ಸದನದಲ್ಲಿ ಅಬಕಾರಿ ಸದ್ದು: ಬಿಜೆಪಿಯ ಹೋರಾಟಕ್ಕೆ ಕಾಂಗ್ರೆಸ್‌ ಇರಿಸುಮುರಿಸು
x

ಸದನದಲ್ಲಿ ಅಬಕಾರಿ ಸದ್ದು: ಬಿಜೆಪಿಯ ಹೋರಾಟಕ್ಕೆ ಕಾಂಗ್ರೆಸ್‌ ಇರಿಸುಮುರಿಸು

ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ಗೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಕೇವಲ ಧರಣಿ ಮತ್ತು ಘೋಷಣೆಗಳಿಂದ ಸರ್ಕಾರವನ್ನು ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಸಂದೇಶವನ್ನು ರವನಿಸಿದಂತಾಗಿದೆ.


Click the Play button to hear this message in audio format

ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರವು ರಾಜ್ಯ ರಾಜಕಾರಣದ ಬಿಸಿಯನ್ನು ಏರಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಪಟ್ಟು ಹಿಡಿದು ಸದನದೊಳಗೆ ಮತ್ತು ಹೊರಗೆ ತೀವ್ರ ಹೋರಾಟ ನಡೆಸಿವೆ. ಆದರೆ, ಈ ಹೋರಾಟವು ನಿರೀಕ್ಷಿತ ಮಟ್ಟದ ಪರಿಣಾಮ ಬೀರಲು ವಿಫಲವಾಗಿದ್ದು, ಪ್ರತಿಪಕ್ಷಗಳ ಅಸ್ತ್ರವು ಆಡಳಿತಾರೂಢ ಕಾಂಗ್ರೆಸ್‌ಗೆ ಪ್ರಯೋಜನವಾಗಿಲ್ಲ.

ಅಧಿವೇಶನ ಆರಂಭಕ್ಕೂ ಮುನ್ನ ಬಿಜೆಪಿ-ಜೆಡಿಎಸ್ ಸದಸ್ಯರು ಜಂಟಿಯಾಗಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ಇದು ಕೇವಲ ಸಾಂಕೇತಿಕ ಪ್ರತಿಭಟನೆಯಾಗಿರದೆ, ಅಬಕಾರಿ ಇಲಾಖೆಯಲ್ಲಿನ ವರ್ಗಾವಣೆ ದಂಧೆ ಮತ್ತು ಲಂಚದ ಆರೋಪಗಳ ವಿರುದ್ಧದ ಸಮರ ಎಂದು ಬಿಂಬಿಸಲಾಯಿತು. ನಂತರ ಕಲಾಪ ಆರಂಭವಾಗುತ್ತಿದ್ದಂತೆಯೇ, ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಪ್ರತಿಪಕ್ಷಗಳು ಈ ವಿಷಯದ ಕುರಿತು ತುರ್ತು ಚರ್ಚೆಗೆ ಒತ್ತಾಯಿಸಿದವು.

ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ನೇತೃತ್ವದಲ್ಲಿ ಸದನದ ಬಾವಿಗಿಳಿದು ಧರಣಿ ನಡೆಸಲಾಯಿತು. ಸರ್ಕಾರ ವಿರುದ್ಧ ಘೋಷಣೆಗಳ ಮೂಲಕ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸಲಾಯಿತು.

ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಾಲ್ಮೀಕಿ ನಿಗಮದ ಹಗರಣವನ್ನು ಉಲ್ಲೇಖಿಸಿ, ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆದ ಸರ್ಕಾರ, ಅಬಕಾರಿ ಇಲಾಖೆಯ ವಿಚಾರದಲ್ಲಿ ಯಾಕೆ ಮೌನವಾಗಿದೆ ಎಂದು ಕಿಡಿಕಾರಿದರು. ಇದು ಸರ್ಕಾರದ 'ಇಬ್ಬಂದಿ ನೀತಿ'ಯನ್ನು ಎತ್ತಿ ತೋರಿಸುವ ತಂತ್ರವಾಗಿತ್ತು. ಈ ಹೋರಾಟವನ್ನು ನೈತಿಕತೆಯ ಮೇಲೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿತು. ಆದರೂ, ಸಚಿವರನ್ನು ಸಮರ್ಥಿಸಿಕೊಳ್ಳುವಲ್ಲಿ ಆಡಳಿತ ಪಕ್ಷವು ಮೊದಲ ಹಂತದಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಸಾಮಾನ್ಯವಾಗಿ ಇಂತಹ ಗಂಭೀರ ಹಗರಣಗಳ ಆರೋಪ ಬಂದಾಗ ಆಡಳಿತ ಪಕ್ಷವು ಚರ್ಚೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತದೆ. ಆದರೆ, ಈ ಬಾರಿ ಕಾಂಗ್ರೆಸ್ ಭಿನ್ನವಾದ ತಂತ್ರವನ್ನು ಅನುಸರಿಸಿತು. ಪ್ರತಿಪಕ್ಷಗಳು ಚರ್ಚೆಗೆ ಅವಕಾಶ ಕೇಳಿದಾಗ, ಆಡಳಿತ ಪಕ್ಷದ ಸದಸ್ಯರು ಹಾಗೂ ಸಚಿವರು ಚರ್ಚೆಗೆ ಸಿದ್ಧವಿದ್ದೇವೆ, ಸಮಯ ನಿಗದಿಪಡಿಸಿ ಎಂದು ಮುಕ್ತವಾಗಿ ಆಹ್ವಾನ ನೀಡಿತು.

ಈ ಹಂತದಲ್ಲಿ ಪ್ರತಿಪಕ್ಷಗಳಿಗೆ ಒಂದು ರೀತಿಯ ಇರುಸುಮುರಿಸು ಉಂಟಾಯಿತು. ಯಾಕೆಂದರೆ, ಪ್ರತಿಪಕ್ಷಗಳು ಸರ್ಕಾರವು ಚರ್ಚೆಗೆ ನಿರಾಕರಿಸುತ್ತದೆ ಮತ್ತು ಆ ಮೂಲಕ ಸದನವನ್ನು ಸ್ತಬ್ಧಗೊಳಿಸಿ ರಾಜಕೀಯ ಲಾಭ ಪಡೆಯಬಹುದು ಎಂದು ಭಾವಿಸಲಾಯಿತು. ಆದರೆ ಸರ್ಕಾರವೇ ಬನ್ನಿ ಚರ್ಚೆ ಮಾಡೋಣ, ನಾವೂ ಉತ್ತರ ನೀಡುತ್ತೇವೆ ಎಂದು ಸವಾಲು ಹಾಕಿದಾಗ, ಪ್ರತಿಪಕ್ಷಗಳ ಬಳಿ ಚರ್ಚೆಗೆ ಬೇಕಾದ ಪ್ರಬಲ ದಾಖಲೆಗಳು ಅಥವಾ ಪೂರ್ವಸಿದ್ಧತೆ ಇದೆಯೇ ಎಂಬ ಪ್ರಶ್ನೆ ಮೂಡಿದೆ. ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಪ್ರತಿಭಟನೆ ನಡೆಸಿದರೂ, ಸದನದ ಒಳಗಡೆ ಸರ್ಕಾರದ ತಂತ್ರಕ್ಕೆ ತಕ್ಕ ತಿರುಗೇಟು ನೀಡುವಲ್ಲಿ ಸಂಘಟಿತ ಪ್ರಯತ್ನದ ಕೊರತೆ ಕಂಡುಬಂದಿತು.

ವಿಧಾನಪರಿಷತ್‌ನ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು "ನಾವು ಎಲ್ಲವನ್ನೂ ಎದುರಿಸಲು ಸಿದ್ಧ" ಎಂದು ಹೇಳುವ ಮೂಲಕ ಪ್ರತಿಪಕ್ಷಗಳ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾದರು. ಇದು ಕಾಂಗ್ರೆಸ್‌ ರಾಜಕೀಯವಾಗಿ ತಿರುಗೇಟು ನೀಡಲು ಮುಂದಾಗಿದ್ದು, ಸರ್ಕಾರವು ಹಗರಣವನ್ನು ಮುಚ್ಚಿಡುತ್ತಿಲ್ಲ ಎಂಬ ಸಂದೇಶವನ್ನು ರವಾನಿಸುವಲ್ಲಿ ಯಶಸ್ವಿಯಾಯಿತು.

ಸಭಾಧ್ಯಕ್ಷ ಯು.ಟಿ. ಖಾದರ್ ಮತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರು ಪರಿಸ್ಥಿತಿಯನ್ನು ಬಹಳ ಸಂಯಮದಿಂದ ನಿಭಾಯಿಸಿದರು. ಗದ್ದಲದ ನಡುವೆಯೇ ಚರ್ಚೆಗೆ ಅವಕಾಶ ನೀಡುವ ಬಗ್ಗೆ ಹೇಳಿಕೆಯು ಪ್ರತಿಪಕ್ಷಗಳ ಪ್ರತಿಭಟನೆ ತಪ್ಪಿಸುವಂತಾಯಿತು. ಈ ವಿದ್ಯಮಾನವು ಕಾಂಗ್ರೆಸ್ ಪಕ್ಷಕ್ಕೆ ಒಂದು ರೀತಿಯ ನೈತಿಕ ಬಲವನ್ನು ನೀಡಿದೆ. ಹಗರಣದ ಆರೋಪವಿದ್ದರೂ ಚರ್ಚೆಗೆ ಸಿದ್ಧ ಎಂದು ಹೇಳುವ ಮೂಲಕ ಸರ್ಕಾರವು ತನ್ನ ಪಾರದರ್ಶಕತೆಯನ್ನು ಪ್ರದರ್ಶಿಸಲು ಯತ್ನಿಸಿದೆ. ಮತ್ತೊಂದೆಡೆ, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ಗೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಕೇವಲ ಧರಣಿ ಮತ್ತು ಘೋಷಣೆಗಳಿಂದ ಸರ್ಕಾರವನ್ನು ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಸಂದೇಶವನ್ನು ರವನಿಸಿದಂತಾಗಿದೆ.

Read More
Next Story