೆ

ದೇವನಹಳ್ಳಿಯಲ್ಲಿ ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಸಿಡಿಮಿಡಿಗೊಂಡ ಡಿ.ಕೆ. ಶಿವಕುಮಾರ್, "ಇಕ್ಬಾಲ್ ಹುಸೇನ್ ಮಾತನ್ನು ಯಾರೂ ಗಣನೆಗೆ ತೆಗೆದುಕೊಳ್ಳಬೇಡಿ. ಅವನಿಗೆ ಮಾತಿನ ಚಟ. ಅವನ ತಲೆ ಕೆಟ್ಟಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಇಂತಹ ಹೇಳಿಕೆ ನೀಡಿದ ಆತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಿದ್ದಾರೆ.

ಇದೇ ವಿಚಾರವಾಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದಾಗ, ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದರು.

ಇತ್ತೀಚೆಗೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು, "ಹೈಕಮಾಂಡ್ ಒಪ್ಪಿಲ್ಲ, ಹೀಗಾಗಿ ನಾಯಕತ್ವ ಬದಲಾವಣೆ ಇಲ್ಲ," ಎಂದು ಹೇಳಿಕೆ ನೀಡಿದ ನಂತರ ಅಧಿಕಾರ ಹಂಚಿಕೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ನಡೆಯುತ್ತಿರುವ ಔತಣಕೂಟಗಳು ಮತ್ತು ಉಭಯ ನಾಯಕರ ಬಣಗಳ ಶಾಸಕರ ಹೇಳಿಕೆಗಳು ಈ ಚರ್ಚೆಗೆ ತುಪ್ಪ ಸುರಿದಿವೆ.

ಇನ್ನೊಂದೆಡೆ, ಕೇಂದ್ರ ಸಚಿವ ವಿ. ಸೋಮಣ್ಣ ಅವರು, "ಶಿವಕುಮಾರ್ ಸಿಎಂ ಆಗಬೇಕು ಅನ್ನೋದೆಲ್ಲ ಸೆಕೆಂಡರಿ. ಸಚಿವ ಪರಮೇಶ್ವರ್ ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಹಾರೈಸುವೆ," ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

Read More
Next Story