ನಮ್ಮ ಮೆಟ್ರೋ ಪ್ರಯಾಣಿಕರಿಗೆ ರಿಲೀಫ್: ಸೋಮವಾರದಿಂದ ಆಗಬೇಕಿದ್ದ ದರ ಏರಿಕೆಗೆ ಕೇಂದ್ರ ಬ್ರೇಕ್!
x

ನಮ್ಮ ಮೆಟ್ರೋ ಪ್ರಯಾಣಿಕರಿಗೆ ರಿಲೀಫ್: ಸೋಮವಾರದಿಂದ ಆಗಬೇಕಿದ್ದ ದರ ಏರಿಕೆಗೆ ಕೇಂದ್ರ ಬ್ರೇಕ್!

ತೇಜಸ್ವಿ ಸೂರ್ಯ ಅವರಿಗೆ ದೂರವಾಣಿ ಕರೆ ಮಾಡಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ "ಸೋಮವಾರದಿಂದ ಮೆಟ್ರೋ ದರ ಏರಿಕೆ ಆಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.


Click the Play button to hear this message in audio format

ರಾಜಧಾನಿಯ ಮೆಟ್ರೋ ಪ್ರಯಾಣಿಕರಿಗೆ ಸಂಸದ ತೇಜಸ್ವಿ ಸೂರ್ಯ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಸೋಮವಾರದಿಂದ ಜಾರಿಯಾಗಬೇಕಿದ್ದ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಸೋಮವಾರದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತು ರಾಜ್ಯ ಸರ್ಕಾರ ಮೆಟ್ರೋ ಪ್ರಯಾಣ ದರವನ್ನು ಶೇ. 5ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದ್ದವು. ಈ ನಿರ್ಧಾರದ ವಿರುದ್ಧ ಕಳೆದ ಒಂದು ವಾರದಿಂದ ಹೋರಾಟ ನಡೆಸುತ್ತಿದ್ದ ಸಂಸದ ತೇಜಸ್ವಿ ಸೂರ್ಯ, ದರ ಏರಿಕೆಯನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಮಧ್ಯಪ್ರವೇಶ

ಈ ಕುರಿತು ಮಾತನಾಡಿರುವ ತೇಜಸ್ವಿ ಸೂರ್ಯ, "ಎರಡು ದಿನಗಳ ಹಿಂದೆ ಸಂಸತ್ತಿನಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿಯಾಗಿ, ಯಾವುದೇ ಕಾರಣಕ್ಕೂ ದರ ಏರಿಕೆ ಆಗಬಾರದು ಎಂದು ಮನವಿ ಮಾಡಿದ್ದೆ. ಹಿಂದೆ ರಚನೆಯಾಗಿದ್ದ 'ದರ ನಿಗದಿ ಸಮಿತಿ' (Fare Fixation Committee) ಮಾಡಿದ ಶಿಫಾರಸುಗಳಲ್ಲಿ ಸಾಕಷ್ಟು ದೋಷಗಳಿವೆ. ಹೀಗಾಗಿ ಹೊಸದಾಗಿ ದರ ಪರಿಷ್ಕರಣೆ ಮಾಡುವವರೆಗೂ ಹಳೆಯ ಆದೇಶ ಜಾರಿ ಮಾಡಬಾರದು ಎಂದು ಒತ್ತಾಯಿಸಿದ್ದೆ," ಎಂದು ತಿಳಿಸಿದ್ದಾರೆ.

ಇದಕ್ಕೆ ಸ್ಪಂದಿಸಿರುವ ಕೇಂದ್ರ ಸಚಿವ ಖಟ್ಟರ್ ಅವರು, ಇಂದು (ಶನಿವಾರ) ತೇಜಸ್ವಿ ಸೂರ್ಯ ಅವರಿಗೆ ದೂರವಾಣಿ ಕರೆ ಮಾಡಿ, "ಸೋಮವಾರದಿಂದ ಮೆಟ್ರೋ ದರ ಏರಿಕೆ ಆಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳನ್ನು ಕರೆಸಿ ಈ ಬಗ್ಗೆ ಚರ್ಚೆ ನಡೆಸುತ್ತೇನೆ," ಎಂದು ಭರವಸೆ ನೀಡಿದ್ದಾರೆ. ಹೀಗಾಗಿ, ಸದ್ಯಕ್ಕೆ ಮೆಟ್ರೋ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವುದು ತಪ್ಪಿದಂತಾಗಿದೆ.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ

ದರ ಏರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿರುವ ತೇಜಸ್ವಿ ಸೂರ್ಯ, "ದರ ನಿಗದಿ ಸಮಿತಿ ರಚನೆ ಮಾಡುವ ಅಧಿಕಾರ ಕೇಂದ್ರದ್ದು ಎಂದು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಒಪ್ಪಂದದ (MoU) ಪ್ರಕಾರ, ದರ ಪರಿಷ್ಕರಣೆ ಮತ್ತು ಸಮಿತಿ ರಚನೆಗೆ ಮನವಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೇ ಇದೆ. ರಾಜ್ಯದ ಅಧಿಕಾರಿಗಳ ಬೇಡಿಕೆಯ ಮೇರೆಗೆ ಹಿಂದೆ ದರ ಏರಿಕೆ ಮಾಡಲಾಗಿತ್ತು," ಎಂದು ಆರೋಪಿಸಿದ್ದಾರೆ.

ದೇಶದಲ್ಲೇ ದುಬಾರಿ ನಮ್ಮ ಮೆಟ್ರೋ

"ಬೆಂಗಳೂರು ಮೆಟ್ರೋ ಇಡೀ ದೇಶದಲ್ಲೇ ಅತ್ಯಂತ ದುಬಾರಿ ಮೆಟ್ರೋ ಸೇವೆಯಾಗಿದೆ. ಇದು ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಕೈಗೆಟುಕದಂತಿದೆ. ಆದ್ದರಿಂದ ದರ ಪರಿಷ್ಕರಣೆಯಾಗಿ, ಸಾಮಾನ್ಯ ಜನರಿಗೂ ಹೊರೆಯಾಗದಂತೆ ದರ ನಿಗದಿಯಾಗಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ," ಎಂದು ಸಂಸದರು ಎಚ್ಚರಿಸಿದ್ದಾರೆ.

ಸದ್ಯಕ್ಕೆ ದರ ಏರಿಕೆಗೆ ತಡೆ ಬಿದ್ದಿರುವುದು "ಅರ್ಧ ಗೆಲುವು" (Battle half won) ಎಂದು ಬಣ್ಣಿಸಿರುವ ಅವರು, ಪೂರ್ಣ ಪ್ರಮಾಣದಲ್ಲಿ ದರ ಪರಿಷ್ಕರಣೆಯಾಗುವವರೆಗೂ ಸಂಸತ್ತಿನ ಒಳಗೂ ಮತ್ತು ಹೊರಗೂ ಜನರ ಧ್ವನಿಯಾಗಿ ಹೋರಾಟ ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ.

Read More
Next Story