
ರಾಜ್ಯದಲ್ಲಿ ಶಾಲಾ ಮಕ್ಕಳಿಗೂ ವಿಮೆ? ಕೇರಳ ಮಾದರಿ ಅನುಷ್ಠಾನ?
ಶಾಲಾ ಮಕ್ಕಳಿಗೆ ಜೀವವಿಮೆ, ಅಪಘಾತ ವಿಮೆ ಎರಡೂ ಅಗತ್ಯ ಇದೆ. ಕೇವಲ ಜೀವ ವಿಮೆ ಇದ್ದರೆ ಅದು ಮರಣದ ಸಂದರ್ಭದಲ್ಲಿ ಮಾತ್ರ ಪರಿಹಾರ ನೀಡುತ್ತದೆ. ಹೀಗಾಗಿ ಎರಡೂ ವಿಮೆಗಳನ್ನು ಸರ್ಕಾರ ಒದಗಿಸಬೇಕಾಗಿದೆ.
ಘಟನೆ 1
ಬೆಂಗಳೂರಿನ ರಿಚರ್ಡ್ಸ್ ಟೌನ್‌ನಲ್ಲಿ 2025ರ ಅ.13ರಂದು 17 ವರ್ಷದ ವಿದ್ಯಾರ್ಥಿ ಶಾಲಾ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಎಷ್ಟು ನಾಜೂಕಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕ್ರೀಡಾಪಟು, ಪ್ರತಿಭಾವಂತ ಎನಿಸಿಕೊಂಡ ವಿದ್ಯಾರ್ಥಿಯೇ ಸಾವಿಗೆ ಶರಣಾಗುತ್ತಿರುವುದು ಯಶಸ್ಸಿನ ಒತ್ತಡ ಎಷ್ಟು ಭೀಕರವಾಗಿದೆ ಎಂಬುದನ್ನು ತೋರಿಸುತ್ತದೆ.
ಘಟನೆ 2
ಕಲಬುರಗಿ ಜಿಲ್ಲೆಯ ಅಫಜಲ್ಪುರದಲ್ಲಿ 2023ರ ನ.20ರಂದು 8 ವರ್ಷದ ಮಹಾಂತಮ್ಮ ಮತ್ತು 2023ರ ಜುಲೈ ತಿಂಗಳಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ತರೂರಿನಲ್ಲಿ ಸಾಂಬಾರ್ ಪಾತ್ರೆಗೆ ಬಿದ್ದ ಬಾಲಕಿಯರ ಪ್ರಕರಣಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿವೆ. ಕುದಿಯುವ ಸಾಂಬಾರ್ ಪಾತ್ರೆಯಲ್ಲಿ ಬಿದ್ದು ನಾಲ್ಕು ದಿನಗಳ ಕಾಲ ಸಾವು-ನೋವಿನ ನಡುವೆ ಹೋರಾಡಿ ಉಸಿರು ಚೆಲ್ಲುವ ಮಗುವಿನ ಯಾತನೆ ಕಲ್ಪಿಸಿಕೊಳ್ಳಲೂ ಅಸಾಧ್ಯ. ಇದು ಕೇವಲ ಅಪಘಾತವಲ್ಲ, ಸುರಕ್ಷತಾ ಕ್ರಮಗಳ ಕಡೆಗಣನೆಯಿಂದ ನಡೆದ ಕೊಲೆ ಎನ್ನುವ ಆರೋಪಗಳು ಕೇಳಿಬಂದವು.
ಘಟನೆ 3
ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ರಾಯಚೂರಿನಲ್ಲಿ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿಗಳು ಸಾವನ್ನಪ್ಪಿರುವುದು ಶಾಲಾ ಮೂಲಸೌಕರ್ಯಗಳ ಸ್ಥಿತಿಯನ್ನು ತೋರಿಸುತ್ತದೆ. ನೀರು ತರಲು ಹೋದಾಗ ಇದೇ ವರ್ಷ ಜ.30ರಂದು ತನುಶ್ರೀ ಎಂಬಾಕೆ ಮೃತಪಟ್ಟಿದ್ದಳು. ಅಂತೆಯೇ 2019ರ ಸೆ.28ರಂರು ಮಸ್ಕಿ ತಾಲೂಕಿನ ಬಸಾಪುರದ ಸರ್ಕಾರಿ ಶಾಲೆಯಲ್ಲಿ ಅನಿಲ್ ಕುಮಾರ್ ಎಂಬಾತ ಸಾವನ್ನಪ್ಪಿದ್ದ.
ಇಂತಹ ಸರಣಿ ದುರಂತಗಳು ರಾಜ್ಯದಲ್ಲಿ ನೂರಾರು ನಡೆದಿವೆ. ಸಂವಿಧಾನದ 21ನೇ ಅನುಚ್ಛೇದದಡಿ ಪ್ರತಿ ಮಗುವಿಗೂ ಸುರಕ್ಷಿತವಾಗಿ ಬದುಕುವ ಹಕ್ಕಿದೆ. ಆದರೆ, ವಿವರಿಸಿದ ಘಟನೆಗಳು ಈ ಹಕ್ಕಿನ ಉಲ್ಲಂಘನೆಯಾಗಿವೆ.
ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳು ಶಾಲಾ ಆವರಣದ ಒಳಗೂ ಮತ್ತು ಹೊರಗೂ ಎದುರಿಸುತ್ತಿರುವ ಭದ್ರತೆಯ ಸವಾಲುಗಳು ಆತಂಕಕಾರಿಯಾಗಿವೆ. ರಸ್ತೆ ಅಪಘಾತಗಳು, ಶಾಲಾ ಆವರಣದಲ್ಲಿ ಸಂಭವಿಸುವ ಅವಘಡಗಳು ಮತ್ತು ಮೂಲಸೌಕರ್ಯಗಳ ಕೊರತೆಯಿಂದಾಗುವ ದುರಂತಗಳು ಮಕ್ಕಳ ಜೀವಕ್ಕೆ ಸಂಚಕಾರ ತರುತ್ತಿವೆ.
ಈ ಹಿನ್ನೆಲೆಯಲ್ಲಿ, ಕೇರಳ ಸರ್ಕಾರವು ಜಾರಿಗೆ ತಂದಿರುವ 'ವಿದ್ಯಾರ್ಥಿ ವಿಮೆ ಯೋಜನೆ'ಯ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸಿಕೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಮಹತ್ವದ ಶಿಫಾರಸುಗಳನ್ನು ಮಾಡಿದೆ. ಈ ಸಂಬಂಧ ಆಯೋಗದ ಸದಸ್ಯ ಡಾ. ಕೆ.ಟಿ. ತಿಪ್ಪೇಸ್ವಾಮಿ, ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರ ಅತ್ಯಂತ ಮಹತ್ವದ್ದಾಗಿದೆ.
ಶಾಲಾ ಮಕ್ಕಳ ಸುರಕ್ಷತೆಯನ್ನು ಕೇವಲ ರಸ್ತೆ ನಿಯಮಗಳಿಗೆ ಸೀಮಿತಗೊಳಿಸದೆ, ಅವರ ಜೀವನಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವ ಅಗತ್ಯತೆ ಇದೆ. ಶಾಲಾ ಆವರಣದೊಳಗೂ ಅನೇಕ ಅವಘಡಗಳು ಸಂಭವಿಸುತ್ತಿವೆ. ಬಿಸಿಯೂಟದ ಪಾತ್ರೆಗಳಿಗೆ ಬಿದ್ದು ಗಾಯಗೊಳ್ಳುವುದು, ಶಾಲಾ ಪ್ರವಾಸ ಮತ್ತು ಕ್ರೀಡಾಕೂಟಗಳ ಸಮಯದಲ್ಲಿ ಸಂಭವಿಸುವ ಅಪಘಾತಗಳು, ವಿದ್ಯುತ್ ಅವಘಡಗಳು ಮತ್ತು ಶಿಥಿಲಗೊಂಡ ಶಾಲಾ ಕಟ್ಟಡಗಳ ಕುಸಿತ ಸೇರಿದಂತೆ ಹಲವು ದುರ್ಘಟನೆಗಳು ರಾಜ್ಯದ ಶಾಲೆಗಳಲ್ಲಿ ಆಗಾಗ್ಗೆ ಜರುಗುತ್ತಲೇ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ದುಬಾರಿ ವೈದ್ಯಕೀಯ ಚಿಕಿತ್ಸೆಯನ್ನು ಭರಿಸಲಾಗದೆ ಸಂಕಷ್ಟಕ್ಕೆ ಸಿಲುಕುತ್ತಿವೆ. ಹೀಗಾಗಿ ರಾಜ್ಯ ಸರ್ಕಾರವು ಶಾಲಾ ವಿದ್ಯಾರ್ಥಿಗಳಿಗೆ ವಿಮೆ ಪರಿಹಾರ ನೀಡಬೇಕು. ಇದರಿಂದ ಶಾಲಾ ಮಕ್ಕಳ ಚಿಕಿತ್ಸೆಗೆ ಸಹಾಯವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕು ಎಂದು ಆಗ್ರಹಿಸಲಾಗಿದೆ.
ಕೇರಳ ಸರ್ಕಾರ ಶಾಲಾ ಮಕ್ಕಳಿಗೆ ಭರವಸೆಯ ಕಿರಣ
ಕೇರಳ ಸರ್ಕಾರವು ತನ್ನ 2026-27ನೇ ಸಾಲಿನ ಬಜೆಟ್‌ನಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಆ ರಾಜ್ಯದ ಸುಮಾರು 43 ಲಕ್ಷ ವಿದ್ಯಾರ್ಥಿಗಳಿಗೆ ಅನ್ವಯವಾಗುವಂತೆ ಸಮಗ್ರ 'ಅಪಘಾತ ಮತ್ತು ಜೀವ ವಿಮಾ ಯೋಜನೆ'ಯನ್ನು ಘೋಷಿಸಿದೆ. ಈ ಯೋಜನೆಗಾಗಿ ಸುಮಾರು 15 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಲಾಗಿದೆ. 1ರಿಂದ 12ನೇ ತರಗತಿಯವರೆಗಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುಮೋದಿತ ಶಾಲಾ ವಿದ್ಯಾರ್ಥಿಗಳನ್ನು ಈ ಯೋಜನೆಯು ಒಳಗೊಳ್ಳುತ್ತದೆ. ರಾಜ್ಯ ವಿಮಾ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಜಂಟಿ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಕೇರಳದ ಈ ಮಾದರಿಯು ವಿದ್ಯಾರ್ಥಿಯ ಮರಣದ ಸಂದರ್ಭದಲ್ಲಿ ಮಾತ್ರವಲ್ಲದೆ, ತೀವ್ರ ಗಾಯ ಅಥವಾ ಅಂಗವೈಕಲ್ಯ ಸಂಭವಿಸಿದಾಗಲೂ ಆರ್ಥಿಕ ನೆರವು ನೀಡುವ ಉದ್ದೇಶವನ್ನು ಹೊಂದಿದೆ. ಇದೇ ಮಾದರಿಯಲ್ಲಿ ರಾಜ್ಯದ ಶಿಕ್ಷಣ ಇಲಾಖೆಯಡಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕಾಗಿದೆ ಎಂಬುದು ಆಯೋಗದ ಒತ್ತಾಯವಾಗಿದೆ.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಶಿಫಾರಸುಗಳು
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ಕೆ.ಟಿ. ತಿಪ್ಪೇಸ್ವಾಮಿ ರಾಜ್ಯ ಸರ್ಕಾರಕ್ಕೆ ನೀಡಿರುವ ಪತ್ರದಲ್ಲಿ ಐದು ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ:
1. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಮಾನ್ಯತೆ ಪಡೆದ ಖಾಸಗಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈ ಯೋಜನೆ ಸ್ವಯಂಚಾಲಿತವಾಗಿ ಅನ್ವಯವಾಗಬೇಕು. 2. ಕೇವಲ ಅಪಘಾತಗಳಷ್ಟೇ ಅಲ್ಲದೆ, ಶಾಲಾ ಆವರಣ, ಬಿಸಿಯೂಟಕ್ಕೆ ಸಂಬಂಧಿಸಿದ ಅವಘಡಗಳು, ಕ್ರೀಡಾಕೂಟ ಮತ್ತು ಪ್ರವಾಸದ ಸಮಯದಲ್ಲಿ ಸಂಭವಿಸುವ ಘಟನೆಗಳಿಗೂ ಪರಿಹಾರ ಸಿಗಬೇಕು. 3. ಗಂಭೀರ ಗಾಯಗಳಿಗೆ ತಗಲುವ ಚಿಕಿತ್ಸಾ ವೆಚ್ಚ, ಶಾಶ್ವತ ಅಂಗವೈಕಲ್ಯಕ್ಕೆ ನಿಗದಿತ ಪರಿಹಾರ ಮತ್ತು ಸಾವು ಸಂಭವಿಸಿದಲ್ಲಿ ತಕ್ಷಣದ ಆರ್ಥಿಕ ನೆರವು ನೀಡಬೇಕು. 4. ಶಿಕ್ಷಣ ಇಲಾಖೆಯು ಸಾರ್ವಜನಿಕ ವಿಮಾ ಕಂಪನಿಗಳ ಮೂಲಕ ಈ ಯೋಜನೆಯನ್ನು ರೂಪಿಸಬೇಕು ಮತ್ತು ವಿಮೆಯ ಪ್ರೀಮಿಯಂ ಮೊತ್ತವನ್ನು ಸರ್ಕಾರವೇ ಪಾವತಿಸಬೇಕು. 5. ಪ್ರತಿಯೊಂದು ಶಾಲಾ-ಕಾಲೇಜಿನಲ್ಲೂ ವಿಮೆ ಯೋಜನೆಯ ವಿವರಗಳನ್ನು ಪ್ರದರ್ಶಿಸಬೇಕು ಮತ್ತು ಜಿಲ್ಲಾ ಮಟ್ಟದಲ್ಲಿ ಇದರ ಮೇಲ್ವಿಚಾರಣೆ ನಡೆಯಬೇಕು. |
ಜೀವ ವಿಮೆ, ಅಪಘಾತ ವಿಮೆ ಎರಡೂ ಅಗತ್ಯ
ಶಾಲಾ ಮಕ್ಕಳಿಗೆ ಜೀವವಿಮೆ ಮತ್ತು ಅಪಘಾತ ವಿಮೆ ಎರಡೂ ಅಗತ್ಯ ಇದೆ. ಕೇವಲ ಜೀವ ವಿಮೆ ಇದ್ದರೆ ಅದು ಮರಣದ ಸಂದರ್ಭದಲ್ಲಿ ಮಾತ್ರ ಪರಿಹಾರ ನೀಡುತ್ತದೆ. ಶಾಲಾ ಅವಘಡದಲ್ಲಿ ಮಕ್ಕಳು ಹೆಚ್ಚಾಗಿ ತೀವ್ರವಾಗಿ ಗಾಯಗೊಳ್ಳುತ್ತಾರೆ. ಶಾಶ್ವತ ಅಥವಾ ತಾತ್ಕಾಲಿಕ ಅಂಗವೈಕಲ್ಯಕ್ಕೊಳಗಾಗುತ್ತಾರೆ. ದೀರ್ಘಕಾಲದ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವ ಸ್ಥಿತಿಗೆ ತಲುಪುತ್ತಾರೆ. ಇಂತಹ ಸಮಯದಲ್ಲಿ ಅಪಘಾತ ವಿಮೆ ಮಾತ್ರವೇ ಚಿಕಿತ್ಸಾ ವೆಚ್ಚಕೆಕ ಆರ್ಥಿಕ ವೆಚ್ಚ ನೀಡಲಿದೆ. ಹೀಗಾಗಿ ಜೀವವಿಮೆ ಮತ್ತು ಅಪಘಾತ ವಿಮೆ ಎರಡನ್ನೂ ಒಳಗೊಂಡ ಸಮಗ್ರ ಯೋಜನೆ ಅನಿವಾರ್ಯವಾಗಿದೆ.
ಈ ಯೋಜನೆಯು ಕೇವಲ ಆರ್ಥಿಕ ಸಹಾಯವಲ್ಲದೇ, ಹಲವು ಕಾನೂನಾತ್ಮಕ ಮತ್ತು ಸಾಮಾಜಿಕ ಉದ್ದೇಶಗಳನ್ನು ಒಳಗೊಂಡಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಸುರಕ್ಷಿತ ವಾತಾವರಣ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಆರ್ಥಿಕವಾಗಿ ಹಿಂದುಳಿದ ಪೋಷಕರು ತಮ್ಮ ಮಕ್ಕಳಿಗೆ ಅಪಘಾತವಾದಾಗ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಸಾಲದ ಸುಳಿಯಲ್ಲಿ ಸಿಲುಕಿಸುವುದನ್ನು ಈ ಯೋಜನೆಯು ತಪ್ಪಿಸಲಿದೆ ಎಂಬುದು ಆಯೋಗದ ವಾದವಾಗಿದೆ.
ಶಿಫಾರಸುಗಳನ್ನು ಸರ್ಕಾರ ಪರಿಗಣಿಸಬೇಕು
ಈ ಬಗ್ಗೆ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಡಾ .ಕೆ.ಟಿ.ತಿಪ್ಪೇಸ್ವಾಮಿ, ಮಕ್ಕಳ ರಕ್ಷಣೆ ಎಂಬುದು ಕೇವಲ ಮಾನವೀಯತೆಯ ಪ್ರಶ್ನೆಯಲ್ಲ, ಅದು ಸರ್ಕಾರದ ಸಾಂವಿಧಾನಿಕ ಕರ್ತವ್ಯವೂ ಹೌದು. ಮಕ್ಕಳು ಭಯವಿಲ್ಲದೆ, ಅಪಾಯವಿಲ್ಲದ ವಾತಾವರಣದಲ್ಲಿ ಕಲಿಯುವಂತೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಶಾಲಾ ಚಟುವಟಿಕೆಗಳಲ್ಲಿ, ಶಾಲಾ ಆವರಣಗಳಲ್ಲಿ ಸಾಕಷ್ಟು ಮಕ್ಕಳು ವಿವಿಧ ರೀತಿಯ ಅವಘಡಗಳಲ್ಲಿ ಗಾಯಗೊಂಡ ಹಾಗೂ ಸಾವನ್ನಪ್ಪಿದ ಘಟನೆಗಳು ನಡೆದಿವೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ವಿಮೆ ಸಹಾಯವಾಗಬಲ್ಲದು. ಈ ಬಗ್ಗೆ ಆಯೋಗ ಸೂಕ್ತ ಶಿಫಾರಸು ನೀಡಿದೆ. ಇನ್ನಾದರೂ ಕೇರಳ ಮಾದರಿಯಲ್ಲಿ ಶಾಲಾ ಮಕ್ಕಳು ಅವಘಡದಿಂದ ಮೃತಪಟ್ಟರೆ ಕೇರಳ ಮಾದರಿಯಲ್ಲಿ ವಿಮೆ ನೀಡುವತ್ತ ಗಮನರಿಸಬೇಕು ಎಂದು ಹೇಳಿದರು.

