Adolescent Pregnancy| ಹದಿಹರೆಯದ ಗರ್ಭಧಾರಣೆ ತಡೆಗೆ ʼಕಡ್ಡಾಯ ಲೆಕ್ಕಪರಿಶೋಧನೆʼ
x

Adolescent Pregnancy| ಹದಿಹರೆಯದ ಗರ್ಭಧಾರಣೆ ತಡೆಗೆ ʼಕಡ್ಡಾಯ ಲೆಕ್ಕಪರಿಶೋಧನೆʼ

ಹದಿಹರೆಯದವರ ಖಾಸಗಿತನವನ್ನು ರಕ್ಷಿಸುವುದು ಅತ್ಯಂತ ಮುಖ್ಯವಾಗಿದ್ದು, ಎಲ್ಲಾ ದಾಖಲೆಗಳನ್ನು ಗೋಪ್ಯವಾಗಿಡಲು ಆದೇಶದಲ್ಲಿ ಸೂಚನೆ ನೀಡಲಾಗಿದೆ. ಇದು ಸಂತ್ರಸ್ತೆಯ ಸಾಮಾಜಿಕ ಘನತೆಯನ್ನು ಕಾಪಾಡಲು ನೆರವಾಗುತ್ತದೆ.


Click the Play button to hear this message in audio format

ರಾಜ್ಯದಲ್ಲಿ ಹದಿಹರೆಯದವರಲ್ಲಿ (10-18 ವರ್ಷ) ಕಂಡುಬರುವ ಗರ್ಭಧಾರಣೆಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಇಂತಹ ಪ್ರತಿಯೊಂದು ಪ್ರಕರಣದ ಮೇಲೆ ಕಡ್ಡಾಯವಾಗಿ ಲೆಕ್ಕಪರಿಶೋಧನೆ ನಡೆಸಲು ಆದೇಶಿಸಿದೆ. ಈ ಆದೇಶವು ಕೇವಲ ಅಂಕಿ-ಅಂಶಗಳ ಸಂಗ್ರಹ ಮಾತ್ರವಲ್ಲದೇ, ಹದಿಹರೆಯದವರ ಆರೋಗ್ಯ ಹಕ್ಕುಗಳ ರಕ್ಷಣೆ ಮತ್ತು ಸಾಮಾಜಿಕ ಸಬಲೀಕರಣದ ಉದ್ದೇಶವನ್ನು ಹೊಂದಿದೆ.

ಹದಿಹರೆಯದ ಗರ್ಭಧಾರಣೆಯು ಕೇವಲ ವೈದ್ಯಕೀಯ ಸಮಸ್ಯೆಯಲ್ಲ, ಅದು ಒಂದು ಗಂಭೀರ ಸಾಮಾಜಿಕ-ಆರ್ಥಿಕ ಸವಾಲಾಗಿದೆ. ಹದಿಹರೆಯದ ತಾಯಂದಿರಲ್ಲಿ ಹೆರಿಗೆಯ ಸಮಯದಲ್ಲಿ ತೊಂದರೆಗಳು ಹೆಚ್ಚಿರುತ್ತವೆ ಮತ್ತು ನವಜಾತ ಶಿಶುಗಳ ಆರೋಗ್ಯದ ಮೇಲೆಯೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಗರ್ಭಧಾರಣೆಯ ಕಾರಣದಿಂದಾಗಿ ಹೆಚ್ಚಿನ ಬಾಲ ಗರ್ಭಿಣಿಯರು ಅರ್ಧಕ್ಕೇ ಶಾಲೆಯನ್ನು ಬಿಡುತ್ತಾರೆ. ಇದು ಅವರ ಭವಿಷ್ಯದ ಉದ್ಯೋಗಾವಕಾಶಗಳನ್ನು ಕುಂಠಿತಗೊಳಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹದಿಹರೆಯದ ಗರ್ಭಧಾರಣೆಯಲ್ಲಿ ಸುಮಾರು ಶೇ.50 ರಷ್ಟು ಉದ್ದೇಶಪೂರ್ವಕವಲ್ಲದ ಗರ್ಭಧಾರಣೆಗಳಾಗಿರುತ್ತವೆ. ಹದಿಹರೆಯದ ಗರ್ಭಧಾರಣೆಯು ರಾಜ್ಯದಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ಬಾಲ್ಯ ವಿವಾಹ ಪಿಡುಗಾಗಿ ಪರಿಣಮಿಸಿವೆ.

ಕಡ್ಡಾಯ ಲೆಕ್ಕಪರಿಶೋಧನೆಯ ಅನುಷ್ಠಾನ ಪ್ರಕ್ರಿಯೆ

ಸರ್ಕಾರವು ಈ ಸಮಸ್ಯೆಯನ್ನು ಮೂಲದಿಂದಲೇ ಹೋಗಲಾಡಿಸಲು ಕ್ರಮಬದ್ಧವಾದ ವ್ಯವಸ್ಥೆಯನ್ನು ರೂಪಿಸಿದೆ. 10 ರಿಂದ 18 ವರ್ಷ ವಯಸ್ಸಿನ ಹುಡುಗಿಯರಲ್ಲಿ ಸಂಭವಿಸುವ ಎಲ್ಲಾ ಗರ್ಭಧಾರಣೆಗಳನ್ನು ತಾಲ್ಲೂಕು ಆರೋಗ್ಯ ಅಧಿಕಾರಿಗಳು ಕಡ್ಡಾಯವಾಗಿ ಲೆಕ್ಕಪರಿಶೋಧನೆಗೆ ಒಳಪಡಿಸಬೇಕು. ಸರ್ಕಾರಿ ಅಥವಾ ಖಾಸಗಿ ಯಾವುದೇ ಆರೋಗ್ಯ ಸಂಸ್ಥೆಯಿರಲಿ, ಅಂತಹ ಪ್ರಕರಣಗಳು ಕಂಡುಬಂದಲ್ಲಿ ಅವುಗಳನ್ನು ಕಡ್ಡಾಯವಾಗಿ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಪೋರ್ಟಲ್‌ನಲ್ಲಿ ದಾಖಲಿಸಬೇಕು. ಇದು ದತ್ತಾಂಶದ ಪಾರದರ್ಶಕತೆ ಮತ್ತು ನಿಖರತೆಯನ್ನು ಖಚಿತಪಡಿಸುತ್ತದೆ.

ಲೆಕ್ಕಪರಿಶೋಧನಾ ಸಮಿತಿಯ ಪಾತ್ರ

ಕ್ಷೇತ್ರ ಮಟ್ಟದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ತಾಲ್ಲೂಕು ಆರೋಗ್ಯ ಅಧಿಕಾರಿ ಅಧ್ಯಕ್ಷರಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಆರೋಗ್ಯ ನಿರೀಕ್ಷಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಶಾಲಾ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಈ ಸಮಿತಿಯು ಪ್ರತಿ ಪ್ರಕರಣದ ಮೂಲ ಕಾರಣಗಳನ್ನು ಪರಿಶೀಲನೆ ನಡೆಸಲಿದೆ. ಕೇವಲ ವೈದ್ಯಕೀಯ ವರದಿ ಪಡೆಯುವುದಷ್ಟೇ ಅಲ್ಲದೆ, ಆ ಹುಡುಗಿಯ ಸಾಮಾಜಿಕ ಮತ್ತು ಕುಟುಂಬದ ಪರಿಸ್ಥಿತಿಯನ್ನು ವಿಶ್ಲೇಷಿಸುವುದು ಈ ಸಮಿತಿಯ ಜವಾಬ್ದಾರಿಯಾಗಿದೆ. ಇದಲ್ಲದೇ, ಮದುವೆಯಾದ ವಯಸ್ಸು ಮತ್ತು ಶೈಕ್ಷಣಿಕ ಸ್ಥಿತಿಗತಿ, ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಆ ಹುಡುಗಿಗೆ ಇದ್ದ ಅರಿವು, ಗರ್ಭನಿರೋಧಕಗಳ ಲಭ್ಯತೆ ಮತ್ತು ಅವುಗಳ ಬಳಕೆ ಬಗ್ಗೆ ಮಾಹಿತಿ ಇತ್ತೇ? ಸಾಮಾಜಿಕ-ಆರ್ಥಿಕ ಹಿನ್ನೆಲೆ ಮತ್ತು ಆ ಕುಟುಂಬವು ಯಾವುದಾದರೂ ದೌರ್ಬಲ್ಯಕ್ಕೆ ಒಳಗಾಗಿದೆಯೇ? ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮ ಅಡಿಯಲ್ಲಿ ಆಕೆಗೆ ಈ ಮೊದಲು ಸೇವೆಗಳು ತಲುಪಿದ್ದವೇ? ಎಂಬುದರ ಕುರಿತು ಸಹ ಪರಿಶೀಲನೆ ನಡೆಸಲಾಗುತ್ತದೆ.

ವರದಿಯು ಕೇವಲ ತಪಾಸಣೆಗೆ ಸೀಮಿತವಾಗದೆ, ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ತಡೆಯಲು ಕ್ರಮಗಳನ್ನು ಸೂಚಿಸಿದೆ. 'ಸ್ನೇಹ ಕೇಂದ್ರ'ಗಳ ಮೂಲಕ ತಾರುಣ್ಯಾವಸ್ಥೆಯ ಆರೋಗ್ಯದ ಬಗ್ಗೆ ತರಬೇತಿ ಮತ್ತು ಸಮಾಲೋಚನೆ ನೀಡುವುದು, ಶಾಲೆಯಿಂದ ಹೊರಗುಳಿದ ಮತ್ತು ವಲಸೆ ಬಂದ ಕುಟುಂಬಗಳ ಹೆಣ್ಣುಮಕ್ಕಳನ್ನು ಮುಂಚಿತವಾಗಿಯೇ ಗುರುತಿಸಿ ಅವರ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಸುರಕ್ಷಿತ ಗರ್ಭಪಾತ ಬಗ್ಗೆ ಸಮಾಲೋಚನೆ ಮತ್ತು ಕಾನೂನುಬದ್ಧ ನೆರವು ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ.

ವಿವಿಧ ಹಂತದಲ್ಲಿ ಮೇಲ್ವಿಚಾರಣೆ

ಸರ್ಕಾರದ ಆದೇಶವನ್ನು ಅನುಷ್ಠಾನಗೊಳಿಸಲು ವಿವಿಧ ಹಂತಗಳಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಾಡಲಿದ್ದು, ರಾಜ್ಯ ಮಟ್ಟದಲ್ಲಿ ಉಪ ನಿರ್ದೇಶಕರು (ಆರ್‌ಕೆಎಸ್‌ಕೆ) ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕರು (ಎನ್‌ಎಚ್‌ಎಂ) ಗಮನಹರಿಸಲಿದ್ದಾರೆ. ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಈ ಕಾರ್ಯಕ್ರಮದ ಪ್ರಗತಿಯನ್ನು ನಿಯತಕಾಲಿಕವಾಗಿ ಪರಿಶೀಲಿಸಬೇಕು ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.

ಗೋಪ್ಯತೆ ಕಾಪಾಡಲು ಸೂಚನೆ

ಹದಿಹರೆಯದವರ ಖಾಸಗಿತನವನ್ನು ರಕ್ಷಿಸುವುದು ಅತ್ಯಂತ ಮುಖ್ಯವಾಗಿದ್ದು, ಎಲ್ಲಾ ದಾಖಲೆಗಳನ್ನು ಗೋಪ್ಯವಾಗಿಡಲು ಆದೇಶದಲ್ಲಿ ಸೂಚನೆ ನೀಡಲಾಗಿದೆ. ಇದು ಸಂತ್ರಸ್ತೆಯ ಸಾಮಾಜಿಕ ಘನತೆಯನ್ನು ಕಾಪಾಡಲು ನೆರವಾಗುತ್ತದೆ. ಈ ಎಲ್ಲಾ ಚಟುವಟಿಕೆಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಈಗಾಗಲೇ ಲಭ್ಯವಿರುವ ಅನುದಾನದಲ್ಲೇ ನಿರ್ವಹಿಸಬೇಕೆಂದು ನಿರ್ದೇಶಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಯಾವುದೇ ಹೆಚ್ಚುವರಿ ಆರ್ಥಿಕ ಹೊರೆಯಾಗುವುದಿಲ್ಲ.

ಖಾಸಗಿ ಆಸ್ಪತ್ರೆಗಳ ಮೇಲೆ ಹದ್ದಿನ ಕಣ್ಣು, ಪೋಕ್ಸೋ ಎಚ್ಚರಿಕೆ!

ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ 18 ವರ್ಷದೊಳಗಿನ ಬಾಲ ಗರ್ಭಿಣಿ ಪ್ರಕರಣಗಳನ್ನು ಪೋಕ್ಸೋ ಕಾಯಿದೆಯಡಿ ಕಡ್ಡಾಯವಾಗಿ ವರದಿ ಮಾಡುವಂತೆ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಇತ್ತೀಚೆಗೆ ಹೊರಡಿಸಿತ್ತು. ಈ ಆದೇಶದ ಮೂಲಕ ಮಕ್ಕಳ ಸುರಕ್ಷತೆ ಮತ್ತು ಲೈಂಗಿಕ ಅಪರಾಧ ತಡೆಗೆ ಸರ್ಕಾರ ಪ್ರಯತ್ನಿಸಿದೆ.

ಹೊಸ ಮಾರ್ಗಸೂಚಿಯ ಅನ್ವಯ, ಯಾವುದೇ ಖಾಸಗಿ ಆಸ್ಪತ್ರೆಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಗರ್ಭಧಾರಣೆ ಪ್ರಕರಣದೊಂದಿಗೆ ಬಂದರೆ, ಚಿಕಿತ್ಸೆ ನೀಡುವ ವೈದ್ಯರು ತಕ್ಷಣವೇ ಈ ಬಗ್ಗೆ ವಿಶೇಷ ಬಾಲ ಪೊಲೀಸ್ ಘಟಕ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಇದರ ಜೊತೆಗೆ ಚೈಲ್ಡ್ ಹೆಲ್ಪ್‌ಲೈನ್ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೂ ಕಡ್ಡಾಯವಾಗಿ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಒಂದು ವೇಳೆ ಪ್ರಕರಣವನ್ನು ಮುಚ್ಚಿಟ್ಟರೆ ಅಥವಾ ವರದಿ ಮಾಡಲು ವಿಫಲವಾದರೆ ಸಂಬಂಧಿತ ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

ಪೋಕ್ಸೋ ಕಾಯಿದೆಯ ಸೆಕ್ಷನ್ 19(1)ರ ಅಡಿಯಲ್ಲಿ ಅಪರಾಧದ ಬಗ್ಗೆ ಮಾಹಿತಿ ಇದ್ದರೂ ವರದಿ ಮಾಡದಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಸೆಕ್ಷನ್ 21(2)ರ ಪ್ರಕಾರ ವರದಿ ಮಾಡದ ಸಂಸ್ಥೆಯ ಮುಖ್ಯಸ್ಥರಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಆದ್ದರಿಂದ ವೈದ್ಯಕೀಯ ಸಂಸ್ಥೆಗಳು ತನಿಖಾ ಅಧಿಕಾರಿಗಳಿಗೆ ಪೂರ್ಣ ಸಹಕಾರ ನೀಡಬೇಕು ಮತ್ತು ರೋಗಿಯ ಗೌಪ್ಯತೆಯನ್ನು ಕಾಪಾಡಬೇಕು ಎಂದು ಆದೇಶದಲ್ಲಿ ಸೂಚನೆ ನೀಡಲಾಗಿತ್ತು.

Read More
Next Story