
ವಯೋಮಿತಿ ಸಡಿಲಿಕೆ ಗೊಂದಲ; ಇನ್ನೂ 4 ಲಕ್ಷ ಮಕ್ಕಳಿಗೆ ಮತ್ತೆ ಯುಕೆಜಿಯೇ ಗತಿ!
ಇನ್ನೂ 4 ಲಕ್ಷಕ್ಕೂ ಹೆಚ್ಚು ಮಕ್ಕಳ ಭವಿಷ್ಯ ಅನಿಶ್ಚಿತತೆಯಲ್ಲಿದೆ. ಹೀಗಾಗಿ ಸಡಿಲಿಕೆ ಪ್ರಮಾಣವನ್ನು 5.5 ವರ್ಷಕ್ಕೆ ಇಳಿಕೆ ಮಾಡಬೇಕು ಎಂಬುದು ಪೋಷಕರ ಒತ್ತಾಯ.
ಶಾಲಾ ದಾಖಲಾತಿ ವಿಚಾರದಲ್ಲಿ ರಾಜ್ಯದ ಪೋಷಕರನ್ನು ಕಾಡುತ್ತಿದ್ದ ವಯೋಮಿತಿ ಆತಂಕಕ್ಕೆ ತೆರೆ ಎಳೆದ ಬೆನ್ನೆಲ್ಲೇ ಇದೀಗ ಮತ್ತೊಂದು ತಲೆಬಿಸಿ ಸರ್ಕಾರಕ್ಕೆ ಎದುರಾಗಿದೆ. ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆಯಿಂದ ಕೇವಲ 1 ಲಕ್ಷ ಮಕ್ಕಳಿಗೆ ಮಾತ್ರ ಅನುಕೂಲವಾಗಲಿದ್ದು, ಸುಮಾರು 4 ಲಕ್ಷಕ್ಕೂ ಹೆಚ್ಚು ಮಕ್ಕಳು ಕೇವಲ ಕೆಲವೇ ದಿನಗಳ ಅಥವಾ ತಿಂಗಳುಗಳ ವಯೋಮಿತಿ ವ್ಯತ್ಯಾಸದಿಂದ ಒಂದನೇ ತರಗತಿ ಪ್ರವೇಶ ವಂಚಿತರಾಗುವಂತಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನ್ವಯ ಒಂದನೇ ತರಗತಿಗೆ ಸೇರಲು ಮಗುವಿಗೆ ಜೂ.1ಕ್ಕೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮ ಇದೆ. ಆದರೆ, ಈ ಕಟ್ಟುನಿಟ್ಟಿನ ನಿಯಮವು ಪ್ರಾಯೋಗಿಕವಾಗಿ ಪೋಷಕರಿಗೆ ಶೈಕ್ಷಣಿಕ ಶಾಪವಾಗಿ ಪರಿಣಮಿಸಿರುವುದರಿಂದ ಇತ್ತೀಚೆಗೆ ಸರ್ಕಾರ ಘೋಷಿಸಿರುವ 60 ದಿನಗಳ ಸಡಿಲಿಕೆಯು ಕೇವಲ ಒಂದು ಸಣ್ಣ ವರ್ಗಕ್ಕೆ ಮಾತ್ರ ಸೀಮಿತವಾಗಿದ್ದು, ಇನ್ನೂ 4 ಲಕ್ಷಕ್ಕೂ ಹೆಚ್ಚು ಮಕ್ಕಳ ಭವಿಷ್ಯ ಅನಿಶ್ಚಿತತೆಯಲ್ಲಿದೆ. ಹೀಗಾಗಿ ವರ್ಷದ ಸಡಿಲಿಕೆ ಪ್ರಮಾಣವನ್ನು 5.5 ವರ್ಷಕ್ಕೆ ಇಳಿಕೆ ಮಾಡಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ. ಇದು ಸರ್ಕಾರಕ್ಕೆ ಮತ್ತೊಂದು ರೀತಿಯಲ್ಲಿ ಇಕ್ಕಟ್ಟಿಗೆ ಸಿಲುಕುವಂತಾಗಿದೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ದೃಷ್ಟಿಯಿಂದ 6 ವರ್ಷವನ್ನು ಕನಿಷ್ಠ ವಯೋಮಿತಿಯನ್ನಾಗಿ ನಿಗದಿಪಡಿಸಲಾಗಿದೆ. ಈ ಹಿಂದೆ ರಾಜ್ಯದಲ್ಲಿ 5 ವರ್ಷ 5 ತಿಂಗಳು ತುಂಬಿದ ಮಗುವಿಗೆ ಒಂದನೇ ತರಗತಿಗೆ ಪ್ರವೇಶ ನೀಡಲಾಗುತ್ತಿತ್ತು. ದಶಕಗಳಿಂದ ನಡೆದುಬಂದಿದ್ದ ಈ ಪದ್ಧತಿಗೆ ಕಡಿವಾಣ ಹಾಕಿದ್ದರಿಂದ ಪೋಷಕರು ಗೊಂದಲಕ್ಕೀಡಾಗಿದ್ದರು. ಒಂದು ಮಗು ಈಗಾಗಲೇ ಎಲ್‌ಕೆಜಿ ಮತ್ತು ಯುಕೆಜಿಯನ್ನು ಯಶಸ್ವಿಯಾಗಿ ಮುಗಿಸಿದ್ದರೂ, ಜೂನ್ 1ಕ್ಕೆ ಕೇವಲ ಕೆಲವು ದಿನಗಳ ಅಂತರದಲ್ಲಿ 6 ವರ್ಷ ಪೂರೈಸದಿದ್ದರೆ, ಆ ಮಗು ಮತ್ತೆ ಯುಕೆಜಿಯಲ್ಲೇ ಕೂರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ಮಗುವಿನ ಮೇಲೆ ಮಾನಸಿಕ ಒತ್ತಡ ಹೇರುವುದಲ್ಲದೆ, ಪೋಷಕರಿಗೆ ಆರ್ಥಿಕ ಹೊರೆಯನ್ನೂ ಉಂಟುಮಾಡುತ್ತಿದೆ.
ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಆರೋಪ
ಪೋಷಕರ ಸತತ ಪ್ರತಿಭಟನೆ ಹಾಗೂ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ, 60 ದಿನಗಳ (ಎರಡು ತಿಂಗಳು) ವಿನಾಯಿತಿಯನ್ನು ಘೋಷಿಸಿದೆ. ಈ ನಿರ್ಧಾರದಿಂದ ಸುಮಾರು 1 ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ. ಅಂದರೆ, 5 ವರ್ಷ 10 ತಿಂಗಳು ತುಂಬಿದ ಮಕ್ಕಳು ಈಗ ಒಂದನೇ ತರಗತಿಗೆ ಸೇರಬಹುದು. ಆದರೆ, ಇನ್ನೂ 4 ಲಕ್ಷಕ್ಕೂ ಹೆಚ್ಚು ಮಕ್ಕಳು ಈ ಸಡಿಲಿಕೆಯ ಹೊರಗಿದ್ದಾರೆ. ಯಾರಿಗೆ 6 ವರ್ಷ ತುಂಬಲು 65 ದಿನಗಳು ಅಥವಾ 90 ದಿನಗಳು ಬಾಕಿ ಇದೆಯೋ, ಅಂತಹ ಮಕ್ಕಳು ಕೇವಲ ವಾರಗಳ ಅಂತರದಲ್ಲಿ ಒಂದು ವರ್ಷದ ಶೈಕ್ಷಣಿಕ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರದ ಈ ನಡೆಗೆ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ ಪೋಷಕರಾದ ಚಂದ್ರಕಲಾ.ಬಿ, ಸರ್ಕಾರ ಕೈಗೊಂಡಿರುವ ತೀರ್ಮಾನ ಒಳ್ಳೆಯದು. ಆದರೆ, ಅದರಿಂದ 1 ಲಕ್ಷ ಮಕ್ಕಳಿಗೆ ಮಾತ್ರ ಅನುಕೂಲವಾಗಲಿದೆ. 6 ವರ್ಷ ತುಂಬಲು ಎರಡೂವರೆ, ಮೂರು ತಿಂಗಳು ಬಾಕಿ ಇರುವ ಮಕ್ಕಳಿಗೆ ಅನ್ಯಾಯವಾದಂತಾಗಿದೆ. ಸರ್ಕಾರ ಈ ನಡೆಯು ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುವ ತಂತ್ರವಾಗಿದೆ. ಸರ್ಕಾರದ ತಾರತಮ್ಯವು ಕೆಲವು ವರ್ಗದ ಪೋಷಕರನ್ನು ಸಮಾಧಾನ ಪಡಿಸಲು ಕೈಗೊಂಡ ತೀರ್ಮಾನವಾದಂತೆ ಕಾಣುತ್ತದೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಸರ್ಕಾರಕ್ಕೆ ಈ ಬಗ್ಗೆ ಪೋಷಕರು ಮನವಿ ಮಾಡಿದರು. ಮಕ್ಕಳ ಪ್ರವೇಶಾತಿ ವಯೋಮಿತಿಯನ್ನು 5.5 ವರ್ಷಕ್ಕೆ ಇಳಿಕೆ ಮಾಡಬೇಕು. ಇದರಿಂದ ಇನ್ನಷ್ಟು ಮಕ್ಕಳಿಗೆ ಅನುಕೂಲವಾಗಲಿದೆ. ಈ ಮೊದಲು ಇದ್ದಂತಹ ನಿಯಮವನ್ನೇ ಸರ್ಕಾರ ಅನುಷ್ಠಾನಗೊಳಿಸಬೇಕು. ಇದರಿಂದ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗಲಿದೆ. ಇಲ್ಲದಿದ್ದರೆ ಒಂದು ವರ್ಷ ನಷ್ಟವಾಗಲಿದೆ. ಸರ್ಕಾರದ 60 ದಿನಗಳ ಸಡಿಲಿಕೆ ಮಾಡುವ ಬದಲು ವಯೋಮಿತಿಯನ್ನು ಕನಿಷ್ಠ 5.5 ವರ್ಷಕ್ಕೆ ಇಳಿಸಬೇಕು. ಮಗುವು ಕಲಿಕೆಯಲ್ಲಿ ಸಮರ್ಥವಾಗಿದ್ದರೂ ಕೇವಲ ವಯಸ್ಸಿನ ಕಾರಣಕ್ಕೆ ಒಂದು ವರ್ಷ ವ್ಯರ್ಥ ಮಾಡುವುದು ಸರಿಯಲ್ಲ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಟಿ. ರವಿಕುಮಾರ್ ಮಾತನಾಡಿ, ಸರ್ಕಾರದ ನಿಯಮಗಳು ಯಾವ ಆಧಾರದ ಮೇಲೆ ಮಾಡುತ್ತವೆ ಎಂಬುದೇ ಅರ್ಥವಾಗುವುದಿಲ್ಲ. ಮೊದಲ ಇದ್ದ ವಯೋಮಿತಿ ಸರಿಯಾಗಿತ್ತು. ಆದರೆ, ಅದನ್ನು 6 ವರ್ಷಕ್ಕೆ ಹೆಚ್ಚಿಸಿರುವುದರಿಂದ ಲಕ್ಷಾಂತರ ಮಕ್ಕಳ ಭವಿಷ್ಯಕ್ಕೆ ಪೆಟ್ಟು ಕೊಟ್ಟಿತ್ತು. ರಾಜ್ಯ ಸರ್ಕಾರ ಈಗ ಕೈಗೊಂಡಿರುವ ಕ್ರಮವು ಸ್ವಾಗತಾರ್ಹ. ಆದರೆ ವಯೋಮಿತಿಯನ್ನು 60 ದಿನಗಳ ಬದಲಿಗೆ 90 ದಿನಗಳು ಎಂಬುದಾಗಿ ಬದಲಿಸುವುದು ಸೂಕ್ತ. ಇದರಿಂದ ಇನ್ನುಳಿದ ಲಕ್ಷಾಂತರ ಮಕ್ಕಳಿಗೆ ಒಂದನೇ ತರಗತಿಯಲ್ಲಿ ಪ್ರವೇಶಾತಿ ಲಭಿಸುವುದಕ್ಕೆ ಅನುಕೂಲವಾಗಲಿದೆ. ಅಲ್ಲದೇ, ಪೂರ್ವ ಪ್ರಾಥಮಿಕ ಹಂತದ ದಾಖಲಾತಿಯಲ್ಲೂ ಸಾಫ್ಟ್‌ವೇರ್ ಅಡಚಣೆ ಉಂಟಾಗುತ್ತಿದ್ದು, ಇದನ್ನು ಸರಿಪಡಿಸದಿದ್ದರೆ ಲಕ್ಷಾಂತರ ಮಕ್ಕಳ ದಾಖಲಾತಿ ಪ್ರಕ್ರಿಯೆಯೇ ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದರು.
ಡಿಜಿಟಲ್‌ನಲ್ಲಿ ಹೋರಾಟ
ಈ ಸಮಸ್ಯೆಯು ಈಗ ಕೇವಲ ಹೇಳಿಕೆಗಳಿಗೆ ಸೀಮಿತವಾಗಿಲ್ಲ. ವಾಟ್ಸಾಪ್, ಫೇಸ್‌ಬುಕ್ ಮತ್ತು ಎಕ್ಸ್ ವೇದಿಕೆಗಳಂತಹ ಡಿಜಿಟಲ್‌ನಲ್ಲಿ ಪೋಷಕರು ಆಂದೋಲನ ಆರಂಭಿಸಿದ್ದಾರೆ. ವಯೋಮಿತಿ 5.5 ವರ್ಷಕ್ಕೆ ಇಳಿಸಿ ಎಂಬ ಹ್ಯಾಶ್‌ಟ್ಯಾಗ್ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ರಾಜ್ಯಾದ್ಯಂತ ಪೋಷಕರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ಅಲ್ಲದೇ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದು, ಕನಿಷ್ಠ 90 ದಿನಗಳ (3 ತಿಂಗಳು) ಸಡಿಲಿಕೆ ನೀಡುವಂತೆ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದೆ. 3 ತಿಂಗಳ ವಿನಾಯಿತಿ ನೀಡಿದರೆ ಸುಮಾರು 2.3 ಲಕ್ಷಕ್ಕೂ ಹೆಚ್ಚು ಮಕ್ಕಳ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಈ ನಡುವೆ ಇತ್ತೀಚೆಗೆ ಶಾಸಕ ಅರವಿಂದ ಬೆಲ್ಲದ್ ವಿಧಾನಸಭೆಯಲ್ಲಿ ಇದು ಪ್ರತಿ ವರ್ಷದ ಸಮಸ್ಯೆಯಾಗಬಾರದು ಎಂದು ಎಚ್ಚರಿಕೆ ನೀಡಿದ್ದರು. ಪ್ರತಿ ವರ್ಷ ಪೋಷಕರು ಬೀದಿಗೆ ಇಳಿಯುವಂತೆ ಮಾಡಬಾರದು. ಇದನ್ನು ಕಾಯಂ ಕಾನೂನನ್ನಾಗಿ ಮಾಡಿ, ವಯೋಮಿತಿಯಲ್ಲಿ ಶಾಶ್ವತ ಸಡಿಲಿಕೆ ತರುವಂತೆ ರಾಜ್ಯ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದ್ದರು.
ಸರ್ಕಾರವು ಕೇವಲ 60 ದಿನಗಳ ಸಡಿಲಿಕೆ ನೀಡಿ ಸುಮ್ಮನಾಗುವುದು 4 ಲಕ್ಷ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಎಂಬ ಮಾತುಗಳು ಕೇಳಿಬಂದಿವೆ. 2026-27ನೇ ಸಾಲಿನ ಶೈಕ್ಷಣಿಕ ವರ್ಷವು ವಿಶೇಷ ಪರಿವರ್ತನಾ ವರ್ಷ ಎಂದು ಪರಿಗಣಿಸಿ, ಕನಿಷ್ಠ 3 ರಿಂದ 5 ತಿಂಗಳವರೆಗೆ ಸಡಿಲಿಕೆ ನೀಡುವುದು ಸೂಕ್ತ. ಶಿಕ್ಷಣ ತಜ್ಞರು, ಪೋಷಕರು ಮತ್ತು ಶಿಕ್ಷಕರೊಂದಿಗೆ ಚರ್ಚಿಸಿ ಒಂದು ವಯೋಮಿತಿಯನ್ನು ನಿಗದಿಪಡಿಸಬೇಕು. ಪ್ರತಿ ವರ್ಷದ ಗೊಂದಲ ತಪ್ಪಿಸಲು ಶಿಕ್ಷಣ ಕಾಯ್ದೆಗೆ ತಕ್ಷಣವೇ ತಿದ್ದುಪಡಿ ತಂದು, ಪೋಷಕರಲ್ಲಿ ಇರುವ ಅನಿಶ್ಚಿತತೆಯನ್ನು ಹೋಗಲಾಡಿಸಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.
ಪೋಷಕರಲ್ಲಿ ಉಂಟಾಗಿರುವ ಗೊಂದಲ ಏನು?
ಎನ್‌ಇಪಿ ಮತ್ತು ಆರ್‌ಟಿಇ ಅಡಿಯಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಗುವಿಗೆ ಕಡ್ಡಾಯವಾಗಿ 6 ವರ್ಷ ತುಂಬಿರಲೇಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮಗುವಿನ ಸಮಗ್ರ ಬೆಳವಣಿಗೆಯ ದೃಷ್ಟಿಯಿಂದ ಈ ವಯೋಮಿತಿ ನಿಗದಿಪಡಿಸಲಾಗಿದೆ. ಆದರೆ, ರಾಜ್ಯದಲ್ಲಿ ಈ ಮೊದಲು ಇದ್ದ 5 ವರ್ಷ 5 ತಿಂಗಳ ನಿಯಮಕ್ಕೆ ಒಗ್ಗಿಕೊಂಡಿದ್ದ ಪೋಷಕರಿಗೆ ಈ ಬದಲಾವಣೆ ಗೊಂದಲ ಉಂಟುಮಾಡಿತ್ತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಪೋಷಕರು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸಿದ್ದರು. ಅಂದು ಎಚ್ಚೆತ್ತ ಸರ್ಕಾರ, ಮಾನವೀಯ ನೆಲೆಯಲ್ಲಿ 5 ವರ್ಷ 10 ತಿಂಗಳು ತುಂಬಿದ ಮಕ್ಕಳಿಗೆ (2 ತಿಂಗಳ ವಿನಾಯಿತಿ) ಒಂದು ಬಾರಿ ಮಾತ್ರ ಅನ್ವಯವಾಗುವಂತೆ ದಾಖಲಾತಿಗೆ ಅವಕಾಶ ನೀಡಿತ್ತು. ಇದರಿಂದ ಸಾವಿರಾರು ಮಕ್ಕಳ ಶೈಕ್ಷಣಿಕ ವರ್ಷ ಉಳಿದಿತ್ತು. ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ 'ಒಂದನೇ ತರಗತಿ ದಾಖಲಾತಿ ವಯೋಮಿತಿ' ಎಂಬುದು ಕೇವಲ ನಿಯಮವಾಗಿ ಉಳಿಯದೆ, ಪೋಷಕರು ಮತ್ತು ಮಕ್ಕಳ ಪಾಲಿಗೆ ದೊಡ್ಡ ಆತಂಕವಾಗಿ ಪರಿಣಮಿಸಿತ್ತು.
2026-27ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಸಮಸ್ಯೆ ಮತ್ತೆ ಉಲ್ಬಣಿಸಿತ್ತು. ಅಂಕಿ-ಅಂಶಗಳ ಪ್ರಕಾರ, ರಾಜ್ಯಾದ್ಯಂತ ಸುಮಾರು 2.3 ಲಕ್ಷಕ್ಕೂ ಹೆಚ್ಚು ಮಕ್ಕಳು ಜೂನ್ 1ಕ್ಕೆ ಕೇವಲ ಕೆಲವು ದಿನಗಳ ಅಥವಾ ಗರಿಷ್ಠ 90 ದಿನಗಳ (3 ತಿಂಗಳು) ಅಂತರದಲ್ಲಿ 6 ವರ್ಷ ಪೂರೈಸಲು ವಿಫಲರಾಗಿದ್ದರು. ಈ ಮಕ್ಕಳು ಈಗಾಗಲೇ ಎಲ್‌ಕೆಜಿ ಹಾಗೂ ಯುಕೆಜಿ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿದ್ದರೂ, ಹೊಸ ನಿಯಮ ಪಾಲನೆಯಾದರೆ ಕೇವಲ ವಯಸ್ಸಿನ ಕಾರಣಕ್ಕೆ ಮತ್ತೆ ಯುಕೆಜಿಯಲ್ಲೆ ಮುಂದುವರಿಯಬೇಕಾಗುತ್ತದೆ ಎಂಬ ಆತಂಕವನ್ನು ಪೋಷಕರು ವ್ಯಕ್ತಪಡಿಸಿದ್ದರು. ಸತತ ಮನವಿ ಮಾಡಿದ್ದರಿಂದ ಸರ್ಕಾರ ಎರಡು ತಿಂಗಳ ವಯೋಮಿತಿ ಸಡಿಲಿಕೆ ಮಾಡಿದೆ.

