
POCSO Rule|ಖಾಸಗಿ ಆಸ್ಪತ್ರೆಗಳಿಗೆ ಪೋಕ್ಸೋ ಬಿಸಿ; 18 ವರ್ಷದೊಳಗಿನ ಗರ್ಭಿಣಿಯರ ವಿವರ ನೀಡುವುದು ಇನ್ಮುಂದೆ ಕಡ್ಡಾಯ
ಪೋಕ್ಸೋ ಕಾಯಿದೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಬಾಲ ಗರ್ಭಿಣಿ ಪ್ರಕರಣಗಳ ವರದಿ ಕಡ್ಡಾಯ. ನಿಯಮ ಉಲ್ಲಂಘಿಸುವ ವೈದ್ಯರು ಹಾಗೂ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸರ್ಕಾರ ಆದೇಶ.
ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ 18 ವರ್ಷದೊಳಗಿನ ಬಾಲ ಗರ್ಭಿಣಿ ಪ್ರಕರಣಗಳನ್ನು ಪೋಕ್ಸೋ ಕಾಯಿದೆಯಡಿ ಕಡ್ಡಾಯವಾಗಿ ವರದಿ ಮಾಡುವಂತೆ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಆದೇಶದ ಮೂಲಕ ಮಕ್ಕಳ ಸುರಕ್ಷತೆ ಮತ್ತು ಲೈಂಗಿಕ ಅಪರಾಧ ತಡೆಗೆ ಸರ್ಕಾರವು ಬಲವಾದ ಹೆಜ್ಜೆ ಇರಿಸಿದೆ.
ಹೊಸ ಮಾರ್ಗಸೂಚಿಯ ಅನ್ವಯ, ಯಾವುದೇ ಖಾಸಗಿ ಆಸ್ಪತ್ರೆಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರು ಗರ್ಭಧಾರಣೆ ಪ್ರಕರಣದೊಂದಿಗೆ ಬಂದರೆ, ಚಿಕಿತ್ಸೆ ನೀಡುವ ವೈದ್ಯರು ತಕ್ಷಣವೇ ಈ ಬಗ್ಗೆ ವಿಶೇಷ ಬಾಲ ಪೊಲೀಸ್ ಘಟಕ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಇದರ ಜೊತೆಗೆ ಚೈಲ್ಡ್ ಹೆಲ್ಪ್‌ಲೈನ್ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೂ ಕಡ್ಡಾಯವಾಗಿ ವರದಿ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಒಂದು ವೇಳೆ ಪ್ರಕರಣವನ್ನು ಮುಚ್ಚಿಟ್ಟರೆ ಅಥವಾ ವರದಿ ಮಾಡಲು ವಿಫಲವಾದರೆ ಸಂಬಂಧಿತ ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಪೋಕ್ಸೋ ಕಾಯಿದೆಯ ಸೆಕ್ಷನ್ 19(1)ರ ಅಡಿಯಲ್ಲಿ ಅಪರಾಧದ ಬಗ್ಗೆ ಮಾಹಿತಿ ಇದ್ದರೂ ವರದಿ ಮಾಡದಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಸೆಕ್ಷನ್ 21(2)ರ ಪ್ರಕಾರ ವರದಿ ಮಾಡದ ಸಂಸ್ಥೆಯ ಮುಖ್ಯಸ್ಥರಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಆದ್ದರಿಂದ ವೈದ್ಯಕೀಯ ಸಂಸ್ಥೆಗಳು ತನಿಖಾ ಅಧಿಕಾರಿಗಳಿಗೆ ಪೂರ್ಣ ಸಹಕಾರ ನೀಡಬೇಕು ಮತ್ತು ರೋಗಿಯ ಗೌಪ್ಯತೆಯನ್ನು ಕಾಪಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಆಸ್ಪತ್ರೆಯ ಸಿಬ್ಬಂದಿಗೆ ಪೋಕ್ಸೋ ಕಾಯಿದೆಯ ತರಬೇತಿ ಮಾಡ್ಯೂಲ್‌ಗಳನ್ನು ನೀಡುವಂತೆ ಇಲಾಖೆ ಸೂಚಿಸಿದೆ. ಕಡತದ ಸಂಖ್ಯೆ ಡಿಡಿ/ಪೋಕ್ಸೋ/2015-26 (E-2129971) ರ ಅಡಿಯಲ್ಲಿ ಹೊರಬಂದಿರುವ ಈ ಆದೇಶವು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಬಾಲಕಿಯರ ಹಕ್ಕುಗಳ ರಕ್ಷಣೆ ಮತ್ತು ಅಪರಾಧಿಗಳಿಗೆ ಕಾನೂನು ಶಿಕ್ಷೆ ಕೊಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಈ ಕ್ರಮವು ಆರೋಗ್ಯ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸುವ ಸರ್ಕಾರದ ಗಂಭೀರ ಪ್ರಯತ್ನವಾಗಿದೆ.

