
ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಭಾಗವಹಿಸಿದ್ದರು.
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಗಾಂಧಿ ಹೆಸರು ನಾಮಕರಣ! ಸಿದ್ಧರಾಮಯ್ಯ ಘೋಷಣೆ
ಮನರೇಗಾ ಯೋಜನೆಯನ್ನು ತಿದ್ದುಪಡಿ ಮಾಡಿ ವಿಬಿಜಿ ರಾಮ್ ಜಿ ನೂತನ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವುದರ ವಿರುದ್ಧ ರಾಜ್ಯ ಸರ್ಕಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಕೇಂದ್ರ ಸರ್ಕಾರದ ನರೇಗಾ ತಿದ್ದುಪಡಿ ಕಾಯ್ದೆ 'ವಿಬಿ-ಜಿ-ರಾಮ್-ಜಿ' ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ರಣಕಹಳೆ ಮೊಳಗಿಸಿದೆ. ಈ ಹೊಸ ಯೋಜನೆಯನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿರುವ ಕಾಂಗ್ರೆಸ್, ರಾಷ್ಟ್ರಮಟ್ಟದಲ್ಲಿ ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ. ಇದರ ಭಾಗವಾಗಿ ಕರ್ನಾಟಕದಲ್ಲೂ ಹೋರಾಟವು ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರ ನಡುವೆಯೇ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮಗಾಂಧಿ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ಧರಾಮಯ್ಯ ಅವರು ಘೋಷಿಸಿದ್ದಾರೆ.
ಮುಂದಿನ ಬಜೆಟ್‌ನಲ್ಲಿ ಘೋಷಣೆ
ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ತಿದ್ದುಪಡಿ ಮಾಡಿ ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿರುವುದನ್ನು ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ದೇಶಾದ್ಯಂತ ಹೋರಾಟ ನಡೆಸುತ್ತಿದ್ದು, ರಾಜ್ಯದಲ್ಲಿಯೂ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಂಗಳವಾರ(ಜ.27) ಫ್ರೀಡಂ ಪಾರ್ಕ್‌ನಲ್ಲಿ ಕೆಪಿಸಿಸಿ ಆಯೋಜಿಸಿದ್ದ ʼರಾಜಭವನ ಚಲೋ ಮಹಾತ್ಮ ಗಾಂಧಿ ನರೇಗಾ ಬಚಾವ್ ಸಂಗ್ರಾಮ ಪ್ರತಿಭಟನೆಯಲ್ಲಿʼ ಭಾಗವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯನವರು," ಮಹಾತ್ಮಗಾಂಧಿ ಹೆಸರು ಹೇಳಿದರೆ ಕೇಂದ್ರ ಸರ್ಕಾರಕ್ಕೆ ಆಗುವುದಿಲ್ಲ. ದುರುದ್ದೇಶದಿಂದ ಮನರೇಗಾ ಹೆಸರು ಬದಲಾವಣೆ ಮಾಡಿ ‘ವಿಬಿ ಜೀ ರಾಮ್ ಜೀ’ ಜಾರಿ ಮಾಡಿದ್ದಾರೆ. ಆದ್ದರಿಂದ ರಾಜ್ಯದಲ್ಲಿರುವ ಅಷ್ಟೂ ಗ್ರಾಮ ಪಂಚಾಯಿತಿಗಳಿಗೆ ಮಹಾತ್ಮಾ ಗಾಂಧಿ ಹೆಸರು ಅನ್ನು ಇಡಲಾಗುವುದು. ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಬಡವರ, ರೈತರ ಬಗ್ಗೆ ಕಾಂಗ್ರೆಸ್‌ಗೆ ಕಾಳಜಿ
ಮನರೇಗಾ ಯೋಜನೆಯಲ್ಲಿ ರಾಮ ಅನ್ನೋ ಹೆಸರು ಬರುವ ರೀತಿ ಯೋಜನೆ ಮಾಡಿದ್ದಾರೆ. ದಶರಥ ರಾಮ ಇಲ್ಲ, ಕೌಶಲ್ಯ ರಾಮ ಇಲ್ಲ, ಸೀತಾರಾಮ ಸಹ ಇಲ್ಲ. ಈ ಕಾಯ್ದೆಯಲ್ಲಿ ರಾಮ ಇಲ್ಲ. ಬಡವರು, ದಲಿತರು, ರೈತರ ಬಗ್ಗೆ ಚಿಂತಿಸುವುದು ಕಾಂಗ್ರೆಸ್ ಮಾತ್ರ ಎಂದು ತಿಳಿಸಿದರು.
ಆರ್‌ಎಸ್‌ಎಸ್ ಮಾರ್ಗದರ್ಶನದಂತೆ ಬಿಜೆಪಿ ಕೆಲಸ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾರ್ಗದರ್ಶನದಂತೆ ಬಡವರ ಕಾರ್ಯಕ್ರಮಗಳನ್ನ ಬಿಜೆಪಿಯವರು ರದ್ದು ಮಾಡಿದ್ದಾರೆ. ಆರ್‌ಎಸ್‌ಎಸ್ ನವರಿಗೆ ಬಡವರು ಮುಖ್ಯವಾಹಿನಿಗೆ ಬರುವುದು ಬೇಕಾಗಿಲ್ಲ. ಬಡವರು ಬಡವರಾಗಿಯೇ ಉಳಿದು ಸದಾಕಾಲ ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿ ಸಿದ್ಧಾಂತ. ಬಡವರ ವಿರೋಧಿ ಬಿಜೆಪಿ ಬಡವರ ಪರವಾದ ಎಲ್ಲ ಕಾರ್ಯಕ್ರಮಗಳನ್ನೂ ರದ್ದುಗೊಳಿಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಪೇಟ ಕಟ್ಟಿದ ಸಿಎಂ ಸಿದ್ದರಾಮಯ್ಯ
ಗಾಂಧೀಜಿ ಸಂಕಲ್ಪದಂತೆ ಕಾರ್ಯ
ಪ್ರತಿಭಟನೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, “ಕೆಪಿಸಿಸಿ ಉಪಾಧ್ಯಕ್ಷ ಉಗ್ರಪ್ಪ ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಈ ವಿಚಾರವಾಗಿ ನಮಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ. ಆ ಮೂಲಕ ಮಹಾತ್ಮ ಗಾಂಧಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಕೆಲಸ ಮಾಡಲಾಗುವುದು. ಹಳ್ಳಿಗೊಂದು ಶಾಲೆ, ಸಹಕಾರ ಸಂಘ, ಪಂಚಾಯಿತಿ ಇರಬೇಕು ಎಂಬುದು ಗಾಂಧೀಜಿ ಅವರ ಸಂಕಲ್ಪ” ಎಂದು ತಿಳಿಸಿದರು.
ಯೋಜನೆಗೆ ಆರು ಸಾವಿರ ಕೋಟಿ ಖರ್ಚು
“ಬಡ ಜನರ ಉದ್ಯೋಗದ ಹಕ್ಕಿನ ಪರವಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಉದ್ಯೋಗ ಇಲ್ಲದವರಿಗೆ ಉದ್ಯೋಗ ನೀಡಿದ್ದು, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ ನೇತೃತ್ವದ ಮನಮೋಹನ್ ಸಿಂಗ್ ಅವರ ಸರ್ಕಾರ. ನಮ್ಮ ಉದ್ಯೋಗ ಖಾತರಿ ಯೋಜನೆಯನ್ನು ವಿಶ್ವವೇ ಗಮನಿಸಿತ್ತು. ಈ ಯೋಜನೆ ಬಹಳ ಅತ್ಯುತ್ತಮ ಯೋಜನೆ ಎಂದು ವಿಶ್ವಬ್ಯಾಂಕ್ 2013ರಲ್ಲಿ ಶ್ಲಾಘಿಸಿತ್ತು. 5,700 ಪಂಚಾಯಿತಿಗಳಿದ್ದು, ಪ್ರತಿ ವರ್ಷ ನಮ್ಮ ರಾಜ್ಯದಲ್ಲಿ ಈ ಯೋಜನೆಯಿಂದ 6 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿತ್ತು” ಎಂದು ಹೇಳಿದರು.
ಕೆಲಸದ ಬಗ್ಗೆ ಪಂಚಾಯಿತಿ ತೀರ್ಮಾನ
ಯಾವ ಕಾಮಗಾರಿ, ಅಭಿವೃದ್ಧಿ ಕೆಲಸ ಕೈಗೊಳ್ಳಬೇಕು ಎಂದು ಈ ಹಿಂದೆ ಪಂಚಾಯಿತಿಗಳು ತೀರ್ಮಾನ ಮಾಡುತ್ತಿದ್ದವು. ಬೇರೆಯವರ ಜಮೀನಿನಲ್ಲಿ ಕೂಲಿಗೆ ಹೋಗಲು ಹಿಂಜರಿಯುವವರಿಗೆ ತಮ್ಮ ಜಮೀನಿನಲ್ಲೇ ಕೆಲಸ ಮಾಡಿ ಕೂಲಿ ಪಡೆಯುವ ಅವಕಾಶವನ್ನು ರೂಪಿಸಲಾಗಿತ್ತು. ಆಶ್ರಯ ಮನೆ, ಇಂದಿರಾ ಆವಾಸ್ ಮನೆ ನಿರ್ಮಾಣ, ದನಗಳ ಕೊಟ್ಟಿಗೆ, ವ್ಯವಸಾಯ ಸಂಬಂಧಿ ಕೆಲಸ ಮಾಡಲು ಕೂಲಿ ನೀಡಲಾಗುತ್ತಿತ್ತು ಎಂದು ವಿವರಿಸಿದರು.
“ಈ ಯೋಜನೆ ಆಂದೋಲನವಾಗಿ ನಡೆಯುತ್ತಿತ್ತು. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ.90 ಅನುದಾನ ನೀಡುತ್ತಿತ್ತು. ಕಬ್ಬಿಣ, ಸಿಮೆಂಟ್ ನಂತಹ ಸಾಮಾಗ್ರಿಗಳ ಬಳಕೆಯ ಕಾಮಗಾರಿಗಳಿದ್ದರೆ, ಅವುಗಳಿಗೆ ರಾಜ್ಯ ಸರ್ಕಾರ ಶೇ. 25 ಅನುದಾನ ನೀಡಬೇಕಾಗಿತ್ತು. 7 ಸಾವಿರ ಜನ ಇದರ ಉಸ್ತುವಾರಿ ಜವಾಬ್ದಾರಿಯ ಉದ್ಯೋಗ ಸೃಷ್ಟಿಯಾಗಿದ್ದವು. ಮಹಾತ್ಮ ಗಾಂಧಿ ಅವರ ಹೆಸರನ್ನು ಬದಲಿಸಿ ಈ ಕಾಯ್ದೆಗೆ ಹೊಸ ರೂಪ ನೀಡಿದ್ದಾರೆ. ನೂತನ ಕಾಯ್ದೆ ಪ್ರಕಾರ ಕೇಂದ್ರ ಸರ್ಕಾರ ಶೇ.60 ರಾಜ್ಯ ಸರ್ಕಾರ ಶೇ. 40 ಅನುದಾನ ಭರಿಸಬೇಕಾಗಿದೆ. ಈ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ನಡೆಸುತ್ತಿದ್ದೇವೆ. 2 ದಿನಗಳ ಕಾಲ ಈ ವಿಚಾರವಾಗಿ ಚರ್ಚೆ ಮಾಡುತ್ತೇವೆ. ಬಿಜೆಪಿ ನಾಯಕರು ಏನು ಮಾತನಾಡುತ್ತಾರೆ ನೋಡೋಣ” ಎಂದರು.
ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕು ಕಳೆದುಕೊಂಡ ಬಿಜೆಪಿ
"ಬಿಜೆಪಿ ನಾಯಕರು ಗಾಂಧಿ ಪ್ರತಿಮೆ ಮುಂದೆ ಕುಳಿತು ಪ್ರತಿಭಟನೆ ಮಾಡುವ ಕಳೆದುಕೊಂಡಿದ್ದಾರೆ. ಇನ್ನುಮುಂದೆ ನಿಮ್ಮ ಕಚೇರಿಯಲ್ಲಿ ಗಾಂಧಿ ಭಾವಚಿತ್ರ ಇಟ್ಟುಕೊಳ್ಳುವ ಯೋಗ್ಯತೆ ನಿಮಗಿಲ್ಲ. ಗಾಂಧಿ ಅವರನ್ನು ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದ್ದಲ್ಲದೇ, ಬಿಜೆಪಿ ಹಾಗೂ ಎನ್‌ಡಿಎ ಸರ್ಕಾರ ಈಗ ಮತ್ತೆ ಅವರನ್ನು ಹತ್ಯೆ ಮಾಡುತ್ತಿದ್ದೀರಿ. ಅವರ ಹೆಸರನ್ನು ಅಳಿಸಿಹಾಕಲು ಸಾಧ್ಯವಿಲ್ಲ” ಎಂದು ತಿಳಿಸಿದರು.
ಬಂಧಿಸಿದರೂ ಹೆದರಲ್ಲ
“ಹಳ್ಳಿಗಳ ಉದ್ದಾರಕ್ಕೆ ನೀಡಿದ ಯೋಜನೆ ನರೇಗಾ. ಬಿಜೆಪಿಯಿಂದ ದೇಶಕ್ಕೆ ಹರಡುತ್ತಿದೆ ನಿರುದ್ಯೋಗದ ರೋಗ. ಬಿಜೆಪಿಯ ಗಾಂಧಿ ದ್ವೇಷಕ್ಕೆ ಧಿಕ್ಕಾರ. ನರೇಗಾ ರದ್ದಾಗಲು ಎಂದಿಗೂ ಬಿಡುವುದಿಲ್ಲ. ಬೇಡ ನಮಗೆ ವಿಬಿ ಗ್ರಾಮ್ ಜೀ. ಬೇಕೆ ಬೇಕು ನಮಗೆ ಗಾಂಧಿ. ಇವತ್ತು ಪೊಲೀಸರು ನಮ್ಮನ್ನು ಬಂಧಿಸಿದರೂ ನಾವು ಹಿಂಜರಿಯುವುದಿಲ್ಲ, ಸರ್ಕಾರ ಇದ್ದರೂ ನಾವು ಜೈಲಿಗೆ ಹೋದರೂ ಸರಿ, ನರೇಗಾ ಯೋಜನೆ ಮರುಜಾರಿಗೆ ಹೋರಾಟ ಮುಂದುವರಿಸುತ್ತೇವೆ. ಕೇಂದ್ರ ಸರ್ಕಾರ ಕೃಷಿ ಕರಾಳ ಕಾಯ್ದೆಯನ್ನು ಹಿಂಪಡೆದಂತೆ ಇದನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಡೆಯಲಿದೆ” ಎಂದು ಸಂದೇಶ ಸಾರಿದರು.
ಕೇಂದ್ರ ಸಚಿವ ಎಚ್‌ಡಿಕೆ, ಬಿಜೆಪಿ ನಾಯಕರು ಚರ್ಚೆಗೆ ಬರಲಿ
“ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ಚರ್ಚೆಗೆ ಬರಲಿ, ನಾನು ಸಿದ್ಧನಿದ್ದೇನೆ. ಈ ಯೋಜನೆ ಜಾರಿಯಾಗಿ 20 ವರ್ಷಗಳಾಗಿವೆ. ಕಳೆದ 11 ವರ್ಷಗಳಿಂದ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಈ ಯೋಜನೆಯಲ್ಲಿ ಅಕ್ರಮ ನಡೆದಿದ್ದರೆ ನೀವು ಏನು ಮಾಡುತ್ತಿದ್ದಿರಿ? ನಮ್ಮ ಪಂಚಾಯಿತಿಗಳಲ್ಲಿ ಅಕ್ರಮ ನಡೆದ ಪ್ರಕರಣಗಳಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ. ಯಾರೋ ಕೆಲವರು ತಪ್ಪು ಮಾಡಿದರೆ ಇಡೀ ಯೋಜನೆಯನ್ನೇ ಬದಲಿಸುವುದೇ? ಆ ಮೂಲಕ ಮೂಗು ಕತ್ತರಿಸಿಕೊಳ್ಳುವ ಕೆಲಸ ಮಾಡುವುದು ಸರಿಯೇ?” ಎಂದು ಕಿಡಿಕಾರಿದರು.

