
ರಾಜ್ಯಪಾಲರಿಗೆ ಅಪಮಾನ Vs ರಾಷ್ಟ್ರಗೀತೆಗೆ ಅಗೌರವ: ಶುಕ್ರವಾರ ಸಭಾಧ್ಯಕ್ಷರ ತೀರ್ಪು
ಜಂಟಿ ಅಧಿವೇಶನದ ಮೊದಲ ದಿನವೇ ಕಾಂಗ್ರೆಸ್ - ಬಿಜೆಪಿ ನಡುವೆ ಜಟಾಪಟಿ ನಡೆದಿದ್ದು, ರಾಜ್ಯಪಾಲರಿಗೆ ಮಾಡಿದ ಅಪಮಾನ ಮತ್ತು ರಾಷ್ಟ್ರಗೀತೆಗೆ ತೋರಿದ ಅಗೌರವ ಆರೋಪವು ಸದನದಲ್ಲಿ ಕೋಲಾಹಲ ಸೃಷ್ಟಿಸಿತು.
ರಾಜ್ಯ ಜಂಟಿ ಅಧಿವೇಶನದ ಮೊದಲ ದಿನವೇ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಯ ನಡುವೆ ಜಟಾಪಟಿ ನಡೆದಿದ್ದು, ರಾಜ್ಯಪಾಲರಿಗೆ ಮಾಡಿದ ಅಪಮಾನ ಮತ್ತು ರಾಷ್ಟ್ರಗೀತೆಗೆ ತೋರಿದ ಅಗೌರವ ಎಂದು ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಯ ಪರಸ್ಪರ ಆರೋಪಗಳು ಸದನದಲ್ಲಿ ಕೋಲಾಹಲ ಸೃಷ್ಟಿಸಿತು. ಈ ವೇಳೆ ರಾಜ್ಯಪಾಲರ ನಿರ್ಗಮನ ಮತ್ತು ರಾಷ್ಟ್ರಗೀತೆಯ ಕುರಿತ ವಿವಾದಾತ್ಮಕ ಚರ್ಚೆಗೆ ಸಂಬಂಧಿಸಿದಂತೆ ಶುಕ್ರವಾರ ರೂಲಿಂಗ್ (ತೀರ್ಪು) ನೀಡುವುದಾಗಿ ಸಭಾಧ್ಯಕ್ಷರು ಘೋಷಿಸುವ ಮೂಲಕ ಕಲಾಪದ ಗೊಂದಲಕ್ಕೆ ತೆರೆ ಎಳೆದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿ ನಿರ್ಗಮಿಸುವ ವೇಳೆ ಈ ವಿವಾದ ಸೃಷ್ಟಿಯಾಯಿತು. ರಾಜ್ಯಪಾಲರು ಸದನದಿಂದ ಹೊರನಡೆಯುವಾಗ ಕಾಂಗ್ರೆಸ್ ಸದಸ್ಯರು ಅವರನ್ನು ಅಡ್ಡಿ ಹಾಕಿ ಧಿಕ್ಕಾರ ಕೂಗಿದರು. ಇದು ಅವರಿಗೆ ಮಾಡಿದ ಅಪಮಾನ ಎಂದು ಬಿಜೆಪಿ ವಾದಿಸಿದರೆ, ರಾಷ್ಟ್ರಗೀತೆ ಮುಗಿಯುವ ಮುನ್ನವೇ ರಾಜ್ಯಪಾಲರು ನಿರ್ಗಮಿಸುವ ಮೂಲಕ ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ ಎಂದು ಕಾಂಗ್ರೆಸ್ ತಿರುಗೇಟು ನೀಡಿತು.
ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸಂವಿಧಾನದ ಪೀಠಿಕೆ ಬೋಧಿಸಿ, ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನಿರ್ಣಯ ಕೈಗೆತ್ತಿಕೊಳ್ಳಲು ಮುಂದಾದಾಗ ವಿರೋಧಪಕ್ಷದ ನಾಯಕ ಆರ್.ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯಪಾಲರು ನಿರ್ಗಮಿಸುವ ವೇಳೆ ಅವರಿಗೆ ಅಗೌರವ ತೋರಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ನಾವು ಈಗಾಗಲೇ ಪತ್ರ ನೀಡಿದ್ದೇವೆ. ಈ ಬಗ್ಗೆ ಚರ್ಚೆಯಾಗಲಿ ಎಂದು ಆಗ್ರಹಿಸಿದರು.
ಇದೇ ವೇಳೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಜ್ಯಪಾಲರು ತಮ್ಮ ಭಾಷಣವನ್ನು ಪೂರ್ಣವಾಗಿ ಓದದೆ ಹೋಗಿದ್ದಲ್ಲದೆ, ರಾಷ್ಟ್ರಗೀತೆ ಮುಗಿಯುವವರೆಗೂ ಕಾಯದೆ ನಿರ್ಗಮಿಸಿದ್ದಾರೆ. ಇದು ರಾಷ್ಟ್ರಗೀತೆಗೆ ಮಾಡಿದ ಅಪಮಾನ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಭಾಧ್ಯಕ್ಷರನ್ನು ಕೋರಿದರು. ಇದು ಉಭಯ ಪಕ್ಷಗಳ ನಡುವೆ ಕಿಚ್ಚು ಹಚ್ಚಿತು. ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ನಿಯಮಾವಳಿಗಳ ಪ್ರಶ್ನೆ ಎತ್ತಿ, ನಮ್ಮ ಪತ್ರಕ್ಕೆ ಅವಕಾಶ ನೀಡದೆ ಕೇವಲ ಆಡಳಿತ ಪಕ್ಷದವರಿಗೆ ಮಾತ್ರ ಅವಕಾಶ ನೀಡುತ್ತಿರುವುದು ಪಕ್ಷಪಾತ ಎಂದು ಸಭಾಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ರಾಷ್ಟ್ರಭಕ್ತಿಯ ವಿಚಾರವೂ ಮುನ್ನೆಲೆಗೆ
ಚರ್ಚೆ ಕಾವೇರುತ್ತಿದ್ದಂತೆ ರಾಷ್ಟ್ರಭಕ್ತಿಯ ವಿಚಾರವೂ ಸದನಕ್ಕೆ ಪ್ರವೇಶಿಸಿ ಕಾಂಗ್ರೆಸ್ ಪಕ್ಷವು ರಾಷ್ಟ್ರಧ್ವಜ ಹಾರಿಸಲು ಅವಕಾಶ ನೀಡದ ಇತಿಹಾಸ ಹೊಂದಿದೆ ಎಂದು ಸುನೀಲ್ ಕುಮಾರ್ ಕುಟುಕಿದಾಗ, ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ಕಚೇರಿಯಲ್ಲಿ ದಶಕಗಳ ಕಾಲ ಏಕೆ ರಾಷ್ಟ್ರಧ್ವಜ ಹಾರಿಸಲಿಲ್ಲ? ಎಂದು ಪ್ರಶ್ನಿಸಿದರು. ಅಲ್ಲದೆ, ಪಾಕಿಸ್ತಾನ ಜಿಂದಾಬಾದ್ ಘೋಷಣೆಯ ವಿಚಾರವೂ ಸದನದಲ್ಲಿ ಪ್ರತಿಧ್ವನಿಸಿ ಗದ್ದಲ ಮತ್ತಷ್ಟು ಹೆಚ್ಚಾಯಿತು.
ಆರ್.ಅಶೋಕ್, ನ್ಯಾಯಾಲಯದ ವಿವಿಧ ಆದೇಶಗಳನ್ನು ಉಲ್ಲೇಖಿಸಿ, ರಾಜ್ಯಪಾಲರು ಭಾಷಣವನ್ನು ಪೂರ್ಣವಾಗಿ ಓದಬೇಕೆಂದೇನೂ ಇಲ್ಲ. ಆದರೆ ಅವರು ನಿರ್ಗಮಿಸುವಾಗ ಅಡೆತಡೆ ಉಂಟುಮಾಡುವುದು ತಪ್ಪು. ಕಾಂಗ್ರೆಸ್ಸಿಗರ ವರ್ತನೆ ರಾಜ್ಯಪಾಲರಿಗೆ ಮಾಡಿದ ಅಪಮಾನ ಎಂದು ದೂರಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ರಾಷ್ಟ್ರಗೀತೆಯ ಗೌರವದ ಪ್ರಶ್ನೆಯನ್ನೇ ಮುಂದಿಟ್ಟು ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದರು.
ಸದನದಲ್ಲಿ ಉಂಟಾದ ಕೋಲಾಹಲವನ್ನು ಹತೋಟಿಗೆ ತರಲು ಸಭಾಧ್ಯಕ್ಷ ಯು.ಟಿ.ಖಾದರ್ ಪ್ರಯತ್ನಿಸಿದರು. ಗದ್ದಲದ ನಡುವೆಯೇ ಸಂತಾಪ ಸೂಚಕ ನಿರ್ಣಯವನ್ನು ಮಂಡಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ರಾಜ್ಯಪಾಲರ ನಿರ್ಗಮನ ಮತ್ತು ರಾಷ್ಟ್ರಗೀತೆಯ ಕುರಿತಾದ ಈ ವಿವಾದಾತ್ಮಕ ಚರ್ಚೆಗೆ ಸಂಬಂಧಿಸಿದಂತೆ ಶುಕ್ರವಾರ ರೂಲಿಂಗ್ (ತೀರ್ಪು) ನೀಡುವುದಾಗಿ ಸಭಾಧ್ಯಕ್ಷರು ಹೇಳುವ ಮೂಲಕ ಕಲಾಪದ ಗೊಂದಲಕ್ಕೆ ತೆರೆ ಎಳೆದರು.

