18 ವರ್ಷದೊಳಗಿನ ಮಕ್ಕಳಿಗೂ ಬೇಕು ವಿಮಾ ಸುರಕ್ಷತೆ : ಪ್ರಧಾನಿ ನರೇಂದ್ರ ಮೋದಿಗೆ ಪತ್ರ
x

18 ವರ್ಷದೊಳಗಿನ ಮಕ್ಕಳಿಗೂ ಬೇಕು ವಿಮಾ ಸುರಕ್ಷತೆ : ಪ್ರಧಾನಿ ನರೇಂದ್ರ ಮೋದಿಗೆ ಪತ್ರ

ಪಿಎಂಎಸ್‌ಬಿವೈ ಮತ್ತು ಬಿಎಂಜೆಜೆಬಿವೈ ಯೋಜನೆಗಳನ್ನು 18 ವರ್ಷದೊಳಗಿನ ಮಕ್ಕಳಿಗೂ ವಿಸ್ತರಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ. ಟಿ. ಆಗ್ರಹಿಸಿದ್ದಾರೆ.


Click the Play button to hear this message in audio format

ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಕ್ಕಳು ಅನೇಕ ರೀತಿಯ ಅಪಾಯಗಳಿಗೆ ತುತ್ತಾಗುತ್ತಿದ್ದಾರೆ. ಪ್ರಸ್ತುತ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಭ್ಯವಿರುವ 'ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ' ಮತ್ತು 'ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ'ಗಳನ್ನು 18 ವರ್ಷದೊಳಗಿನ ಮಕ್ಕಳಿಗೂ ವಿಸ್ತರಿಸಬೇಕು ಎಂಬುದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯರಾದ ಡಾ. ತಿಪ್ಪೇಸ್ವಾಮಿ ಕೆ. ಟಿ. ಆಗ್ರಹವಾಗಿದೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪಿಎಂಎಸ್‌ಬಿವೈ ಮತ್ತು ಬಿಎಂಜೆಜೆಬಿವೈ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರ್ಥಿಕ ರಕ್ಷಣೆ ನೀಡುವಲ್ಲಿ ಯಶಸ್ವಿಯಾಗಿವೆ. ಆದರೆ, ಈ ಯೋಜನೆಗಳ ಲಾಭ ಪಡೆಯಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಎಂಬ ನಿಯಮವಿದೆ. ದುರದೃಷ್ಟವಶಾತ್, ಅಪಘಾತಗಳು ವಯಸ್ಸನ್ನು ನೋಡಿ ಬರುವುದಿಲ್ಲ. ರಸ್ತೆ ಅಪಘಾತಗಳು, ನೀರಿನಲ್ಲಿ ಮುಳುಗುವಿಕೆ, ವಿದ್ಯುತ್ ಅವಘಡಗಳು ಅಥವಾ ಬೆಂಕಿ ಅನಾಹುತಗಳಂತಹ ಘಟನೆಗಳಲ್ಲಿ ಪ್ರತಿವರ್ಷ ಸಾವಿರಾರು ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಮಗುವು ಕುಟುಂಬದ ಭಾವನಾತ್ಮಕ ಆಸ್ತಿಯಾಗಿರುವುದರ ಜತೆಗೆ ಆ ಕುಟುಂಬದ ಭವಿಷ್ಯದ ಆಧಾರವೂ ಹೌದು. ಮಗುವನ್ನು ಕಳೆದುಕೊಂಡಾಗ ಅಥವಾ ಮಗು ಅಪಘಾತಕ್ಕೀಡಾದಾಗ ಆ ಕುಟುಂಬವು ಅನುಭವಿಸುವ ಮಾನಸಿಕ ವೇದನೆಯ ಜತೆಗೆ ಆರ್ಥಿಕ ಸಂಕಷ್ಟವೂ ಬೆಟ್ಟದಂತಿರುತ್ತದೆ. ಇಂತಹ ಸಂದರ್ಭದಲ್ಲಿ ಯಾವುದೇ ನಿರ್ದಿಷ್ಟ ಆರ್ಥಿಕ ರಕ್ಷಣೆ ಮಕ್ಕಳಿಗಾಗಿ ಇಲ್ಲದಿರುವುದು ಒಂದು ದೊಡ್ಡ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಹಂತದಿಂದ ಹಿಡಿದು 18 ವರ್ಷದವರೆಗಿನ ಎಲ್ಲಾ ಮಕ್ಕಳನ್ನು ಈ ವಿಮಾ ಯೋಜನೆಗಳ ವ್ಯಾಪ್ತಿಗೆ ತರಬೇಕು. ಇದರಿಂದ ಮಗುವಿನ ಆರಂಭಿಕ ಹಂತದಿಂದಲೇ ಅದಕ್ಕೆ ರಾಷ್ಟ್ರೀಯ ಮಟ್ಟದ ವಿಮಾ ರಕ್ಷಣೆ ದೊರೆಯುತ್ತದೆ. ದೇಶದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಈ ಯೋಜನೆಯಡಿ ನೋಂದಾಯಿಸಬೇಕು. ಇದು ಯೋಜನೆಯನ್ನು ತಳಮಟ್ಟಕ್ಕೆ ಕೊಂಡೊಯ್ಯಲು ಮತ್ತು ಯಾವುದೇ ಮಗು ಯೋಜನೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲು ಸಹಕಾರಿಯಾಗುತ್ತದೆ.

ಮಕ್ಕಳು ಸ್ವತಃ ಸಂಪಾದನೆ ಮಾಡುವವರಲ್ಲದ ಕಾರಣ, ಅವರ ಪರವಾಗಿ ವಿಮಾ ಕಂತನ್ನು ಸರ್ಕಾರವೇ ಭರಿಸಬೇಕು ಎಂಬುದು ಅತ್ಯಂತ ತಾರ್ಕಿಕವಾದ ಬೇಡಿಕೆಯಾಗಿದೆ. ಇದು ಸಮಾಜದ ಕಟ್ಟಕಡೆಯ ಮಗುವಿಗೂ ಸಮಾನ ಮತ್ತು ನ್ಯಾಯಯುತ ರಕ್ಷಣೆ ಸಿಗುವಂತೆ ಮಾಡುತ್ತದೆ. ಅನಾಹುತ ಸಂಭವಿಸಿದಾಗ ನೊಂದ ಕುಟುಂಬಗಳು ಕಚೇರಿಗಳಿಂದ ಕಚೇರಿಗೆ ಅಲೆಯುವಂತಾಗಬಾರದು. ಮಕ್ಕಳಿಗಾಗಿ ಒಂದು ವಿಶೇಷ, ಪಾರದರ್ಶಕ ಮತ್ತು ಕಾಲಮಿತಿಯೊಳಗೆ ಹಣ ಪಾವತಿಯಾಗುವ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಶಿಫಾರಸು ಮಾಡಿದ್ದಾರೆ.

ಬಡ ಕುಟುಂಬಗಳಿಗೆ ಆಸರೆ

18 ವರ್ಷದೊಳಗಿನ ಮಕ್ಕಳನ್ನು ವಿಮಾ ವ್ಯಾಪ್ತಿಯಿಂದ ಹೊರಗಿಡುವುದು ಸಾಮಾಜಿಕ ಭದ್ರತೆಯ ಚೌಕಟ್ಟಿನಲ್ಲಿ ಒಂದು ದೊಡ್ಡ ಕಂದಕವನ್ನು ಸೃಷ್ಟಿಸಿದಂತಿದೆ. ಈ ಪ್ರಸ್ತಾವನೆಯು ಜಾರಿಯಾದರೆ ಆ ಕಂದಕವು ಭರ್ತಿಯಾಗಲಿದೆ. ಶ್ರೀಮಂತ ಕುಟುಂಬಗಳು ಖಾಸಗಿ ವಿಮೆಗಳನ್ನು ಮಾಡಿಸಬಲ್ಲವು. ಆದರೆ, ದಿನಗೂಲಿ ನೌಕರರು ಅಥವಾ ಸಣ್ಣ ರೈತರ ಮಕ್ಕಳಿಗೆ ಆಪತ್ತು ಬಂದಾಗ ಹಣದ ಕೊರತೆಯಿಂದ ಉತ್ತಮ ಚಿಕಿತ್ಸೆ ಸಿಗದೆ ಹೋಗಬಹುದು ಅಥವಾ ಅಕಾಲಿಕ ಮರಣದ ನಂತರ ಆ ಕುಟುಂಬವು ಸಾಲದ ಸುಳಿಗೆ ಸಿಲುಕಬಹುದು. ಸರ್ಕಾರದ ಈ ವಿಮಾ ಯೋಜನೆಗಳು ಅಂತಹ ಕುಟುಂಬಗಳಿಗೆ ಆರ್ಥಿಕ ಸಂಜೀವಿನಿಯಾಗಲಿವೆ. ಶಾಲೆಗಳ ಮೂಲಕ ವಿಮೆ ಜಾರಿಗೆ ತರುವುದರಿಂದ ಶಾಲಾ ದಾಖಲಾತಿ ಮತ್ತು ಹಾಜರಾತಿಯೂ ವೃದ್ಧಿಯಾಗಬಹುದು. ಪೋಷಕರಲ್ಲಿ ತಮ್ಮ ಮಗುವಿನ ಭವಿಷ್ಯದ ಬಗ್ಗೆ ಒಂದು ರೀತಿಯ ಭರವಸೆ ಮೂಡುತ್ತದೆ ಎಂದಿದ್ದಾರೆ.

ಯೋಜನೆಯನ್ನು ಜಾರಿಗೆ ತರುವಲ್ಲಿ ಸರ್ಕಾರಕ್ಕೆ ಕೆಲವು ಸವಾಲುಗಳು ಎದುರಾಗಬಹುದು. ಕೋಟ್ಯಂತರ ಮಕ್ಕಳ ಪ್ರೀಮಿಯಂ ಪಾವತಿಸುವುದು ಬೊಕ್ಕಸಕ್ಕೆ ಹೊರೆಯಾಗಬಹುದು. ಆದರೆ, ಇದನ್ನು ಶಿಕ್ಷಣ ಸೆಸ್ ಅಥವಾ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ ಮೂಲಕ ಸರಿದೂಗಿಸಬಹುದು. ಶಾಲೆಗಳ ಮೂಲಕ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡುವ ಮೂಲಕ ವಿದ್ಯಾರ್ಥಿಗಳ ದತ್ತಾಂಶವನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ ಎಂದು ಹೇಳಿದ್ದಾರೆ.

ಮಕ್ಕಳಿಗೆ ಸುರಕ್ಷಿತ ಬಾಲ್ಯವನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯ ಇದೆ. ಅಲ್ಲದೇ, ಯೋಜನೆಯು ದೇಶವನ್ನು ಜಾಗತಿಕ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಲಿದೆ.


ಶಾಲಾ ಮಕ್ಕಳ ಅವಘಡಗಳು ಮತ್ತು ವಿಮಾ ಸೌಲಭ್ಯದ ಬಗ್ಗೆ ದ ಫೆಡರಲ್‌ ಕರ್ನಾಟಕ ಎರಡು ವಿಶೆಷ ವರದಿಗಳನ್ನು ಪ್ರಕಟಿಸಿತ್ತು.

ಅವುಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ...

Insurance Policy| ಹಾವು ಕಡಿತ, ಅಪಘಾತ, ಅವಘಡ... ಶಾಲೆ ಮಕ್ಕಳ ಬದುಕಿಗೆ ಬೇಕಿದೆ ಕೇರಳ ಮಾದರಿ ʻವಿಮಾʼ ಭಾಗ್ಯ

ರಾಜ್ಯದಲ್ಲಿ ಶಾಲಾ ಮಕ್ಕಳಿಗೂ ವಿಮೆ? ಕೇರಳ ಮಾದರಿ ಅನುಷ್ಠಾನ?


Read More
Next Story