ಸರ್ಕಾರಕ್ಕೆ ‘ಅಬಕಾರಿ’ ಶಾಕ್! ಸದನದ ಒಳಗೆ ಮತ್ತು ಹೊರಗೆ ಉಗ್ರ ಬಿಜೆಪಿ ಪ್ರತಿಭಟನೆ
x

ಸರ್ಕಾರಕ್ಕೆ ‘ಅಬಕಾರಿ’ ಶಾಕ್! ಸದನದ ಒಳಗೆ ಮತ್ತು ಹೊರಗೆ ಉಗ್ರ ಬಿಜೆಪಿ ಪ್ರತಿಭಟನೆ

ಅಬಕಾರಿ ಇಲಾಖೆಯ ಅವ್ಯವಹಾರ ಖಂಡಿಸಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಚಿವ ಆರ್.ಬಿ. ತಿಮ್ಮಾಪೂರ ರಾಜೀನಾಮೆಗೆ ಪಟ್ಟು ಹಿಡಿದರು.


Click the Play button to hear this message in audio format

ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪ ಈಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ವಿಧಾನಮಂಡಲ ಅಧಿವೇಶನದಲ್ಲಿ ಈ ಬಗ್ಗೆ ಸಮಗ್ರ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದ್ದು, ಸದನದಲ್ಲಿ ಭಾರೀ ಗದ್ದಲ ಸೃಷ್ಟಿಯಾಗಿತ್ತು. ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಹೊರಿಸುತ್ತಿರುವ ಪ್ರತಿಪಕ್ಷಗಳು, ಅಧಿವೇಶನದ ಒಳಗೆ ಮಾತ್ರವಲ್ಲದೆ ಹೊರಗೂ ಹೋರಾಟ ನಡೆಸುವ ಮೂಲಕ ಆಡಳಿತಾರೂಢ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿವೆ.

ಸಚಿವ ಆರ್.ಬಿ. ತಿಮ್ಮಾಪೂರ ರಾಜೀನಾಮೆಗೆ ಆಗ್ರಹ

ಮಂಗಳವಾರ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಅಬಕಾರಿ ಇಲಾಖೆಯ ಅವ್ಯವಹಾರವನ್ನು ಖಂಡಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರ ರಾಜೀನಾಮೆಗೆ ಪಟ್ಟು ಹಿಡಿಯಲಾಯಿತು. ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆದ ಸರ್ಕಾರ, ಅಬಕಾರಿ ಇಲಾಖೆಯ ವಿಚಾರದಲ್ಲಿ ಯಾಕೆ ಮೌನವಾಗಿದೆ ಎಂದು ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ ಪಕ್ಷದ ಕಡೆ ಸಚಿವರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಕಾರಣ ಆರ್‌.ಅಶೋಕ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗಲಿಲ್ಲ. ಪ್ರತಿಪಕ್ಷದ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಸಚಿವ ತಿಮ್ಮಾಪೂರ ರಾಜೀನಾಮೆಗೆ ಆಗ್ರಹಿಸಲಾಯಿತು.

ಈ ವೇಳೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಮಧ್ಯಾಹ್ನದ ನಂತರ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಸಭಾಧ್ಯಕ್ಷರ ಅಶ್ವಾಸನೆ ಮೇರೆಗೆ ಪ್ರತಿಪಕ್ಷದ ನಾಯಕರು ಧರಣಿಯನ್ನು ವಾಪಸ್‌ ಪಡೆದುಕೊಂಡರು.

ವಿಧಾನ ಪರಿಷತ್ತಿನಲ್ಲಿಯೂ ಪ್ರತಿಧ್ವನಿ

ಮೇಲ್ಮನೆಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಈ ಹಗರಣದ ಮೊತ್ತ ಸುಮಾರು 4 ಸಾವಿರ ಕೋಟಿ ರೂ. ಎಂದು ಆರೋಪಿಸಿದ್ದಾರೆ. ಇಷ್ಟು ದೊಡ್ಡ ಮಟ್ಟದ ಹಣ ವರ್ಗಾವಣೆಯಾಗಿದೆ ಎನ್ನಲಾದ ಆರೋಪವು ಕೇವಲ ಇಲಾಖೆಯ ಭ್ರಷ್ಟಾಚಾರವನ್ನಷ್ಟೇ ಅಲ್ಲದೆ, ಸರ್ಕಾರದ ಮಟ್ಟದ ವ್ಯವಸ್ಥಿತ ಲೂಟಿಯಾಗಿದೆ ಎಂದು ಕಿಡಿಕಾರಿದರು.

ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಹಿರಿಯ ಸದಸ್ಯ ಬಿ.ಕೆ. ಹರಿಪ್ರಸಾದ್, ಚರ್ಚೆಗೆ ಸಿದ್ಧವಿರುವುದಾಗಿ ಹೇಳುವ ಮೂಲಕ ಪ್ರತಿಪಕ್ಷಗಳ ಗದ್ದಲ ಮುಂದುವರಿಕೆಗೆ ಕಡಿವಾಣ ಹಾಕಿದರು. ಪ್ರತಿಪಕ್ಷಗಳ ಆರೋಪಗಳಿಗೆ ತಕ್ಕ ಉತ್ತರ ನೀಡಲು ಸರ್ಕಾರ ಸಿದ್ದವಾಗಿದೆ ಎಂದು ತಿರುಗೇಟು ನೀಡಿದರು. ಸಭಾಪತಿ ಬಸವರಾಜ ಹೊರಟ್ಟಿ ನಿಯಮ 330ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ ಬಳಿಕ ಚರ್ಚೆ ಮುಕ್ತಾಯಗೊಂಡಿತು.



Read More
Next Story