CM Siddaramaiah says he will provide full support to investors
x

ಸಿಎಂ ಸಿದ್ದರಾಮಯ್ಯ

ಹೈಕಮಾಂಡ್‌ ಕರೆದರೆ ಮಾತ್ರ ದೆಹಲಿಗೆ ಹೋಗುತ್ತೇನೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಅಧಿವೇಶನ ಮುಗಿದ ನಂತರವಷ್ಟೇ ಬಜೆಟ್‌ನ ಅಧಿಕೃತ ಸಿದ್ಧತೆಗಳು, ಇಲಾಖಾವಾರು ಸಭೆಗಳು ಆರಂಭವಾಗಲಿವೆ. ಅಧಿವೇಶನದಲ್ಲಿ ಡಿಜಿಪಿ ರಾಮಚಂದ್ರರಾವ್ ಅವರ ಪ್ರಕರಣದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ


Click the Play button to hear this message in audio format

ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ವಿಷಯವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವಿನ ಅಧಿಕಾರ ಹಂಚಿಕೆಯ ಕುರಿತು ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂಬ ವದಂತಿಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಯೊಂದು ಮಹತ್ವ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸದ್ಯಕ್ಕೆ ಹೈಕಮಾಂಡ್‌ನಿಂದ ಯಾವುದೇ ಆಹ್ವಾನ ಬಂದಿಲ್ಲ. ಒಂದು ವೇಳೆ ವರಿಷ್ಠರು ಕರೆ ನೀಡಿದರೆ ಮಾತ್ರ ದೆಹಲಿಗೆ ತೆರಳುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ನಾನು ಸುಮ್ಮನೆ ದೆಹಲಿಗೆ ಹೋಗಿ ಯಾರನ್ನೂ ಭೇಟಿಯಾಗುವ ಅಗತ್ಯವಿಲ್ಲ, ನನ್ನ ಸ್ಥಾನ ಭದ್ರ ಎಂಬ ಸಂದೇಶ ರವಾನಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಹೈಕಮಾಂಡ್ ಉಭಯ ನಾಯಕರನ್ನು ದೆಹಲಿಗೆ ಕರೆಸಿ ಸಂಧಾನ ನಡೆಸಲಿದೆ ಅಥವಾ ನಾಯಕತ್ವ ಬದಲಾವಣೆಯ ಮುಹೂರ್ತ ನಿಗದಿಪಡಿಸಲಿದೆ ಎಂಬ ಸುದ್ದಿಗಳು ದಟ್ಟವಾಗಿ ಹರಡಿದ್ದವು. ಬಜೆಟ್ ಸಿದ್ಧತೆ ಮತ್ತು ಅಧಿವೇಶನದ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಅಂಗಳಕ್ಕೆ ಚೆಂಡನ್ನು ಎಸೆದಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಗೊಂದಲಗಳು ಮುಂದುವರಿದಿದ್ದರೂ, ಸಿದ್ದರಾಮಯ್ಯ ಅವರು ಮಾತ್ರ ಯಾವುದೇ ಒತ್ತಡಕ್ಕೆ ಮಣಿಯದೆ ಆಡಳಿತದತ್ತ ಗಮನ ಹರಿಸುತ್ತಿದ್ದಾರೆ.

ಜನವರಿ 22ರಿಂದ ಅಧಿವೇಶನ

ಅಧೀವೇಶನ ಕುರಿತು ಮಾತನಾಡಿದ ಅವರು, ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವು ಜ.22 ರಿಂದ ಜ.31 ರವರೆಗೆ ನಡೆಯಲಿದೆ. ಅಧಿವೇಶನದ ಮೊದಲ ದಿನ ರಾಜ್ಯಪಾಲರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಬಾರಿಯ ಅಧಿವೇಶನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ತರುತ್ತಿರುವ ಬದಲಾವಣೆಗಳು ಹಾಗೂ ರಾಜ್ಯದಲ್ಲಿ ಅದರ ಅನುಷ್ಠಾನದ ಬಗ್ಗೆ ವಿಶೇಷ ಚರ್ಚೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಅಧಿವೇಶನ ಮುಗಿದ ನಂತರವಷ್ಟೇ ಬಜೆಟ್‌ನ ಅಧಿಕೃತ ಸಿದ್ಧತೆಗಳು ಮತ್ತು ಇಲಾಖಾವಾರು ಸಭೆಗಳು ಆರಂಭವಾಗಲಿವೆ. ಪ್ರಸ್ತುತ ಅಧಿಕಾರಿಗಳೊಂದಿಗೆ ಪ್ರಾಥಮಿಕ ಹಂತದ ಸಮಾಲೋಚನೆ ನಡೆಸಲಾಗುತ್ತಿದೆ. ಅಧಿವೇಶನದಲ್ಲಿ ಡಿಜಿಪಿ ರಾಮಚಂದ್ರರಾವ್ ಅವರ ಪ್ರಕರಣದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದರು.

ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಅವರ ವಿರುದ್ಧ ಕೇಳಿಬಂದಿರುವ ಅನುಚಿತ ವರ್ತನೆಯ ಆರೋಪವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅವರ ವರ್ತನೆಯು ಶಿಸ್ತುಬದ್ಧ ಇಲಾಖೆಗೆ ಶೋಭೆ ತರುವಂತದ್ದಲ್ಲ. ಅವರ ವಿರುದ್ಧ ಈಗಾಗಲೇ ಶಿಸ್ತಿನ ಕ್ರಮ ಜರುಗಿಸಿ, ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.

Read More
Next Story