
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್: ಮತ್ತೆ ಟಿಕೆಟ್ ದರ ಏರಿಕೆ
ಬೆಂಗಳೂರಿನ ನಮ್ಮ ಮೆಟ್ರೋ (BMRCL) ಪ್ರಯಾಣ ದರವನ್ನು ಶೇ 5ರಷ್ಟು ಹೆಚ್ಚಿಸಿದೆ. ಫೆಬ್ರವರಿ 9, 2026 ರಿಂದ ಹೊಸ ದರ ಅನ್ವಯವಾಗಲಿದ್ದು, ಕನಿಷ್ಠ ದರ 11ರೂ.ಗಳಿಗೆ ಏರಲಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತೆ ಪ್ರಯಾಣ ದರವನ್ನು ಶೇ 5ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಫೆಬ್ರವರಿ 9, 2026 ರಿಂದಲೇ ಅನ್ವಯವಾಗುವಂತೆ ಈ ಹೊಸ ದರಗಳು ಜಾರಿಗೆ ಬರಲಿವೆ. ಕೇವಲ ಒಂದು ವರ್ಷದ ಹಿಂದೆ ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದ ಬಿಎಂಆರ್‌ಸಿಎಲ್, ಈಗ ಮತ್ತೆ ಸಾರ್ವಜನಿಕರ ಜೇಬಿಗೆ ಕೈಹಾಕಿದೆ.
ಎಷ್ಟು ಹೆಚ್ಚಳವಾಗಿದೆ?
ದರ ನಿಗದಿ ಸಮಿತಿಯ (FFC) ಶಿಫಾರಸಿನಂತೆ ಪ್ರತಿ ವರ್ಷ ಶೇ 5ರಷ್ಟು ದರ ಹೆಚ್ಚಿಸಲು ಅವಕಾಶವಿದೆ. ಇದರಂತೆ ದರಗಳನ್ನು ಹತ್ತಿರದ ರೂಪಾಯಿಗೆ ರೌಂಡ್ ಫಿಗರ್ ಮಾಡಲಾಗಿದೆ. ಕನಿಷ್ಠ ದರ 10ರೂ.ಗಳಿಂದ 11ರೂ.ಗಳಿಗೆ, ಗರಿಷ್ಠ ದರ 90ರೂ. ರಿಂದ 95ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇನ್ನು ಒಟ್ಟು ದರ ಏರಿಕೆಯ ಪ್ರಮಾಣ ಕನಿಷ್ಠ 1ರೂ. ರಿಂದ ಗರಿಷ್ಠ 5ರೂ.ಗಳಷ್ಟು ಹೆಚ್ಚಳವಾಗಲಿದೆ.
ದರ ಏರಿಕೆಗೆ ಕಾರಣವೇನು?
ಬಿಎಂಆರ್‌ಸಿಎಲ್ ದರ ಏರಿಕೆಗೆ ನೀಡಿರುವ ಪ್ರಮುಖ ಕಾರಣಗಳು ನೀಡಿವೆ. ಅವುಗಳು ಹೀಗಿವೆ.
1. ಇಂಧನ (ವಿದ್ಯುತ್), ಸಿಬ್ಬಂದಿ ವೇತನ ಮತ್ತು ಮೆಟ್ರೋ ನಿರ್ವಹಣಾ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ.
2. ದರ ನಿಗದಿ ಶಿಫಾರಸು ಸಮಿತಿಯು ಎರಡು ಆಯ್ಕೆಗಳನ್ನು ನೀಡಿತ್ತು. ಒಂದು, ಕಳೆದ ವರ್ಷಕ್ಕೆ ಹೋಲಿಸಿದರೆ ವೆಚ್ಚ ಎಷ್ಟು ಹೆಚ್ಚಾಗಿದೆಯೋ ಅಷ್ಟು ದರ ಏರಿಸುವುದು. ಎರಡು, ವಾರ್ಷಿಕ ಶೇ 5ರಷ್ಟು ದರ ಏರಿಸುವುದು. ಇದರಲ್ಲಿ ಯಾವುದು ಕಡಿಮೆಯೋ ಅದನ್ನೇ ಪಾಲಿಸಬೇಕು ಎಂಬ ನಿಯಮದಂತೆ ಈಗ ಶೇ 5ರಷ್ಟು ಏರಿಕೆ ಮಾಡಲಾಗಿದೆ.
ಒಂದು ವರ್ಷದ ಹಿಂದೆ ಎಷ್ಟು ಹೆಚ್ಚಳವಾಗಿತ್ತು?
ಕಳೆದ ವರ್ಷ (2025) ಫೆಬ್ರವರಿಯಲ್ಲಿ ಮೆಟ್ರೋ ದರವನ್ನು ಶೇ 101.5ರಷ್ಟು ಹೆಚ್ಚಿಸಲಾಗಿತ್ತು. ಆದರೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ಮತ್ತು ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಕಂಡ ಹಿನ್ನೆಲೆಯಲ್ಲಿ ನಾಲ್ಕು ದಿನಗಳಲ್ಲೇ ಶೇ 30ರಷ್ಟು ದರ ಕಡಿತ ಮಾಡಲಾಗಿತ್ತು. ಅಂತಿಮವಾಗಿ ಶೇ 71.5ರಷ್ಟು ಹೆಚ್ಚಳ ಅಂದಿನಿಂದ ಜಾರಿಯಲ್ಲಿತ್ತು.
ಬಿಎಂಆರ್‌ಸಿಎಲ್ ವಿರುದ್ಧ ಆರೋಪಗಳೇನು?
ಈ ದರ ಏರಿಕೆಯ ವಿರುದ್ಧ ಮೆಟ್ರೋ ನೌಕರರ ಸಂಘ ಮತ್ತು ನಾಗರಿಕ ಸಮಿತಿಗಳು ಕೆಲವು ಗಂಭೀರ ಪ್ರಶ್ನೆಗಳನ್ನು ಎತ್ತಿವೆ.
ಅಧಿಕಾರಿಗಳ ದುಂದುವೆಚ್ಚ: ನಿಗಮದ ಹಿರಿಯ ಅಧಿಕಾರಿಗಳು ತಮ್ಮ ವೇತನವನ್ನು ವಿಪರೀತವಾಗಿ ಹೆಚ್ಚಿಸಿಕೊಂಡಿದ್ದಾರೆ. ಕೆಲವು ಅಧಿಕಾರಿಗಳ ವೇತನ 3 ಲಕ್ಷ ರೂ.ಗಳಿಂದ ಒಂದೇ ಬಾರಿಗೆ 1.5 ಲಕ್ಷ ರೂ.ಗಳಿಗೂ ಹೆಚ್ಚು ಏರಿಕೆಯಾಗಿದೆ.
ಬೇರೆ ಬೇರೆ ಇಲಾಖೆಗಳಲ್ಲಿ ನಿವೃತ್ತರಾದ ಸುಮಾರು 300 ಅಧಿಕಾರಿಗಳನ್ನು ಮೆಟ್ರೋದಲ್ಲಿ ಮರುನೇಮಕ ಮಾಡಿಕೊಳ್ಳಲಾಗಿದ್ದು, ಅವರಿಗೆ ವಾರ್ಷಿಕ 10 ಕೋಟಿ ರೂ.ಗಳಿಗೂ ಅಧಿಕ ಹಣ ಖರ್ಚು ಮಾಡಲಾಗುತ್ತಿದೆ.
ಸಿಬ್ಬಂದಿಗಳ ಶೋಷಣೆ: ಅಧಿಕಾರಿಗಳಿಗೆ ವೇತನ ಹೆಚ್ಚಳವಾಗುತ್ತಿದ್ದರೂ, ಲೋಕೋ ಪೈಲಟ್ ಮತ್ತು ಎಂಜಿನಿಯರ್‌ಗಳಂತಹ ದುಡಿಯುವ ವರ್ಗಕ್ಕೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ ಎಂಬ ಆಕ್ರೋಶವಿದೆ.
ಪ್ರಯಾಣಿಕರ ಮೇಲೆ ಪರಿಣಾಮ
ಬೆಂಗಳೂರಿನಂತಹ ಸಂಚಾರ ದಟ್ಟಣೆಯ ನಗರದಲ್ಲಿ ಮೆಟ್ರೋ ಲಕ್ಷಾಂತರ ಜನರಿಗೆ ಆಸರೆಯಾಗಿದೆ. ಆದರೆ ಸತತ ದರ ಏರಿಕೆಯಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಪ್ರಯಾಣಿಕರು ಮತ್ತೆ ಬಿಎಂಟಿಸಿ ಬಸ್ ಅಥವಾ ಖಾಸಗಿ ವಾಹನಗಳತ್ತ ಮುಖ ಮಾಡುವ ಸಾಧ್ಯತೆ ಇದೆ. "ಸಂಸ್ಥೆಯ ದುಂದುವೆಚ್ಚ ಕಡಿಮೆ ಮಾಡಿದರೆ ದರ ಏರಿಸುವ ಅಗತ್ಯವೇ ಇರಲಿಲ್ಲ" ಎಂಬುದು ತಜ್ಞರ ಅಭಿಪ್ರಾಯ.
ವರ್ಷಕ್ಕೊಂದು ದರ ಏರಿಕೆ ಏಕೆ?
ಕಳೆದ ವರ್ಷ ಫೆಬ್ರವರಿ 9ರಂದೇ ಬಿಎಂಆರ್‌ಸಿಎಲ್ ದರವನ್ನು ಭಾರೀ ಪ್ರಮಾಣದಲ್ಲಿ (ಶೇ 71.5) ಹೆಚ್ಚಿಸಿತ್ತು. ಈಗ ನಿಖರವಾಗಿ ಒಂದು ವರ್ಷದ ಬಳಿಕ ಮತ್ತೆ ಬೆಲೆ ಏರಿಕೆ ಮಾಡಲಾಗುತ್ತಿದೆ. ದರ ನಿಗದಿ ಸಮಿತಿಯ ಶಿಫಾರಸಿನ ಪ್ರಕಾರ, ನಿರ್ವಹಣಾ ವೆಚ್ಚ ಅಥವಾ ವಾರ್ಷಿಕ ಶೇ 5 ರಷ್ಟು ಏರಿಕೆ - ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ಪಾಲಿಸಲು ಸಂಸ್ಥೆ ನಿರ್ಧರಿಸಿದೆ. ರಾಜ್ಯ ಸರ್ಕಾರವು ಈ ಪ್ರಸ್ತಾವನೆಗೆ ಈಗಾಗಲೇ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯ ಮೂಲಗಳು ತಿಳಿಸಿವೆ.

