
ಮತದಾರರ ಪಟ್ಟಿ ‘ಮ್ಯಾಪಿಂಗ್’: ಕನ್ನಡಿಗರಲ್ಲಿ ಪೌರತ್ವದ ಆತಂಕ; ಲಕ್ಷಾಂತರ ಹೆಸರು ಡಿಲೀಟ್ ಭೀತಿ?
ಮತದಾರನ ಹೆಸರು ಕೇವಲ ಪಟ್ಟಿಯಲ್ಲಿ ಇರುವುದಲ್ಲದೆ, ಆತ ಯಾವ ಮನೆಗೆ ಸೇರಿದವನು ಮತ್ತು ಆ ಮನೆ ಯಾವ ಮತಗಟ್ಟೆಯ ವ್ಯಾಪ್ತಿಗೆ ಬರುತ್ತದೆ ಎಂದು ಜಿಪಿಎಸ್ ಮೂಲಕ ಗುರುತಿಸುವುದು ಮ್ಯಾಪಿಂಗ್ ಕಾರ್ಯವಾಗಿದೆ.
ದೇಶಾದ್ಯಂತ ಕೇಂದ್ರ ಚುನಾವಣಾ ಆಯೋಗವು ಹಮ್ಮಿಕೊಂಡಿರುವ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಮತ್ತು ಮತದಾರರ ಡಿಜಿಟಲ್ ‘ಮ್ಯಾಪಿಂಗ್’ ಪ್ರಕ್ರಿಯೆಯು ಕರ್ನಾಟಕದಲ್ಲಿ ಭಾರೀ ಚರ್ಚೆ ಹಾಗೂ ಆತಂಕಕ್ಕೆ ಕಾರಣವಾಗಿದೆ. ಎರಡು ದಶಕಗಳ ನಂತರ ನಡೆಯುತ್ತಿರುವ ಪರಿಷ್ಕರಣೆಯು ತಿದ್ದುಪಡಿ ಮಾತ್ರವಲ್ಲ ಮತದಾರನ ಪೌರತ್ವ ಮತ್ತು ಹಿನ್ನೆಲೆ ಕೆದಕಲಾಗುತ್ತಿದೆ ಎಂಬ ಅನುಮಾನಗಳು ಹುಟ್ಟಲು ಕಾರಣವಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಮ್ಯಾಪಿಂಗ್ ಮತ್ತು ತಾಂತ್ರಿಕ ದೋಷಗಳಿಂದಾಗಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಅಳಿಸಿ ಹೋಗಬಹುದು ಎಂಬ ಗುಸುಗುಸು ಶುರುವಾಗಿದೆ.
ಕರ್ನಾಟಕದಾದ್ಯಂತ ಮೃತ, ಸ್ಥಳಾಂತರಗೊಂಡ ಹಾಗೂ ದ್ವಿಪ್ರತಿ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆ ಚುರುಕುಗೊಂಡಿದೆ. ಗುರುತಿನ ಖಾತ್ರಿಗೆ ಆಧಾರ್ ಸೇರಿದಂತೆ 11 ಬಗೆಯ ದಾಖಲೆಗಳನ್ನು ಕೋರಲಾಗುತ್ತಿದೆ. ಆಧಾರ್ ಪೌರತ್ವಕ್ಕೆ ದಾಖಲೆಯಲ್ಲದಿದ್ದರೂ, ಗುರುತು ಪತ್ತೆಗೆ ಇದನ್ನು ಬಳಸಲಾಗುತ್ತಿದೆ. ಒಂದೆಡೆ ಕೇಂದ್ರ ಆಯೋಗದ ಎಸ್‌ಐಆರ್ ಸಿದ್ಧತೆ ಹಾಗೂ ಮತ್ತೊಂದೆಡೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಪಟ್ಟಿ ಪರಿಷ್ಕರಣೆ ಏಕಕಾಲದಲ್ಲಿ ನಡೆಯುತ್ತಿರುವುದು ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಮ್ಯಾಪಿಂಗ್ ಗೊಂದಲ
ಚುನಾವಣಾ ಆಯೋಗದ 'ಮ್ಯಾಪಿಂಗ್' ಪ್ರಕ್ರಿಯೆಯ ಉದ್ದೇಶದ ಕುರಿತು ಸಾರ್ವಜನಿಕರಲ್ಲಿ ಗೊಂದಲವಿದೆ. ಅದಕ್ಕೆ ಅದಕ್ಕೆ ತಕ್ಕ ಉತ್ತರವೇ ಇಲ್ಲ. ಜತೆಗೆ ಬಿಎಲ್‌ಓಗಳು ಬಳಸುವ ಆ್ಯಪ್‌ಗಳಲ್ಲಿ ಅನೇಕ ತಾಂತ್ರಿಕ ದೋಷಗಳಿವೆ. ಒಂದು ಮನೆಯ ವಿವರಗಳನ್ನು ದಾಖಲಿಸುವಾಗ ಜಿಪಿಎಸ್ ಸ್ಥಳ ಸರಿಯಾಗಿ ತೋರಿಸದಿರುವುದು ಅಥವಾ ಡೇಟಾ ಅಪ್‌ಲೋಡ್ ಆಗದಿರುವುದು ಗೊಂದಲ ಸೃಷ್ಟಿಸಿದೆ ಎನ್ನಲಾಗುತ್ತಿದೆ.
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, 2002ರ ಪಟ್ಟಿಯಲ್ಲಿರುವ ಮತದಾರರನ್ನು 2025ರ ಹೊಸ ವ್ಯವಸ್ಥೆಗೆ ಮ್ಯಾಪಿಂಗ್ ಮಾಡುವಾಗ ಲಕ್ಷಾಂತರ ಹೆಸರುಗಳು ಹೊಂದಾಣಿಕೆಯಾಗುತ್ತಿಲ್ಲ. ಮ್ಯಾಪಿಂಗ್ ಆಗದ ಹೆಸರುಗಳನ್ನು ಅಕ್ರಮ ಅಥವಾ ಸ್ಥಳಾಂತರಗೊಂಡವರು ಎಂದು ಪರಿಗಣಿಸಿ ಪಟ್ಟಿಯಿಂದ ತೆಗೆಯುವ ಭೀತಿ ಎದುರಾಗಿದೆ. ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ, ವಾರ್ಡ್‌ಗಳ ಮರುವಿಂಗಡಣೆಯಾದಾಗ ಹಳೆಯ ಮತದಾರರು ಯಾವ ಬೂತ್‌ಗೆ ಸೇರುತ್ತಾರೆ ಎಂಬ ಮ್ಯಾಪಿಂಗ್ ಸರಿಯಾಗಿ ನಡೆಯುತ್ತಿಲ್ಲ. ಇದರಿಂದಾಗಿ ಮತದಾರರು ಒಂದು ಬೂತ್‌ನಿಂದ ಮತ್ತೊಂದು ಬೂತ್‌ಗೆ ಅಲೆದಾಡುವಂತಾಗಿದೆ ಎಂದು ಹೇಳಿದರು.
ಎಸ್‌ಐಆರ್ ಪ್ರಕ್ರಿಯೆಯ ಅಡಿಯಲ್ಲಿ ಮತದಾರರಿಂದ ವಿವಿಧ ದಾಖಲೆಗಳನ್ನು ಕೇಳಲಾಗುತ್ತಿದೆ. ಇದನ್ನು ಕೇವಲ ಮತದಾರರ ಪಟ್ಟಿ ತಿದ್ದುಪಡಿ ಅಲ್ಲ, "ಇಂಡಿಯನ್, ಬಾಂಗ್ಲಾ, ಪಾಕಿಸ್ತಾನಿ" ಎಂಬ ವರ್ಗೀಕರಣ ಮಾಡುವ ಗುಪ್ತ ಅಜೆಂಡಾ ಇದರ ಹಿಂದಿದೆ. ಮತದಾರರ ಪಟ್ಟಿಯನ್ನು ಪರೋಕ್ಷವಾಗಿ ಪೌರತ್ವ ಗುರುತಿಸಲು ಬಳಸಿಕೊಳ್ಳಲಾಗುತ್ತಿದೆ ಎಂಬ ಭೀತಿ ಸೃಷ್ಟಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಿಎಲ್‌ಒಗಳ ಸಂಕಷ್ಟ
ರಾಜ್ಯದೆಲ್ಲೆಡೆ ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುವ ಬೂತ್ ಮಟ್ಟದ ಅಧಿಕಾರಿಗಳು ಹೆಚ್ಚಾಗಿ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು. ಇವರಿಗೆ ಚುನಾವಣಾ ಕೆಲಸಗಳ ಜತೆಗೆ ಶೈಕ್ಷಣಿಕ ಜವಾಬ್ದಾರಿಗಳೂ ಇರುತ್ತವೆ. ಈ ಅಧಿಕಾರಿಗಳಿಗೆ ಎರಡೆರಡು ಫಾರಂಗಳನ್ನು ಭರ್ತಿ ಮಾಡುವ ಮತ್ತು ಮ್ಯಾಪಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯ ಇದೆ
ಮ್ಯಾಪಿಂಗ್ ಪ್ರಕ್ರಿಯೆ ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಹವ್ಯಾಸಿ ಪತ್ರಕರ್ತ ಯೂಸಫ್ ಪಟೇಲ್, 2002ರಲ್ಲಿ ನಡೆದಿದ್ದ ಪರಿಷ್ಕರಣೆಯೇ ಈಗಿನ ಪ್ರಕ್ರಿಯೆಗೆ ಮೂಲ. ಈಗ ನಡೆಯುತ್ತಿರುವ ಮ್ಯಾಪಿಂಗ್ ಪ್ರಕ್ರಿಯೆಯು ಮತದಾರರ ವಿಳಾಸದ ಜತೆಗೆ ಹಿನ್ನೆಲೆಯನ್ನೂ ತಡಕಾಡುತ್ತಿದೆ. ಮತದಾರರ ಅಪ್ಪ-ಅಮ್ಮ ಎಲ್ಲಿದ್ದರು? ಅವರ ಮೂಲ ದಾಖಲೆಗಳೇನು? ಎಂಬ ವಿಷಯಗಳನ್ನು ಪರಿಶೀಲಿಸಲಾಗುತ್ತಿದೆ. ಈ ಹಂತದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮತದಾನದ ಹಕ್ಕಿಗೆ ಸಂಚಕಾರ ಬರಬಹುದು. ಹೀಗಾಗಿ ಮತದಾರರ ಪಟ್ಟಿಯನ್ನು ಪ್ರತಿಯೊಬ್ಬರೂ ತರಿಸಿಕೊಂಡು ಪರಿಶೀಲಿಸಬೇಕು ಎಂದು ಹೇಳಿದ್ದಾರೆ.
ಪಟ್ಟಿಯಲ್ಲಿ ಹೆಸರುಗಳು ನಾಪತ್ತೆಯಾಗುವ ಮೊದಲು ಅಥವಾ ತಾಂತ್ರಿಕ ದೋಷಗಳ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಮತ್ತು ಬಿಎಲ್‌ಓಗಳ ಭೇಟಿಯ ಸಮಯದಲ್ಲಿ ಸರಿಯಾದ ಮಾಹಿತಿ ನೀಡುವುದು ಅಗತ್ಯ. ಮುಸ್ಲಿಂ ಸಮುದಾಯವನ್ನು ವ್ಯವಸ್ಥಿತವಾಗಿ ವಲಸಿಗರು ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆತಂಕ ಜನತೆಯಲ್ಲಿದೆ. ಹೀಗಾಗಿ ದಾಖಲೆಗಳ ಪರಿಶೀಲನೆಯ ನೆಪದಲ್ಲಿ ಸ್ಥಳೀಯರನ್ನು ವಿದೇಶಿ ವಲಸಿಗರು ಎಂದು ಚಿತ್ರಿಸುವ ಹುನ್ನಾರ ನಡೆಯಬಾರದು ಎಂದು ಹೇಳಿದ್ದಾರೆ.
ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಎಂದರೇನು?
ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರನ ಭೌಗೋಳಿಕ ಸ್ಥಳ ಗುರುತಿಸಿ, ನಿರ್ದಿಷ್ಟ ಮತಗಟ್ಟೆಗೆ ವೈಜ್ಞಾನಿಕವಾಗಿ ಜೋಡಿಸುವ ಪ್ರಕ್ರಿಯೆ. ಮತದಾರನ ಮನೆ, ಯಾವ ರಸ್ತೆ ಅಥವಾ ವಾರ್ಡ್‌ಗೆ ಸೇರುತ್ತದೆ ಮತ್ತು ಆತನಿಗೆ ಹತ್ತಿರದ ಮತಗಟ್ಟೆ ಯಾವುದು ಎಂಬುದನ್ನು ನಕ್ಷೆಯ ಮೂಲಕ ನಿಖರವಾಗಿ ದಾಖಲಿಸುವುದೇ ಮತದಾರರ ಮ್ಯಾಪಿಂಗ್.
ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯು ಹಲವಾರು ಹಂತಗಳನ್ನು ಒಳಗೊಂಡಿದೆ. ಚುನಾವಣಾ ಆಯೋಗವು ಮೊದಲು ಆಯಾ ವಿಧಾನಸಭಾ ಕ್ಷೇತ್ರದ ಜಿಐಎಸ್ ನಕ್ಷೆಯನ್ನು ಸಿದ್ಧಪಡಿಸುತ್ತದೆ. ಇದರಲ್ಲಿ ರಸ್ತೆಗಳು, ಪ್ರಮುಖ ಗುರುತುಗಳು, ಗ್ರಾಮದ ಗಡಿಗಳು ಮತ್ತು ವಾರ್ಡ್‌ಗಳನ್ನು ಗುರುತಿಸಲಾಗುತ್ತದೆ. ಕ್ಷೇತ್ರದಲ್ಲಿರುವ ಎಲ್ಲಾ ಮತಗಟ್ಟೆಗಳ ಶಾಲೆ, ಸಮುದಾಯ ಭವನ ಇತ್ಯಾದಿಗಳ ಬಗ್ಗೆ ಜಿಪಿಎಸ್ ಮೂಲಕ ದಾಖಲಿಸಲಾಗುತ್ತದೆ. ಇದರಿಂದ ಮತಗಟ್ಟೆ ಎಲ್ಲಿದೆ ಎಂಬುದು ಡಿಜಿಟಲ್ ಪರದೆಯ ಮೇಲೆ ನಿಖರವಾಗಿ ಕಾಣಿಸುತ್ತದೆ. ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡಿ, ಪ್ರತಿ ಮನೆಯ ಸ್ಥಳವನ್ನು ಗುರುತಿಸುತ್ತಾರೆ. ಈ ಸಂದರ್ಭದಲ್ಲಿಮನೆ ಸಂಖ್ಯೆಯನ್ನು ದಾಖಲಿಸಲಾಗುತ್ತದೆ. ಆ ಮನೆಯಲ್ಲಿರುವ ಮತದಾರರ ಸಂಖ್ಯೆಯನ್ನು ಪಟ್ಟಿ ಮಾಡಲಾಗುತ್ತದೆ. ಅಲ್ಲದೇ, ಮನೆಯ ಸ್ಥಳವನ್ನು ಜಿಪಿಎಸ್ ಮೂಲಕ ಮ್ಯಾಪ್ ಮಾಡಲಾಗುತ್ತದೆ.
ಒಂದು ಮತಗಟ್ಟೆ ವ್ಯಾಪ್ತಿಯಲ್ಲಿ ಬರುವ ಪ್ರದೇಶವನ್ನು ಸಣ್ಣ ಸಣ್ಣ 'ವಿಭಾಗ'ಗಳಾಗಿ ವಿಂಗಡಿಸಲಾಗುತ್ತದೆ. ಒಂದು ನಿರ್ದಿಷ್ಟ ಪ್ರದೇಶ ಅಥವಾ ಅಪಾರ್ಟ್‌ಮೆಂಟ್ ಅನ್ನು ಒಂದು ವಿಭಾಗವಾಗಿ ಗುರುತಿಸಲಾಗುತ್ತದೆ. ಇದು ಮತದಾರರ ಪಟ್ಟಿಯನ್ನು ಕ್ರಮಬದ್ಧವಾಗಿ ಜೋಡಿಸಲು ಸಹಾಯ ಮಾಡುತ್ತದೆ. ಭೌಗೋಳಿಕ ಮಾಹಿತಿಯನ್ನು ಮತದಾರರ ಪಟ್ಟಿಯೊಂದಿಗೆ ವಿಲೀನಗೊಳಿಸಲಾಗುತ್ತದೆ. ಇದರಿಂದ ಮತದಾರನ ವಿಳಾಸಕ್ಕೂ, ಮತದಾನ ಮಾಡುವ ಮತಗಟ್ಟೆಗೂ ಇರುವ ದೂರವನ್ನು ಲೆಕ್ಕ ಹಾಕಿ ಮನೆಯಿಂದ 2 ಕಿ.ಮೀ ಒಳಗೇ ಮತಗಟ್ಟೆ ಇರುವಂತೆ ನೋಡಿಕೊಳ್ಳಲಾಗಿ
ಮ್ಯಾಪಿಂಗ್ ಮಾಡುತ್ತಿರುವವರು ಯಾರು?
ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಪ್ರಾಥಮಿಕ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರನ್ನು ಬಿಎಲ್‌ಒಗಳು. ಪ್ರತಿ 10-12 ಬಿಎಲ್‌ಒಗಳಿಗೆ ಒಬ್ಬ ಮೇಲ್ವಿಚಾರಕರಿದ್ದು, ಬಿಎಲ್‌ಒಗಳು ಸಂಗ್ರಹಿಸಿದ ಮಾಹಿತಿಯನ್ನು ಪರಿಶೀಲಿಸುತ್ತಾರೆ. ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿ ತಹಶೀಲ್ದಾರ್ ಅಥವಾ ಉಪ-ತಹಶೀಲ್ದಾರ್ ಮಟ್ಟದ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಾರೆ. ಮತದಾರರ ನೋಂದಣಾಧಿಕಾರಿಗಳು ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಈ ಪ್ರಕ್ರಿಯೆಯ ಉಸ್ತುವಾರಿ ವಹಿಸುತ್ತಾರೆ. ಜಿಲ್ಲಾಧಿಕಾರಿಗೆ ಜಿಲ್ಲಾ ಚುನಾವಣಾಧಿಕಾರಿಯ ಹೊಣೆಗಾರಿಕೆಯಿದ್ದು, ಸಂಪೂರ್ಣ ಪ್ರಕ್ರಿಯೆಯ ಉಸ್ತುವಾರಿ ವಹಿಸುತ್ತಾರೆ.
ಮ್ಯಾಪಿಂಗ್ ಪ್ರಕ್ರಿಯೆಯು ಬಿಎಲ್‌ಒಗಳಿಗೆ ಸಾಕಷ್ಟು ಸವಾಲು ಒಡ್ಡಿದೆ. ತಂತ್ರಾಂಶಗಳ ಮೂಲಕ ಸ್ಥಳವನ್ನು ಟ್ಯಾಗ್ ಮಾಡುವಾಗ ಸರ್ವರ್ ಸಮಸ್ಯೆ ಅಥವಾ ಇಂಟರ್ನೆಟ್ ಕೊರತೆ ಎದುರಾಗುತ್ತದೆ. ಗುಡ್ಡಗಾಡು ಪ್ರದೇಶಗಳಲ್ಲಿ ಅಥವಾ ಅತಿ ಹೆಚ್ಚು ಜನಸಂಖ್ಯೆ ಇರುವ ನಗರ ಪ್ರದೇಶದ ನಿವಾಸಗಳಲ್ಲಿ ಪ್ರತಿ ಮನೆಗೆ ಭೇಟಿ ನೀಡುವುದು ಕೂಡ ದೈಹಿಕವಾಗಿ ತ್ರಾಸದಾಯಕ.
ಮ್ಯಾಪಿಂಗ್ ಬಗ್ಗೆ ಜನರಿಗೆ ಅರಿವಿನ ಕೊರತೆ
ಮ್ಯಾಪಿಂಗ್ ಕಾರ್ಯದ ಬಗ್ಗೆ ಬಿಎಲ್‌ಒಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಅಲ್ಲದೇ, ಮ್ಯಾಪಿಂಗ್ ಕಾರ್ಯವು ಪ್ರಗತಿಯಲ್ಲಿದೆ. ಗ್ರಾಮೀಣ ಭಾಗದಲ್ಲಿ ಶೇ.70ಕ್ಕೂ ಹೆಚ್ಚು ಮ್ಯಾಪಿಂಗ್ ಕೆಲಸ ನಡೆದಿದ್ದು, ಬೆಂಗಳೂರಿನಲ್ಲಿ ಶೇ.25ರಷ್ಟು ಮುಗಿದಿದೆ. ನಗರದ ಜನತೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗದ ಮೂಲಗಳು ಹೇಳಿವೆ.
ಎಸ್‌ಐಆರ್‌ಗೆ ಪೂರ್ವಭಾವಿ ಸಿದ್ದತೆ
ಎಸ್‌ಐಆರ್‌ಗೆ ಪೂರ್ವಭಾವಿಯಾಗಿ ಕೈಗೊಂಡಿರುವ ಕ್ರಮವೇ ಮ್ಯಾಪಿಂಗ್. ಮ್ಯಾಪಿಂಗ್ ಸಮರ್ಪಕವಾಗಿದ್ದರೆ ಎಸ್‌ಐಆರ್ ಪ್ರಕ್ರಿಯೆ ಸರಳ. ಕೇಂದ್ರ ಆಯೋಗ ಮತದಾರರ ಪಟ್ಟಿಯ ವ್ಯತ್ಯಯಗಳನ್ನು ಸರಿಪಡಿಸುವ ಕ್ರಮವೇ ಎಸ್‌ಐಆರ್ ಎಂದಿದೆ. ಹೀಗಾಗಿ ಮತದಾರರ ಪಟ್ಟಿಯಲ್ಲಿನ ಹೆಸರು, ತಂದೆ ತಾಯಿ ಹಾಗೂ ಅಜ್ಜ ಅಜ್ಜಿಯ ಹೆಸರಿನೊಂದಿಗೆ ಮ್ಯಾಪಿಂಗ್ ಆಗಿರುವಂತೆ ನೋಡಿಕೊಳ್ಳಲಾಗುತ್ತಿದೆ.
ಒಂದು ವೇಳೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು, ನಿಮ್ಮ ತಂದೆ ತಾಯಿ, ಅಜ್ಜ ಅಜ್ಜಿಯೊಂದಿಗೆ ಮ್ಯಾಪಿಂಗ್ ಆಗದಿದ್ದರೆ ಮತಪಟ್ಟಿಯಿಂದ ಅಂತಹವರನ್ನು ಪ್ರತ್ಯೇಕಿಸಲಾಗುತ್ತದೆ. ಚುನಾವಣಾ ಆಯೋಗ ಎಸ್‌ಐಆರ್ ನಡೆಸುವ ವೇಳೆ ಭಾರತದ ನಾಗರಿಕ ಎಂಬುದನ್ನು ತೋರಿಸುವ ಒಂದಷ್ಟು ದಾಖಲೆಗಳನ್ನು ಕೇಳಲಾಗುತ್ತದೆ. ಅದನ್ನು ಒದಗಿಸಿದರೆ ಮುಂದುವರಿಸಲಾಗುತ್ತದೆ ಹಾಗೂ ಇಲ್ಲದೇ ಹೋದರೆ ಕೈಬಿಡಲಾಗುತ್ತದೆ.
ಸಾರ್ವಜನಿಕರಿಗೆ ಎದುರಾಗುವ ತೊಡಕುಗಳು
ಬಿಎಲ್‌ಒಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಮನೆಗೆ ಭೇಟಿ ನೀಡುತ್ತಾರೆ. ಆ ಸಮಯದಲ್ಲಿ ಉದ್ಯೋಗಸ್ಥರು ಅಥವಾ ಕೂಲಿ ಕಾರ್ಮಿಕರು ಮನೆಯಲ್ಲಿ ಇರುವುದಿಲ್ಲ. ಇದರಿಂದ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಳ್ಳದೆ ಬಾಕಿ ಉಳಿಯುತ್ತದೆ. ಬಿಎಲ್‌ಒಗಳು ಫೋನ್‌ನಲ್ಲಿ ಮನೆಯ ಮುಂದೆ ನಿಂತು ಫೋಟೋ ತೆಗೆಯುವಾಗ ಅಥವಾ ಜಿಪಿಎಸ್ ಸ್ಥಳ ಪಡೆಯುವಾಗ, ಜನರು ತಮ್ಮ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಭಾವಿಸುತ್ತಾರೆ. ಬಾಡಿಗೆ ಮನೆಯಲ್ಲಿರುವವರು ಆ ಮನೆಯ ಮಾಲೀಕರ ವಿಳಾಸ ಅಥವಾ ಮನೆ ಸಂಖ್ಯೆಯ ನಿಖರ ದಾಖಲೆಗಳನ್ನು ಹೊಂದಿರದಿದ್ದಾಗ ಮ್ಯಾಪಿಂಗ್ ಗೊಂದಲಕ್ಕೀಡಾಗುತ್ತದೆ. ಒಂದು ಮನೆಯಲ್ಲಿ ಅನೇಕ ಬಾಡಿಗೆದಾರರಿದ್ದಾಗ ಯಾರು ಮೂಲ ಮತದಾರರು ಎಂಬುದು ಬಿಎಲ್‌ಒಗೆ ತಿಳಿಯುವುದಿಲ್ಲ. ಇಂಥ ಅನೇಕ ಸಂದರ್ಭಗಳು ಮ್ಯಾಪಿಂಗ್ಗೆ ಸಮಸ್ಯೆ ಎನಿಸಿದೆ.
ವಯೋಮಾನ ಆಧಾರ
ವಿಶೇಷ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ವಯಸ್ಸಿನ ಆಧಾರದ ಮೇಲೆ ದತ್ತಾಂಶಗಳನ್ನು ವರ್ಗೀಕರಿಸಿ ಪರಿಶೀಲನೆ ನಡೆಸಲಾಗುತ್ತಿದೆ. 2002ರ ಅವಧಿಯಲ್ಲಿ ಮತದಾರರ ಪಟ್ಟಿ ಕಾಗದದ ರೂಪದಲ್ಲಿತ್ತು. ಅಂದಿನ ದಾಖಲೆಗಳನ್ನು ಇಂದಿನ ಡಿಜಿಟಲ್ ವ್ಯವಸ್ಥೆಗೆ ಹೊಂದಿಸುವ ಉದ್ದೇಶದಿಂದ ತಂದೆ ಅಥವಾ ಕುಟುಂಬದ ಹಿರಿಯರ (ಪಿತೃವಂಶದ) ವಿವರಗಳನ್ನು ಪಡೆಯಲಾಗುತ್ತದೆ. ತಂದೆಯ ದಾಖಲೆಗಳಿಲ್ಲದಿದ್ದರೆ, ದೊಡ್ಡಪ್ಪ ಅಥವಾ ಚಿಕ್ಕಪ್ಪನ ಎಪಿಕ್ ಸಂಖ್ಯೆಯನ್ನು ನೀಡಿ ತಮ್ಮ ಹೆಸರನ್ನು ಮ್ಯಾಪ್ ಮಾಡಿಸಿಕೊಳ್ಳಬಹುದು. 18 ವರ್ಷಕ್ಕಿಂತ ಮೇಲ್ಪಟ್ಟ ಯುವ ಮತದಾರರು ತಮ್ಮ ಪೋಷಕರೊಂದಿಗೇ ವಾಸಿಸುತ್ತಿರುತ್ತಾರೆ. 18 ವರ್ಷ ಮೇಲ್ಪಟ್ಟ ಮತದಾರರನ್ನು ಅವರ ತಂದೆ ಅಥವಾ ತಾಯಿಯ ಎಪಿಕ್ ಸಂಖ್ಯೆಯೊಂದಿಗೆ ಮ್ಯಾಪ್ ಮಾಡಲಾಗುತ್ತಿದೆ. 18ರಿಂದ 30 ವರ್ಷದೊಳಗಿನ ಮತದಾರರು ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ಪದೇ ಪದೇ ವಿಳಾಸ ಬದಲಾಯಿಸುವ ಸಾಧ್ಯತೆ ಇರುತ್ತದೆ. ಈ ಮ್ಯಾಪಿಂಗ್ ಮೂಲಕ ಅವರು ಪ್ರಸ್ತುತ ಎಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರ ಮೂಲ ಕುಟುಂಬದ ವಿಳಾಸ ಯಾವುದು ಎಂಬುದನ್ನು ಡಿಜಿಟಲ್ ನಕ್ಷೆಯ ಮೂಲಕ ಖಚಿತಪಡಿಸಿಕೊಳ್ಳಲಾಗುತ್ತದೆ.
30 ರಿಂದ 40 ವರ್ಷದೊಳಗಿನವರು ಸ್ವತಂತ್ರ ಕುಟುಂಬ ಹೊಂದಿರುತ್ತಾರೆ. ಅವರನ್ನು ಆಯಾ ಮನೆಯ 'ಕುಟುಂಬದ ಮುಖ್ಯಸ್ಥ'ರನ್ನಾಗಿ ಪರಿಗಣಿಸಿ, ಅವರ ಅಡಿಯಲ್ಲಿ ಉಳಿದ ಸದಸ್ಯರನ್ನು ಮ್ಯಾಪ್ ಮಾಡಲಾಗುತ್ತದೆ. ಇವರ ಹೆಸರುಗಳು ಮೂಲ ಗ್ರಾಮದ ಪಟ್ಟಿಯಲ್ಲಿಯೂ ಮತ್ತು ಈಗ ವಾಸವಿರುವ ನಗರದ ಪಟ್ಟಿಯಲ್ಲಿಯೂ ಇರುವ ಸಾಧ್ಯತೆ ಇರುತ್ತದೆ. ಮ್ಯಾಪಿಂಗ್ ಪ್ರಕ್ರಿಯೆಯ ಮೂಲಕ ಇಂತಹ ದ್ವಂದ್ವ ಹೆಸರುಗಳನ್ನು ಪತ್ತೆಹಚ್ಚಿ, ಅವರು ಪ್ರಸ್ತುತ ಎಲ್ಲಿ ವಾಸವಿದ್ದಾರೋ ಅಲ್ಲಿ ಮಾತ್ರ ಹೆಸರು ಉಳಿಸಿಕೊಂಡು ಹಳೆಯ ಕಡೆಯ ಹೆಸರನ್ನು ಕೈಬಿಡುವಂತೆ ಮಾಡಲಾಗುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಈ ವಯೋಮಾನದವರ ಸಹಕಾರ ನಮಗೆ ಅತ್ಯಂತ ಅಗತ್ಯವಾಗಿದೆ ಆಯೋಗದ ಜಂಟಿ ಚುನಾವಣಾಧಿಕಾರಿ ಯೋಗೇಶ್ವರ್ ದ ಫೆಡರಲ್ ಕರ್ನಾಟಕಕ್ಕೆ ಹೇಳಿದ್ದಾರೆ.

