
Namma Metro| ವರ್ಷದೊಳಗೆ ಎರಡನೇ ಶಾಕ್: ಸಾಲದ ನೆಪವೊಡ್ಡಿ ಮತ್ತೆ ದರ ಏರಿಸಿದ ಮೆಟ್ರೋ
2023-24 ರಲ್ಲಿ ನಮ್ಮ ಮೆಟ್ರೋ ಕಾರ್ಯಾಚರಣೆ ಆದಾಯವು 129.3 ಕೋಟಿ ರೂ. ಇತ್ತು. 2024-25 ರಲ್ಲಿ 229 ಕೋಟಿ ರೂ.ಗೆ ಏರಿತ್ತು. 2025-26 ರಲ್ಲಿ 200 ಕೋಟಿ ರೂ. ಆದಾಯ ಗಳಿಸಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಹೇಳಿವೆ.
2025 ರ ಫೆಬ್ರವರಿಯಲ್ಲಿ ರಾತ್ರೋರಾತ್ರಿ ಶೇ. 71ರಷ್ಟು ದರ ಏರಿಕೆ ಮಾಡಿ ಪ್ರಯಾಣಿಕರನ್ನು ಕಂಗಾಲಾಗಿಸಿದ್ದ 'ನಮ್ಮ ಮೆಟ್ರೋ', ವರ್ಷ ಕಳೆಯುವಷ್ಟರಲ್ಲೇ ಮತ್ತೆ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಫೆಬ್ರವರಿ 9ರಿಂದ ಜಾರಿಗೆ ಬರುವಂತೆ ಮೆಟ್ರೋ ಪ್ರಯಾಣ ದರದಲ್ಲಿ ಶೇ. 5ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದ್ದು, ಇದು ಮಧ್ಯಮ ವರ್ಗದ ಪ್ರಯಾಣಿಕರನ್ನು ಮತ್ತೆ ಖಾಸಗಿ ವಾಹನಗಳತ್ತ ಮುಖ ಮಾಡುವಂತೆ ಪ್ರೇರೇಪಿಸುವ ಆತಂಕ ಮೂಡಿಸಿದೆ. ವಿಶ್ವದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿರುವ ಬೆಂಗಳೂರಿಗೆ, ಈ ದರ ಏರಿಕೆಯು ಟ್ರಾಫಿಕ್ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುವ ಭೀತಿ ಎದುರಾಗಿದೆ.
ಸಾರ್ವಜನಿಕ ಸಾರಿಗೆಯನ್ನು ಜನಸ್ನೇಹಿಯಾಗಿಸುವ ಬದಲು, ಲಾಭದ ದೃಷ್ಟಿಯಿಂದಲೇ ನೋಡುತ್ತಿರುವ ಬಿಎಂಆರ್‌ಸಿಎಲ್ ಕ್ರಮಕ್ಕೆ ಮತ್ತೆ ಜನಾಕ್ರೋಶ ವ್ಯಕ್ತವಾಗಿದೆ. ಸಾಲದ ಹೊರೆ ಇಳಿಸಿಕೊಳ್ಳುವ ನೆಪವೊಡ್ಡಿ ದರವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ದೆಹಲಿಯಂತಹ ನಗರಗಳಿಗೆ ಹೋಲಿಸಿದರೆ ಈಗಾಗಲೇ ದುಬಾರಿಯಾಗಿರುವ ನಮ್ಮ ಮೆಟ್ರೋ, ಈ ಹೊಸ ದರ ಏರಿಕೆಯ ಮೂಲಕ ಜನಸಾಮಾನ್ಯರಿಂದ ಮತ್ತಷ್ಟು ದೂರವಾಗಲಿದೆಯೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ.
ವಾಹನ ಸಂಚಾರ ದುಪ್ಪಟ್ಟಾಗುವ ಆತಂಕ
ಬೆಂಗಳೂರು ಇಡೀ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರ ಎಂದು ಇತ್ತೀಚೆಗೆ ಖಾಸಗಿ ಸಮೀಕ್ಷಾ ತಂಡ 'ಟಾಮ್ ಟಾಮ್' ವರದಿ ಹೇಳಿದೆ. ಈಗ ಮೆಟ್ರೋ ಪ್ರಯಾಣ ಏರಿಕೆಯಿಂದ ಬೈಕ್ ಹಾಗೂ ಕಾರುಗಳು ರಸ್ತೆಗೆ ಇಳಿಯಲಿವೆ. ಇದರಿಂದ ವಾಹನ ದಟ್ಟಣೆ ಇನ್ನಷ್ಟು ಹೆಚ್ಚಲಿದೆ ಎಂಬ ಆತಂಕ ಎದುರಾಗಿದೆ.
ಬೆಂಗಳೂರು ಮೆಟ್ರೋ ಪ್ರಯಾಣಿಕರ ಒಕ್ಕೂಟದ ಅಧ್ಯಕ್ಷ ರಾಜೇಶ್ ಭಟ್ ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿ, "ಪ್ರಯಾಣಿಕರನ್ನು ರಾಜ್ಯ ಸರ್ಕಾರ ಅತಂತ್ರಕ್ಕೆ ಸಿಲುಕಿಸಿದೆ. ದುಬಾರಿ ಹಣ ತೆತ್ತು ಮೆಟ್ರೋದಲ್ಲಿ ಪ್ರಯಾಣಿಸಿ, ಇಲ್ಲವೇ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಸಾಯಿರಿ ಎಂಬ ನಡವಳಿಕೆ ಪ್ರದರ್ಶಿಸುತ್ತಿದೆ. ವರ್ಷದ ಹಿಂದೆ ಮಾಡಿರುವ ದರ ಏರಿಕೆಯಿಂದಲೇ ಪ್ರಯಾಣಿಕರು ತತ್ತರಿಸುತ್ತಿದ್ದಾರೆ. ಈಗ ಮತ್ತೆ ಶೇ5 ರಷ್ಟು ಬೆಲೆ ಏರಿಸಲು ಮುಂದಾಗಿರುವುದು ಸರಿಯಲ್ಲ. ಬಿಎಂಆರ್‌ಸಿಎಲ್ ಸಾಲ ತೀರಿಸಲು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ" ಎಂದು ಆರೋಪಿಸಿದರು.
ಹಳದಿ ಮಾರ್ಗ ಆರಂಭದಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅನಿವಾರ್ಯವಾಗಿ ಪ್ರಯಾಣಿಕರು ಮೆಟ್ರೋ ಸಂಚಾರವನ್ನೇ ಅವಲಂಬಿಸಿದ್ದಾರೆ. ಬಸ್ ಪ್ರಯಾಣ ದರ ಕಡಿಮೆಯಾದರೂ ವಾಹನ ದಟ್ಟಣೆ ಭೀತಿಯಿಂದ ಮೆಟ್ರೋಗೆ ಬರುತ್ತಿದ್ದಾರೆ. ಇದನ್ನೇ ಸರ್ಕಾರ ಬಂಡವಾಳ ಮಾಡಿಕೊಳ್ಳಲು ಹೊರಟಿದೆ. ಸರ್ಕಾರದಲ್ಲಿ ಹಣವಿಲ್ಲದೇ ಜನರ ಮೇಲೆ ಪ್ರಯಾಣ ದರದ ಹೊರೆ ಹೊರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾಮಾನ್ಯ ಜನರಿಗೆ ಅನಾನುಕೂಲ
ಕೊನೆಯ ನಿಲ್ದಾಣಗಳ ನಡುವೆ ಸಂಚರಿಸುವ ಪ್ರಯಾಣಿಕರು ಗರಿಷ್ಠ ಶುಲ್ಕ ಅಂದರೆ 95 ರೂ. ಪಾವತಿಸಬೇಕಾಗಿದೆ. ಉದ್ಯೋಗ, ವ್ಯಾಸಂಗಕ್ಕಾಗಿ ನಿತ್ಯ ಪ್ರಯಾಣಿಸುವವರ ಮೇಲೆ ಈ ದರ ಏರಿಕೆ ದೊಡ್ಡ ಬರೆ ಎಳೆಯಲಿದೆ. ಅದರಲ್ಲೂ ಮಧ್ಯಮ ವರ್ಗದ ಸಮುದಾಯಗಳು ಮೆಟ್ರೋ ಸಂಚಾರದಿಂದ ವಿಮುಖವಾಗಬೇಕಾಗಬಹುದು ಎಂಬ ಆತಂಕ ಕಾಡುತ್ತಿದೆ.
"ಸರ್ಕಾರದ ನೀತಿಗಳ ವಿರುದ್ಧ ಜನರು ಸಂಘಟಿತರಾಗಿ ಹೋರಾಟ ಮಾಡಬೇಕು. ಆಗಷ್ಟೇ ಸರ್ಕಾರಕ್ಕೆ ಬುದ್ಧಿ ಕಲಿಸಬಹುದು. ಮೆಟ್ರೋ ಪ್ರಯಾಣಿಕರ ಸಂಘಟನೆ ವತಿಯಿಂದ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು" ಎಂದು ರಾಜೇಶ್ ಭಟ್ ಹೇಳಿದರು.
ಬಿಎಂಆರ್‌ಸಿಎಲ್ ಹೇಳುವುದೇನು?
ʼನಮ್ಮ ಮೆಟ್ರೋʼ 2017 ಜೂನ್ ತಿಂಗಳಲ್ಲಿ ಪ್ರಯಾಣ ದರ ಹೆಚ್ಚಿಸಿತ್ತು. ಇದೇ ಕಾರಣ ನೀಡಿ 2025 ರ ಫೆಬ್ರವರಿಯಲ್ಲಿ ಶೇ 71ರಷ್ಟು ವೇತನ ಹೆಚ್ಚಳ ಮಾಡಿತ್ತು. 2017 ಮಾರ್ಚ್ ತಿಂಗಳಿಂದ 2024 ಮಾರ್ಚ್ ನಡುವೆ ಬಿಎಂಆರ್‌ಸಿಎಲ್ ಸಿಬ್ಬಂದಿ ವೆಚ್ಚವು ಶೇ. 42, ಇಂಧನ ವೆಚ್ಚ ಶೇ. 34 ರಷ್ಟು ಹೆಚ್ಚಾಗಿದೆ. ನಿರ್ವಹಣೆ ಮತ್ತು ಆಡಳಿತ ವೆಚ್ಚಗಳು ಶೇ.366 ರಷ್ಟು ದುಬಾರಿಯಾಗಿವೆ.
2024-25 ರಿಂದ 2029-30 ರೊಳಗೆ ಬಿಎಂಆರ್‌ಸಿಎಲ್ 10,422 ಕೋಟಿ ರೂ. ಸಾಲ ಮರು ಪಾವತಿಸಬೇಕಾಗಿದೆ. ಸಾಲ ಪಾವತಿ ಹಾಗೂ ನಿರ್ವಹಣಾ ವೆಚ್ಚ ಸರಿದೂಗಿಸಲು ಪ್ರಯಾಣ ದರ ಏರಿಕೆ ಅನಿವಾರ್ಯ. ಈ ವರ್ಷ ಶೇ 5ರಷ್ಟು ಹೆಚ್ಚಳ ಮಾಡದೇ ಹೋದರೆ ಮುಂದಿನ ವರ್ಷ ಒಟ್ಟಿಗೆ ಶೇ.10ರಷ್ಟು ಹೆಚ್ಚಳ ಮಾಡಬೇಕಾಗುತ್ತದೆ. ಆಗ ಸಾರ್ವಜನಿಕರಿಂದ ದೊಡ್ಡ ಪ್ರತಿರೋಧ ಎದುರಾಗಬಹುದು ಎಂಬ ಕಾರಣಕ್ಕೆ ಈಗಲೇ ಶೇ.5 ರಷ್ಟು ಪ್ರಯಾಣ ದರ ಏರಿಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಕಳೆದ ವರ್ಷ ದರ ಏರಿಕೆ ಹೇಗಿತ್ತು?
2025 ಫೆಬ್ರವರಿ 9 ರಂದು ಬಿಎಂಆರ್‌ಸಿಎಲ್ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿತ್ತು. ಕೆಲ ಹಂತಗಳಲ್ಲಿ ಶೇ 100 ರಷ್ಟು ಬೆಲೆ ಏರಿಕೆ ಮಾಡಲಾಗಿತ್ತು. ಇದು ಪ್ರಯಾಣಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಫೆ.14 ರಿಂದ ದರವನ್ನು ಶೇ 71 ಕ್ಕೆ ಇಳಿಸಿತು. ಈಗ ಒಂದು ವರ್ಷದ ನಂತರ ಮೆಟ್ರೋ ಪ್ರಯಾಣ ದರವನ್ನು ಶೇ 5 ರಷ್ಟು ಹೆಚ್ಚಿಸಲು ತೀರ್ಮಾನಿಸಿರುವುದು ಪ್ರಯಾಣಿಕರ ಮೇಲೆ ಬರೆ ಎಳೆದಂತಾಗಿದೆ. 25 ಕಿ.ಮೀ. ಅಂತರದ ಪ್ರಯಾಣಕ್ಕೆ ಗರಿಷ್ಠ 95 ರೂ.ಗಳಿಗೆ ನಿಗದಿಪಡಿಸಿದೆ.
ಆಮೆಗತಿಯಲ್ಲಿ ʼನಮ್ಮ ಮೆಟ್ರೋʼ ಕಾಮಗಾರಿ
ದೇಶದ ಬೇರೆ ಬೇರೆ ನಗರಗಳ ಮೆಟ್ರೋ ಕಾಮಗಾರಿಗೆ ಹೋಲಿಸಿದರೆ ʼನಮ್ಮ ಮೆಟ್ರೋʼ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಬೆಂಗಳೂರಿನಲ್ಲಿ 2011 ರಿಂದ ಮೆಟ್ರೋ ಮಾರ್ಗವು ವಾರ್ಷಿಕವಾಗಿ ಸರಾಸರಿ 6-7 ಕಿ.ಮೀ. ಲೆಕ್ಕದಲ್ಲಿ ಕೇವಲ 96 ಕಿ.ಮೀ. ಮಾತ್ರ ವಿಸ್ತರಿಸಿದೆ.
ದೆಹಲಿ ಮೆಟ್ರೋ 2002 ರಿಂದ ಈವರೆಗೆ 394 ಕಿ.ಮೀ.ವರೆಗೆ ವಿಸ್ತರಿಸಿದೆ. ವಾರ್ಷಿಕವಾಗಿ ಸರಾಸರಿ 16 ರಿಂದ 17 ಕಿ.ಮೀ. ವೇಗದಲ್ಲಿ ಮಾರ್ಗ ವಿಸ್ತರಣೆ ನಡೆಯುತ್ತಿದೆ. ಬೃಹತ್ ಜಾಲ ಹೊಂದಿರುವ ದೆಹಲಿ ಮೆಟ್ರೋ ಪ್ರಯಾಣ ದರವು ಗರಿಷ್ಠ 64 ರೂ. ಇದೆ. ಭಾನುವಾರ ಮತ್ತು ರಜೆ ದಿನಗಳಲ್ಲಿ 32 ಕಿ.ಮೀ. ಮೀರಿದ ಪ್ರಯಾಣಕ್ಕೆ 43 ರೂ. ಇದೆ. ಆದರೆ, ಬೆಂಗಳೂರು ಮೆಟ್ರೋ 25 ಕಿ.ಮೀ. ಮೀರಿದ ದೂರಕ್ಕೆ 90 ರೂ. ದುಬಾರಿಯಾಗಿದೆ.
ಈ ಹಿಂದೆ ಶೇ 100 ರಷ್ಟು ದರ ಏರಿಕೆ ಮಾಡಿದ್ದ ಸಂದರ್ಭದಲ್ಲಿ ಗ್ರೀನ್ಪೀಸ್ ಇಂಡಿಯಾ ಸಂಘಟನೆ ಕೂಡ ಮೆಟ್ರೋ ನಿಲ್ದಾಣದಲ್ಲಿ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿತ್ತು. ಪ್ರಯಾಣಿಕರ ಮೇಲೆ ತನ್ನ ಖರ್ಚು ವೆಚ್ಚದ ಹೊರೆ ಹಾಕುವ ಬದಲು ಕೈಗೆಟುಕುವ, ಲಿಂಗ ಸೂಕ್ಷ್ಮ ಮತ್ತು ಅಂಗವಿಕಲ ಸ್ನೇಹಿ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು.
ದರ ಪರಿಷ್ಕರಣೆ ಮಾಡುವವರು ಯಾರು?
ಮೆಟ್ರೋ ಪ್ರಯಾಣ ದರ ಪರಿಷ್ಕರಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ʼದರ ನಿಗದಿ ಸಮಿತಿʼ(ಎಫ್ಎಫ್ಸಿ) ರಚಿಸಿವೆ. ಈ ಸಮಿತಿಯು ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರು ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಕಳೆದ ವರ್ಷ ಮೆಟ್ರೋ ಪ್ರಯಾಣ ದರವನ್ನು ಶೇ. 45 ರಷ್ಟು ಏರಿಕೆ ಮಾಡುವಂತೆ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಇದಕ್ಕೆ ಕೇಂದ್ರ ಸರ್ಕಾರ ತಡೆ ನೀಡಿತ್ತು. ಆ ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳನ್ನು ಒಳಗೊಂಡ ಬಿಎಂಆರ್‌ಸಿಎಲ್ ಮಂಡಳಿಯು ಶೇ 100 ರಷ್ಟು ಪ್ರಯಾಣ ದರ ಏರಿಕೆಗೆ ಅನುಮೋದನೆ ನೀಡಿತ್ತು.
ದರ ಏರಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಸ್ಪಷ್ಟೀಕರಣ ನೀಡಿತ್ತು. ತಾಂತ್ರಿಕ ಸಮಸ್ಯೆಗಳಿಂದ ಕೆಲ ಸ್ಟೇಜ್ಗಳ ದರ ಶೇ 100 ರಷ್ಟು ಹೆಚ್ಚಾಗಿದೆ. ಇದನ್ನು ಶೇ71ಕ್ಕೆ ಇಳಿಸಲಾಗುವುದು ಎಂದು ಹೇಳಿತ್ತು.
ಆದಾಯವಿದ್ದರೂ ʼಮೆಟ್ರೋʼ ದರ ಏರಿಕೆ
ದೇಶದ ಬೇರೆ ಬೇರೆ ನಗರಗಳಲ್ಲಿ ಕಾರ್ಯಾಚರಿಸುವ ಮೆಟ್ರೋಗಿಂತ ಬೆಂಗಳೂರಿನ ʼನಮ್ಮ ಮೆಟ್ರೋʼ ಉತ್ತಮ ಆದಾಯ ತಂದುಕೊಡುವ ಸಂಸ್ಥೆಯಾಗಿದೆ. 2023-24ರಲ್ಲಿ ನಮ್ಮ ಮೆಟ್ರೋ ಕಾರ್ಯಾಚರಣೆ ಆದಾಯವು 129.3 ಕೋಟಿ ರೂ. ಇತ್ತು. 2024-25 ರಲ್ಲಿ 229 ಕೋಟಿ ರೂ.ಗೆ ಏರಿತ್ತು. 2025-26 ರಲ್ಲಿ 200 ಕೋಟಿ ರೂ. ಆದಾಯ ಗಳಿಸಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಹೇಳಿವೆ. ಕಳೆದ ವರ್ಷ ಶೇ 71 ರಷ್ಟು ದರ ಏರಿಕೆಯಿಂದ ಕಂಗಾಲಾದ ಪ್ರಯಾಣಿಕರು ಮೆಟ್ರೋ ಪ್ರಯಾಣದಿಂದ ಹಿಂದೆ ಸರಿದಿದ್ದೇ ಆದಾಯ ಕ್ಷೀಣಿಸಲು ಕಾರಣವಾಗಿತ್ತು ಎನ್ನಲಾಗಿದೆ.

