
ಸಂಸದ ತೇಜಸ್ವಿ ಸೂರ್ಯ ಪ್ರತಿಭಟನೆ ನಡೆಸಿದರು.
ಮೆಟ್ರೋ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ: ಸಂಸದ ತೇಜಸ್ವಿ ಸೂರ್ಯ, ಶಾಸಕ ರಾಮಮೂರ್ತಿ ವಶಕ್ಕೆ
ಪೊಲೀಸರು ಅವರನ್ನು ತಡೆಯಲು ಮುಂದಾದಾಗ, "ನಾನು ಪ್ರತಿಭಟನೆ ಮಾಡುತ್ತಿಲ್ಲ, ಕೇವಲ ಖಾಲಿ ಟ್ರಂಕ್ ಹಿಡಿದು ನಿಂತಿದ್ದೇನೆ. ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಸಂಸದರನ್ನು ಈ ರೀತಿ ವಶಕ್ಕೆ ಪಡೆಯುವಂತಿಲ್ಲ" ಎಂದು ಗರಂ ಆಗಿದ್ದಾರೆ.
ಮೆಟ್ರೋ ಪ್ರಯಾಣ ದರ ಏರಿಕೆಯನ್ನು ವಿರೋಧಿಸಿ ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ (ಫೆಬ್ರವರಿ 9ರಂದು) ಪ್ರತಿಭಟನೆ ನಡೆಸುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ತೇಜಸ್ವಿ ಸೂರ್ಯ ಅವರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಪ್ರತಿಭಟನೆಗೆ ಪೊಲೀಸರು ಮೊದಲೇ ನೋಟಿಸ್ ನೀಡಿ ನಿರ್ಬಂಧ ಹೇರಿದ್ದರೂ, ಅದನ್ನು ಲೆಕ್ಕಿಸದೆ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಕೈಯಲ್ಲಿ ಖಾಲಿ ಟ್ರಂಕ್ ಹಿಡಿದುಕೊಂಡು ಬರುವ ಮೂಲಕ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಸಾಂಕೇತಿಕವಾಗಿ ವ್ಯಂಗ್ಯವಾಡಿದರು. ಟ್ರಂಕ್ ಮೇಲೆ "ಕಾಂಗ್ರೆಸ್ ಸರ್ಕಾರ, ಖಾಲಿ ಟ್ರಂಕ್ ಸರ್ಕಾರ" ಎಂಬ ಪೋಸ್ಟರ್ ಅಂಟಿಸಲಾಗಿತ್ತು.
ಪೊಲೀಸರು ಅವರನ್ನು ತಡೆಯಲು ಮುಂದಾದಾಗ, "ನಾನು ಪ್ರತಿಭಟನೆ ಮಾಡುತ್ತಿಲ್ಲ, ಕೇವಲ ಖಾಲಿ ಟ್ರಂಕ್ ಹಿಡಿದು ನಿಂತಿದ್ದೇನೆ. ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಸಂಸದರನ್ನು ಈ ರೀತಿ ವಶಕ್ಕೆ ಪಡೆಯುವಂತಿಲ್ಲ. ಮೊದಲು ಕಾನೂನು ತಿಳಿದುಕೊಂಡು ಬನ್ನಿ," ಎಂದು ತೇಜಸ್ವಿ ಸೂರ್ಯ ಪೊಲೀಸರ ವಿರುದ್ಧ ಗರಂ ಆದರು. ಆದರೂ, ಪೊಲೀಸರು ಅವರನ್ನು ವಶಕ್ಕೆ ಪಡೆದು, ಟ್ರಂಕ್ ಮೇಲಿದ್ದ ಪೋಸ್ಟರ್‌ಗಳನ್ನು ಕಿತ್ತುಹಾಕಿದರು.
ಶಾಸಕ ರಾಮಮೂರ್ತಿ ಆಕ್ರೋಶ
ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಮಾತನಾಡಿ, "ಸರ್ಕಾರ ಸದ್ಯಕ್ಕೆ ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಿದೆ ಎಂದು ಹೇಳುತ್ತಿದೆ. ಆದರೆ, ಈ ಏರಿಕೆಯನ್ನು ಸಂಪೂರ್ಣವಾಗಿ ಕೈಬಿಡಬೇಕು. ಅಷ್ಟೇ ಅಲ್ಲ, ಈಗಿರುವ ದರವನ್ನೂ ಕೂಡಲೇ ಕಡಿಮೆ ಮಾಡಬೇಕು. ರಾಜ್ಯ ಸರ್ಕಾರ ಪದೇ ಪದೇ ಸುಳ್ಳು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಗಿ ಪೊಲೀಸ್ ಬಂದೋಬಸ್ತ್
ಬಿಜೆಪಿ ಪ್ರತಿಭಟನೆಯ ಸುಳಿವು ಮೊದಲೇ ಸಿಕ್ಕಿದ್ದರಿಂದ, ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 20ಕ್ಕೂ ಹೆಚ್ಚು ಪೊಲೀಸರು ಮತ್ತು ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಇದರೊಂದಿಗೆ ಬಿಎಂಆರ್‌ಸಿಎಲ್ ಭದ್ರತಾ ಸಿಬ್ಬಂದಿಯೂ ನಿಲ್ದಾಣದ ಹೊರಗೆ ಕಾವಲು ಕಾಯುತ್ತಿದ್ದರು.

