
ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್
"ಒಕ್ಕಲಿಗರ ಮೇಲೆ ಪ್ರೀತಿಯಿದ್ದರೆ ಈಗಲೇ ಕುರ್ಚಿ ಬಿಡಿ": ಸಿಎಂಗೆ ಸಚಿವ ಹೆಚ್‌ಡಿಕೆ ಸವಾಲು
ಎರಡನೇ ಅವಧಿಗೆ ನೀವು ಸಿಎಂ ಆಗುವ ಮುನ್ನ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ನಿಮ್ಮ ನಡುವೆ ಆಗಿದ್ದ ಒಪ್ಪಂದವನ್ನು ಬಹಿರಂಗವಾಗಿ ಹೇಳುವ ಉದಾರತೆ ತೋರಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ಜಾತಿ ರಾಜಕಾರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ಪರಸ್ಪರ ವಾಕ್ಸಮರಕ್ಕೆ ಕಾರಣವಾಗಿದೆ.
ಭಾನುವಾರ(ಫೆ.22) ಮಾಧ್ಯಮ ಹೇಳಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಹೆಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಜಾತಿವಾದಿಗಳಲ್ಲ, ಸ್ವಜಾತಿ ವಿರೋಧಿಗಳು ಎಂದು ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹೆಚ್‌ಡಿಕೆ, "ಒಕ್ಕಲಿಗರನ್ನು ಬೆಳೆಸಿದ್ದು ಕಾಂಗ್ರೆಸ್ ಎಂಬುದು ಬರೀ ಬುರಡೆ. ವಿಧಾನಸೌಧ ಕಟ್ಟಿದ ಕೆಂಗಲ್ ಅವರಿಗೆ ನಿಮ್ಮ ನೆಹರು ಕೊಟ್ಟ ಕಿರುಕುಳ, ಮಾಡಿದ ಅಪಮಾನ ಅಷ್ಟಿಷ್ಟಾ? ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರಿಗೆ ಬೆನ್ನಿಗಿರಿದ ದೂರ್ತರು ಯಾರು? ಯಾವ ಪಕ್ಷದವರು? ಒಕ್ಕಲಿಗರನ್ನು ಸಿಎಂ ಮಾಡುವುದು ಕಾಂಗ್ರೆಸ್ಸೇ ಎನ್ನುವುದಾದರೆ, ತತ್‌ಕ್ಷಣಕ್ಕೇ ನೀವು ಕುರ್ಚಿ ಬಿಡಬೇಕಲ್ಲವೇ? ಒಕ್ಕಲಿಗರ ಮೇಲೆ ನಿಮ್ಮ ಪ್ರೀತಿ ಪ್ರದರ್ಶನಕ್ಕೆ ಇದು ಸಕಾಲ! ಎನ್ನುವ ಮೂಲಕ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಬಿಟ್ಟುಕೊಡಿ" ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದೇನು ?
ಸಿದ್ದರಾಮಯ್ಯನವರು ಕುರ್ಚಿಗಾಗಿ ಜಾತಿ ಎಳೆದು ತಂದಿದ್ದಾರೆ ಎಂದು ನಾನು ತಮಾಷೆಗೆ ಹೇಳಿದ್ದಲ್ಲ, ಸೀರಿಯಸ್ಸಾಗೇ ಹೇಳಿದ್ದೇನೆ. ತಮಾಷೆಗೆ ಹೇಳಿದ್ದೇನೆ ಎಂದಿಟ್ಟುಕೊಳ್ಳಿ, ನೀವು ಇಷ್ಟುದ್ದ ಉತ್ತರ ಬರೆಯುವ ಅಗತ್ಯವಿರಲಿಲ್ಲ. ಈ ಬಗ್ಗೆ ನೀವು ಸೀರಿಯಸ್ ಆಗಿದ್ದೀರಿ ಎಂಬುದನ್ನು ಬಲ್ಲೆ. ಹಾಗಿದ್ದರೂ ನನ್ನ ಹೇಳಿಕೆಯನ್ನು ನೀವು ತಮಾಷೆಯಾಗಿಯೇ ಸ್ವೀಕರಿಸಿ, ಅಭ್ಯಂತರವಿಲ್ಲ ಎಂದು ಸಿಎಂಗೆ ತಿರುಗೇಟು ನೀಡಿದ್ದಾರೆ.
ಒಪ್ಪಂದ ಬಹಿರಂಗಗೊಳಿಸಿ
ಒಕ್ಕಲಿಗ ಸಮುದಾಯಕ್ಕೆ ಸಮರ್ಥ ನಾಯಕತ್ವ ನೀಡುವ ಕಾಂಗ್ರೆಸ್ ಉದಾರತೆಯನ್ನು ನಾನು ಸ್ವಾಗತಿಸುವೆ. ಈ ಉದಾರತೆ ನಿಮಗೂ ಬೇಕಲ್ಲವೇ? ಈಗ ನೀವು ಉದಾರತೆ ತೋರಬೇಕು. ಎರಡನೇ ಅವಧಿಗೆ ನೀವು ಸಿಎಂ ಆಗುವ ಮುನ್ನ ಆಗಿದ್ದ ಒಪ್ಪಂದವನ್ನು ಬಹಿರಂಗವಾಗಿ ಹೇಳುವ ಉದಾರತೆ ತೋರಿ. ದಿಲ್ಲಿಯಲ್ಲಿ ನಿಮ್ಮಿಬ್ಬರ ನಡುವೆ ಆಗಿದ್ದ ಆ ಒಪ್ಪಂದಕ್ಕೆ ಸಾಕ್ಷಿಯಾಗಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ್, ಸುರ್ಜೇವಾಲಾಗೆ ನಿಮ್ಮ ಸಾಮಾಜಿಕ ನ್ಯಾಯ, ಒಕ್ಕಲಿಗ ಪ್ರೀತಿಯ ಪರಾಕಾಷ್ಠೆ ಈಗೀಗ ಅರ್ಥವಾಗಿದೆ ಎಂದು ಭಾವಿಸುತ್ತೇನೆ. ಅವರೆಲ್ಲರ ಮಾನಸಿಕ ಸ್ವಾಸ್ಥ್ಯ ಸರಿ ಇದೆ ಎಂದು ನಾನಾದರೂ ನಂಬಿದ್ದೇನೆ ಎಂದಿದ್ದಾರೆ.
ಸಾಮಾಜಿಕ ನ್ಯಾಯದ ಸೋಗುಕಾರ
ಸಾಮಾಜಿಕ ನ್ಯಾಯದ ಸೋಗುಕಾರ, ಸಾಮಾಜಿಕ ನ್ಯಾಯದ ಸಂಹಾರಿ ನೀವು. ನಿಮಗೆ ರಾಜಕೀಯ ಶಕ್ತಿ-ಬದುಕು ಕೊಟ್ಟ ದೇವೇಗೌಡರ ಕಡೆ ಬೊಟ್ಟು ಮಾಡುವುದು ಆಘಾತಕಾರಿ. ಇವತ್ತು ನಿಮಗೆ ಸಿಕ್ಕಿರುವ ಅಧಿಕಾರ, ಸಾಮಾಜಿಕ ನ್ಯಾಯಕಾರ ಎಂಬ ಪೋಷಾಕು ಎಲ್ಲವೂ ದೇವೇಗೌಡರ ದೇಣಿಗೆ. ನೀವೂ ಅವರ ಸಾಮಾಜಿಕ ನ್ಯಾಯದ ಫಲ ಮತ್ತು ಫಲಾನುಭವಿ. ಸ್ವಜಾತಿ, ಕುಟುಂಬ ಎಂದು ಅವರು ಆವತ್ತೇ ಭಾವಿಸಿದ್ದಿದ್ದರೆ ನೀವು ಹಣಕಾಸು ಮಂತ್ರಿ ಆಗುವುದಿರಲಿ, ಕನಿಷ್ಠ ಒಂದು ನಿಗಮದ ಅಧ್ಯಕ್ಷಗಿರಿಯೂ ದಕ್ಕುತ್ತಿರಲಿಲ್ಲ. ಅಂದು ನಿಮ್ಮನ್ನು ಹಣಕಾಸು ಮಂತ್ರಿ ಮಾಡಲೇಬೇಕೆಂದು ಹಠತೊಟ್ಟ ಗೌಡರಿಗೆ ಅವತ್ತಿನ ಅವರ ಸಮಕಾಲೀನರು ನಿಮ್ಮ ಬಗ್ಗೆ ಏನೆಲ್ಲಾ ಗುಣಗಾನ ಮಾಡಿ ಬಣ್ಣಿಸಿದ್ದರೆನ್ನುವುದು ನಿಮಗೆ ತಿಳಿದಿರಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.
ನೆರಳು ಕೊಟ್ಟ ಮರಕ್ಕೆ ಕೊಡಲಿ ಪೆಟ್ಟು
ನೀವು ಪಟ್ಟಿ ಮಾಡಿರುವ ಒಕ್ಕಲಿಗ ನಾಯಕರ ಹೆಸರುಗಳನ್ನು ಓದಿದೆ. ಪಾಪ ನೀವು ಅವರ ಹೆಸರುಗಳನ್ನ ಉಲ್ಲೇಖಿಸಿ ಅವರನ್ನೂ ಅಪಹಾಸ್ಯ ಮಾಡಿದ್ದೀರಿ. ನೀವೂ ಅಪಹಾಸ್ಯಕ್ಕೆ ತುತ್ತಾಗಿದ್ದಲ್ಲದೆ, ನಗೆಪಾಟಲಿಗೀಡಾಗಿದ್ದೀರಿ. ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಆ 13 ಜನರ ಶೆಲ್ಟರ್ ಪಡೆದಿದ್ದೀರಿ, ಸರಿ. ಹಾಗಿದ್ದರೆ ಅವರೆಲ್ಲರೂ ದೇವೇಗೌಡರಿಂದ ಅಧಿಕಾರ ಅನುಭವಿಸಲೇ ಇಲ್ಲವೇ? ಆಗ ಅವರೆಲ್ಲರೂ ಕೂತಿದ್ದ ಅಧಿಕಾರ ಸ್ಥಾನಗಳಲ್ಲಿ ದೇವೇಗೌಡರೇ ಕೂತಿದ್ದರಾ? ಅವರೆಲ್ಲರೂ ನಿಮ್ಮಂತೆಯೇ ದೇವೇಗೌಡರ ಶ್ರಮ, ತ್ಯಾಗದಿಂದ ಅಧಿಕಾರ ಉಂಡು, ಪೊಗದಸ್ತಾಗಿ ಬೆಳೆದು ಬೇಲಿ ಹಾರಿದವರು! ನೀವು ಹೇಳಿದಂತೆ ಕುಟುಂಬವೇ ಮಿಗಿಲು ಎಂದು ಗೌಡರು ಭಾವಿಸಿದ್ದಿದ್ದರೆ ಈ ಪಟ್ಟಿಯಲ್ಲಿನ ಒಬ್ಬರೂ ಶಾಸಕ, ಮಂತ್ರಿ, ಎಂಪಿ ಆಗುತ್ತಲೇ ಇರಲಿಲ್ಲ. ನಿಮ್ಮನ್ನೂ ಸೇರಿಸಿ! ಏನಂತೀರಿ? ನೀವೆಲ್ಲರೂ ನೆರಳು ಕೊಟ್ಟ ವೃಕ್ಷಕ್ಕೆ ನಿರ್ದಯದಿಂದ ಕೊಡಲಿ ಹಾಕಿದಿರಿ. ಉಂಡು ಹೋದರಿ, ಕೊಂಡು ಹೋದರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸ್ವಾರ್ಥಕ್ಕೆ ಜಾತಿ ಎಳೆದು ತಂದಂತೆ ಹಿರಿಯರಾದ ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ಎಂ. ಕೃಷ್ಣ ಅವರನ್ನು ಏಕೆ ಎಳೆದು ತರುತ್ತೀರಿ? ಎಸ್.ಎಂ.ಕೃಷ್ಣ ಅವರ ಹೆಸರೇಳುವ ಸಾಸಿವೆ ಕಾಳಷ್ಟು ಯೋಗ್ಯತೆ, ನೈತಿಕತೆ ನಿಮಗಿದೆಯೇ? ಹಿ ಈಸ್ ಅನ್ ಪಾಲಿಷ್ಡ್ ಡೈಮಂಡ್ ಎಂದು ಸೋನಿಯಾ ಗಾಂಧಿ ಅವರ ಮುಂದೆ ಹೇಳಿ ನೀವು ಕಾಂಗ್ರೆಸ್ ಮೆಟ್ಟಿಲತ್ತಲು ಕಾರಣರಾದ ಎಸ್.ಎಂ.ಕೃಷ್ಣರನ್ನು ಎಷ್ಟು ಕ್ರೂರವಾಗಿ ವಂಚಿಸಿದಿರೆನ್ನುವುದು ಜಗತ್ತು ಬಲ್ಲ ಸತ್ಯ. ರಾಜಕೀಯದ ಕಡೆಗಾಲದಲ್ಲಿ ಅವರನ್ನು ನೀವೆಷ್ಟು ತುಚ್ಛವಾಗಿ ನಡೆಸಿಕೊಂಡಿರಿ ಎನ್ನುವುದನ್ನು ಜನ ಮರೆತಿಲ್ಲ. ಅನ್ ಪಾಲಿಷ್ಡ್ ಡೈಮಂಡ್ ಕೃಷ್ಣರಿಗೆ ಚೂರಿ ಆಗಿದ್ದು ಎಲ್ಲರೂ ಬಲ್ಲರು ಎಂದಿದ್ದಾರೆ.
ದಲಿತ ನಾಯಕರನ್ನು ಮುಗಿಸಿ ಅಧಿಕಾರಕ್ಕೆ
ಸಾಮಾಜಿಕ ನ್ಯಾಯದ ಸಂಹಾರಿಯೇ ಅದೇ ಸಾಮಾಜಿಕ ನ್ಯಾಯ ಬಗ್ಗೆ ಪದೇಪದೆ ಮಾತನಾಡುವುದು ಅಸಹ್ಯ ತರಿಸುತ್ತದೆ. ನಿಮ್ಮ ಸಾಮಾಜಿಕ ನ್ಯಾಯಕ್ಕೆ ಅಂತಃಕರಣವಿಲ್ಲ. ಇದ್ದಿದ್ದರೆ ನಿಮಗಿಂತ ಮೊದಲೇ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗಬೇಕಿತ್ತು. ಇದ್ದ ಪ್ರತಿಪಕ್ಷ ಸ್ಥಾನವನ್ನೂ ಕಿತ್ತುಕೊಂಡು ಅವರನ್ನು ಅತ್ಯಂತ ಅಪಮಾನಕರವಾಗಿ ದಿಲ್ಲಿಗೆ ಓಡಿಸಿದಿರಿ. ಇನ್ನೊಬ್ಬ ದಲಿತ ನಾಯಕ ಡಾ. ಜಿ. ಪರಮೇಶ್ವರ್ ಅವರನ್ನು ನಿಮ್ಮ ದಾರಿಗೆ ಅಡ್ಡ ಬರುತ್ತಾರೆಂದು ಚುನಾವಣೆ ಕಣದಲ್ಲೇ ಮುಗಿಸಿದಿರಿ, ನಿಮ್ಮನ್ನು ಕಾಂಗ್ರೆಸ್ಸಿಗೆ ಕರೆತಂದ ಹೆಚ್. ವಿಶ್ವನಾಥ್'ರನ್ನು ಎಲ್ಲಿ ಇಟ್ಟಿದ್ದೀರಿ? ನೀವು ಸಿಎಂ ಪಟ್ಟಕ್ಕೆ ಏರಿ ಕೂತಿರಿ? ಎರಡು ಸಲ ನೀವು ಸಿಎಂ ಆಗಿದ್ದಲ್ಲ, ಅರ್ಹತೆಯಿಂದ ಆಗಿದ್ದೂ ಅಲ್ಲವೇ ಅಲ್ಲ. ಪಕ್ಷದಲ್ಲಿದ್ದ ಸಮರ್ಥರನ್ನು ಸಾಮಾಜಿಕ ನ್ಯಾಯದ ನೆಪಲ್ಲಿ ರಾಜಕೀಯ ನರಮೇಧ ಮಾಡಿ ಆಕ್ರಮಿಸಿದ್ದು ಎಂದು ಟೀಕಿಸಿದ್ದಾರೆ.
ಇನ್ನೆಷ್ಟು ಸುಳ್ಳು ಹೇಳುತ್ತೀರಿ? ಇನ್ನೆಷ್ಟು ದಿನ ಈ ಊಸರವಳ್ಳಿ ಅವತಾರ? ಅಸಲಿಗೆ ಅಹಿಂದಾ ನಾಯಕ, ಸಾಮಾಜಿಕ ನ್ಯಾಯದ ಪ್ರತಿನಿಧಿಯೇ ನೀವಾಗಿದ್ದಿದ್ದರೆ ಈ ಸೂಕ್ಷ್ಮ ಸಂದರ್ಭದಲ್ಲಿ ನೀವು ಹುಟ್ಟಿದ ಜಾತಿಯನ್ನು ಎಳೆದು ತರುತ್ತಿರಲಿಲ್ಲ. ಇದನ್ನೇ ನಾನು ಪ್ರಶ್ನಿಸಿದ್ದು. ಬಸವಣ್ಣ, ನಾರಾಯಣ ಗುರು, ಕುವೆಂಪು, ದೇವರಾಜ ಅರಸು ಅವರುಗಳ ವಿಚಾರ, ತತ್ವಾದರ್ಶಗಳನ್ನು ನಂಬಿದನು ಎನ್ನುವ ನೀವು, ಇನ್ನು ಮುಂದೆ ಆ ಮಹನೀಯರ ಹೆಸರೇಳಬೇಡಿ. ನಿಮಗಿಂತ ವಯಸ್ಸಿನಲ್ಲಿ ಚಿಕ್ಕವನಾದ ನಾನು ನಿಮಗೆ ನೀಡುವ ವಿನಮ್ರ ಸಲಹೆ ಇದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

