
ಸಿಎಂ ಸಿದ್ದರಾಮಯ್ಯ
ಭಾಷಣ ಮಾಡದೆ ಹೊರನಡೆದ ಗೆಹ್ಲೋಟ್ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲ!
ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದು ಸಂವಿಧಾನದ ರೀತಿ ರಾಜ್ಯಪಾಲ ಕರ್ತವ್ಯ, ಅವರೇ ತಯಾರಿಸಿರುವ ಭಾಷಣ ಓದುವಂತಿಲ್ಲ. ರಾಜ್ಯಪಾಲರ ನಡೆಯನ್ನು ಪಕ್ಷ ಮತ್ತು ಸರ್ಕಾರದಿಂದ ಪ್ರತಿಭಟಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಜಂಟೀ ಅಧಿವೇಶವನ್ನುದ್ದೇಶಿಸಿ ಸರ್ಕಾರದ ಭಾಷಣವನ್ನು ಮಾಡದೇ ಹೊರ ನಡೆದಿರುವ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ವಿರುದ್ಧ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ. ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಿದ್ಧರಾಮಯ್ಯ, ರಾಜ್ಯಪಾಲರಿಂದ ಸಂವಿಧಾನದ ಉಲ್ಲಂಘನೆಯಾಗಿದ್ದು, ಜನಪ್ರತಿನಿಧಿಗಳಿಗೆ ಅಪಮಾನ ಮಾಡಿದ್ದಾರೆ. ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದು, ಕೇಂದ್ರದ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ಬೇರೆ ಭಾಷಣ ಓದಿದ್ದಾರೆ. ರಾಜ್ಯಪಾಲರು ತಮ್ಮ ಜವಾಬ್ದಾರಿ ನಿರ್ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ(ಜ.22) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವುದು ಸಂವಿಧಾನದ ರೀತಿ ರಾಜ್ಯಪಾಲ ಕರ್ತವ್ಯ, ಅವರೇ ತಯಾರಿಸಿರುವ ಭಾಷಣ ಓದುವಂತಿಲ್ಲ. ಸಚಿವ ಸಂಪುಟ ಭಾಷಣ ತಯಾರು ಮಾಡಿದನ್ನೇ ಓದಲೇಬೇಕು. ರಾಜ್ಯಪಾಲರ ನಡೆಯನ್ನು ಪಕ್ಷ ಮತ್ತು ಸರ್ಕಾರದಿಂದ ಪ್ರತಿಭಟಿಸುತ್ತೇವೆ ಎಂದರು.
ಗ್ರಾಮ ಪಂಚಾಯಿತಿ ಅಧಿಕಾರಕ್ಕೆ ಕತ್ತರಿ
ನರೇಗಾ ಯೋಜನೆ ರದ್ದು ಮಾಡಿ ವಿಬಿ ಜಿ ರಾಮ್ ಜೀ ಕಾಯ್ದೆಯನ್ನು ಹೊಸದಾಗಿ ಮಾಡಿದ್ದಾರೆ. ಈ ಯೋಜನೆಗೆ ನಮ್ಮ ಸರ್ಕಾರದ ತೀವ್ರ ವಿರೋಧವಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೆಲಸದ ಹಕ್ಕು, ಆಹಾರದ ಹಕ್ಕು ಹಾಗೂ ಶಿಕ್ಷಣದ ಹಕ್ಕು ಜಾರಿಗೆ ತಂದದ್ದರು. ಉದ್ದೇಶ ಹಳ್ಳಿಗಳಲ್ಲಿ ಕಾರ್ಮಿಕರಿಗೆ 100 ದಿನ ಉದ್ಯೋಗ ನೀಡಲಾಗುತ್ತಿತ್ತು. ರೈತರು, ದಲಿತರು, ಮಹಿಳೆಯರು ತಮ್ಮ ಊರು, ಜಮೀನಿನಲ್ಲಿ ಕೆಲಸ ಮಾಡಬಹುದಿತ್ತು. ಆದರೆ ಕೇಂದ್ರ ಸರ್ಕಾರ ಇದನ್ನ ರದ್ದು ಮಾಡಿದೆ. ಈಗಿನ ಕಾಯ್ದೆಯಲ್ಲಿ ಎಲ್ಲಿ ಕೆಲಸ ಮಾಡುವುದು ಎಂದು ಕೇಂದ್ರ ಸರ್ಕಾರವೇ ತೀರ್ಮಾನ ಮಾಡುವ ಮೂಲಕ ಗ್ರಾಮ ಪಂಚಾಯಿತಿಗಳ ಅಧಿಕಾರ ಕಸಿದಿದೆ ಎಂದು ತಿಳಿಸಿದರು.
ನರೇಗಾ ಮರು ಸ್ಥಾಪನೆಯಾಗಲಿ
ಈ ಮೊದಲು ಯಾವಾಗ ಬೇಕಾದರೂ ಕೆಲಸ ಮಾಡಬಹುದಿತ್ತು. ಗ್ರಾಮ ಪಂಚಾಯಿತಿಗಳು ಆಕ್ಷನ್ ಪ್ಲಾನ್ ಮಾಡುತ್ತಿದ್ದವು. ಈಗೀನ ಕಾಯ್ದೆಯಲ್ಲಿ ಈ ನಿಯಮವಿಲ್ಲ. ನಮ್ಮ ಉದ್ದೇಶ ಮನರೇಗಾ ಮರು ಸ್ಥಾಪನೆ ಮಾಡಬೇಕು. ಈಗ ರಾಮ್‌ಜಿ ಕಾಯ್ದೆ ರದ್ದು ಮಾಡಬೇಕು. ಆದರೆ ರಾಜ್ಯಪಾಲರು ಸರ್ಕಾರ ತಯಾರು ಮಾಡಿದ ಭಾಷಣ ಮಾಡದೆ ಅವರೇ ತಯಾರು ಮಾಡಿದ್ದ ಭಾಷಣ ಓದಿ ಸಂವಿಧಾನ ಉಲ್ಲಂಘನೆ ಮಾಡಿದ್ದು, ಸಂವಿಧಾನ ವಿರೋಧವಾಗಿ ನಡೆದುಕೊಂಡಿದ್ದಾರೆ ಹಾಗೂ ಜನ ಪ್ರತಿನಿಧಿಗಳಿಗೆ ಅವಮಾನ ಮಾಡಿದ್ದಾರೆ ಎಂದರು.
ವಿಬಿ ಜಿ ರಾಮ್ ಜಿ ಯೋಜನೆ ವಿರುದ್ಧ ಹೋರಾಟ
ಕೇಂದ್ರ ಸರ್ಕಾರದ ನೂತನ ಯೋಜನೆ ಹಾಗೂ ರಾಜ್ಯಪಾಲರ ನಡೆ ವಿರುದ್ಧ ನಮ್ಮ ಸರ್ಕಾರ, ಪಕ್ಷ ಹಾಗೂ ಶಾಸಕರು ಹೋರಾಟ ಮಾಡಲಿದ್ದಾರೆ. ನಾವು ತಯಾರು ಮಾಡಿರುವ ಭಾಷಣ ಎಲ್ಲಾ ಎಂಎಲ್ಎ ಹಾಗೂ ಎಂಎಲ್‌ಸಿಗಳಿಗೆ ನೀಡಿದ್ದೇವೆ. ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಬೇಕೇ ಅಥವಾ ಬೇಡವೇ ಎಂದು ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.

