ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಉಪಚುನಾವಣೆ: ಕರಡು ಮತದಾರರ ಪಟ್ಟಿ ಪ್ರಕಟ
x

ಬಾಗಲಕೋಟೆ, ದಾವಣಗೆರೆ ದಕ್ಷಿಣಕ್ಕೆ ಉಪಚುನಾವಣೆ: ಕರಡು ಮತದಾರರ ಪಟ್ಟಿ ಪ್ರಕಟ

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶನಿವಾರದಿಂದಲೇ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಜ. 24ರವರೆಗೆ ಕಾಲಾವಕಾಶ ನೀಡಲಾಗಿದೆ.


Click the Play button to hear this message in audio format

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು 2026ರ ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ನಡುವೆ, ಶಾಸಕರಾದ ಎಚ್‌.ವೈ.ಮೇಟಿ ಮತ್ತು ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಸಲು ಸಿದ್ದತೆ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.

ಜ.1ಕ್ಕೆ 18 ವರ್ಷ ತುಂಬುವ ಎಲ್ಲಾ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶನಿವಾರದಿಂದಲೇ (ಜ.3) ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಜನವರಿ 24ರವರೆಗೆ ಕಾಲಾವಕಾಶ ನೀಡಲಾಗಿದೆ.

ವಿಶೇಷ ಅಭಿಯಾನವನ್ನು ಜ.11 ಮತ್ತು ಜ. 18 ರಂದು ಕೈಗೊಳ್ಳಲಾಗಿದೆ. ಭಾನುವಾರಗಳಂದು ವಿಶೇಷವಾಗಿ ಹತ್ತಿರದ ಮತಗಟ್ಟೆಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಫೆ.14 ರಂದು ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ತಿಳಿಸಿದೆ.

ಮಹಿಳಾ ಮತದಾರರೇ ಮೇಲುಗೈ

ಮುಖ್ಯ ಚುನಾವಣಾಧಿಕಾರಿ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಎರಡೂ ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಬಾಗಲಕೋಟೆ ಕ್ಷೇತ್ರದಲ್ಲಿ ಒಟ್ಟು 2,55,503 ಮತದಾರರಲ್ಲಿ 1,25,316 ಪುರುಷರು ಮತ್ತು 1,30,164 ಮಹಿಳೆಯರಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 2,31,158 ಮತದಾರರಲ್ಲಿ 1,13,555 ಪುರುಷರು ಮತ್ತು 1,17,558 ಮಹಿಳಾ ಮತದಾರರಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ 23 ತೃತೀಯ ಲಿಂಗಿಗಳಿದ್ದು, ಯುವ ಮತದಾರರು 3,183 ಇದ್ದಾರೆ. ವಿಕಲಚೇತನ ಮತದಾರರು 2,534 ಮಂದಿ, 85 ವರ್ಷ ಮೇಲ್ಪಟ್ಟ ಮತದಾರರು 2,800 ಇದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ತೃತೀಯ ಲಿಂಗಿಗಳು 45, ಯುವ ಮತದಾರರು 4,907, ವಿಕಲಚೇತನ ಮತದಾರರು 2,542 ಮತ್ತು 85 ವರ್ಷ ಮೇಲ್ಪಟ್ಟ ಮತದಾರರು 1,838 ಇದ್ದಾರೆ ಎಂದು ತಿಳಿಸಲಾಗಿದೆ.

ಬಾಗಲಕೋಟೆಯಲ್ಲಿ ಒಟ್ಟು 319 ಮತಗಟ್ಟೆಗಳಿದ್ದು, ಈ ಬಾರಿ 51 ಹೊಸ ಮತಗಟ್ಟೆಗಳನ್ನು ಸೇರಿಸಲಾಗಿದೆ. 12 ಮತಗಟ್ಟೆಗಳ ಸ್ಥಳವನ್ನು ಬದಲಾಯಿಸಲಾಗಿದೆ. ದಾವಣಗೆರೆ ದಕ್ಷಿಣದಲ್ಲಿ ಒಟ್ಟು 284 ಮತಗಟ್ಟೆಗಳಿದ್ದು, 67 ಹೊಸ ಮತಗಟ್ಟೆಗಳನ್ನು ಸೇರಿಸಲಾಗಿದೆ. 24 ಮತಗಟ್ಟೆಗಳ ಸ್ಥಳ ಬದಲಾವಣೆ ಮಾಡಲಾಗಿದೆ.

ಮತದಾರರ ಪಟ್ಟಿಗೆ ನೋಂದಣಿ

ಮತದಾರರು ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂದು ceo.karnataka.gov.in ಜಾಲತಾಣದಲ್ಲಿ ಪರೀಕ್ಷಿಸಿಕೊಳ್ಳಬೇಕು. ಅರ್ಹ ಯುವ ಮತದಾರರು ತಪ್ಪದೇ ನೋಂದಾಯಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಬೂತ್ ಮಟ್ಟದ ಏಜೆಂಟ್‌ಗಳನ್ನು ನೇಮಿಸಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಬೇಕು ಮತ್ತು ಅಂತಿಮ ಪಟ್ಟಿ ಪ್ರಕಟವಾದ ನಂತರ ಮತದಾನದ ದಿನದವರೆಗೆ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ, ಆದ್ದರಿಂದ ಈ ಪರಿಷ್ಕರಣಾ ಅವಧಿಯನ್ನೇ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಮನವಿ ಮಾಡಿದೆ.

ಅರ್ಹ ಮತದಾರರು ಆನ್‌ಲೈನ್ ಮೂಲಕ voters.eci.gov.in ಪೋರ್ಟಲ್ ಅಥವಾ 'Voter Helpline' ಆಪ್ ಬಳಸಿ ಅರ್ಜಿ ಸಲ್ಲಿಸಬಹುದು. ಹೊಸ ನೋಂದಣಿಗೆ ನಮೂನೆ-6, ಹೆಸರು ತೆಗೆದುಹಾಕಲು ನಮೂನೆ-7 ಮತ್ತು ತಿದ್ದುಪಡಿ ಅಥವಾ ವಿಳಾಸ ಬದಲಾವಣೆಗಾಗಿ ನಮೂನೆ-8 ಅನ್ನು ಬಳಸಲು ಸೂಚಿಸಲಾಗಿದೆ.

Read More
Next Story