
Karnataka Legislative Sessions live: ಅಬಕಾರಿ ಇಲಾಖೆ ಲಂಚ ಆರೋಪದ ಚರ್ಚೆ ನಾಳೆಗೆ ಮುಂದೂಡಿಕೆ
ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ಜಂಟಿ ಅಧಿವೇಶನದಲ್ಲಿ ಕೇವಲ ಒಂದು ಸಾಲಿನ ಭಾಷಣ ಮಾಡಿ ನಿರ್ಗಮಿಸಿರುವುದು ಈಗ ಆಡಳಿತಾರೂಢ ಕಾಂಗ್ರೆಸ್ ಪಾಲಿಗೆ ಕೇಂದ್ರದ ವಿರುದ್ಧದ ಹೋರಾಟಕ್ಕೆ ಹೊಸ ವೇದಿಕೆ ಒದಗಿಸಿದೆ.
ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಭಾಷಣದ ವೇಳೆ ನಡೆದಿದೆ ಎನ್ನಲಾದ ಶಿಷ್ಟಾಚಾರದ ಉಲ್ಲಂಘನೆ ಈಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ವಿಚಾರವು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿಯ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದ್ದು, ಉಭಯ ಪಕ್ಷಗಳ ನಡುವಿನ ಪ್ರತಿಷ್ಠೆಯ ಹೋರಾಟವಾಗಿ ಮಾರ್ಪಟ್ಟಿದೆ.
Live Updates
- 27 Jan 2026 6:57 PM IST
ವಿಧಾನಸಭೆ ಕಲಾಪ| ಬುಧವಾರ ಬೆಳಿಗ್ಗೆ 9.30ಕ್ಕೆ ಮುಂದೂಡಿದ ಸ್ಪೀಕರ್ ಯು.ಟಿ ಖಾದರ್
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗುತ್ತಿದ್ದು, ಸಚಿವ ಆರ್.ಬಿ. ತಿಮ್ಮಾಪೂರ ರಾಜೀನಾಮೆ ನೀಡಬೇಕು ಹಾಗೂ ಚರ್ಚೆಗೆ ಅವಕಾಶ ನೀಡಬೇಕು ಎಂದ ವಿಪಕ್ಷಗಳು ಮಂಗಳವಾರ(ಜ.27) ನಡೆದ ಅಧವೇಶನದಲ್ಲಿ ಆಗ್ರಹಿಸಿದ್ದವು. ಚರ್ಚೆಗೆ ಬುಧವಾರ(ಜ.28) ಅವಕಾಶ ನೀಡಿರುವ ಸ್ಪೀಕರ್ ಯು.ಟಿ. ಖಾದರ್, ಕಲಾಪವನ್ನು ಮುಂದೂಡಿದರು.
- 27 Jan 2026 6:28 PM IST
ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಚರ್ಚೆಗೆ ಬುಧವಾರ ಸದನ ಸಜ್ಜು
ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ(ಜ.27) ಸಂಜೆ ಅಬಕಾರಿ ಇಲಾಖೆ ಹಗರಣ ವಿಚಾರ ಚರ್ಚೆಗೆ ಸ್ಪೀಕರ್ ಯು.ಟಿ. ಖಾದರ್ ಸೂಚಿಸಿದರು.
ಈ ವೇಳೆ ಸಂಜೆ ಆದ ಮೇಲೆ ಯಾರಾದರೂ ಅಬಕಾರಿ ಬಗ್ಗೆ ಮಾತನಾಡುತ್ತಾರ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಹಾಸ್ಯ ಚಟಾಕಿ ಹಾರಿಸಿದರು. ವಿಷಯದ ಬಗ್ಗೆ ಬುಧವಾರ(ಜ.28) ಚರ್ಚೆ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಿಎಂ ಸಿದ್ದರಾಮಯ್ಯ, ಅಬಕಾರಿ ಕುರಿತು ನಾಳೆಯೇ ಮುಗಿಸಬೇಕು ಎಂದು ತಿಳಿಸಿದರು.
ನಾಳೆಯೇ ಚರ್ಚೆ ಮುಗಿಸಬೇಕು ಎಂದ ಸಿಎಂಗೆ ಅಶೋಕ್ ಟಾಂಗ್ ನೀಡಿದ್ದು, ನೀವು ಸದನ ಕರೆದು ಪ್ರತಿಭಟನೆ ಮಾಡಲು ಹೋಗಿದ್ದೀರಿ. ನೀವು ಇದ್ದಿದ್ದರೆ ನಾವು ಚರ್ಚೆ ಮಾಡುತ್ತಿದ್ದೆವು. ನೀವು ಇಲ್ಲ ಅಂತ ನಾವು ಸ್ಪೀಕರ್‌ಗೆ ಹೇಳಿದ್ದೇವೆ. ನಾಳೆ ಚರ್ಚೆ ಮಾಡೋಣ ಎಂದು ನಿರ್ಧಾರ ಮಾಡಲಾಗಿದೆ. ಈ ವೇಳೆ ಬೆಳಗ್ಗೆ ಬೇಗ ಸದನ ಕರೆಯಿರಿ ಎಂದು ಸಲಹೆ ನೀಡಿದರು.
- 27 Jan 2026 2:35 PM IST
ಶಾಸಕ ಎ.ಎಸ್. ಪೊನ್ನಣ್ಣ ಭಾಷಣಕ್ಕೆ ವಿಪಕ್ಷಗಳ ಕಿಡಿ
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಚರ್ಚೆ ವೇಳೆ ರಾಜ್ಯಪಾಲರ ನಡೆಯ ಬಗ್ಗೆ ಚರ್ಚೆ ಮಾಡುತ್ತಿದ್ದ ಶಾಸಕ ಪೊನ್ನಣ್ಣನ ಮಾತಿಗೆ ವಿಪಕ್ಷಗಳು ಆಕ್ಷೇಪವ್ಯಕ್ತಪಿಸಿವೆ.
ಶಾಸಕ ಸುರೇಶ್ ಕುಮಾರ್ ಮಾತನಾಡಿ, ಅಜೆಂಡಾ ಇರೋದು ರಾಜ್ಯಪಾಲರು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯದ ಬಗ್ಗೆ ಆದರೆ ಇವರು ರಾಜ್ಯಪಾಲರ ಬಗ್ಗೆ ಮಾತಾಡ್ತಿದ್ದಾರೆ. ಹಾಗಾದರೆ ಇವರು ರಾಜ್ಯಪಾಲರ ಭಾಷಣದ ಬಗ್ಗೆ ಟೀಕೆ ಮಾಡ್ತಿದ್ದಾರಾ.?
ಶಾಸಕ ಅಶ್ವಥ್ ನಾರಾಯಣ್ ಮಧ್ಯಪ್ರವೇಶಿಸಿ, ಸ್ಪೀಕರ್ ಈ ಬಗ್ಗೆ ಸೂಚನೆ ಕೊಡಬೇಕು. ಯಾವ ವಿಚಾರ ಚರ್ಚೆ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುವಂತೆ ಆಗ್ರಹಿಸಿದರು. ಈ ವೇಳೆ ಆಡಳಿತ ಹಾಗೂ ವಿಪಕ್ಷ ಶಾಸಕರ ನಡುವೆ ವಾಗ್ವಾದ ಏರ್ಪಟ್ಟಿತು.

- 27 Jan 2026 2:22 PM IST
ರಾಜ್ಯಪಾಲರ ನಡೆಗೆ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಬೇಸರ
ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಚರ್ಚೆಯ ವೇಳೆ ಸಿಎಂ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ವಿಧಾನಸಭೆ ಆರಂಭದ ಮೊದಲ ದಿನ ರಾಜ್ಯಪಾಲರು ಭಾಷಣ ಓದಬೇಕಿತ್ತು. ಆದರೆ ರಾಜ್ಯಪಾಲರು ಭಾಷಣದ ಮೊದಲು ಕೆಲವು ಸಾಲಗಳು ಹಾಗೂ ಕೊನೆಯಲ್ಲಿ ಕೆಲವು ಸಾಲುಗಳನ್ನು ಓದಿದ್ದಾರೆ. ಇದನ್ನ ನೋಡಿದಾಗ ನಿಯಮ ಉಲ್ಲಂಘನೆಯಾಗಿದೆ. 1969 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಈ ರೀತಿ ನಡೆದಿತ್ತು ಎಂದರು.
ರಾಜ್ಯದಲ್ಲಿ ಹಂಸರಾಜ್ ಭಾರಧ್ವಾಜ್ ಇದ್ದಾಗ ಇಮ್ಮೆ ಈರೀತಿ ಆಗಿತ್ತು. ಕೇವಲ ಒಂದು ಕಡೆ ಮಾತ್ರ ಇದು ಆಗಿಲ್ಲ. ಬದಲಾಗಿ ದಕ್ಚಿಣ ಭಾರತದಲ್ಲಿ ಈ ರೀತಿ ನಡೆದಿದೆ. ತಮಿಳುನಾಡಿನಲ್ಲೂ ರಾಜ್ಯಪಾಲರು ಭಾಷಣ ಮಾಡಲಿಲ್ಲ. ಅಲ್ಲಿ ಮೂರು ವರ್ಷದಿಂದ ಹೀಗೆ ನಡೆದಿದೆ. ಕೇರಳ, ಪಶ್ಚಿಮ ಬಂಗಾಳದಲ್ಲೂ ಇದೇ ಆಗಿದೆ. ರಾಷ್ಟ್ರಪತಿಗಳ ನೇಮಕ ಸಂಸತ್‌ಗೆ ಸೇರಿದೆ. ಪ್ರಧಾನಿ, ಸಚಿವರ ಸಲಹೆಯ ಮೇಲೆ ಮಾಡುತ್ತಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜಿಪಿಯೇತರ ಸರ್ಕಾರವಿದೆ. ರಾಜ್ಯಪಾಲರ ಹುದ್ದೆ ಸಂವಿಧಾನಿಕ ಹುದ್ದೆ. ಇವರ ನಡೆ ಆತಂಕಕಾರಿಯಾಗಿದೆ. ಕೇಂದ್ರದ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ. ಭಾಷಣದಲ್ಲಿ ಕಾರ್ಯಕ್ರಮಗಳ ಉಲ್ಲೇಖವಿತ್ತು. ಅದನ್ನ ರಾಜ್ಯಪಾಲರು ಓದಬೇಕಿತ್ತು. ಆದರೆ ಓದಲಿಲ್ಲ, ಜೈ ಹಿಂದ್ ಎಂದು ಹೊರಟೇಬಿಟ್ಟರು ಎಂದರು.
ಕೊನೆಯ ಸಾಲು ಓದೋಕೆ ಅವರಿಗೆ ತಾಳ್ಮೆ ಇರಲಿಲ್ಲ. ಸರ್ವೋಚ್ಚ ನ್ಯಾಯಾಲಯಗಳ ತೀರ್ಪುಗಳಿವೆ. ಅವರ ಅಧಿಕಾರ ಕಾರ್ಯವ್ಯಾಪ್ತಿಯ ಉಲ್ಲೇಖಗಳಿವೆ. ಇದೆಲ್ಲವನ್ನ ಅವರು ಗಾಳಿಗೆ ತೂರಿದ್ದಾರೆ. ಅದರ ಬಗ್ಗೆ ಕಾನೂನಾತ್ಮಕ ಹೇಳಿಕೆ ನೀಡಬೇಕು. ವಿಧಿ 163 ರಡಿ ಅವರ ಕರ್ತವ್ಯ ನಿರ್ವಹಿಸಬೇಕು. ತಮ್ಮ ವಿವೇಚನೆಯಂತೆ ನಡೆಯಲು ಅವಕಾಶವಿಲ್ಲ ಎಂದ ಅವರು ರಾಜ್ಯಪಾಲರ ನಡೆಗೆ ಬೇಸರ ವ್ಯಕ್ತಪಡಿಸಿದರು.

- 27 Jan 2026 2:08 PM IST
ಸುರೇಶ್ ಕುಮಾರ್ ಮನೆ ಬಳಿ ಪೋಸ್ಟರ್ ಅಂಟಿಸಿದವರ ವಿರುದ್ಧ ಕ್ರಮ: ಡಾ.ಜಿ. ಪರಮೇಶ್ವರ್
ಇತ್ತೀಚೆಗೆ ಸದನದಲ್ಲಿ ತಾವು ಆಡಿದ ಮಾತುಗಳನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಿವಾಸದ ಗೋಡೆಗಳಿಗೆ ಪೋಸ್ಟರ್ ಅಂಟಿಸಿರುವ ಕುರಿತು ಬಿಜೆಪಿ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಮಂಗಳವಾರ ವಿಧಾನಸಭೆಯಲ್ಲಿ ಭಾವುಕರಾದರು. ಈ ವಿಚಾರವಾಗಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದವು.
"ನಾನು ಸದನದಲ್ಲಿ ಮಾತನಾಡಿದ್ದನ್ನು ಈಗಾಗಲೇ ಕಡತದಿಂದ ತೆಗೆದುಹಾಕಲಾಗಿದೆ. ನಾನು ವಿಷಾದವನ್ನೂ ವ್ಯಕ್ತಪಡಿಸಿದ್ದೇನೆ. ಹೀಗಿದ್ದರೂ ನನ್ನ ಮನೆ ಗೋಡೆಗೆ ಪೋಸ್ಟರ್ ಅಂಟಿಸಲಾಗಿದೆ. ಇದರಿಂದ ನನ್ನ ಕುಟುಂಬಕ್ಕೆ ಆತಂಕವಾಗಿದೆ. ಈ ಪೋಸ್ಟರ್ ಅಭಿಯಾನ ಇಲ್ಲಿಗೆ ನಿಲ್ಲಲಿ, ನಮಗೆ ರಕ್ಷಣೆ ಎಲ್ಲಿದೆ?" ಎಂದು ಸುರೇಶ್ ಕುಮಾರ್ ಅತೀವ ಬೇಸರ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸುರೇಶ್ ಕುಮಾರ್ ಬೆಂಬಲಕ್ಕೆ ನಿಂತು, "ಸದನದಲ್ಲಿ ಮಾತನಾಡಿದ್ದು ವಾಪಸ್ ಪಡೆದ ಮೇಲೂ ಮನೆ ಬಳಿ ಹೋಗಿ ಪ್ರತಿಭಟಿಸುವುದು ಸರಿಯಲ್ಲ. ಈಗ ನಿಮ್ಮ ಸರ್ಕಾರ ಇದೆ ಎಂದು ಈ ರೀತಿ ಮಾಡುತ್ತಿದ್ದೀರಾ? ಮುಂದೆ ನಮ್ಮ ಸರ್ಕಾರವೂ ಬರುತ್ತದೆ. ಇಂತಹ ಕೆಟ್ಟ ಸಂಪ್ರದಾಯಕ್ಕೆ ಬ್ರೇಕ್ ಹಾಕಿ" ಎಂದು ಒತ್ತಾಯಿಸಿದರು. ಶಾಸಕರ ಹೇಳಿಕೆ ವಿರುದ್ಧ ಪೊಲೀಸ್ ಠಾಣೆ ಮತ್ತು ವಿಧಾನಸೌಧದಲ್ಲಿ ದೂರು ನೀಡಿರುವುದನ್ನು ಅಶೋಕ್ ಪ್ರಶ್ನಿಸಿದರು.
ಈ ಗದ್ದಲಕ್ಕೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್ ಅವರು ಘಟನೆಯನ್ನು ಖಂಡಿಸಿದರು. "ಯಾರು ಪೋಸ್ಟರ್ ಅಂಟಿಸಿದ್ದಾರೋ ಅವರ ಬಗ್ಗೆ ಖುದ್ದಾಗಿ ನಾನೇ ವಿಚಾರಿಸುತ್ತೇನೆ. ಶಾಸಕರ ಮನೆ ಬಳಿ ಹೋಗಿ ಈ ರೀತಿ ಮಾಡುವುದು ಒಳ್ಳೆಯ ಸಂಪ್ರದಾಯವಲ್ಲ. ದೂರು ನೀಡುವ ಹಕ್ಕು ಎಲ್ಲರಿಗೂ ಇದೆ, ಅದನ್ನು ಪೊಲೀಸರು ನೋಡಿಕೊಳ್ಳುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ನಾನು ಕ್ರಮ ಕೈಗೊಳ್ಳುತ್ತೇನೆ." ಎಂದರು.

- 27 Jan 2026 1:56 PM IST
ಅಕ್ರಮ ಮರಳು ದಂಧೆಕೋರರ ವಿರುದ್ಧ ಕ್ರಮಕ್ಕೆ ಶಾಸಕಿ ಕರೆಮ್ಮ ನಾಯಕ್ ಆಗ್ರಹ
ಅಕ್ರಮ ಮರಳು ದಂಧೆ, ಮಟ್ಕಾ, ಜೂಜು ಚಟುವಟಿಕೆಗಳು ರಾಯಚೂರು ಜಿಲ್ಲೆಯಾದ್ಯಂತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳ್ಳತನ ಪ್ರಕರಣಗಳು ಕೂಡ ಜಾಸ್ತಿ ಆಗಿವೆ. ಶಾಸಕಿಯಾದ ನನ್ನ ಮೇಲೆ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಮುಂದಾದರೆ ಧಮ್ಕಿಹಾಕುತ್ತಾರೆ ಎಂದು ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಪ್ರಶನೋತ್ತರ ವೇಳೆಯಲ್ಲಿ ತನ್ನ ಆಸಹಾಯಕತೆ ವ್ಯಕ್ತಪಡಿಸಿದರು.
ಈ ವೇಳೆ ಶಾಸಕಿ ಕರೆಮ್ಮ ನಾಯಕ್ ಅವರಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಬೆಂಬಲ ವ್ಯಕ್ತಪಡಿಸಿ, ಜನಪ್ರತಿನಿದಿಗಳಿಗೆ ಈ ರೀತಿಯಾದರೆ ಸಾಮಾನ್ಯ ಜನರ ಪರಿಸ್ಥಿತಿ ಏನೂ ಎಂದು ಪ್ರಶ್ನಿಸಿದರು.
ಪ್ರಶ್ನೆಗೆ ಉತ್ತರಸಿದ ಗೃಹ ಸಚಿವ ಡಾ,ಜಿ, ಪರಮೇಶ್ವರ್, ನಿಮ್ಮ ರಕ್ಷಣೆಗೆ ನಾವಿದ್ದೇವೆ. ನಿಮಗೆ ಯಾವ ರೀತಿಯೂ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಮರಳು ದಂಧೆ ಕೇವಲ ದೇವದುರ್ಗದ ಸಮಸ್ಯೆಯಲ್ಲ. ಎಲ್ಲಾ ಕಡೆ ಇದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಎಲ್ಲೆಲ್ಲಿ ಮರಳು ದಂಧೆ ಅಗ್ತಿದೆ ಎಂಬ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ಕೊಡಬೇಕು. ಆಗ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ.
ಮಟ್ಕಾದಲ್ಲಿ 340, ಇಸ್ಪೀಟ್ ನಲ್ಲೂ 140 ಪ್ರಕರಣ ದಾಖಲಾಗಿವೆ. ಟಾಸ್ಕ್ ಫೋರ್ಸ್ ಹಾಕಿದ್ದೇವೆ. ಬ್ಯಾಂಕ್ ಅಕೌಂಟ್‌ಗಳ ಮೇಲೆ ಕಣ್ಣು ಇಟ್ಟಿದ್ದೇವೆ. ಮರಳು ದಂದೆಗೆ ಕಡಿವಾಣ ಹಾಕಲು ತಂಡ ರಚನೆಯಾಗಿದೆ. ರಾಯಚೂರು ಜಿಲ್ಲೆಯಲ್ಲಿ ಇಂತಹ ಪ್ರಕರಣದಲ್ಲಿ ಭಾಗಿ ಆಗಿರುವವರನ್ನ ಗಡಿಪಾರು ಮಾಡಲು ಕ್ರಮ ತೆಗೆದುಕೊಂಡಿದ್ದೇವೆ ಎಂದರು.
- 27 Jan 2026 1:34 PM IST
ಅಕ್ರಮ ಮದ್ಯ ಮಾರಾಟದ ವಿರುದ್ಧ ಕಠಿಣ ಕ್ರಮ: ಆರ್.ಬಿ. ತಿಮ್ಮಾಪೂರ
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಐಹೊಳೆ ದುರ್ಯೋಧನ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರಿಗೆ ರಾಯಭಾಗ ಕ್ಷೇತ್ರದ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ತಯಾರಿಕೆ ಮತ್ತು ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, 357 ದಾಳಿ ಮಾಡಿ ಅಕ್ರಮ ಮದ್ಯ ವಶ ಪಡಿಸಿಕೊಳ್ಳಲಾಗಿದೆ. 295 ಪ್ರಕರಣಗಳನ್ನು ದಾಖಲಿಸಲಾಗಿದ್ದು, 322 ಆರೋಪಿಗಳ ಬಂಧನವಾಗಿದೆ. 370 ಲೀಟರ್ ಮದ್ಯ, 7 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಅಕ್ರಮ ಮದ್ಯ ಮಾರಾಟ ಅಂಗಡಿಗಳಿಂದಲೇ ಮದ್ಯ ಖರೀದಿಸಿ ಹೊರಗಡೆ ನಡೆಯುತ್ತಿದೆ. ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಒಳಗೊಂಡು ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
- 27 Jan 2026 1:26 PM IST
ಹೊಸ ಯೋಜನೆಗಳಿಲ್ಲದ ನಿಷ್ಕ್ರಿಯ ಸರ್ಕಾರ: ಸುನೀಲ್ ಕುಮಾರ್ ಟೀಕೆ
ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಮಂಗಳವಾರ(ಜ.27) ಸಚಿವರ ಗೈರುಹಾಜರಿ ದೊಡ್ಡ ಮಟ್ಟದ ಗದ್ದಲಕ್ಕೆ ಕಾರಣವಾಯಿತು. ಪ್ರಶ್ನೋತ್ತರ ಅವಧಿಯಲ್ಲಿ ಸಚಿವರು ಸದನಕ್ಕೆ ಬಾರದಿರುವುದಕ್ಕೆ ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್, ರಾಜ್ಯ ಸರ್ಕಾರವನ್ನು "ಇಲ್ಲಗಳ ಸರ್ಕಾರ" ಎಂದು ಟೀಕಿಸಿದರು. ಈ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ. ಇಲ್ಲಿ ಅಭಿವೃದ್ಧಿಯೂ ಇಲ್ಲ, ಜನರ ಕೆಲಸಕ್ಕೆ ಹಣವೂ ಇಲ್ಲ, ಹೊಸ ಯೋಜನೆಗಳೂ ಇಲ್ಲ. ಕೊನೆಗೆ ಸದನದಲ್ಲಿ ಉತ್ತರಿಸಲು ಸಚಿವರೂ ಇಲ್ಲ! ಇದೊಂದು ಸಂಪೂರ್ಣ ನಿಷ್ಕ್ರಿಯ ಸರ್ಕಾರ ಎಂದು ಟೀಕಿಸಿದರು.
- 27 Jan 2026 1:25 PM IST
ಆಡಳಿತ ಪಕ್ಷದ ಮೊದಲ ಸಾಲು ಖಾಲಿ ಖಾಲಿ: ಪ್ರತಿಪಕ್ಷಗಳು ಗೇಲಿ
ಮಂಗಳವಾರ(ಜ.27) ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆಯೇ ಆಡಳಿತ ಪಕ್ಷದ ಕಡೆ ಮೊದಲ ಸಾಲು ಖಾಲಿ ಇರುವುದನ್ನು ಗಮನಿಸಿದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸ್ಪೀಕರ್ ಅವರು ಪ್ರಶ್ನೆಗಳಿಗೆ ಉತ್ತರಿಸಲು ಒಬ್ಬೊಬ್ಬರೇ ಸಚಿವರ ಹೆಸರು ಕೂಗುತ್ತಿದ್ದಂತೆ, ಇಡೀ ಪ್ರತಿಪಕ್ಷದ ಸದಸ್ಯರು ಒಕ್ಕೊರಲಿನಿಂದ "ಸಚಿವರು ಇಲ್ಲ... ಇಲ್ಲ..." ಎಂದು ಕೂಗುವ ಮೂಲಕ ಸರ್ಕಾರಕ್ಕೆ ಮುಜುಗರ ಉಂಟುಮಾಡಿದರು.

- 27 Jan 2026 1:23 PM IST
ಅಬಕಾರಿ ಸಚಿವರ ರಾಜೀನಾಮೆಗೆ ವಿಪಕ್ಷಗಳು ಪಟ್ಟು
ರಾಜ್ಯ ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭಾರಿ ಭ್ರಷ್ಟಾಚಾರದ ಹಗರಣ ಮಂಗಳವಾರ ರಾಜ್ಯ ಅಸೆಂಬ್ಲಿ ಅಧಿವೇಶನದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತು. ಸಚಿವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದ್ದರಿಂದ ಕಲಾಪ ಕೆಲಕಾಲ ಸ್ತಬ್ಧಗೊಂಡಿತು.
ಸದನ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅಬಕಾರಿ ಇಲಾಖೆಯ ಹಗರಣದ ಬಗ್ಗೆ ಚರ್ಚೆಗೆ ಪಟ್ಟು ಹಿಡಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಇದು ಅಧಿವೇಶನದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು.
ಅಬಕಾರಿ ಇಲಾಖೆಯಲ್ಲಿನ ಕಿರುಕುಳ ಮತ್ತು ಭ್ರಷ್ಟಾಚಾರದ ಬಗ್ಗೆ ದೂರು ನೀಡಲು ಮದ್ಯ ಮಾರಾಟಗಾರರ ಸಂಘವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ ಎಂಬ ಅಂಶವನ್ನು ಸದನದಲ್ಲಿ ಪ್ರಸ್ತಾಪಿಸಲಾಯಿತು.
ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು "ಅಬಕಾರಿ ಇಲಾಖೆಯಲ್ಲಿ ಲೂಟಿ ನಡೆಯುತ್ತಿದೆ, ಸಚಿವ ಆರ್. ಬಿ. ತಿಮ್ಮಾಪುರ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ಒತ್ತಾಯಿಸಿ ನಿಯಮ 69ರ ಅಡಿ ಚರ್ಚೆಗೆ ಅವಕಾಶ ಕೋರಿದರು.
ಗದ್ದಲ ನಿಯಂತ್ರಿಸಲು ಪ್ರಯತ್ನಿಸಿದ ಸ್ಪೀಕರ್ ಯು.ಟಿ. ಖಾದರ್ ಅವರು, "ಪ್ರಶ್ನೋತ್ತರ ಅವಧಿಯ ನಂತರ ಮಧ್ಯಾಹ್ನದ ವೇಳೆ ಈ ವಿಷಯದ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲು ಅವಕಾಶ ನೀಡಲಾಗುವುದು" ಎಂದು ಭರವಸೆ ನೀಡಿದರು. ಸ್ಪೀಕರ್ ಅವರ ಸಕಾರಾತ್ಮಕ ಸ್ಪಂದನೆಯ ನಂತರ ಪ್ರತಿಪಕ್ಷಗಳು ತಮ್ಮ ಧರಣಿಯನ್ನು ಕೈಬಿಟ್ಟು ಕಲಾಪ ಮುಂದುವರಿಯಲು ಸಹಕರಿಸಿದವು.

