
Government Schools| ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ: 3 ವರ್ಷದಲ್ಲಿ ಶಾಲೆ ತೊರೆದ 7 ಲಕ್ಷ ವಿದ್ಯಾರ್ಥಿಗಳು!
ಪೋಷಕರು ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ನೀಡಲು ಬಯಸುತ್ತಿದ್ದಾರೆ. ಸರ್ಕಾರಿ ಶಾಲೆಗಳು ಮೂಲತಃ ಕನ್ನಡ ಮಾಧ್ಯಮಕ್ಕೆ ಒತ್ತು ನೀಡುವುದರಿಂದ, ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.
ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಆಸರೆಯಾಗಿರುವ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯು ಕುಸಿಯುತ್ತಿದ್ದು, ಶೇ.15ಕ್ಕಿಂತ ಹೆಚ್ಚು ಕುಸಿದಿದೆ. 2022-23ರಿಂದ ಪ್ರತಿ ಆರು ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಸರ್ಕಾರಿ ಶಾಲೆಯಿಂದ ಹೊರನಡೆದಿದ್ದು, ಇದು ಶಿಕ್ಷಣ ವ್ಯವಸ್ಥೆಯ ಮುಂದಿರುವ ಗಂಭೀರ ಸವಾಲನ್ನು ಬಿಂಬಿಸುತ್ತದೆ.
2022-23 ಮತ್ತು 2025-26ರ ನಡುವಿನ ಅವಧಿಯಲ್ಲಿ ಸುಮಾರು ಏಳು ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ತೊರೆದಿದ್ದಾರೆ. ಕೇವಲ ಮೂರು ವರ್ಷಗಳ ಅಂತರದಲ್ಲಿ ಇಷ್ಟು ಬೃಹತ್ ಪ್ರಮಾಣದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಂದ ದೂರವಾಗಿರುವುದು ಶಿಕ್ಷಣ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಅಂಕಿ-ಅಂಶಗಳ ಕುಸಿತ ಮಾತ್ರವಲ್ಲ, ಸಾರ್ವಜನಿಕ ಶಿಕ್ಷಣದ ಗುಣಮಟ್ಟದ ಮೇಲಿನ ವಿಶ್ವಾಸದ ಕೊರತೆಗೆ ಎಡೆಮಾಡಿಕೊಟ್ಟಿದೆ.
ದಾಖಲಾತಿ ಕುಸಿತಕ್ಕೆ ಕಾರಣಗಳು
ಸರ್ಕಾರವು ಈ ದಾಖಲಾತಿ ಕುಸಿತವನ್ನು ವಿಶ್ಲೇಷಣೆ ಮಾಡಿದ್ದು, ನಾಲ್ಕು ಪ್ರಮುಖ ಕಾರಣಗಳನ್ನು ಗುರುತಿಸಿದೆ. ಇಂದಿನ ಜಾಗತೀಕರಣದ ಯುಗದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ನೀಡಲು ಬಯಸುತ್ತಿದ್ದಾರೆ. ಸರ್ಕಾರಿ ಶಾಲೆಗಳು ಮೂಲತಃ ಕನ್ನಡ ಮಾಧ್ಯಮಕ್ಕೆ ಒತ್ತು ನೀಡುವುದರಿಂದ, ಪೋಷಕರು ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ರಾಜ್ಯ ಪಠ್ಯಕ್ರಮಕ್ಕಿಂತ ಹೆಚ್ಚಾಗಿ ಸಿಬಿಎಸ್‌ಇ ಅಥವಾ ಐಸಿಎಸ್‌ಇ ಪಠ್ಯಕ್ರಮವು ಮಕ್ಕಳ ಭವಿಷ್ಯಕ್ಕೆ ಹೆಚ್ಚು ಪೂರಕ ಎಂಬ ಭಾವನೆ ಪೋಷಕರಲ್ಲಿದೆ. ಹಳ್ಳಿಗಳಿಂದ ಹಿಡಿದು ನಗರಗಳವರೆಗೆ ಮೂಲೆ ಮೂಲೆಯಲ್ಲಿ ಖಾಸಗಿ ಶಾಲೆಗಳು ತಲೆ ಎತ್ತುತ್ತಿವೆ. ಆಕರ್ಷಕ ಕಟ್ಟಡಗಳು, ವಾಹನ ಸೌಲಭ್ಯ ಮತ್ತು ಪ್ರಚಾರದ ಮೂಲಕ ಇವು ಪೋಷಕರನ್ನು ಸೆಳೆಯುತ್ತಿವೆ. ಉದ್ಯೋಗ ಅರಸಿ ಕುಟುಂಬಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಥವಾ ನಗರಗಳಿಗೆ ವಲಸೆ ಹೋಗುವುದರಿಂದ ಮಕ್ಕಳ ಶಿಕ್ಷಣ ಅರ್ಧಕ್ಕೆ ನಿಲ್ಲುವುದು ಅಥವಾ ಖಾಸಗಿ ಶಾಲೆಗಳಿಗೆ ಸೇರುವುದು ನಡೆಯುತ್ತಿದೆ ಎಂಬುದನ್ನು ವಿಶ್ಲೇಷಿಸಲಾಗಿದೆ.
ಸರ್ಕಾರದಿಂದ ಕರ್ನಾಟಕ ಪಬ್ಲಿಕ್ ಶಾಲೆ
ಖಾಸಗಿ ಶಾಲೆಗಳ ಪೈಪೋಟಿಯನ್ನು ಎದುರಿಸಲು ಸರ್ಕಾರವು ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಮಾದರಿಯನ್ನು ಬಲವಾಗಿ ಸಮರ್ಥಿಸುತ್ತಿದ್ದಾರೆ.
ಕೆಪಿಎಸ್ ಶಾಲೆಗಳು ಎಲ್‌ಕೆಜಿಯಿಂದ 12ನೇ ತರಗತಿಯವರೆಗೆ ಒಂದೇ ಆವರಣದಲ್ಲಿ ಶಿಕ್ಷಣ ನೀಡುತ್ತವೆ. ಇಲ್ಲಿ ಇಂಗ್ಲಿಷ್ ಮಾಧ್ಯಮದ ಬೋಧನೆ, ಸಾರಿಗೆ ಸೌಲಭ್ಯ ಮತ್ತು ಸುಸಜ್ಜಿತ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ. ಪ್ರಸ್ತುತ ರಾಜ್ಯದಲ್ಲಿ 309 ಕೆಪಿಎಸ್ ಶಾಲೆಗಳಿದ್ದು, ಹೆಚ್ಚುವರಿಯಾಗಿ 900 ಶಾಲೆಗಳನ್ನು ಈ ಮಾದರಿಗೆ ಮೇಲ್ದರ್ಜೆಗೇರಿಸಲು ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ, ದ್ವಿಭಾಷಾ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡುತ್ತಿದೆ. 2018 ರಿಂದ 2025ರ ಅವಧಿಯಲ್ಲಿ 6,675 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ವಿಭಾಗಗಳನ್ನು ಆರಂಭಿಸಲಾಗಿದ್ದು, 9,522 ಶಾಲೆಗಳಲ್ಲಿ 1 ರಿಂದ 5ನೇ ತರಗತಿಯವರೆಗೆ ದ್ವಿಭಾಷಾ ಬೋಧನೆ ನಡೆಯುತ್ತಿದೆ ಎನ್ನಲಾಗಿದೆ.
ಮೂಲಸೌಕರ್ಯ, ಬೋಧಕ ವರ್ಗದ ಕೊರತೆ
ದಾಖಲಾತಿ ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದ್ದರೂ, ಬೋಧಕ ವರ್ಗದ ಕೊರತೆಯು ಒಂದು ದೊಡ್ಡ ಹಿನ್ನಡೆಯಾಗಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಒಟ್ಟು 57,651 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದು ಬೋಧನೆಯ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರಲಿದೆ. ಪ್ರಸ್ತುತ ಸರ್ಕಾರವು 34,027 ಪ್ರಾಥಮಿಕ ಮತ್ತು 9,499 ಪ್ರೌಢಶಾಲಾ ಅತಿಥಿ ಶಿಕ್ಷಕರನ್ನು ಅವಲಂಬಿಸಿದೆ. ಅತಿಥಿ ಶಿಕ್ಷಕರು ತಾತ್ಕಾಲಿಕವಾಗಿ ನೆರವಾದರೂ, ಶಾಶ್ವತ ಶಿಕ್ಷಕರಿಲ್ಲದೆ ದೀರ್ಘಕಾಲದ ಶೈಕ್ಷಣಿಕ ಗುರಿ ತಲುಪುವುದು ಕಷ್ಟ. 2026-27ರ ಹಣಕಾಸು ವರ್ಷದಲ್ಲಿ 15 ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.
ದಾಖಲಾತಿ ಆಂದೋಲನ
ದಾಖಲಾತಿ ಕುಸಿತವನ್ನು ತಡೆಯಲು ಶಿಕ್ಷಣ ಇಲಾಖೆಯು ಜೂ.30ರವರೆಗೆ ರಾಜ್ಯಾದ್ಯಂತ ದಾಖಲಾತಿ ಆಂದೋಲನವನ್ನು ಹಮ್ಮಿಕೊಂಡಿದೆ. ಸಾಮಾನ್ಯ ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಶೇ. 5ರಷ್ಟು ಮತ್ತು ಕೆಪಿಎಸ್ ಶಾಲೆಗಳಲ್ಲಿ ಶೇ. 10ರಷ್ಟು ದಾಖಲಾತಿಯನ್ನು ಹೆಚ್ಚಿಸುವ ಗುರಿಯನ್ನು ಶಿಕ್ಷಕರಿಗೆ ನೀಡಲಾಗಿದೆ. ಮನೆ ಮನೆಗೆ ತೆರಳಿ ಪೋಷಕರನ್ನು ಮನವೊಲಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ. ತಕ್ಷಣವೇ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದು ಅತ್ಯಗತ್ಯ. ಶಿಕ್ಷಕರಿಲ್ಲದ ಶಾಲೆಗೆ ಪೋಷಕರು ಮಕ್ಕಳನ್ನು ಕಳುಹಿಸಲು ಹಿಂಜರಿಯುವುದು ಸಹಜ. ಶಾಲಾ ಕಟ್ಟಡಗಳು, ಶೌಚಾಲಯಗಳು ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಖಾಸಗಿ ಶಾಲೆಗಳ ಮಟ್ಟಕ್ಕೆ ಸುಧಾರಿಸಬೇಕು. ಸ್ಮಾರ್ಟ್ ಕ್ಲಾಸ್ ಮತ್ತು ಕಂಪ್ಯೂಟರ್ ಶಿಕ್ಷಣವನ್ನು ಕಡ್ಡಾಯಗೊಳಿಸಿ, ಸರ್ಕಾರಿ ಶಾಲೆಗಳು ಆಧುನಿಕ ಶಿಕ್ಷಣಕ್ಕೆ ಪೂರಕವಾಗಿವೆ ಎಂಬ ವಿಶ್ವಾಸ ಮೂಡಿಸಬೇಕು. ಇಂಗ್ಲಿಷ್ ಒಂದು ಭಾಷೆಯಾಗಿ ಅವಶ್ಯಕ, ಆದರೆ ಶಿಕ್ಷಣದ ಗುಣಮಟ್ಟ ಕೇವಲ ಭಾಷೆಯ ಮೇಲೆ ನಿರ್ಧಾರವಾಗುವುದಿಲ್ಲ ಎಂಬುದನ್ನು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.

