MGNREGA v/s VB-G RAM-G Part-5| ಮನರೇಗಾ ಭ್ರಷ್ಟಾಚಾರಕ್ಕೆ ವಿಬಿ ಜಿ ರಾಮ್‌ ಜಿ ಯೋಜನೆ ಕಡಿವಾಣ ಹಾಕುವುದೇ?
x

MGNREGA v/s VB-G RAM-G Part-5| ಮನರೇಗಾ ಭ್ರಷ್ಟಾಚಾರಕ್ಕೆ ವಿಬಿ ಜಿ ರಾಮ್‌ ಜಿ ಯೋಜನೆ ಕಡಿವಾಣ ಹಾಕುವುದೇ?

ಮನರೇಗಾ ಯೋಜನೆಯಲ್ಲಿನ ಭ್ರಷ್ಟಾಚಾರ ನಿಯಂತ್ರಿಸಲೆಂದೇ ಹೊಸ ಕಾಯ್ದೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡರೂ ವಿಬಿ ಜಿ ರಾಮ್ ಜಿ ಕಾಯ್ದೆಯ ಹಲವು ಅಂಶಗಳು ಭ್ರಷ್ಟಾಚಾರಕ್ಕೆ ನಾಂದಿ ಹಾಡುವಂತಿವೆ ಎಂದು ಹೇಳಲಾಗುತ್ತಿದೆ.


ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಮನರೇಗಾ ಯೋಜನೆಯಡಿ ವ್ಯಾಪಕ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹಳೆಯ ಯೋಜನೆ ಬರ್ಖಾಸ್ತುಗೊಳಿಸಿ, ವಿಬಿ ಜಿ ರಾಮ್ ಜಿ ಹೆಸರಿನ ಹೊಸ ಯೋಜನೆ ತಂದಿದೆ. ಮನರೇಗಾ ಯೋಜನೆಯ ಹೆಸರು, ಸ್ವರೂಪ ಬದಲಾಗಿದೆ. ಹೊಸ ಯೋಜನೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುವುದೇ ಅಥವಾ ಹೊಸ ಅವತಾರದಲ್ಲಿ ಭ್ರಷ್ಟಾಚಾರವು ಯೋಜನೆಯನ್ನು ಆಕ್ರಮಿಸುವುದೇ ಎಂಬ ಚರ್ಚೆಗಳು ನಡೆಯುತ್ತಿವೆ.

ನಕಲಿ ಜಾಬ್ ಕಾರ್ಡ್, ಸತ್ತವರ ಹೆಸರಿನಲ್ಲಿ ಕೂಲಿ ಹಣ ಪಾವತಿ ಹಾಗೂ ಹಾಜರಾತಿ ತಿದ್ದುಪಡಿಯಂತಹ ಹಲವು ಲೋಪಗಳಿಂದಾಗಿ ಯೋಜನೆಗೆ ಕುಂದುಂಟಾಗಿತ್ತು. ಮನರೇಗಾ ಯೋಜನೆಯಲ್ಲಿನ ಭ್ರಷ್ಟಾಚಾರ ನಿಯಂತ್ರಿಸಲೆಂದೇ ಹೊಸ ಕಾಯ್ದೆ ತರಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡರೂ ವಿಬಿ ಜಿ ರಾಮ್ ಜಿ ಕಾಯ್ದೆಯ ಹಲವು ಅಂಶಗಳು ಭ್ರಷ್ಟಾಚಾರಕ್ಕೆ ನಾಂದಿ ಹಾಡುವಂತಿವೆ ಎಂದು ಹೇಳಲಾಗುತ್ತಿದೆ.

ಮನರೇಗಾದಲ್ಲಿ ಹೇಗಿತ್ತು ಭ್ರಷ್ಟಾಚಾರ?

2026 ನೇ ಸಾಲಿನಲ್ಲಿ ಮನರೇಗಾ ಯೋಜನೆಯಡಿ ದೇಶಾದ್ಯಂತ 11.14 ಲಕ್ಷಕ್ಕೂ ಹೆಚ್ಚು ಅಕ್ರಮಗಳು ನಡೆದಿರುವುದನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯ ಪತ್ತೆ ಹಚ್ಚಿತ್ತು.ಕರ್ನಾಟಕದ ಯಾದಗಿರಿ, ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪುರುಷರು ಮಹಿಳೆಯರಂತೆ ನಟಿಸಿ ಹಣ ಪಡೆದಿದ್ದ ಘಟನೆಗಳೂ ಬಯಲಾಗಿದ್ದವು. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ತಂತ್ರಜ್ಞಾನ ಆಧರಿತವಾದ ವಿಬಿ ಜಿ ರಾಮ್ ಜಿ ಯೋಜನೆ ತರಲಾಗಿದೆ ಎಂಬುದು ಕೇಂದ್ರದ ವಾದ.

ಹಾಗಾದರೆ, ಹೊಸ ಕಾಯ್ದೆಯಲ್ಲಿ ಭ್ರಷ್ಟಾಚಾರ ನಡೆಯುವ ಸಾಧ್ಯತೆಗಳಿಲ್ಲವೇ ಎಂಬ ಪ್ರಶ್ನೆಗೆ ನಿಖರ ಉತ್ತರ ಇಲ್ಲ. ಹೊಸ ಕಾಯ್ದೆಯಲ್ಲಿನ ಕೆಲ ಅಂಶಗಳು ಭ್ರಷ್ಟಾಚಾರಕ್ಕೆ ಆಸ್ಪದ ನೀಡಲಿವೆ ಎಂದು ತಜ್ಞರು ಹೇಳುತ್ತಾರೆ.

ಭ್ರಷ್ಟಾಚಾರಕ್ಕೆ ಮೂಲ ಕಾರಣ ಆಡಳಿತ ವ್ಯವಸ್ಥೆ. ಈಗ ಹೊಸ ಕಾಯ್ದೆ ಜಾರಿಯಾದರೂ ಹಳೆಯ ಆಡಳಿತ ವ್ಯವಸ್ಥೆಯೇ ಇರುವುದರಿಂದ ಭ್ರಷ್ಟಾಚಾರ ನಡೆಯುವ ಸಾಧ್ಯತೆಗಳೇ ಹೆಚ್ಚಿರಲಿವೆ ಎನ್ನಲಾಗುತ್ತಿದೆ.

ಹೊಸ ಕಾಯ್ದೆಯಲ್ಲಿ ಭ್ರಷ್ಟಾಚಾರ ಇಣುಕಲಿದೆಯೇ?

ವಿಬಿ ಜಿ ರಾಮ್ ಜಿಯಲ್ಲಿ ಬಯೋಮೆಟ್ರಿಕ್ ಹಾಜರಾತಿ, ಡಿಜಿಟಲ್ ಟ್ರ್ಯಾಕಿಂಗ್, ಎಐ ಆಧಾರಿತ ಆಡಿಟ್ ಮತ್ತು ನೇರ ನಗದು ವರ್ಗಾವಣೆ ಮೂಲಕ ವ್ಯವಹರಿಸುವುದರಿಂದ ಭ್ರಷ್ಟಾಚಾರ ಇಣುಕುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ವಿಪರ್ಯಾಸ ಎಂದರೆ ಗ್ರಾಮೀಣ ಪ್ರದೇಶದ ಕೂಲಿಕಾರ್ಮಿಕರಿಗೆ ಡಿಜಿಟಲ್‌ ಸಾಕ್ಷರತೆಯ ಕೊರತೆ ಇದೆ. ಯೋಜನೆಯಲ್ಲಿ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಿರುವುದರಿಂದ ಇದು ಗ್ರಾಮೀಣ ಜನರಿಗೆ ಸಮಸ್ಯೆಯಾಗಿ ಪರಿಣಮಿಸಲಿದೆ. ಕೂಲಿ ಕಾರ್ಮಿಕರು ಅನಿವಾರ್ಯವಾಗಿ ಮಧ್ಯವರ್ತಿಗಳು ಮೊರೆ ಹೋಗುವ ಪರಿಸ್ಥಿತಿ ಬರಲಿದೆ. ಯೋಜನೆಯಲ್ಲಿ ಮಧ್ಯವರ್ತಿಗಳ ಪ್ರವೇಶದ ಜೊತೆಯಲ್ಲೇ ಭ್ರಷ್ಟಾಚಾರವೂ ಬರುವ ಸಾಧ್ಯತೆ ಇರಲಿದೆ ಎಂಬುದು ತಜ್ಞರ ಅಭಿಪ್ರಾಯ.

ಹೊಸ ಕಾಯ್ದೆಯಡಿ ಉದ್ಯೋಗ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸಿ, ವಾರಕ್ಕೊಮ್ಮೆ ವೇತನ ಪಾವತಿಸುವ ವ್ಯವಸ್ಥೆ ಪರಿಚಯಿಸಲಾಗಿದೆ. ಕೂಲಿಕಾರ್ಮಿಕರ ಸಂಖ್ಯೆಯ ಕಳ್ಳ ಲೆಕ್ಕ ತಡೆಯಲು ಬಯೋಮೆಟ್ರಿಕ್ ವ್ಯವಸ್ಥೆ ತರಲಾಗಿದೆ. ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಗಳ ಮೂಲಕ ಅನುಷ್ಠಾನಗೊಳಿಸಲು ಒತ್ತು ನೀಡಲಾಗಿದೆ. ಪಂಚಾಯಿತಿಗಳನ್ನು ಕೇಂದ್ರ ಗ್ರಾಮೀಣ ರೋಜಗಾರ್ ಖಾತರಿ ಕೌನ್ಸಿಲ್ ಮೇಲ್ವಿಚಾರಣೆ ಮಾಡುವುದರಿಂದ ಭ್ರಷ್ಟಾಚಾರ ತಡೆಯಬಹುದು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.

ಆದರೆ, ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕಾರ್ಮಿಕರು ಮಧ್ಯವರ್ತಿಗಳನ್ನು ಅವಲಂಬಿಸುವುದರಿಂದ ಅನೌಪಚಾರಿಕ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಬಹುದು ಎಂಬ ಆತಂಕ ಕಾಡುತ್ತಿದೆ.

ಮನರೇಗಾದಲ್ಲಿ ಗುತ್ತಿಗೆದಾರರ ನಿಷೇಧದ ಹೊರತಾಗಿಯೂ ಒಳ ಪ್ರವೇಶಿಸಿ ನಕಲಿ ಕಾಮಗಾರಿಗಳು, ಮೌಲ್ಯೀಕರಣ ಹಾಗೂ ಹಣ ದುರುಪಯೋಗ ಆಗುತ್ತಿತ್ತು. ಈಗ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಗುತ್ತಿಗೆದಾರರಿಗೆ ಅವಕಾಶವಿಲ್ಲ ಎಂದು ಸರ್ಕಾರ ಹೇಳಿದರೂ ತಂತ್ರಜ್ಞಾನದ ಹೆಸರಿನಲ್ಲಿ ಗುತ್ತಿಗೆದಾರರ ಪ್ರಾಬಲ್ಯ ಹೆಚ್ಚಬಹುದು. ನೇರ ಕಾರ್ಮಿಕರ ಉದ್ಯೋಗ ಕಸಿದುಕೊಳ್ಳಬಹುದು ಎನ್ನಲಾಗಿದೆ.

ಪರಿಣಿತರು ಹೇಳುವುದೇನು?

ಹೊಸ ಯೋಜನೆಯಲ್ಲಿ ವಾರಕ್ಕೊಮ್ಮೆ ಹಣ ಪಾವತಿಸುವ ವ್ಯವಸ್ಥೆ ಇದೆ. ಆದರೆ, ಗ್ರಾಮೀಣ ಭಾಗದ ಕೂಲಿಕಾರ್ಮಿಕರು ದಿನಗೂಲಿ ನಂಬಿಯೇ ಜೀವನ ಸಾಗಿಸುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಮಧ್ಯವರ್ತಿಗಳಿಂದ ಅಥವಾ ಮೂರನೇ ವ್ಯಕ್ತಿಯಿಂದ ಮುಂಗಡ ಹಣ ಪಡೆದುಕೊಳ್ಳಲಿದ್ದಾರೆ. ಯೋಜನೆ ಫಲಾನುಭವಿಗಳ ಇಂತಹ ಅನೌಪಚಾರಿಕ ಒಪ್ಪಂದಗಳು ಭ್ರಷ್ಟಾಚಾರಕ್ಕೆ ಕಾರಣವಾಗಿ, ವಂಚನೆಗೆ ದಾರಿ ಮಾಡಿಕೊಡುತ್ತವೆ ಎಂದು ವೆಲ್ಲ್ಯಾಬ್ ಮ್ಯಾನೇಜಿಂಗ್ ಪಾರ್ಟನರ್ ವಿವೇಕ್ ಗ್ರೇವಾಲ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ರಾಜ್ಯಗಳ ಪಾಲು ಹೆಚ್ಚಿರುವುದರಿಂದ ಸಾಕಷ್ಟು ಆರ್ಥಿಕ ಹೊರೆ ಬೀಳಲಿದೆ. ಹಣಕಾಸಿನ ಒತ್ತಡದಲ್ಲಿ ರಾಜ್ಯಗಳು ಕೆಲಸ ಕಡಿಮೆ ಮಾಡಿಸಿದರೆ, ಕಾರ್ಮಿಕರು ಅನಿವಾರ್ಯವಾಗಿ ಮಧ್ಯವರ್ತಿಗಳಿಗೆ ಅವಕಾಶ ಮಾಡಿಕೊಡಲಿದ್ದಾರೆ. ಇದರಿಂದಲೂ ಭ್ರಷ್ಟಾಚಾರ ನಡೆಯಬಹುದು ಎಂದು ಹೇಳಲಾಗಿದೆ.

ಡಿಜಿಟಲ್ ದತ್ತಾಂಶದಿಂದಲೂ ಭ್ರಷ್ಟಾಚಾರ?

ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ತಂತ್ರಜ್ಞಾನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಡಿಜಿಟಲ್ ಡೇಟಾ ದುರುಪಯೋಗ, ಹ್ಯಾಕಿಂಗ್ ಅಥವಾ ಯೋಜನೆ ದಿಕ್ಕು ತಪ್ಪಿಸುವ ಸಾಧ್ಯತೆಗಳು ಇರಲಿವೆ.

ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಮಿಕರು ತಂತ್ರಜ್ಞಾನದ ಅರಿವಿನ ಕೊರತೆಯಿಂದ ಹೊರಗುಳಿಯುವ ಸಾಧ್ಯತೆ ಇರಲಿದೆ. ಹೊಸ ಕಾಯ್ದೆಯಲ್ಲಿ ಸಮುದಾಯ ಆಧಾರಿತ ಸಾಮಾಜಿಕ ಲೆಕ್ಕಪರಿಶೋಧನೆ ಬದಲು ಟಾಪ್ ಡೌನ್ ತಂತ್ರಜ್ಞಾನ ಬಳಸುವುದರಿಂದ ಭ್ರಷ್ಟಾಚಾರಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ಹೊಸ ಯೋಜನೆಯಡಿ ಕೇಂದ್ರ ಸರ್ಕಾರವೇ ನೇರವಾಗಿ ಉದ್ಯೋಗ ನೀಡಿ, ಪಂಚಾಯಿತಿ ವತಿಯಿಂದ ಅನುಷ್ಠಾನಗೊಳಿಸಲಿದೆ. ಮನರೇಗಾದಲ್ಲಿ ಗ್ರಾಮಸಭೆಗಳಲ್ಲಿ ಕಾಮಗಾರಿಗೆ ಅನುಮೋದನೆ ಪಡೆಯಬೇಕಾಗಿತ್ತು. ಈಗ ಕೇಂದ್ರವೇ ನೇರ ಮೇಲ್ವಿಚಾರಣೆ ನಡೆಸುವುದು ಪಂಚಾಯಿತಿ ಮೇಲ್ವಿಚಾರಣೆಯನ್ನು ದುರ್ಬಲಗೊಳಿಸಿ, ಕೇಂದ್ರೀಕೃತ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಲಿದೆ ಎಂದು ಆರೋಪಗಳು ಕೇಳಿಬರುತ್ತಿವೆ.

Read More
Next Story