
ಸದನದಲ್ಲಿ ಅಬಕಾರಿ ಭ್ರಷ್ಟಾಚಾರದ ಕಿಚ್ಚು, ಸಿಬಿಐ ತನಿಖೆಗೆ ವಿಪಕ್ಷಗಳ ಆಗ್ರಹ
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಶೀಘ್ರವೇ ಸಚಿವ ಆರ್.ಬಿ. ತಿಮ್ಮಾಪೂರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿದರು.
ವಿಧಾನಸಭೆ ಅಧಿವೇಶನದ ಆರಂಭದ ದಿನ ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಶಿಷ್ಟಾಚಾರದ ಪ್ರಕಾರ ಗೌರವ ನೀಡಿಲ್ಲ ಹಾಗೂ ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ವಿಪಕ್ಷಗಳು ಪ್ರತಿಭಟನೆ ನಡೆಸಿದವು.
ಮಂಗಳವಾರ(ಜ.27) ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು, ಕಲಾಪದ ಮೊದಲ ದಿನ ಸದನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿ ವಾಪಸ್ ತೆರಳುವ ವೇಳೆ ಕಾಂಗ್ರೆಸ್‌ನ ಕೆಲವು ಶಾಸಕರು ಅಡ್ಡಿಪಡಿಸಿರುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು.
ಅಬಕಾರಿ ಇಲಾಖೆಯಲ್ಲಿ ಆರು ಸಾವಿರ ಕೋಟಿ ರೂಗಳ ಹಗರಣ ನಡೆದಿದೆ. ಈ ಹಗರಣದಲ್ಲಿ ಸಚಿವ ಆರ್. ಬಿ. ತಿಮ್ಮಾಪೂರ ಮತ್ತು ಅವರ ಕುಟುಂಬಸ್ಥರು ಭಾಗಿಯಾಗಿರುವ ಆರೋಪವಿದೆ. ಈ ಭ್ರಷ್ಟಾಚಾರವನ್ನು ಕೇಂದ್ರ ತನಿಖಾ ದಳ ಅಥವಾ ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿ, "ಹೊಸದಾಗಿ ಮದ್ಯದಂಗಡಿಗಳಿಗೆ ಪರವಾಗಿ ನೀಡಲು 2 ಕೋಟಿ ರೂಪಾಯಿವರೆಗೂ ಲಂಚದ ಬೇಡಿಕೆ ಇಟ್ಟಿರುವ ಆರೋಪಗಳಿವೆ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಆಡಳಿತ ಪಕ್ಷದ ನಾಯಕರು ಮಹಾತ್ಮ ಗಾಂಧಿ ಅವರ ಅನುಯಾಯಿಗಳೆಂದು ಹೇಳಿಕೊಂಡು ರಾಜ್ಯದಲ್ಲಿ ಹೊಸದಾಗಿ ಮದ್ಯದಂಗಡಿಗಳ ಪ್ರಾರಂಭಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಅಬಕಾರಿ ಇಲಾಖೆಯಲ್ಲಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡಿವೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ" ಎಂದರು.
ಅಬಕಾರಿ ಹಗರಣ ಕುರಿತು ಮದ್ಯ ಮಾರಾಟಗಾರರ ಸಂಘದ ರಾಜ್ಯಾಧ್ಯಕ್ಷ ಎಸ್.ಗುರುಸ್ವಾಮಿ ಅವರೊಂದಿಗೆ ʼದ ಫೆಡರಲ್ ಕರ್ನಾಟಕʼ ನಡೆಸಿದ ಸಂದರ್ಶನದ ವಿಡಿಯೋ ಇಲ್ಲಿದೆ.

