By-Elections|ಶಾಮನೂರು, ಮೇಟಿ ನಿಧನ ಬಳಿಕ  ತೆರವಾದ ಕ್ಷೇತ್ರಗಳಲ್ಲಿ ಉಪಚುನಾವಣೆ: ಮಹಿಳೆಯರೇ ನಿರ್ಣಾಯಕ
x
ಇತ್ತೀಚೆಗೆ ನಿಧನರಾದ ಹಿರಿಯ ಕಾಂಗ್ರೆಸ್‌ ಶಾಸಕರಾದ ಶಾಮನೂರು ಶಿವಶಂಕರಪ್ಪ ಮತ್ತು ಎಚ್‌.ವೈ. ಮೇಟಿ ಅವರಿಂದ ತೆರವಾದ ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

By-Elections|ಶಾಮನೂರು, ಮೇಟಿ ನಿಧನ ಬಳಿಕ ತೆರವಾದ ಕ್ಷೇತ್ರಗಳಲ್ಲಿ ಉಪಚುನಾವಣೆ: ಮಹಿಳೆಯರೇ ನಿರ್ಣಾಯಕ

ಕಾಂಗ್ರೆಸ್‌ನ ಮುಖಂಡರಾದ ಶಾಮನೂರು ಶಿವಶಂಕರಪ್ಪ, ಎಚ್‌.ವೈ.ಮೇಟಿ ನಿಧನದಿಂದಾಗಿ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ.


Click the Play button to hear this message in audio format

ಕಾಂಗ್ರೆಸ್‌ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಮತ್ತು ಶಾಸಕ ಎಚ್‌.ವೈ. ಮೇಟಿ ನಿಧನದಿಂದಾಗಿ ತೆರವಾಗಿರುವ ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಸಿದ್ಧತೆ ಕೈಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ.

ವಿಶೇಷವೆಂದರೆ ಎರಡೂ ಕ್ಷೇತ್ರದಲ್ಲಿ ಪುರುಷ ಮತದಾರರರಿಗಿಂತ ಮಹಿಳಾ ಮತದಾರರು ಸಂಖ್ಯೆ ಹೆಚ್ಚಿದ್ದಾರೆ.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,58,118 ಮತದಾರರು ಇದ್ದು, 1,26,233 ಪುರುಷ ಮತದಾರರು ಇದ್ದಾರೆ. 1,31,863 ಮಹಿಳಾ ಮತದಾರರಿದ್ದಾರೆ. ಅಂತೆಯೇ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,32,564 ಮತದಾರರಿದ್ದಾರೆ, ಮಹಿಳಾ ಮತದಾರರು 1,18,355 ಇದ್ದರೆ, ಪುರುಷ ಮತದಾರರು. 1,14,165 ಇದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ 18-19 ವರ್ಷ ವಯಸ್ಸಿನ 3,538 ಹೊಸ ಮತದಾರರು ನೋಂದಣಿಯಾಗಿದ್ದು, 2,582 ವಿಕಲಚೇತನ ಮತದಾರರು ಮತ್ತು 100 ವರ್ಷ ದಾಟಿದ 38 ಹಿರಿಯ ಮತದಾರರು ಪಟ್ಟಿಯಲ್ಲಿದ್ದಾರೆ. 85 ವರ್ಷ ದಾಟಿದವರು 3039 ಮತದಾರರಿದ್ದಾರೆ. 22 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 2,204 ಹೊಸ ಯುವ ಮತದಾರರು ಸೇರ್ಪಡೆಯಾಗಿದ್ದಾರೆ. 44 ತೃತೀಯ ಲಿಂಗಿ ಮತದಾರರಿದ್ದಾರೆ. ವಿಕಲಚೇತನ ಮತದಾರರು 2452 ಮತದಾರರಿದ್ದಾರೆ. 85 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು 2157 ಮತದಾರರಿದ್ದರೆ, 100 ವರ್ಷಕ್ಕಿಂತ ಮೇಲ್ಪಟ್ಟವರು 44 ಮಂದಿ ಇದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ ಒಟ್ಟು 8,799 ಅರ್ಜಿಗಳು ಸಲ್ಲಿಕೆಯಾಗಿದ್ದು, 8,586 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕೇವಲ 212 ಅರ್ಜಿಗಳು ತಿರಸ್ಕೃತಗೊಂಡಿವೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 3,315 ಅರ್ಜಿ ಸಲ್ಲಿಕೆಯಾಗಿದ್ದು, 3,171 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಯಲ್ಲಿ ಬಿಎಲ್ಎಗಳನ್ನು ನೇಮಕ ಮಾಡುವ ಮೂಲಕ ಮತದಾರರ ಪಟ್ಟಿಯ ನಿರಂತರ ನವೀಕರಣಕ್ಕೆ ಸಹಕರಿಸಲು ಸೂಚಿಸಲಾಗಿದೆ. ಅಂತಿಮ ಪಟ್ಟಿ ಪ್ರಕಟವಾದರೂ, ಅರ್ಹ ಮತದಾರರು ಏ.1, ಜು.1 ಮತ್ತು ಅ.1ರ ಅರ್ಹತಾ ದಿನಾಂಕಗಳ ಆಧಾರದ ಮೇಲೆ ಮುಂಗಡವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಮತದಾರರು ಯಾವುದೇ ಮಾಹಿತಿ ಅಥವಾ ದೂರುಗಳಿಗಾಗಿ ಉಚಿತ ಸಹಾಯವಾಣಿ ಸಂಖ್ಯೆ 1950 ಅನ್ನು ಸಂಪರ್ಕಿಸಬಹುದು ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿಯು ತಿಳಿಸಿದೆ.

ಮಾಜಿ ಸಚಿವ ಎಚ್.ವೈ ಮೇಟಿ ತೀವ್ರ ಅನಾರೋಗ್ಯದ ಕಾರಣ 2025ರ ನ.೪ರಂದು ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ವೀರಣ್ಣ ಚರಂತಿಮಠರನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಈ ಹಿಂದೆ 2013 ರಿಂದ 2016 ರವರೆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಎಚ್.ವೈ.ಮೇಟಿ ಅಬಕಾರಿ ಖಾತೆ ಮಂತ್ರಿಯಾಗಿದ್ದರು. ಆ ವೇಳೆ ಲೈಂಗಿಕ ಹಗರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು 2025ರ ಡಿ.14 ರಂದು ನಿಧನರಾದರು. 94 ವರ್ಷ ವಯಸ್ಸಿನವರಾಗಿದ್ದ ಅವರು, ಅನಾರೋಗ್ಯದಿಂದ ಬಳಲುತ್ತಿದ್ದರು. ಕರ್ನಾಟಕದ ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ದೊಡ್ಡ ಕೊಡುಗೆಯನ್ನು ನೀಡಿದ್ದರು. ರಾಜ್ಯ ರಾಜಕಾರಣದಲ್ಲಿ ದೀರ್ಘಕಾಲ ಸಕ್ರಿಯರಾಗಿದ್ದರು ಮತ್ತು ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. ಈ ಇಬ್ಬರ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆಸಲು ಮುಖ್ಯ ಚುನಾವಣಾಧಿಕಾರಿ ಕಚೇರಿಯು ಸಿದ್ಧತೆ ಕೈಗೊಂಡಿದೆ.

Read More
Next Story