
karnataka Budget 2026: ಈ ಬಾರಿಯೂ ಸಿದ್ದರಾಮಯ್ಯ ಮಂಡಿಸಲಿದ್ದಾರೆಯೇ ಕೊರತೆ ಬಜೆಟ್?
ಬದಲಾದ ರಾಜಕೀಯ ಪರಿಸ್ಥಿತಿಗಳು, ಜಾಗತಿಕ ಆರ್ಥಿಕ ಕುಸಿತ, ನೈಸರ್ಗಿಕ ವಿಕೋಪಗಳು ಮತ್ತು ಜನಪ್ರಿಯ ಕಲ್ಯಾಣ ಯೋಜನೆಗಳಿಂದಾಗಿ ರಾಜ್ಯವು ಕೊರತೆಯ ಬಜೆಟ್ ಮಂಡಿಸುವ ಅನಿವಾರ್ಯತೆಗೆ ಸಿಲುಕಿದೆ.
ಉಳಿತಾಯ ಬಜೆಟ್ ಹೊಂದಿದ್ದ ರಾಜ್ಯವು ಇತ್ತೀಚೆಗಿನ ವರ್ಷದಲ್ಲಿ ಕೊರತೆಯ ಬಜೆಟ್ ಮಂಡಿಸುವ ಹಂತಕ್ಕೆ ಬಂದು ನಿಂತಿದೆ. ಬದಲಾದ ರಾಜಕೀಯ ಪರಿಸ್ಥಿತಿಗಳು, ಜಾಗತಿಕ ಆರ್ಥಿಕ ಕುಸಿತ, ನೈಸರ್ಗಿಕ ವಿಕೋಪಗಳು ಮತ್ತು ಜನಪ್ರಿಯ ಕಲ್ಯಾಣ ಯೋಜನೆಗಳಿಂದಾಗಿ ರಾಜ್ಯವು ಕೊರತೆಯ ಬಜೆಟ್ ಮಂಡಿಸುವ ಅನಿವಾರ್ಯತೆಗೆ ಸಿಲುಕಿದೆ.
ಐತಿಹಾಸಿಕ 17ನೇ ಬಜೆಟ್ ಮಂಡಿಸಲು ಸಜ್ಜಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯೂ ಕೊರತೆಯ ಬಜೆಟ್ ಮಂಡಿಸಲಿದ್ದಾರೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.
ಸರ್ಕಾರದ ಒಟ್ಟು ಆದಾಯಕ್ಕಿಂತ ಒಟ್ಟು ವೆಚ್ಚ ಹೆಚ್ಚಾದರೆ ಕೊರತೆಯ ಬಜೆಟ್ ಎನ್ನಲಾಗುತ್ತದೆ. ಈ ಕೊರತೆಯನ್ನು ನೀಗಿಸಲು ಸರ್ಕಾರವು ಆಂತರಿಕ ಅಥವಾ ಬಾಹ್ಯ ಮೂಲಗಳಿಂದ ಸಾಲ ಮಾಡಬೇಕಾಗುತ್ತದೆ. ಮಾ.6ರಂದು 2026–27ನೇ ಸಾಲಿನ ಹಣಕಾಸು ವರ್ಷದಲ್ಲಿ ಬಜೆಟ್ ಗಾತ್ರವು 4.7 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ. ಸರ್ಕಾರದ ಒಟ್ಟು ಸಾಲ ಮೊತ್ತವು 1.3 ಲಕ್ಷ ಕೋಟಿ ರೂ. ಮೀರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಸಾಲದ ಪ್ರಮಾಣ ಹೆಚ್ಚಳವಾಗಲು ಆರಂಭವಾಯಿತು. ನಂತರ ಕೋವಿಡ್ ಸಮಯದಲ್ಲಿ ಆರಂಭಗೊಂಡ ಕೊರತೆ ಬಜೆಟ್ ಮುಂದುವರಿದಿದೆ.
ರಾಜ್ಯದಲ್ಲಿ ಆರ್ಥಿಕ ಶಿಸ್ತು
ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಕಾಲದಲ್ಲಿ ಸಾಮಾಜಿಕ ನ್ಯಾಯದ ಯೋಜನೆಗಳಿಗೆ ಒತ್ತು ನೀಡಿದರೂ, ರಾಜ್ಯದ ಸಾಲದ ಹೊರೆ ಮಿತಿಯಲ್ಲಿತ್ತು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವಧಿಯಲ್ಲಿಯೂ ಆರ್ಥಿಕ ಸುಧಾರಣೆಯಲ್ಲಿತ್ತು. ರಾಜ್ಯದ ಆರ್ಥಿಕ ಇತಿಹಾಸದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವಧಿಯು ಮಹತ್ವದ್ದಾಗಿದೆ. ಮಾಹಿತಿ ತಂತ್ರಜ್ಞಾನ ಬೆಳವಣಿಗೆ ಕಂಡ ಅವಧಿಯಾಗಿದೆ. ಅಲ್ಲದೇ, ರಾಜ್ಯದಲ್ಲಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ 2002 ಅನ್ನು ಜಾರಿಗೊಳಿಸಲಾಯಿತು. ಈ ಕಾಯ್ದೆಯು ರಾಜ್ಯದ ವಿತ್ತೀಯ ಕೊರತೆಯು ಒಟ್ಟು ರಾಜ್ಯ ಉತ್ಪನ್ನದ ಶೇ. 3ಕ್ಕಿಂತ ಹೆಚ್ಚಿರಬಾರದು ಎಂದು ಕಟ್ಟುನಿಟ್ಟಿನ ನಿಯಮ ಹೇರಿತು.
2011ರಲ್ಲಿ ಬಿ.ಎಸ್. ಯಡಿಯೂರಪ್ಪ ದೇಶದಲ್ಲೇ ಮೊದಲ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದರು. ಇದು ರೈತರನ್ನು ಓಲೈಸುವ ಪ್ರಯತ್ನವಾಗಿತ್ತು. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ದರಿಂದ ವೆಚ್ಚ ಹೆಚ್ಚಾಯಿತು. ರೈತರಿಗೆ ಉಚಿತ ವಿದ್ಯುತ್, ಸೈಕಲ್ ವಿತರಣೆಯಂತಹ ಯೋಜನೆಗಳು ವೆಚ್ಚ ಹೆಚ್ಚಳಕ್ಕೆ ಕಾರಣವಾಯಿತು. ಇವರ ಅವಧಿಯಲ್ಲಿ ವಿತ್ತೀಯ ಕೊರತೆಯು ಶೇ. 3ರ ಮಿತಿಯೊಳಗೆ ಇದ್ದರೂ, ಜನಪ್ರಿಯ ಯೋಜನೆಗಳಿಂದಾಗಿ ರಾಜ್ಯದ ಸಾಲದ ಹೊರೆ ಏರಲು ಪ್ರಾರಂಭವಾಯಿತು. ಯಡಿಯೂರಪ್ಪ ಅವಧಿಯ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 1 ಲಕ್ಷ ಕೋಟಿ ರೂ ಗಡಿ ದಾಟಿತು. ಬಳಿಕ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಮೊದಲ ಅವಧಿಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಇತರೆ ಭಾಗ್ಯ ಯೋಜನೆಗಳನ್ನು ಜಾರಿಗೆ ತಂದರು. ಈ ಯೋಜನೆಗಳಿಂದಾಗಿ ಸಾಮಾಜಿಕ ವಲಯದ ಗಣನೀಯವಾಗಿ ಹೆಚ್ಚಾಯಿತು. 2013ರಲ್ಲಿ ರಾಜ್ಯದ ಸಾಲ 1.26 ಲಕ್ಷ ಕೋಟಿ ರೂ. ಇದ್ದು, ಅದು 2018ರ ವೇಳೆಗೆ ಸುಮಾರು 2.42 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಯಿತು. ಕೇವಲ ಐದು ವರ್ಷಗಳಲ್ಲಿ ಸಾಲ ದುಪ್ಪಟ್ಟಾಯಿತು. ಆದರೂ, ಸಿದ್ದರಾಮಯ್ಯ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಮಿತಿಯನ್ನು ಮೀರಲಿಲ್ಲ ಹಾಗೂ ಹಣಕಾಸಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಿದ್ದರು.
ಕೊರತೆಯ ಬಜೆಟ್ ಆರಂಭ
ರಾಜ್ಯವು ಕೊರತೆಯನ್ನು ಅನುಭವಿಸಲು 2020-21ರ ಅವಧಿಯಿಂದ ಪ್ರಾರಂಭ ಮಾಡಿತು. ಬಿ.ಎಸ್. ಯಡಿಯೂರಪ್ಪ 2020-21 ಮತ್ತು 2021-22ರಲ್ಲಿ ಬಜೆಟ್ ಮಂಡಿಸಿದಾಗ ಜಗತ್ತು ಕೋವಿಡ್ ಸಾಂಕ್ರಾಮಿಕದಿಂದ ನಲುಗಿತ್ತು. ತೆರಿಗೆ ಸಂಗ್ರಹ ಕುಸಿದು, ಆರೋಗ್ಯ ಮತ್ತು ಪರಿಹಾರ ಕಾರ್ಯಗಳಿಗೆ ಹೆಚ್ಚಿನ ಹಣ ವ್ಯಯಿಸಬೇಕಾಯಿತು. ಇದರಿಂದಾಗಿ ರಾಜ್ಯವು ದಶಕಗಳ ನಂತರ ಮೊದಲ ಬಾರಿಗೆ ಕೊರತೆಯ ಬಜೆಟ್ ಮಂಡಿಸಿತು. ಸರ್ಕಾರದ ದೈನಂದಿನ ಖರ್ಚಿಗೂ ಸಾಲ ಮಾಡಬೇಕಾದ ಪರಿಸ್ಥಿತಿ ಬಂದಿತು. ಶೇ.3ರೊಳಗೆ ಇರಬೇಕಿದ್ದ ವಿತ್ತೀಯ ಕೊರತೆಯು 2021-22ರಲ್ಲಿ ಶೇ. 3.94ಕ್ಕೆ ಏರಿಕೆ ಕಂಡಿತು. ಬಳಿಕ ಬಿಜೆಪಿಯಲ್ಲಿ ಕಂಡ ರಾಜಕೀಯ ಬೆಳವಣಿಗೆಯಿಂದಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಇವರ ಅವಧಿಯಲ್ಲಿ ರಾಜ್ಯದ ಒಟ್ಟು ಸಾಲ 5.18 ಲಕ್ಷ ಕೋಟಿ ರೂ.ಗೆ ತಲುಪಿತು. ತೆರಿಗೆ ಸಂಗ್ರಹ ಸುಧಾರಿಸಿದರೂ, ಕೋವಿಡ್ ಸಂದರ್ಭದ ಸಾಲದ ಬಡ್ಡಿ ಪಾವತಿಯೇ ದೊಡ್ಡ ಹೊರೆಯಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡನೇ ಬಾರಿಗೆ 2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿತು. ಇದು ರಾಜ್ಯ ಬಜೆಟ್ ಇತಿಹಾಸದಲ್ಲಿ ಅತಿದೊಡ್ಡ ವೆಚ್ಚ ಬಾಬ್ತು ಎನಿಸಿಕೊಂಡಿದೆ. ಈ ಯೋಜನೆಗಳಿಗೆ ವಾರ್ಷಿಕ ಸುಮಾರು 50 ಸಾವಿರ ಕೋಟಿ ರೂ.ಗಿಂತ ಹೆಚ್ಚು ವೆಚ್ಚವಾಗುತ್ತಿದೆ. ಇದರಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆ ಎದುರಾಗುತ್ತಿದೆ ಎಂದು ಹೇಳಲಾಗಿದೆ. ಇತ್ತೀಚಿನ ಬಜೆಟ್‌ಗಳಲ್ಲಿ ಸರ್ಕಾರವು ಆದಾಯ ಹೆಚ್ಚಳಕ್ಕಿಂತ ವೆಚ್ಚವೇ ಜಾಸ್ತಿ ಇರುವುದರಿಂದ, ಬಜೆಟ್ ಗಾತ್ರದ ಬಹುದೊಡ್ಡ ಭಾಗವನ್ನು ಸಾಲದ ಮೂಲಕವೇ ಭರಿಸಲಾಗುತ್ತಿದೆ. ಈ ವರ್ಷ ಸುಮಾರು 27 ಕೋಟಿ ರೂ. ಗಳ ಕೊರತೆಯನ್ನು ಅಂದಾಜಿಸಲಾಗಿದೆ ಎಂದು ಹೇಳಲಾಗಿದೆ.

