ಎಸ್‌ಇಪಿ ವರದಿ ಬಹಿರಂಗಕ್ಕೆ ಗಡುವು: ಶಿಕ್ಷಣ ತಜ್ಞರಿಂದ ಬಂಡಾಯದ ಕಹಳೆ
x

ಎಸ್‌ಇಪಿ ವರದಿ ಬಹಿರಂಗಕ್ಕೆ ಗಡುವು: ಶಿಕ್ಷಣ ತಜ್ಞರಿಂದ ಬಂಡಾಯದ ಕಹಳೆ

ಎಸ್‌ಇಪಿ ವರದಿಯು ಸಿದ್ಧವಾಗಿ ಆರು ತಿಂಗಳು ಕಳೆದರೂ ಸಾರ್ವಜನಿಕ ಚರ್ಚೆಗೆ ಬಿಡದೇ ಗೌಪ್ಯವಾಗಿಟ್ಟಿರುವ ಸರ್ಕಾರದ ಕ್ರಮವನ್ನು ಶಿಕ್ಷಣ ತಜ್ಞರು ಕಟುವಾಗಿ ಟೀಕಿಸಿದ್ದಾರೆ.


Click the Play button to hear this message in audio format

ರಾಜ್ಯ ಶಿಕ್ಷಣ ನೀತಿ ವರದಿ ಸಿದ್ಧವಾಗಿ ಆರು ತಿಂಗಳು ಕಳೆದರೂ ಸಾರ್ವಜನಿಕ ಚರ್ಚೆಗೆ ಬಿಡದೇ ಗೌಪ್ಯವಾಗಿಟ್ಟಿರುವ ಸರ್ಕಾರದ ಕ್ರಮಕ್ಕೆ ಶಿಕ್ಷಣ ತಜ್ಞರೇ ತಿರುಗುಬಿದ್ದಿದ್ದಾರೆ. ಸರ್ಕಾರದ ಧೋರಣೆ ಕೇವಲ ಶೈಕ್ಷಣಿಕ ಬಿಕ್ಕಟ್ಟಲ್ಲ. ಬದಲಿಗೆ ಪ್ರಜಾಪ್ರಭುತ್ವದ ಆಶಯಗಳ ಮೇಲೆ ನಡೆಯುತ್ತಿರುವ ದಾಳಿ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿ ರಾಜ್ಯ ಸರ್ಕಾರ ತನ್ನದೇ ಆದ ಸ್ವತಂತ್ರ ರಾಜ್ಯ ಶಿಕ್ಷಣ ನೀತಿ ರೂಪಿಸಲು ನಿರ್ಧರಿಸಿತ್ತು. ಇದಕ್ಕಾಗಿ ಉನ್ನತ ಮಟ್ಟದ ಆಯೋಗವನ್ನು ರಚಿಸಲಾಗಿತ್ತು. 2025ರ ಆ.8ರಂದು ನಿಯೋಗವು ಮುಖ್ಯಮಂತ್ರಿಗೆ ವರದಿ ಸಲ್ಲಿಸಿತ್ತು. ಆದರೆ, ವರದಿ ಸಲ್ಲಿಕೆಯಾಗಿ ದೀರ್ಘಕಾಲ ಕಳೆದರೂ ಅದರ ಅಂಶಗಳು ನಾಗರಿಕ ಸಮಾಜಕ್ಕೆ ಲಭ್ಯವಾಗಿಲ್ಲ. ಹೀಗಾಗಿ ತಕ್ಷಣ ಸಾರ್ವಜನಿಕ ಚರ್ಚೆಗಾಗಿ ಬಹಿರಂಗಗೊಳಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ನೀತಿ ನಿರೂಪಣೆಗಾಗಿ ಸಂಶೋಧನಾ ಸಂಸ್ಥೆಯ ಆಶ್ರಯದಲ್ಲಿ ನಡೆದ ವಿಚಾರ ಸಂಕಿರಣವು ಇಂತಹ ಚರ್ಚೆಗೆ ವೇದಿಕೆಯಾಗಿತ್ತು. ಸರ್ಕಾರದ ಮೌನ ಮತ್ತು ವಿಳಂಬ ಧೋರಣೆ ವಿರುದ್ಧ ಶೈಕ್ಷಣಿಕ ವಲಯದ ತಜ್ಞರು ಕಹಳೆ ಮೊಳಗಿಸಿದ್ದಾರೆ. ಸಮಗ್ರ ನೀತಿಯ ಅನುಪಸ್ಥಿತಿಯಲ್ಲಿ ರಾಜ್ಯದ ಶಿಕ್ಷಣ ಕ್ಷೇತ್ರವು ಅಧಿಕಾರಶಾಹಿ ಮತ್ತು ವ್ಯಕ್ತಿಗತ ನಿರ್ಧಾರಗಳಿಗೆ ಬಲಿಯಾಗುತ್ತಿದೆ. ಯಾವುದೇ ನೀತಿಯು ಸಂವಿಧಾನದ ಚೌಕಟ್ಟಿನಲ್ಲಿ ರೂಪಗೊಳ್ಳುವ ಬದಲು, ಅಧಿಕಾರದಲ್ಲಿರುವವರ ಇಚ್ಛಾಶಕ್ತಿಯ ಮೇಲೆ ನಿರ್ಧರಿತವಾದರೆ ಅದು ಶೈಕ್ಷಣಿಕ ವಿನಾಶಕ್ಕೆ ಹಾದಿ ಮಾಡಿಕೊಡಲಿಗೆ ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದರು.

ಶಿಕ್ಷಣ ಕೇವಲ ಪಠ್ಯಪುಸ್ತಕ ಅಥವಾ ಪರೀಕ್ಷೆಗೆ ಸೀಮಿತವಾದುದಲ್ಲ. ಅದು ನಾಡು, ನುಡಿ, ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯದ ಪ್ರತಿಬಿಂಬವಾಗಿದೆ. ಶಿಕ್ಷಣ ನೀತಿಯು ನಾಡಿನ ಆಶೋತ್ತರಗಳನ್ನು ಅಭಿವ್ಯಕ್ತಿಸುವ ದಸ್ತಾವೇಜು ಆಗಿದೆ. ಇಂತಹ ಮಹತ್ವದ ದಾಖಲೆಯನ್ನು ಸಾರ್ವಜನಿಕಗೊಳಿಸದೆ ಇರುವುದು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರ ಹಕ್ಕಿನ ಉಲ್ಲಂಘನೆಯಾಗಿದೆ. ಒಂದು ನೀತಿಯು ಯಶಸ್ವಿಯಾಗಬೇಕಾದರೆ ಅದು ಕೆಳಮಟ್ಟದಿಂದ ಚರ್ಚೆಯಾಗಬೇಕು. ಆದರೆ ಪ್ರಸ್ತುತ ಸರ್ಕಾರವು ವರದಿಯನ್ನು ಕೇವಲ ತಜ್ಞರ ಸಮಿತಿಯ ಆಸ್ತಿಯನ್ನಾಗಿ ಮಾಡಿಕೊಂಡಿದೆ. ಇದು ರಾಜಕೀಯ ನೈತಿಕತೆಯ ಪ್ರಶ್ನೆಯೂ ಹೌದು. ನೀತಿಯ ಅನುಷ್ಠಾನದ ಭಾಗೀದಾರರಾದ ಜನಸಾಮಾನ್ಯರನ್ನು ಕತ್ತಲಲ್ಲಿಟ್ಟು ರೂಪಿಸುವ ಯಾವುದೇ ಯೋಜನೆ ಏಕಪಕ್ಷೀಯ ಎಂಬ ಹಣೆಪಟ್ಟಿಗೆ ಗುರಿಯಾಗುತ್ತದೆ ಎಂದು ಶಿಕ್ಷಣ ತಜ್ಞರು ವಾಗ್ದಾಳಿ ನಡೆಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅವಸರ ಮತ್ತು ಏಕಪಕ್ಷೀಯವಾಗಿ ಜಾರಿ ಮಾಡಲಾಗಿದೆ. ಕರ್ನಾಟಕವು ಆ ಹಾದಿ ತುಳಿಯಬಾರದು. ಎನ್ಇಪಿ ವಿರುದ್ಧ ಧ್ವನಿ ಎತ್ತಿದ ಕರ್ನಾಟಕ, ಈಗ ತನ್ನದೇ ಆದ ನೀತಿ ಜಾರಿಗೆ ತರುವಾಗ ಅದೇ ರೀತಿಯ ಗುಪ್ತಗಾಮಿ ಧೋರಣೆ ಅನುಸರಿಸುತ್ತಿರುವುದು ವಿಪರ್ಯಾಸದ ಸಂಗತಿ. ರಾಜ್ಯದ ಶಿಕ್ಷಣ ನೀತಿಯು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಈ ವರದಿ ಅತ್ಯಂತ ಪ್ರಮುಖವಾಗಿದೆ. ಅಂತಹ ವರದಿಯನ್ನು ಮುಕ್ತ ಸಂವಾದಕ್ಕೆ ಬಿಡದಿದ್ದರೆ, ಅದು ರಾಜ್ಯದ ಶೈಕ್ಷಣಿಕ ಹಿತಾಸಕ್ತಿಗೆ ಮಾರಕವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಶಿಕ್ಷಣ ತಜ್ಞ ವಿ.ಪಿ. ಡಾ.ನಿರಂಜನಾರಾಧ್ಯ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಅಧಿಕಾರಶಾಹಿ ಪ್ರಭಾವ. ಶಿಕ್ಷಣ ತಜ್ಞರ ಆಲೋಚನೆಗಳಿಗಿಂತ ಅಧಿಕಾರಿಗಳ ಆದೇಶಗಳೇ ನೀತಿಯಾಗಿ ಜಾರಿಯಾಗುತ್ತಿರುವುದು ಶೈಕ್ಷಣಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಸಮಗ್ರ ನೀತಿಯಿಲ್ಲದಿದ್ದಾಗ ವ್ಯಕ್ತಿಗತ ನಿರ್ಧಾರಗಳೇ ಶಿಕ್ಷಣದ ದಾರಿಯನ್ನು ನಿರ್ಧರಿಸುತ್ತವೆ ಎಂಬ ಮಾತು ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ. ಶಿಕ್ಷಣ ಕ್ಷೇತ್ರವು ರಾಜಕೀಯ ದಾಳವಾಗಬಾರದು ಮತ್ತು ಅದು ಪಕ್ಷಾತೀತವಾಗಿ ರಾಜ್ಯದ ಅಭಿವೃದ್ಧಿಯ ದೃಷ್ಟಿಕೋನವನ್ನು ಹೊಂದಿರಬೇಕು ಎಂಬುದು ಇಲ್ಲಿನ ಒಮ್ಮತದ ನಿರ್ಣಯವಾಗಿದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ರಾಜ್ಯ ಶಿಕ್ಷಣ ನೀತಿಯ ವರದಿಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು. ನಾಗರಿಕ ಸಮಾಜ, ಶಿಕ್ಷಕರು ಮತ್ತು ತಜ್ಞರೊಂದಿಗೆ ಮುಕ್ತ ಚರ್ಚೆಗೆ ವೇದಿಕೆ ಕಲ್ಪಿಸಬೇಕು. ವರದಿಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ, ಪಕ್ಷಾತೀತವಾಗಿ ಚರ್ಚಿಸಿ ಅನುಮೋದನೆ ಪಡೆಯಬೇಕು. ಮಾ.6ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಈ ನೀತಿಯ ಜಾರಿ ಮತ್ತು ಅನುಷ್ಠಾನದ ಕುರಿತು ಸ್ಪಷ್ಟ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರೊ.ರಾಜೇಂದ್ರ ಚೆನ್ನಿ ಮಾತನಾಡಿ, ಶಿಕ್ಷಣ ತಜ್ಞರು ಸರ್ಕಾರದ ವಿರುದ್ಧ ತಿರುಗಿಬಿದ್ದಿರುವುದು ಕೇವಲ ವಿರೋಧಕ್ಕಾಗಿ ಅಲ್ಲ, ಬದಲಿಗೆ ವ್ಯವಸ್ಥೆಯ ಸುಧಾರಣೆಗಾಗಿ ಎಂಬುದು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಕರ್ನಾಟಕದ ಶೈಕ್ಷಣಿಕ ಭವಿಷ್ಯವು ಕೇವಲ ಒಂದು ವರದಿಯಲ್ಲಿ ಅಡಗಿಲ್ಲ, ಆ ವರದಿಯ ಸುತ್ತ ನಡೆಯುವ ಸಂವಾದದಲ್ಲಿ ಅಡಗಿದೆ. ಸರ್ಕಾರವು ಶಿಕ್ಷಣ ತಜ್ಞರ ಈ ಒಮ್ಮತದ ನಿರ್ಣಯವನ್ನು ಗೌರವಿಸದಿದ್ದರೆ, ಅದು ಶೈಕ್ಷಣಿಕ ಸಮುದಾಯದ ವಿಶ್ವಾಸವನ್ನು ಕಳೆದುಕೊಳ್ಳುವುದಲ್ಲದೆ, ರಾಜ್ಯದ ಶೈಕ್ಷಣಿಕ ಪ್ರಗತಿಯನ್ನು ದಶಕಗಳಷ್ಟು ಹಿಂದೆ ತಳ್ಳಬಹುದು. ರಾಷ್ಟ್ರದ ಗಮನ ಕರ್ನಾಟಕದ ಮೇಲಿದೆ. ಸಮಾಜದ ಕಟ್ಟಕಡೆಯ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ, ನೀತಿ ನಿರೂಪಣೆಯಲ್ಲಿ ಪಾರದರ್ಶಕತೆ ಅತ್ಯಗತ್ಯ. ಮುಖ್ಯಮಂತ್ರಿಗಳು ಬಜೆಟ್ ಭಾಷಣದಲ್ಲಿ ನೀಡುವ ಸ್ಪಷ್ಟನೆ ಮತ್ತು ವರದಿಯ ಬಿಡುಗಡೆಯು ರಾಜ್ಯದ ಶೈಕ್ಷಣಿಕ ದಿಕ್ಸೂಚಿಯನ್ನು ನಿರ್ಧರಿಸಲಿದೆ. ಶಿಕ್ಷಣ ತಜ್ಞರ ಈ ಬಂಡಾಯವು ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು, ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಸರ್ಕಾರವು ಮುಕ್ತ ಮತ್ತು ಪಾರದರ್ಶಕ ನೀತಿ ಅನುಷ್ಠಾನಕ್ಕೆ ಮುಂದಾಗಬೇಕಿದೆ ಎಂದಿದ್ದಾರೆ.

Read More
Next Story