
Insurance Policy| ಹಾವು ಕಡಿತ, ಅಪಘಾತ, ಅವಘಡ... ಶಾಲೆ ಮಕ್ಕಳ ಬದುಕಿಗೆ ಬೇಕಿದೆ ಕೇರಳ ಮಾದರಿ ʻವಿಮಾʼ ಭಾಗ್ಯ
ಸದ್ಯ ಶಾಲಾ ಪರಿಮಿತಿಯೊಳಗೆ ವಿದ್ಯಾರ್ಥಿ ಆಕಸ್ಮಿಕವಾಗಿ ಮೃತಪಟ್ಟರೆ ಶಿಕ್ಷಣ ಇಲಾಖೆ ಕಲ್ಯಾಣ ನಿಧಿಯಿಂದ 1.25ಲಕ್ಷ ರೂ.; ಗಂಭೀರ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಸಿಗುತ್ತಿದೆ.
ನಿದರ್ಶನ-1
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ರೇಷ್ಮೆ ರಸ್ತೆ ಬಳಿ 2026 ಮಾ.31 ರಂದು ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಬಾಗಿಲು ಹಠಾತ್ತನೇ ತೆರೆದುಕೊಂಡ ಪರಿಣಾಮ ಬಾಗಿಲು ಬಳಿ ನಿಂತಿದ್ದ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡರು.
ಪುತ್ತೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದ ಈ ಬಸ್ಸಿನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದ ಸಹೋದರಿಯರು ಬಾಗಿಲ ಬಳಿ ನಿಂತಿದ್ದರು. ಆದರೆ, ತಿರುವಿನಲ್ಲಿ ಬಸ್ ಬಾಗಿಲು ತೆರೆದುಕೊಂಡಿದ್ದರಿಂದ ಆಯತಪ್ಪಿದ ಅಕ್ಕ ಮೊದಲು ಕೆಳಕ್ಕೆ ಬಿದ್ದರು. ಆಕೆಯನ್ನು ರಕ್ಷಿಸಲು ಮುಂದಾದ ತಂಗಿಯೂ ರಸ್ತೆಗೆ ಉರುಳಿದರು. ಇಬ್ಬರು ವಿದ್ಯಾರ್ಥಿನಿಯರು ಯಾವುದೇ ತಪ್ಪು ಮಾಡದೇ ಹೋದರೂ ಸಾರ್ವಜನಿಕ ಸಾರಿಗೆಯ ಲೋಪದಿಂದ ಎದುರಾದ ಪರಿಸ್ಥಿತಿಗೆ ಹೋಣೆ ಯಾರು?
ನಿದರ್ಶನ-2
ಶಿರಾ ತಾಲೂಕಿನ ತರೂರು ಗ್ರಾಮದ ಶಾಲೆಯಲ್ಲಿ 2ನೇ ತರಗತಿ ಬಾಲಕಿ, 2023ರಲ್ಲಿ ಅಚಾನಕ್ಕಾಗಿ ಬಿಸಿ ಸಾಂಬರ್ ಪಾತ್ರೆಗೆ ಬಿದ್ದಿದ್ದಳು. ಆಕೆಯನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಗುಪ್ತಾಂಗ ಹಾನಿಯೊಂದಿಗೆ ಶೇ 28 ರಷ್ಟು ಸುಟ್ಟಗಾಯಗಳಾಗಿದ್ದವು.
ವಿದ್ಯಾರ್ಥಿನಿಯ ತಂದೆ ತುಮಕೂರಿನಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದರೆ, ಆಕೆಯ ತಾಯಿ ತುಂಬು ಗರ್ಭಿಣಿ. ಬರೋಬ್ಬರಿ ಒಂದು ತಿಂಗಳು ಆಸ್ಪತ್ರೆ ಎದುರು ಬಡ ದಂಪತಿ ಊಟಕ್ಕೂ ಗತಿಯಿಲ್ಲದೇ ವನವಾಸ ಪಟ್ಟಿದ್ದರು. ಪ್ಲಾಸ್ಟಿಕ್ ಸರ್ಜರಿ ಬಳಿಕ ಬಾಲಕಿ ಆಸ್ಪತ್ರೆಯಿಂದ ಬಿಡುಗಡೆಯಾದರೂ ಆಕೆ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರು. ಗುಪ್ತಾಂಗ ಊನದಿಂದ ಆಕೆಗೆ ಎದುರಾಗುವ ಖಿನ್ನತೆ, ವೈವಾಹಿಕ ಜೀವನ ಸಮಸ್ಯೆ ಊಹಿಸಲು ಅಸಾಧ್ಯ.
ನಿದರ್ಶನ-3
2026 ಮಾ.28 ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಈಜಲು ಹೋಗಿದ್ದ ನಾಲ್ವರು ಮಕ್ಕಳು ನೀರಿನಲ್ಲಿ ಕೃಷಿಹೊಂಡದಲ್ಲಿ ಮುಳುಗಿ ಮೃತಪಟ್ಟರು. ಶಾಲೆಗೆ ರಜೆ ಇದ್ದುದರಿಂದ ಮಕ್ಕಳು ಈಜಲು ತೆರಳಿದ್ದರು. ತಮ್ಮ ಕಣ್ಣಮುಂದೆಯೇ ಆಡಿ ನಲಿಯುತ್ತಿದ್ದ ಮಕ್ಕಳು ಸಾವಿನ ಮನೆ ಸೇರಿದ್ದರಿಂದ ಬಡ ಪೋಷಕರು ಅಕ್ಷರಶಃ ಕಂಗಾಲಾಗಿದ್ದರು. ಮಕ್ಕಳ ಸಾವಿಗೆ ಕೃಷಿ ಇಲಾಖೆ ಆಗಲಿ, ಕೃಷಿ ಹೊಂಡ ಮಾಲೀಕರಾಗಲಿ ಪರಿಹಾರ ನೀಡಿಲ್ಲ. ಹಾಗಾದರೆ, ಈ ಸಾವಿಗೆ ಹೊಣೆ ಯಾರು?
ನಿದರ್ಶನ -4
ಮತ್ತೊಂದು ಪ್ರಕರಣದಲ್ಲಿ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕುಪ್ಪಾಳು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ 2024 ಜೂನ್ 20ರಂದು ವಸತಿ ಶಾಲೆ ಆವರಣದ ನೇರಳೆ ಮರದಲ್ಲಿ ಹಣ್ಣು ಕೀಳಲು ಮರ ಹತ್ತಿದಾಗ ಕಾಲು ಜಾರಿದೆ. ರಕ್ಷಣೆಗಾಗಿ ಅಲ್ಲಿಯೇ ಹಾದು ಹೋಗಿದ್ದ ವಿದ್ಯುತ್ ತಂತಿ ಹಿಡಿದಾಗ ವಿದ್ಯುತ್ ಪ್ರವಹಿಸಿ ಆಘಾತಕ್ಕೊಳಗಾಗಿ ಕೆಳಗೆ ಬಿದ್ದಿದ್ದ. ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೇ ಮರಣ ಹೊಂದಿದ್ದ. ವಿದ್ಯಾರ್ಥಿಯ ಪೋಷಕರಿಗೆ 5 ಲಕ್ಷ ರೂ. ಪರಿಹಾರವನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಿರ್ಧರಿಸಿತ್ತು.
*****
ಪ್ರತಿಯೊಬ್ಬ ಭಾರತೀಯರಿಗೂ ಸಂವಿಧಾನವು ಜೀವಿಸುವ ಹಕ್ಕು ಹಾಗೂ ಶಿಕ್ಷಣ ಹಕ್ಕಿನ ಖಾತರಿ ಒದಗಿಸಿದೆ. ಸಂವಿಧಾನದ ಅನುಚ್ಛೇದ 21 ಹಾಗೂ 21 ಎ ಅಡಿಯಲ್ಲಿ ನೀಡಿರುವ ಹಕ್ಕುಗಳು ಅನಾಯಾಸವಾಗಿ ತಲುಪಬೇಕಾದರೆ ಮಕ್ಕಳಿಗೆ ಭಯಮುಕ್ತ ಮತ್ತು ಸುರಕ್ಷಿತ ಕಲಿಕಾ ವಾತಾವರಣ ನಿರ್ಮಿಸಬೇಕು. ಆದರೆ, ಕರ್ನಾಟಕದಲ್ಲಿ ಪ್ರತಿದಿನ ಒಂದಿಲ್ಲೊಂದು ಅವಘಡಗಳಲ್ಲಿ ಮಕ್ಕಳ ಜೀವ ಹಾರಿ ಹೋಗುತ್ತಿದೆ.
ಕೃಷಿ ಹೊಂಡದಲ್ಲಿ ಈಜಲು ಹೋಗಿ ಸಾವು, ವಿದ್ಯುತ್ ತಂತಿ ಸ್ಪರ್ಶದಿಂದ ಸಾವು, ಹಾವು ಕಡಿತದಿಂದ ಸಾವು, ಶಾಲೆಯ ಗೋಡೆ ಕುಸಿತ ಮಕ್ಕಳಿಗೆ ಗಾಯ, ಶಾಲಾವರಣದ ಸಂಪಿಗೆ ಬಿದ್ದು ಸಾವು… ಹೀಗೆ ನಾನಾ ಅವಘಡಗಳಲ್ಲಿ ಸಂಭವಿಸುವ ಮಕ್ಕಳ ಸಾವಿಗೆ ಹೊಣೆ ಯಾರು ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಕರ್ನಾಟಕ ರಾಜ್ಯದಾದ್ಯಂತ 54 ಸಾವಿರ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಅಂದಾಜು 40 ಲಕ್ಷಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು 20 ಸಾವಿರಕ್ಕೂ ಹೆಚ್ಚಿರುವ ಖಾಸಗಿ ಶಾಲೆಗಳಲ್ಲಿ 50 ಲಕ್ಷ ಮೇಲ್ಪಟ್ಟು ಮಕ್ಕಳು ಓದುತ್ತಿದ್ದರೂ ಯಾರೊಬ್ಬರ ಜೀವಕ್ಕೂ ರಕ್ಷಣೆ ಎಂಬುದಿಲ್ಲ.
ಪ್ರಸ್ತುತ, ಕರ್ನಾಟಕದಲ್ಲಿ ಶಾಲಾ ಪರಿಮಿತಿಯೊಳಗೆ ವಿದ್ಯಾರ್ಥಿಯು ಆಕಸ್ಮಿಕವಾಗಿ ಮೃತಪಟ್ಟರೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಕಲ್ಯಾಣ ನಿಧಿಯಿಂದ 1.25ಲಕ್ಷ ರೂ. ಪರಿಹಾರ ನೀಡಲಿದೆ. ಗಂಭೀರ ಗಾಯಗೊಂಡವರಿಗೆ 50 ಸಾವಿರ ರೂ. ಕೊಡಲಿದೆ. ಒಂದು ವೇಳೆ ಗಾಯಾಳುಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೆ ನಯಾಪೈಸೆ ಪರಿಹಾರ ನೀಡಲು ಅವಕಾಶ ಇಲ್ಲದಂತಹ ಪರಿಸ್ಥಿತಿ ಇದೆ. ಇನ್ನು ವಸತಿ ಶಾಲೆಗಳ ನಿಯಮಗಳೇ ಬೇರೆ. ಹಾಸ್ಟೆಲ್ನಲ್ಲಿ ಓದುವ ವಿದ್ಯಾರ್ಥಿಯು ಆಕಸ್ಮಿಕವಾಗಿ ಮೃತಪಟ್ಟರೆ 5 ಲಕ್ಷ ರೂ. ಪರಿಹಾರ ಸಿಗಲಿದೆ. ಆಗೊಮ್ಮೆ ರಜೆಯಲ್ಲಿ ಊರಿಗೆ ಹೋಗಿದ್ದಾಗ ಮೃತಪಟ್ಟರೆ 4 ಲಕ್ಷ ರೂ. ಪರಿಹಾರ ದೊರೆಯಲಿದೆ. ವಿಪರ್ಯಾಸವೆಂದರೆ, ರಾಜ್ಯದಲ್ಲಿ ಸುಮಾರು 815 ವಸತಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ಸಂಖ್ಯೆ ಕೇವಲ 3.5 ಲಕ್ಷದಿಂದ 4 ಲಕ್ಷದಷ್ಟು ಮಾತ್ರ.
ಶಿಕ್ಷಕರು, ಮಕ್ಕಳ ಕಲ್ಯಾಣ ನಿಧಿ ಹೇಗಿದೆ?
ಕರ್ನಾಟಕ ಸರ್ಕಾರವು 1963 ರಲ್ಲಿ ಶಿಕ್ಷಕರ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿದೆ. ಆಜೀವ ಸದಸ್ಯತ್ವದ ಶುಲ್ಕ ಪಾವತಿಸಿ ಸದಸ್ಯತ್ವ ಪಡೆದ ಶಿಕ್ಷಕರಿಗೆ ಇದರಲ್ಲಿ ವೈದ್ಯಕೀಯ ನೆರವು, ಆಪದ್ಧನ ನೀಡಲಾಗುತ್ತದೆ.
ಇನ್ನು ಮಕ್ಕಳ ಕ್ಷೇಮಾಭಿವೃದ್ಧಿ ನಿಧಿಯಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ಶಾಲಾವರಣದಲ್ಲಿ ಜೀವಹಾನಿ ಸಂಭವಿಸಿದರೆ 1.25 ಲಕ್ಷ ರೂ. ನೀಡಲಾಗುತ್ತದೆ. ಆದರೆ, ಈ ಪರಿಹಾರವು ಶಾಲಾ ವ್ಯಾಪ್ತಿಯ ಹೊರಗೆ ಸಂಭವಿಸುವ ಅವಘಡಗಳಿಗೆ ಅನ್ವಯಿಸುವುದಿಲ್ಲ. ಅಲ್ಲದೇ ಈಗ ನೀಡುತ್ತಿರುವ ಆರ್ಥಿಕ ನೆರವು ಅತ್ಯಲ್ಪವಾಗಿದೆ. ಸಂತ್ರಸ್ತ ಕುಟುಂಬಗಳಿಗೆ ಪೂರ್ಣ ಪ್ರಮಾಣದ ಭದ್ರತೆ ನೀಡುವಲ್ಲಿ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ದೃಷ್ಟಿಯಿಂದ ಸರ್ಕಾರದ ವಿಮಾ ಯೋಜನೆಗಳಲ್ಲಿ ಬದಲಾವಣೆ ತರಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
ಜೀವ ಹಾಗೂ ಅಪಘಾತ ವಿಮೆಗೆ ಪ್ರಸ್ತಾವನೆ
ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು 'ಸಮಗ್ರ ಅಪಘಾತ ಮತ್ತು ಜೀವ ವಿಮೆ' ಯೋಜನೆ ಜಾರಿಗೆ ತರುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಕೆಇಬಿ ಅಥವಾ ಕೆಎಸ್‌ಆರ್‌ಟಿಸಿಯಲ್ಲಿ ನೌಕರರು ಮೃತಪಟ್ಟರೆ 5 ಲಕ್ಷ ರೂ. ಪರಿಹಾರ ಸಿಗಲಿದೆ. ಆದರೆ, ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಜೀವಹಾನಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಪ್ರತಿ ವರ್ಷ ಶಿಕ್ಷಣ ಇಲಾಖೆಗೆ ನೀಡುವ ಅನುದಾನದಲ್ಲಿ 5 ಕೋಟಿ ರೂ.ಗಳ ಪ್ರತ್ಯೇಕ ನಿಧಿ ಸ್ಥಾಪಿಸಿದ ಸಾಕಷ್ಟು ಅನುಕೂಲ ಆಗಲಿದೆ. ಮಕ್ಕಳ ರಕ್ಷಣೆಗಾಗಿ ಜೀವ ಹಾಗೂ ಅಪಘಾತ ವಿಮೆ ನೀಡುವಂತೆ ನಾಲ್ಕು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇವೆ. ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರಿಗೂ ಮನವಿ ಮಾಡಿದ್ದೇವೆ. ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದು ಕೆ.ಟಿ. ತಿಪ್ಪೇಸ್ವಾಮಿ ʼದ ಫೆಡರಲ್ ಕರ್ನಾಟಕʼ ಕ್ಕೆ ತಿಳಿಸಿದರು.
ಮಕ್ಕಳಿಗೆ ವಿಮೆ ಸೌಲಭ್ಯ ಹೇಗೆ ನೀಡಬಹುದು?
ಪ್ರತಿ ವಿದ್ಯಾರ್ಥಿಗೂ ದಾಖಲಾತಿ ಸಮಯದಲ್ಲೇ ಜೀವವಿಮೆ ಹಾಗೂ ಅಪಘಾತ ವಿಮೆ ಸೌಲಭ್ಯ ಒದಗಿಸಬೇಕು. ಇದಕ್ಕಾಗಿ ಸ್ಥಾಪಿಸುವ ಪ್ರತ್ಯೇಕ ನಿಧಿಯಲ್ಲಿ ವಾರ್ಷಿಕವಾಗಿ ಪ್ರೀಮಿಯಂ ಭರಿಸಬೇಕು. ಶಾಲೆಯ ಒಳಗೆ ಅಥವಾ ಹೊರಗೆ ಅಚಾತುರ್ಯ ಘಟನೆಗಳಲ್ಲಿ ವಿದ್ಯಾರ್ಥಿಗಳ ಪ್ರಾಣ ಹಾನಿ ಸಂಭವಿಸಿದರೆ ಸಂತಸ್ತರ ಕುಟುಂಬ ಪರಿಹಾರವೂ ಸಿಗಲಿದೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದು, ಪ್ರಸ್ತಾವನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಪರಿಶೀಲಿಸಲು ಕಳುಹಿಸಿರುವ ಮಾಹಿತಿ ಇದೆ. ಈ ರೀತಿ ವಿದ್ಯಾರ್ಥಿಗಳಿಗೆ ವಿಮೆ ಸೌಲಭ್ಯ ಕಲ್ಪಿಸಿದರೆ ದೇಶಕ್ಕೇ ಕರ್ನಾಟಕ ಮಾದರಿಯಾಗಲಿದೆ ಎಂದು ಕೆ.ಟಿ. ತಿಪ್ಪೇಸ್ವಾಮಿ ತಿಳಿಸಿದರು.
ಪಿಎಂ ವಿಮಾ ಯೋಜನೆಗಾದರೂ ಸೇರಿಸಿ
ರಾಜ್ಯ ಸರ್ಕಾರ ಒಂದು ವೇಳೆ ಪ್ರತ್ಯೇಕ ನಿಧಿ ಸ್ಥಾಪಿಸಿ ವಿಮೆ ಸೌಲಭ್ಯ ಕಲ್ಪಿಸದೇ ಸಾಧ್ಯವಾಗದೇ ಹೋದರೆ ಪ್ರಸ್ತುತ, ಚಾಲ್ತಿಯಲ್ಲಿರುವ ಪ್ರಧಾನ ಮಂತ್ರಿ ಸುರಕ್ಷಣಾ ಬಿಮಾ ಯೋಜನೆ(ಪಿಎಂಎಸ್ಬಿವೈ) ಹಾಗೂ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಗೆ (ಪಿಎಂಜೆಜೆಬಿವೈ) ತಿದ್ದುಪಡಿ ತಂದು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಪ್ರಸ್ತುತ, ಈ ಎರಡೂ ವಿಮೆ ಯೋಜನೆಗಳು 18ವರ್ಷ ಮೇಲ್ಪಟ್ಟವರಿಗೆ ಮಾತ್ರ ಅನ್ವಯವಾಗಲಿದೆ. ಯೋಜನೆಯ ನಿಯಮಗಳಿಗೆ ತಿದ್ದುಪಡಿ ತಂದರೆ ಚಾಲ್ತಿಯಲ್ಲಿರುವ ಯೋಜನೆಯಲ್ಲೇ ಮಕ್ಕಳಿಗೆ ವಿಮೆ ಸೌಲಭ್ಯ ಒದಗಿಸಬಹುದು. ಮಕ್ಕಳ ವಿಮಾ ಪ್ರೀಮಿಯಂ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ನೆರವಾಗಬೇಕು. ಶಾಲಾ ಮಟ್ಟದಲ್ಲಿಯೇ ಎಲ್ಲಾ ವಿದ್ಯಾರ್ಥಿಗಳನ್ನು ಈ ವಿಮಾ ಯೋಜನೆಗಳಿಗೆ ಕಡ್ಡಾಯವಾಗಿ ನೋಂದಾಯಿಸುವ ಪ್ರಕ್ರಿಯೆ ಜಾರಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.
ಕೇರಳ ಮಾದರಿಯೇ ಸ್ಫೂರ್ತಿ
ಕೇರಳ ಸರ್ಕಾರವು 2026-27ನೇ ಬಜೆಟ್‌ನಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಅಪಘಾತ ಮತ್ತು ಜೀವ ವಿಮೆ ಯೋಜನೆ ಘೋಷಿಸಿದೆ. ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅನುಷ್ಠಾನಕ್ಕೆ ತರಬೇಕು ಎಂಬುದು ಆಯೋಗದ ಒತ್ತಾಯ. ಜೀವ ವಿಮೆ ಇದ್ದರೆ ಮರಣದ ನಂತರವಷ್ಟೇ ಕೇವಲ ಪರಿಹಾರ ಸಿಗಲಿದೆ. ಇದರ ಜತೆಗೆ ಅಪಘಾತ ವಿಮೆಯು ಇದ್ದರೆ ಚಿಕಿತ್ಸಾ ವೆಚ್ಚ ಮತ್ತು ಅಂಗವೈಕಲ್ಯಕ್ಕೆ ತುತ್ತಾದಾಗ ನೆರವಿಗೆ ಬರಲಿದೆ. ಹಾಗಾಗಿ ಕೇರಳ ಮಾದರಿಯ ಈ ಎರಡೂ ವಿಮೆಗಳನ್ನು ರಾಜ್ಯ ಸರ್ಕಾರಿ ಶಾಲೆ ಮಕ್ಕಳಿಗೂ ಅನ್ವಯಿಸಬೇಕು ಎಂದು ಒತ್ತಾಯಿಸಲಾಗಿದೆ.
“ಇತ್ತೀಚಿನ ವರ್ಷಗಳಲ್ಲಿ ಶಾಲೆಗಳಲ್ಲಿ ಸಂಭವಿಸುತ್ತಿರುವ ಬಿಸಿಯೂಟದ ಅವಘಡಗಳು, ಪ್ರವಾಸದ ವೇಳೆ ಅಪಘಾತಗಳು, ಕೃಷಿ ಹೊಂಡದಲ್ಲಿ ಈಜಲು ಹೋಗಿ ಸಾವನ್ನಪ್ಪುತ್ತಿರುವ ಪ್ರಕರಣಗಳಲ್ಲಿ ಮಕ್ಕಳ ಜೀವಹಾನಿಯಾಗುತ್ತಿದೆ. ಸಾವಿಗೆ ಬೆಲೆ ಕಟ್ಟಲಾಗದೇ ಹೋದರೂ ಮಾನವೀಯ ದೃಷ್ಟಿಯಿಂದ ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸಬೇಕಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಡಾ. ಕೆ.ಟಿ.ತಿಪ್ಪೇಸ್ವಾಮಿ ತಿಳಿಸಿದರು.
ಆಯೋಗದ ಶಿಫಾರಸು ಏನು?
1ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಯೋಜನೆ ಅನ್ವಯವಾಗಬೇಕು. ಶಾಲಾ ಆವರಣ, ಪ್ರಯೋಗಾಲಯ, ಆಟದ ಮೈದಾನ, ಪ್ರವಾಸ, ಕ್ರೀಡಾಕೂಟ ಹಾಗೂ ಸಾರಿಗೆ ಸಮಯದಲ್ಲಿ ಸಂಭವಿಸುವ ಎಲ್ಲಾ ಅವಘಡಗಳನ್ನು ವಿಮೆ ವ್ಯಾಪ್ತಿಗೆ ತರಬೇಕು.
ಗಂಭೀರ ಗಾಯಗಳಿಗೆ ಚಿಕಿತ್ಸಾ ವೆಚ್ಚ, ಶಾಶ್ವತ ಅಂಗವೈಕಲ್ಯಕ್ಕೆ ನಿಗದಿತ ಮೊತ್ತ ಹಾಗೂ ಸಾವಿನ ಸಂದರ್ಭದಲ್ಲಿ ಕುಟುಂಬಕ್ಕೆ ಒಟ್ಟು ಮೊತ್ತದ ಪರಿಹಾರ ನೀಡಬೇಕು. ವಿಮೆಯ ಪ್ರೀಮಿಯಂ ಮೊತ್ತವನ್ನು ಸರ್ಕಾರವೇ ಭರಿಸಬೇಕು ಮತ್ತು ಸರಳವಾಗಿ ಕ್ಲೈಮ್ ವ್ಯವಸ್ಥೆ ಇರಬೇಕು.
"ಮಕ್ಕಳ ಜೀವವನ್ನು ಕೇವಲ ಸಹಾನುಭೂತಿಯಿಂದ ನೋಡುವುದಕ್ಕಿಂತ, ಅವರಿಗೆ ಮುಂಚಿತವಾಗಿಯೇ ಆರ್ಥಿಕ ಭದ್ರತೆ ಒದಗಿಸುವುದು ಉತ್ತಮ. ಈ ಯೋಜನೆಯಿಂದ ಸಾವಿರಾರು ಬಡ ಕುಟುಂಬಗಳಿಗೆ ಆಸರೆಯಾಗುವುದಲ್ಲದೆ, ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆ ಹೆಚ್ಚಲಿದೆ," ಎಂದು ಆಯೋಗವು ಪ್ರಸ್ತಾವನೆಯಲ್ಲಿ ತಿಳಿಸಿದೆ.

