
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದರು.
ವಿಧಾನಮಂಡಲದಲ್ಲಿ ರಾಜ್ಯಪಾಲರ ಭಾಷಣದ ವೇಳೆ ಗದ್ದಲ: ಕಾಂಗ್ರೆಸ್ ಶಾಸಕರ ವಿರುದ್ಧ ಬಿಜೆಪಿ ಆಕ್ರೋಶ
ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರಿಗೆ ಪತ್ರ ಬರೆದು, ಕಾಂಗ್ರೆಸ್ ಶಾಸಕರು "ಗೂಂಡಾಗಿರಿ" ತೋರಿಸಿದ್ದಾರೆಂದು ಆರೋಪಿಸಿದ್ದಾರೆ.
ಕರ್ನಾಟಕ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಗುರುವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಭಾಷಣದ ವೇಳೆ ಆಡಳಿತ ಪಕ್ಷದ ಶಾಸಕರು ಪ್ರತಿಭಟನೆ ನಡೆಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯನ್ನು "ವಿಧಾನಮಂಡಲ ಇತಿಹಾಸದಲ್ಲಿ ಕರಾಳ ದಿನ" ಎಂದು ವಿವರಿಸಿರುವ ಬಿಜೆಪಿ, ಕಾಂಗ್ರೆಸ್ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದೆ.
ರಾಜ್ಯಪಾಲರು ತಮ್ಮ ಸಾಂವಿಧಾನಿಕ ಕರ್ತವ್ಯದ ಅನುಸಾರ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಆಗಮಿಸಿ ಭಾಷಣ ಮಂಡಿಸಲು ಮುಂದಾದರು. ಆದರೆ ಕಾಂಗ್ರೆಸ್ ಶಾಸಕರು ರಾಜ್ಯಪಾಲರ ಭಾಷಣದ ವೇಳೆ ಗದ್ದಲ ಸೃಷ್ಟಿಸಿ ಪ್ರತಿಭಟನೆ ನಡೆಸಿದರು ಎಂದು ಬಿಜೆಪಿಯ ಆರೋಪಿಸಿದೆ.
ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರಿಗೆ ಪತ್ರ ಬರೆದು, ಕಾಂಗ್ರೆಸ್ ಶಾಸಕರು "ಗೂಂಡಾಗಿರಿ" ತೋರಿಸಿದ್ದಾರೆಂದು ಆರೋಪಿಸಿದ್ದಾರೆ. ರಾಜ್ಯಪಾಲರನ್ನು ತಳ್ಳಲು ಯತ್ನಿಸಿ, ಘೇರಾವ್ ಹಾಕಿದ ಸದಸ್ಯರ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಯ. ವಿಜಯೇಂದ್ರ ಅವರು ಈ ಘಟನೆಯನ್ನು "ಪ್ರಜಾಪ್ರಭುತ್ವದ ಮೇಲೆ ಕಪ್ಪು ಚುಕ್ಕೆ" ಎಂದು ಖಂಡಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ "ದುರ್ನಡತೆ" ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಹಿಂದಿನ ಘಟನೆಗಳ ಹೋಲಿಕೆ
ಬಿಜೆಪಿಯ ವಾದದಂತೆ, ಮಾಜಿ ರಾಜ್ಯಪಾಲರಾದ ಖುರ್ಶಿದ್ ಆಲಂ ಖಾನ್ ಮತ್ತು ಹಂಸರಾಜ್ ಭಾರದ್ವಾಜ್ ಅವರೂ ಈ ಹಿಂದೆ ತಮ್ಮ ಭಾಷಣವನ್ನು ಸಾಂಕೇತಿಕವಾಗಿ ಮಂಡಿಸಿದ್ದರು. ಆದರೆ ಆಗ ಅವರ ಭಾಷಣದ ನಂತರ ಸಂಪ್ರದಾಯದಂತೆ ರಾಷ್ಟ್ರಗೀತೆ ಹಾಡಿ ಗೌರವಯುತವಾಗಿ ಬೀಳ್ಕೊಟ್ಟಿದ್ದರು ಮತ್ತು ಯಾರೂ ರಾಜ್ಯಪಾಲರಿಗೆ ಅಗೌರವ ತೋರಿಸಿರಲಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.
"ಕಾಂಗ್ರೆಸ್ ಸರ್ಕಾರ ನೇಮಿಸಿದ ರಾಜ್ಯಪಾಲರೂ ಈ ಹಿಂದೆ ಇದೇ ರೀತಿ ನಡೆದುಕೊಂಡಿದ್ದರು. ಆದರೆ ಇಂದು ಸದನದ ಸಂಪ್ರದಾಯ ಮತ್ತು ನಿಯಮಾವಳಿಗಳನ್ನು ಗಾಳಿಗೆ ತೂರಿ ರಾಷ್ಟ್ರಗೀತೆಗೆ ಅಗೌರವ ತೋರಿಸಲಾಗಿದೆ" ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ.
ಶಿಸ್ತು ಕ್ರಮದ ಒತ್ತಾಯ
ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಹಿರಿಯ ಸದಸ್ಯರಾಗಿದ್ದರೂ ಈ ಪ್ರತಿಭಟನೆಗೆ ಮುಂದಾಳತ್ವ ವಹಿಸಿದ್ದು ನಾಚಿಕೆಗೇಡು ಮತ್ತು ಖಂಡನೀಯ ಎಂದು ಬಿಜೆಪಿ ಟೀಕಿಸಿದೆ. ಅವರು ಆ ಸ್ಥಾನದಲ್ಲಿ ಮುಂದುವರೆಯುವ ಅರ್ಹತೆ ಇಲ್ಲ ಎಂದು ಪ್ರತಿಪಕ್ಷ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ದುರ್ವರ್ತನೆ ತೋರಿದ ಕಾಂಗ್ರೆಸ್ ಪಕ್ಷದ ಶಾಸಕರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಬಿಜೆಪಿ ಕರ್ನಾಟಕ ಒತ್ತಾಯಿಸಿದೆ. ಸಂವಿಧಾನಕ್ಕೆ, ರಾಜ್ಯಪಾಲರ ಹುದ್ದೆಗೆ ಮತ್ತು ಸದನದ ಘನತೆಗೆ ಮಾಡಿದ "ಘೋರ ಅಪಮಾನ"ದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷ ಸಭಾಧ್ಯಕ್ಷರಿಗೆ ಪತ್ರ ಮೂಲಕ ಮನವಿ ಮಾಡಿದೆ.

