
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ರಾಜ್ಯಪಾಲರಿಗೆ ಮನವಿ ನೀಡಿದರು.
MGNREGA vs VB-GRAMG: ಕೇಂದ್ರದ ವಿರುದ್ಧ ಕಾಂಗ್ರೆಸ್ ಸಮರ – ರಾಜ್ಯಪಾಲರಿಗೆ ಮನವಿ
ಕೇಂದ್ರದ VB-GRAMG ಕಾಯ್ದೆ ವಿರುದ್ಧ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ದೇಶದ ಗ್ರಾಮೀಣ ಬಡವರ ಪಾಲಿನ ಸಂಜೀವಿನಿಯಾಗಿದ್ದ 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ' (MGNREGA) ಈಗ ಅಸ್ತಿತ್ವದ ಹೋರಾಟ ಎದುರಿಸುತ್ತಿದೆ. ಕೇಂದ್ರ ಸರ್ಕಾರವು ನರೇಗಾ ಕಾಯ್ದೆಗೆ ತಿದ್ದುಪಡಿ ತಂದು, ಅದರ ಬದಲಿಗೆ ವಿಬಿ-ಜಿರಾಮ್‌ಜಿ (VB-GRAMG) ಎಂಬ ಹೊಸ ಕಾಯ್ದೆಯನ್ನು ಜಾರಿಗೆ ತಂದಿದೆ. ಇದನ್ನು ವಿರೋಧಿಸಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಎಐಸಿಸಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ನೇತೃತ್ವದ ಕಾಂಗ್ರೆಸ್ ನಿಯೋಗ ಮಂಗಳವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸುದೀರ್ಘ ವಿಜ್ಞಾಪನಾ ಪತ್ರದೊಂದಿಗೆ ಮನವಿ ಸಲ್ಲಿಸಿತು.
ಕಾಂಗ್ರೆಸ್ ಪಕ್ಷದ ಪ್ರಕಾರ, ಈ ಹೊಸ ಕಾಯ್ದೆಯು ಕೇವಲ ಹೆಸರಿನ ಬದಲಾವಣೆಯಲ್ಲ, ಬದಲಿಗೆ ದೇಶದ 55 ಕೋಟಿ ಜನರ ಜೀವನೋಪಾಯದ ಮೇಲೆ ನಡೆದ ‘ವ್ಯವಸ್ಥಿತ ದಾಳಿ’. ಕಾಂಗ್ರೆಸ್ ಸಲ್ಲಿಸಿದ ವಿಜ್ಞಾಪನಾ ಪತ್ರದ ಕುರಿತ ಸವಿಸ್ತಾರವಾದ ಮಾಹಿತಿ ಇಲ್ಲಿದೆ.
ಕಾರ್ಮಿಕರ ಮತ್ತು ರೈತರ ನಡುವೆ ಗೋಡೆ
ಹೊಸ ಕಾಯ್ದೆಯ ಅತ್ಯಂತ ವಿವಾದಾತ್ಮಕ ಅಂಶವೆಂದರೆ ‘60 ದಿನಗಳ ಕೆಲಸವಿಲ್ಲದ ಅವಧಿ’. ಬಿತ್ತನೆ ಮತ್ತು ಕೊಯ್ಲು ಸಮಯದಲ್ಲಿ ಕಾರ್ಮಿಕರಿಗೆ ಕೆಲಸ ನೀಡಬಾರದು ಎಂದು ಹೊಸ ನಿಯಮ ಹೇಳುತ್ತದೆ.
ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಬಿತ್ತನೆ ಮತ್ತು ಕೊಯ್ಲು ಸಮಯ ರಾಜ್ಯದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ ಬದಲಾಗುತ್ತದೆ. ಇದನ್ನು ನಿರ್ಲಕ್ಷಿಸಿರುವ ಕೇಂದ್ರ, ಕಾರ್ಮಿಕರನ್ನು ರೈತರಿಂದ ದೂರವಿಡುವ ಮತ್ತು ಬಡವರಿಗೆ ಕೆಲಸ ಸಿಗದಂತೆ ಮಾಡುವ ಸಂಚು ರೂಪಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೇಂದ್ರದ ‘ಸರ್ವಾಧಿಕಾರ’ ಮತ್ತು ಪಂಚಾಯತ್‌ಗಳ ಹಕ್ಕು ನಾಶ
ನರೇಗಾ ಯೋಜನೆಯ ಮೂಲ ಆಶಯವೇ ಅಧಿಕಾರ ವಿಕೇಂದ್ರೀಕರಣ. ಅಂದರೆ ಗ್ರಾಮ ಪಂಚಾಯತ್‌ಗಳೇ ಕೆಲಸವನ್ನು ನಿರ್ಧರಿಸುತ್ತಿದ್ದವು. ಹೊಸ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಎಲ್ಲಾ ಅಧಿಕಾರ ಕೇಂದ್ರದ ವಶಕ್ಕೆ ಹೋಗಲಿದೆ. ಯಾವ ರಾಜ್ಯಕ್ಕೆ ಎಷ್ಟು ಹಣ ನೀಡಬೇಕು, ಎಲ್ಲಿ ಕೆಲಸ ಕೊಡಬೇಕು ಎಂಬುದನ್ನು ಕೇಂದ್ರವೇ ನಿರ್ಧರಿಸುತ್ತದೆ. ಇದರಿಂದಾಗಿ ವಿರೋಧ ಪಕ್ಷದ ರಾಜ್ಯಗಳಿಗೆ ಅನುದಾನ ಕಡಿತಗೊಳಿಸುವ ರಾಜಕೀಯ ಸಾಧ್ಯತೆ ಹೆಚ್ಚಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇಲ್ಲಿಯವರೆಗೆ ನರೇಗಾ ಅಡಿಯಲ್ಲಿ ಕೆಲಸ ಕೇಳುವುದು ಕಾರ್ಮಿಕನ ‘ಸಂವಿಧಾನಬದ್ಧ ಹಕ್ಕು’ ಆಗಿತ್ತು. ಆದರೆ ಹೊಸ ಕಾಯ್ದೆಯು ಈ ಹಕ್ಕನ್ನು ಕುಂಠಿತಗೊಳಿಸಿದೆ. ಈಗ ಕೆಲಸ ಕೇಳಿದ ತಕ್ಷಣ ನೀಡುವುದು ಕಡ್ಡಾಯವಲ್ಲ, ಕೇಂದ್ರ ಸರ್ಕಾರ ಅಥವಾ ರಾಜ್ಯದ ಭಾಗಗಳಿಗೆ ವಿಧಿಸಿದ ನಿಯಮಗಳಂತೆ ಕೆಲಸ ಸಿಗಲಿದೆ. ಇದು ಸಂವಿಧಾನದ ವಿಧಿ 39(a) ಮತ್ತು 41ರ ಉಲ್ಲಂಘನೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಆರ್ಥಿಕ ಹೊರೆ: ರಾಜ್ಯಗಳ ಮೇಲೆ ಶೇ. 40 ಹೊಡೆತ
ಈ ಹಿಂದೆ ನರೇಗಾ ಯೋಜನೆಯ ಬಹುಪಾಲು ವೆಚ್ಚವನ್ನು ಕೇಂದ್ರವೇ ಭರಿಸುತ್ತಿತ್ತು. ಆದರೆ ವಿಬಿ-ರಾಮ್-ಜಿ ಕಾಯ್ದೆಯಡಿ ಕೇಂದ್ರ ಸರ್ಕಾರ ಕೇವಲ 60% ವೆಚ್ಚ ಭರಿಸಲಿದೆ. ಉಳಿದ 40% ಹಣವನ್ನು ರಾಜ್ಯ ಸರ್ಕಾರಗಳೇ ಭರಿಸಬೇಕು. ಇದರಿಂದ ಕರ್ನಾಟಕದಂತಹ ರಾಜ್ಯಗಳ ಬೊಕ್ಕಸಕ್ಕೆ ಭಾರಿ ಹೊರೆ ಬೀಳಲಿದ್ದು, ಬಡವರ ಯೋಜನೆಗಳಿಗೆ ಹಣದ ಕೊರತೆ ಎದುರಾಗಲಿದೆ.
ಡಿಜಿಟಲ್ ಪಾರದರ್ಶಕತೆ ಎಂಬ ‘ಉರುಳು’
ಬಯೋಮೆಟ್ರಿಕ್ ಹಾಜರಾತಿ ಮತ್ತು ಇ-ಕೇವೈಸಿ ಕಡ್ಡಾಯಗೊಳಿಸಿದ ನಂತರ ದೇಶದಲ್ಲಿ ಸುಮಾರು 27 ಲಕ್ಷ ಕಾರ್ಮಿಕರು ಕೆಲಸದಿಂದ ಹೊರಗುಳಿದಿದ್ದಾರೆ. ಅನಕ್ಷರಸ್ಥ ಗ್ರಾಮೀಣ ಕಾರ್ಮಿಕರಿಗೆ ‘ರಿಯಲ್ ಟೈಮ್ ಡಿಜಿಟಲ್ ಡ್ಯಾಶ್‌ಬೋರ್ಡ್’ಗಳಂತಹ ಸಂಕೀರ್ಣ ನಿಯಮಗಳನ್ನು ಪಾಲಿಸುವುದು ಅಸಾಧ್ಯ. ಇದು ಬಡವರನ್ನು ವ್ಯವಸ್ಥಿತವಾಗಿ ಯೋಜನೆಯಿಂದ ಹೊರಹಾಕುವ ತಂತ್ರ ಎಂದು ಕಾಂಗ್ರೆಸ್ ಆರೋಪಿಸಿದೆ.
ಗಾಂಧಿ ವಿಚಾರಧಾರೆಯ ನಾಶ
"ಬಿಜೆಪಿ ಸರ್ಕಾರ ಗಾಂಧೀಜಿಯವರ ಕನ್ನಡಕವನ್ನು ಜಾಹೀರಾತುಗಳಿಗೆ ಬಳಸಿಕೊಂಡಿತೇ ಹೊರತು ಅವರ ವಿಚಾರಧಾರೆಯನ್ನಲ್ಲ" ಎಂದು ಕಾಂಗ್ರೆಸ್ ಕಿಡಿಕಾರಿದೆ. ಯೋಜನೆಯ ಹೆಸರಿನಿಂದ ‘ಮಹಾತ್ಮ ಗಾಂಧಿ’ ಅವರ ಹೆಸರನ್ನು ಮರೆಮಾಚುವುದು ಮತ್ತು ಗ್ರಾಮೀಣ ಭಾರತದ ಆರ್ಥಿಕ ಶಕ್ತಿಯನ್ನು ಕುಂದಿಸುವುದು ಕೇಂದ್ರದ ಅಂತಿಮ ಗುರಿಯಾಗಿದೆ ಎಂಬುದು ಕಾಂಗ್ರೆಸ್ ವಾದ.
ಈ ಹೋರಾಟ ಈಗ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ತಮಿಳುನಾಡು, ಪಂಜಾಬ್ ಮತ್ತು ರಾಜಸ್ಥಾನದಂತಹ ರಾಜ್ಯಗಳೂ ಈ ಹೊಸ ಕಾಯ್ದೆಯ ವಿರುದ್ಧ ಧ್ವನಿ ಎತ್ತಿವೆ. ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಡಿಕೆ ಶಿವಕುಮಾರ್, "ಇದು ಬಡವರ ಉದ್ಯೋಗದ ಹಕ್ಕಿನ ರಕ್ಷಣೆಯ ಹೋರಾಟ. ಕೇಂದ್ರ ಸರ್ಕಾರ ಈ ಕೂಡಲೇ VB-GRAMG ಕಾಯ್ದೆಯನ್ನು ಹಿಂಪಡೆದು, ಹಳೆಯ ನರೇಗಾವನ್ನು ಮರುಸ್ಥಾಪಿಸಬೇಕು" ಎಂದು ಆಗ್ರಹಿಸಿದರು.

