ಮೆಟ್ರೋ ದರ ಏರಿಕೆ ಕೇಂದ್ರದ ಅಧಿಕಾರವೋ? ರಾಜ್ಯದ ಅನಿವಾರ್ಯತೆಯೋ? ಇಲ್ಲಿದೆ ವಿವರಣೆ
x

ಮೆಟ್ರೋ ದರ ಏರಿಕೆ ಕೇಂದ್ರದ ಅಧಿಕಾರವೋ? ರಾಜ್ಯದ ಅನಿವಾರ್ಯತೆಯೋ? ಇಲ್ಲಿದೆ ವಿವರಣೆ

ನಮ್ಮ ಮೆಟ್ರೋ ದರವನ್ನು ಇಷ್ಟ ಬಂದಂತೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಹೆಚ್ಚಳ ಮಾಡುವಂತಿಲ್ಲ. ಇದಕ್ಕಾಗಿ ರಚನೆಯಾಗಿರುವ ದರ ನಿಗದಿ ಸಮಿತಿಯೇ ದರ ಹೆಚ್ಚಳ ಮಾಡಬೇಕು.


Click the Play button to hear this message in audio format

ನಮ್ಮ ಮೆಟ್ರೋ ಟಿಕೆಟ್‌ ದರ ಹೆಚ್ಚಳ ಪ್ರಯಾಣಿಕರ ಬೇಸರಕ್ಕೆ ಕಾರಣವಾಗಿದ್ದು, 2025ರಲ್ಲಿ ದುಬಾರಿ ದರ ಏರಿಕೆ ಬೆನ್ನಲ್ಲೆ ಮತ್ತೆ ದರ ಏರಿಕೆ ಮಾಡಿರುವುದು ಜನಾಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ಈ ನಡುವೆ, ಈ ವಿಚಾರವು ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೂ ದಾರಿಮಾಡಿಕೊಟ್ಟಿದೆ. ಆದರೆ ದರ ಏರಿಕೆ ಎಂಬುದು ಕೇವಲ ಒಂದು ಸರ್ಕಾರದ ಏಕಪಕ್ಷೀಯ ತೀರ್ಮಾನವಲ್ಲ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯದೊಂದಿಗೆ ರಚನೆಯಾಗಿರುವ ದರ ನಿಗದಿ ಸಮಿತಿ ತೆಗೆದುಕೊಳ್ಳುವ ತೀರ್ಮಾನವಾಗಿರುತ್ತದೆ. ಹೀಗಾಗಿ ದರ ಹೆಚ್ಚಳಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಹೊಣೆಯಾಗಿರುವುದಿಲ್ಲ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಲಾ 50:50 ರಷ್ಟು ಸಮಾನ ಪಾಲುದಾರಿಕೆ ಹೊಂದಿರುವ ಒಂದು ಜಂಟಿ ಉದ್ಯಮವಾಗಿದೆ. ನಿಗಮದ ಬಂಡವಾಳ ಹೂಡಿಕೆಯಲ್ಲಿ ಎರಡೂ ಸರ್ಕಾರಗಳು ಸಮಾನ ಪಾತ್ರ ವಹಿಸುತ್ತವೆಯಾದರೂ, ಅದರ ಕಾರ್ಯಾಚರಣೆಯು ಕೇಂದ್ರ ಸರ್ಕಾರದ ಕಾನೂನುಗಳ ಅಡಿಯಲ್ಲಿ ನಡೆಯುತ್ತದೆ. ಮೆಟ್ರೋ ರೈಲ್ವೇಸ್ (ನಿರ್ಮಾಣ) ಕಾಯಿದೆ 1978 ಮತ್ತು ಮೆಟ್ರೋ ರೈಲ್ವೇಸ್ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯಿದೆ 2002ರ ಅಡಿಯಲ್ಲಿ ನಿಗಮವು ಕಾರ್ಯನಿರ್ವಹಿಸುತ್ತದೆ.

ಮೆಟ್ರೋ ನೌಕರರ ಸಂಘಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನಂತೆ, ಮೆಟ್ರೋದ ಅಂತಿಮ ಆಡಳಿತಾತ್ಮಕ ಅಧಿಕಾರವು ಕೇಂದ್ರ ಸರ್ಕಾರದ ಬಳಿಯೇ ಇರುತ್ತದೆ. ಪ್ರಮುಖ ನಿರ್ಧಾರಗಳಿಗೆ ರಾಜ್ಯ ಸರ್ಕಾರವು ಕೇಂದ್ರದ ಅನುಮೋದನೆಯನ್ನು ಪಡೆಯುವುದು ಕಡ್ಡಾಯವಾಗಿದೆ. ಇದು ಬಿಎಂಆರ್‌ಸಿಎಲ್ ಮೇಲಿನ ಕೇಂದ್ರದ ಮೇಲುಗೈಯನ್ನು ಸಾಬೀತುಪಡಿಸುತ್ತದೆ.

ದರ ಪರಿಷ್ಕರಣೆಗೆ ಸಮಿತಿ

ಮೆಟ್ರೋ ದರವನ್ನು ಇಷ್ಟಬಂದಂತೆ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಹೆಚ್ಚಳ ಮಾಡುವಂತಿಲ್ಲ. ಇದಕ್ಕಾಗಿ ರಚನೆಯಾಗಿರುವ ದರ ನಿಗದಿ ಸಮಿತಿಯೇ ದರ ಹೆಚ್ಚಳ ಮಾಡಬೇಕು. ಈ ಸಮಿತಿಯು ಅತ್ಯುನ್ನತ ಮಟ್ಟದ ಮೂವರು ಸದಸ್ಯರನ್ನು ಒಳಗೊಂಡಿರುತ್ತದೆ. ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ. ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಂಡ ಒಬ್ಬ ಹಿರಿಯ ಐಎಎಸ್‌ ಅಥವಾ ಐಪಿಎಸ್‌ ಅಧಿಕಾರಿ ಹಾಗೂ ಕೇಂದ್ರ ಸರ್ಕಾರದಿಂದ ನಾಮನಿರ್ದೇಶನಗೊಂಡ ಒಬ್ಬ ಹಿರಿಯ ಐಎಎಸ್‌ ಅಥವಾ ಐಪಿಎಸ್‌ ಅಧಿಕಾರಿ ಸಮಿತಿಯಲ್ಲಿರಲಿದ್ದಾರೆ. ಈ ಸಮಿತಿಯು ಮೆಟ್ರೋದ ಆದಾಯ, ವೆಚ್ಚ, ಸಾಲದ ಹೊರೆ ಮತ್ತು ಹಣದುಬ್ಬರವನ್ನು ಆಧರಿಸಿ ವರದಿ ನೀಡುತ್ತದೆ. ಕಳೆದ ಬಾರಿ ಸಮಿತಿಯು ನೀಡಿದ ಶಿಫಾರಸಿನಂತೆ, ಪ್ರತಿ ವರ್ಷ ಶೇ.೫ ರಷ್ಟು ದರ ಹೆಚ್ಚಳ ಮಾಡಲು ಅನುಮತಿ ನೀಡಲಾಗಿತ್ತು. ಈ ಶಿಫಾರಸನ್ನು ಜಾರಿಗೆ ತರುವಾಗ ಬಿಎಂಆರ್‌ಸಿಎಲ್ ಬೋರ್ಡ್‌ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಫೆ.೯ರಂದು ನಡೆದ ದರ ಏರಿಕೆಯ ಸಂದರ್ಭದಲ್ಲಿ, ನಿಗಮವು ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಪ್ರತ್ಯೇಕವಾಗಿ ಅನುಮತಿ ಕೇಳಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಆರೋಪ- ಪ್ರತ್ಯಾರೋಪ

ಮೆಟ್ರೋ ದರ ಹೆಚ್ಚಳವಾದಾಗಲೆಲ್ಲಾ ರಾಜಕೀಯ ಪಕ್ಷಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತವೆ. ನಮ್ಮ ಕೈಯಲ್ಲಿ ಏನೂ ಇಲ್ಲ, ಕೇಂದ್ರದ ನಿಯಮಗಳಂತೆ ದರ ಏರಿಕೆಯಾಗಿದೆ ಎಂಬುದು ರಾಜ್ಯ ಸರ್ಕಾರ ವಾದ ಮಾಡಿದರೆ, ಕೇಂದ್ರ ಸರ್ಕಾರವು ಕೇವಲ ಕಾನೂನು ಚೌಕಟ್ಟು ನೀಡಲಾಗುತ್ತದೆ. ಸ್ಥಳೀಯ ಆರ್ಥಿಕ ಸ್ಥಿತಿಯನ್ನು ಗಮನಿಸಿ ರಾಜ್ಯವೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳುತ್ತದೆ. ವಾಸ್ತವದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಮಿತಿಯ ಬೆನ್ನಿಗೆ ನಿಂತು ದರ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತದೆ. ಆದರೆ ಬಹಿರಂಗವಾಗಿ ಜನರ ಮುಂದೆ ಬರುವಾಗ ಒಬ್ಬರ ಮೇಲೆ ಒಬ್ಬರು ಬೊಟ್ಟು ತೋರಿಸಲಾಗುತ್ತದೆ.

ದರ ಇಳಿಕೆ ಯಾರ ಕೈಯಲ್ಲಿದೆ?

ಮೆಟ್ರೋ ದರ ಹೆಚ್ಚಳವಾದಾಗ ಜನಾಕ್ರೋಶ ತೀವ್ರಗೊಂಡಿದೆ. ಸರ್ಕಾರದ ಮೇಲೆ ರಾಜಕೀಯ ಒತ್ತಡಗಳು ಅಧಿಕಗೊಂಡಾಗ ದರ ಇಳಿಕೆಗೆ ದಾರಿಗಳಿವೆ. ಮುಖ್ಯಮಂತ್ರಿಗಳು ಅಥವಾ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರು ಬಿಎಂಆರ್‌ಸಿಎಲ್ ಮಂಡಳಿಗೆ ಮರುಪರಿಶೀಲನೆಯ ಸೂಚನೆ ನೀಡಬಹುದು. ರಾಜಕೀಯವಾಗಿ ಇಚ್ಛಾಶಕ್ತಿ ಇದ್ದರೆ ದರ ಇಳಿಕೆ ಅಸಾಧ್ಯವೇನಲ್ಲ. ದರ ಪರಿಷ್ಕರಣೆ ಸಮಿತಿಯನ್ನು ಬದಲಾವಣೆ ಮಾಡಿ, ಹೊಸದಾಗಿ ದತ್ತಾಂಶಗಳನ್ನು ಪರಿಶೀಲಿಸುವಂತೆ ಸೂಚಿಸಬಹುದು. ಮೆಟ್ರೋ ದರ ಇಳಿಕೆಯಿಂದ ಬಿಎಂಆರ್‌ಸಿಎಲ್‌ಗೆ ಆಗುವ ಆರ್ಥಿಕ ನಷ್ಟವನ್ನು ತುಂಬಿಕೊಡಲು ರಾಜ್ಯ ಸರ್ಕಾರ ಮುಂದೆ ಬಂದರೆ ಮಾತ್ರ ದರ ಇಳಿಕೆ ಸಾಧ್ಯ. ಆದರೆ, ಗ್ಯಾರಂಟಿ ಯೋಜನೆಗಳಿಂದ ಈಗಾಗಲೇ ಬೊಕ್ಕಸಕ್ಕೆ ಹೊರೆಯಾಗಿರುವಾಗ, ರಾಜ್ಯ ಸರ್ಕಾರವು ಹೆಚ್ಚುವರಿ ನಷ್ಟ ಭರಿಸಲು ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗಿದೆ.

ನಷ್ಟದತ್ತ ಮೆಟ್ರೋ, 400 ಕೋಟಿ ರೂ. ಅನಿವಾರ್ಯತೆ

2023-24ರ ಅವಧಿಯಲ್ಲಿ ನಮ್ಮ ಮೆಟ್ರೋ 307.67 ಕೋಟಿ ರೂ. ಲಾಭ ಗಳಿಸಿತ್ತು. 2024-25ರಲ್ಲಿ 167.41 ಕೋಟಿ ರೂ.ಗಳ ನಷ್ಟಕ್ಕೆ ತಲುಪಿದೆ. ನಿಗಮವು 652.11 ಕೋಟಿ ರೂಪಾಯಿಗಳ ಹಣಕಾಸು ವೆಚ್ಚವನ್ನು ಭರಿಸುತ್ತಿದೆ. ಪ್ರಸ್ತುತ ಬಿಎಂಆರ್‌ಸಿಎಲ್‌ ಸುಮಾರು 17,071 ಕೋಟಿ ರೂ. ಬೃಹತ್ ಸಾಲವನ್ನು ಹೊಂದಿದೆ. ಮುಂದಿನ 5 ವರ್ಷಗಳಲ್ಲಿ (2025-30) ಬರೋಬ್ಬರಿ 9,651 ಕೋಟಿ ರೂ. ಸಾಲ ಮರುಪಾವತಿ ಮಾಡಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ದರ ಪರಿಷ್ಕರಣೆ ಮಾಡದಿದ್ದರೆ 2029-30ರ ವೇಳೆಗೆ ಮೆಟ್ರೋದ ನಿವ್ವಳ ನಷ್ಟವು 577 ಕೋಟಿ ರೂ.ಗಳಿಗೆ ತಲುಪಲಿದೆ. ಪ್ರಸ್ತುತ ರಾಜ್ಯ ಸರ್ಕಾರವು 400 ಕೋಟಿ ರೂ.ಗಳ ನಷ್ಟ ಭರಿಸುವ ಅಥವಾ ದರ ಏರಿಕೆಗೆ ಅನಿವಾರ್ಯತೆಯಲ್ಲಿದೆ ಎಂದು ಅಂದಾಜಿಸಲಾಗಿದೆ.

ಬಿಜೆಪಿ ನಾಯಕರ ವಾದ

ಕೇಂದ್ರ ಸರ್ಕಾರವು ಮೆಟ್ರೋ ದರ ಹೆಚ್ಚಳ ಮಾಡುವುದಾದರೆ ದೇಶದ ಎಲ್ಲಾ ಮೆಟ್ರೋ ದರವನ್ನು ಹೆಚ್ಚಿಸಲಾಗುತ್ತದೆ. ಬಿಎಂಆರ್‌ಸಿಎಲ್‌ ಮಂಡಳಿಯಲ್ಲಿ 10 ಸದಸ್ಯರು ಇರುತ್ತಾರೆ. ಕೇಮದ್ರದಿಂದ ಐವರು ಮತ್ತು ರಾಜ್ಯದಿಂದ ಐವರು ಸದಸ್ಯರು ಇರುತ್ತಾರೆ. ಕೇಂದ್ರದಿಂದ ನೇಮಿಸಲಾಗುವ ಸಮಿತಿಯ ಅಧ್ಯಕ್ಷರಿಗೆ ಮತ ಚಲಾಯಿಸುವ ಹಕ್ಕು ಇರುವುದಿಲ್ಲ. ಹೀಗಾಗಿ ಮೆಟ್ರೋ ದರವನ್ನು ರಾಜ್ಯದ ಐವರು ಸದಸ್ಯರು ತಿಋಮಾನಿಸುತ್ತಾರೆ. ಮಂಡಳಿಯಲ್ಲಿ ರಾಜ್ಯ ಸದಸ್ಯರೇ ಹೆಚ್ಚಿರುವ ಕಾರಣ ದರ ಹೆಚ್ಚಳ ತಡೆಬಹುದು ಎಂಬುದು ಬಿಜೆಪಿ ನಾಯಕರ ವಾದವಾಗಿದೆ.

ಸರ್ಕಾರದ ತಿರುಗೇಟು

ಆದರೆ, ಸರ್ಕಾರದ ವಾದವೇ ಬೇರೆಯಾಗಿದೆ. ಕೇಂದ್ರದ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಬಿಎಂಆರ್‌ಸಿಎಲ್‌ ಮುಖ್ಯಸ್ಥರ ಸಮಿತಿ ಇದೆ. ಅವರು ಬೆಲೆ ಹೆಚ್ಚಳ ತೀರ್ಮಾನ ಮಾಡುತ್ತಾರೆ. ಸಮಿತಿಯ ಅಧ್ಯಕ್ಷರನ್ನಾಗಿ ಕರ್ನಾಟಕದವರನ್ನು ನೇಮಕ ಮಾಡಲು ಬಿಜೆಪಿ ನಾಯಕರು ಕೇಂದ್ರದಿಂದ ಅನುಮತಿ ಕೊಡಿಸಲಿ ಎಂದು ರಾಝ್ಯ ಸರ್ಕಾರವು ತಿರುಗೇಟು ನೀಡಿದೆ.

Read More
Next Story