
ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ
ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಅಧಿವೇಶನ ದುರ್ಬಳಕೆ; ಎಚ್.ಡಿ.ಕುಮಾರಸ್ವಾಮಿ ಆರೋಪ
ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಅಂಶಗಳನ್ನು ಸೇರಿಸುವ ಮೂಲಕ ಸಂವಿಧಾನಾತ್ಮಕ ಗೊಂದಲ ಸೃಷ್ಟಿಸಿದೆ. ಗಂಭೀರ ಚರ್ಚೆಗಳಿಗೆ ವೇದಿಕೆಯಾಗಬೇಕಾಗಿದ್ದ ಜಂಟಿ ಅಧಿವೇಶನವು ರಾಜಕೀಯ ಪ್ರಚಾರ ಬಳಕೆಯಾಗಿದೆ ಎಂದು ಎಚ್‌ಡಿಕೆ ಆರೋಪಿಸಿದರು.
ರಾಜ್ಯ ಸರ್ಕಾರ ತನ್ನ ಆಡಳಿತ ವೈಫಲ್ಯ, ನೂನ್ಯತೆಗಳನ್ನು ಮುಚ್ಚಿಕೊಳ್ಳಲು ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ವಿಧಾನ ಮಂಡಲದ ಜಂಟಿ ಅಧಿವೇಶನದ ಮೊದಲ ದಿನದ ಬೆಳವಣಿಗೆಗಳ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಸಣ್ಣತನ ಬಹಿರಂಗವಾಗಿದೆ. ಬೀದಿಯಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ರಾಜ್ಯಪಾಲರ ಮೂಲಕ ಸದನದಲ್ಲಿ ಹೇಳಿಸಬೇಕೆಂಬ ಉದ್ದೇಶದಿಂದಲೇ ಅಧಿವೇಶನ ಕರೆದಿದೆ ಎಂದು ಟೀಕಿಸಿದರು.
ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ಜಂಟಿ ಅಧಿವೇಶನವನ್ನು ರಾಜಕೀಯ ಕಾರಣಗಳಿಗಾಗಿ ದುರುಪಯೋಗ ಮಾಡಿಕೊಂಡಿದೆ. ಸರ್ಕಾರ ತನ್ನ ಆಡಳಿತ ವೈಫಲ್ಯದಿಂದ ಜನರ ಗಮನ ಬೇರೆಡೆ ಸೆಳೆಯಲು ಈ ಅಧಿವೇಶನ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಸಾಂವಿಧಾನಿಕ ಗೊಂದಲ ಸೃಷ್ಟಿ
ರಾಜ್ಯಪಾಲರ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಅಂಶಗಳನ್ನು ಸೇರಿಸುವ ಮೂಲಕ ಸಂವಿಧಾನಾತ್ಮಕ ಗೊಂದಲ ಸೃಷ್ಟಿಸಿದೆ. ಗಂಭೀರ ಚರ್ಚೆಗಳಿಗೆ ವೇದಿಕೆಯಾಗಬೇಕಾಗಿದ್ದ ಜಂಟಿ ಅಧಿವೇಶನವು ರಾಜಕೀಯ ಪ್ರಚಾರ ಬಳಕೆಯಾಗಿದೆ. ಅಭಿವೃದ್ಧಿ, ರೈತರ ಸಮಸ್ಯೆ, ಉದ್ಯೋಗ ಸೃಷ್ಟಿ, ಬೆಲೆ ಏರಿಕೆ, ಕಾನೂನು ಸುವ್ಯವಸ್ಥೆ ಸೇರಿದಂತೆ ನೈಜ ಸಮಸ್ಯೆಗಳ ಕುರಿತು ಚರ್ಚಿಸಲು ಸರ್ಕಾರ ವಿಫಲವಾಗಿದೆ. ಬದಲಾಗಿ ಆಡಳಿತದ ವೈಫಲ್ಯ ಮುಚ್ಚಿಹಾಕಲು ಕೇಂದ್ರ ಹಾಗೂ ರಾಜ್ಯ ಸಂಘರ್ಷ ಮುಂದಿಟ್ಟು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ದೂರಿದರು.
ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ಉಂಟಾದ ಗೊಂದಲ ರಾಜ್ಯದಲ್ಲಿ ಇದೇ ಮೊದಲು. ಜನರ ಸಮಸ್ಯೆಗಳಿಗೆ ಉತ್ತರ ನೀಡುವ ಧೈರ್ಯ ಸರ್ಕಾರಕ್ಕೆ ಇಲ್ಲ. ಅದಕ್ಕಾಗಿ ಜಂಟಿ ಅಧಿವೇಶನದಂತಹ ಸಂವಿಧಾನಾತ್ಮಕ ಪ್ರಕ್ರಿಯೆಯನ್ನು ಸಣ್ಣತನದ ರಾಜಕೀಯಕ್ಕೆ ಬಳಸಿಕೊಂಡಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.

