ಕ್ರೀಡೆ ಪ್ರೋತ್ಸಾಹಿಸಲು ಶಾಲಾ ಮಕ್ಕಳಿಗೆ ಶೇ25 ಹಾಜರಾತಿ ಮತ್ತು 10 ಗ್ರೇಸ್ ಅಂಕಗಳು: ಸಿಎಂ ಭರವಸೆ
ಶಾಲಾ ಮಕ್ಕಳು ಕ್ರೀಡೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಶೇ25 ರಷ್ಟು ಹಾಜರಾತಿ ಮತ್ತು 10 ಗ್ರೇಸ್ ಮಾರ್ಕ್ ನೀಡುವಂತೆ ನಿಯಮ ರೂಪಿಸಲುಪರಿಶೀಲನೆ ನಡೆಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಶಾಲಾ ಮಕ್ಕಳು ಕ್ರೀಡೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಕ್ರೀಡಾಳು ಮಕ್ಕಳಿಗೆ ಶೇ25 ರಷ್ಟು ಹಾಜರಾತಿ ಮತ್ತು 10 ಗ್ರೇಸ್ ಮಾರ್ಕ್ ನೀಡುವಂತೆ ನಿಯಮ ರೂಪಿಸುವ ಸಂಬಂಧ ಗಂಭೀರವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ಒಲಂಪಿಕ್ ಸಂಸ್ಥೆ ಯವನಿಕಾದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಕ್ರೀಡಾಪಟುಗಳಿಗೆ ಪ್ರಶಸ್ತಿಗಳನ್ನು ವಿತರಿಸಿದ ಸಂದರ್ಭದಲ್ಲಿ ಈ ಮಾಹಿತಿ ನೀಡಿದರು.
ಒಲಂಪಿಕ್ ಸಂಸ್ಥೆ ಅಧ್ಯಕ್ಷರಾದ ಗೋವಿಂದರಾಜು ಅವರು ಶಾಲಾ ಮಕ್ಕಳು ಕ್ರೀಡೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಹಾಜರಾತಿಯಲ್ಲಿ ವಿನಾಯಿತಿ ಮತ್ತು ಗ್ರೇಸ್ ಅಂಕಗಳನ್ನು ನೀಡುವ ಸಂಬಂಧ ಮುಖ್ಯಮಂತ್ರಿ ಗಮನ ಸೆಳೆದರು ಈ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬೇಡಿಕೆಗಳು ನ್ಯಾಯೋಚಿತವಾಗಿವೆ. ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
"ರಾಜ್ಯದ ಕ್ರೀಡಾಪಟುಗಳಿಗೆ ಅಗತ್ಯ ಸವಲತ್ತು-ನೆರವು ನೀಡಲು ನಾನು ಸದಾ ಸಿದ್ದ. ರಾಜ್ಯ ಬಜೆಟ್ ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ನಿರಂತರ ಅನುದಾನ ನೀಡಲಾಗಿದೆ. ರಾಜ್ಯದಿಂದ ಯಾರಾದರೂ ಒಲಂಪಿಕ್ಸ್ ನಲ್ಲಿ ದೇಶಕ್ಕೆ ಒಂದು ಚಿನ್ನ ತರಬೇಕು," ಎಂದು ಆಶಿಸಿದ ಅವರು, "ಚಿನ್ನದ ಪದಕ ಪಡೆದವರಿಗೆ 6 ಕೋಟಿ ಹಣ ಮೀಸಲಿಟ್ಟಿದ್ದೀವಿ. ಬೆಳ್ಳಿ ಪದಕ ಪಡೆದವರಿಗೆ 4 ಕೋಟಿ ಹಣ ಇಟ್ಟಿದ್ದೇವೆ. ಆದರೆ ಯಾರೂ ಪದಕ ತರ್ತಾನೇ ಇಲ್ಲ," ಎಂದು ಬೇಸರ ವ್ಯಕ್ತಪಡಿಸಿದರು..
ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಬೇಕು ಎನ್ನುವ ಪ್ರೋತ್ಸಾಹದಾಯಕ ಉದ್ದೇಶದಿಂದ ಕರ್ನಾಟಕ ಒಲಂಪಿಕ್ ಸಂಸ್ಥೆ 22 ವರ್ಷಗಳಿಂದ ಈ ಪ್ರಶಸ್ತಿಗಳನ್ನು ನೀಡುತ್ತಿದೆ. ಮುಂದಿನ ಬಜೆಟ್ನಲ್ಲಿ ಕ್ರೀಡಾಕ್ಷೇತ್ರಕ್ಕೆ ಅಗತ್ಯವಾದ ಎಲ್ಲವನ್ನೂ ಸೇರಿಸಲಾಗುವುದು. ನಾನು ರಾಜ್ಯದ ಕ್ರೀಡಾಪಟುಗಳಿಗೆ ಅಗತ್ಯ ಇರುವ ಎಲ್ಲಾ ಅನುಕೂಲ ಕಲ್ಪಿಸಿಕೊಡಲು ನಾನು ಸಿದ್ಧ. ರಾಜ್ಯದ ಪಟುಗಳು ದೇಶಕ್ಕೆ ಒಲಂಪಿಕ್ಸ್ ನಲ್ಲಿ ಚಿನ್ನ ತರಲಿ ಎಂದು ಆಶಿಸಿದರು.