
ಎಐ ಆಧಾರಿತ ಚಿತ್ರ
Karnataka Budget 2026| 22 ಸಾವಿರ ಕೋಟಿ ರೂ. ರಾಜಸ್ವ ಕೊರತೆ; ಗ್ಯಾರಂಟಿಗಳಿಗೆ ತುಸು ಕತ್ತರಿ?
ಗಣಿಗಾರಿಕೆಯ ಮೇಲೆ ತೆರಿಗೆ ವಿಧಿಸಿ 3 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ, ರಾಷ್ಟ್ರಪತಿಗಳಿಂದ ವಿಧೇಯಕಕ್ಕೆ ಇನ್ನೂ ಅಂಕಿತ ಸಿಗದ ಕಾರಣ ಈ ಆದಾಯ ಕೈತಪ್ಪಿದಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿನ ಆಯವ್ಯಯ ಮಂಡನೆಗೆ ಭರದಿಂದ ಸಿದ್ಧತೆ ಕೈಗೊಂಡಿದ್ದು, ಇಲಾಖಾವಾರು ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ, ಈ ಬಾರಿಯ ಬಜೆಟ್ ಸಿದ್ಧತೆ ಈ ಹಿಂದಿಗಿಂತಲೂ ಹೆಚ್ಚಿನ ಸವಾಲಾಗಿದೆ.
ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆಯ ಜತೆಗೆ ನಿರೀಕ್ಷಿತ ಮಟ್ಟದಲ್ಲಿ ರಾಜಸ್ವ ಸ್ವೀಕೃತಿ ಆಗಿಲ್ಲ. ಇದು ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಮತ್ತಷ್ಟು ಬಿಗಿಗಿಳಿಸಿದೆ. ಸುಮಾರು 22 ಸಾವಿರ ಕೋಟಿ ರೂ.ಗಳ ಭಾರೀ ರಾಜಸ್ವ ಕೊರತೆಯು ಬಜೆಟ್‌ನ ಆಶೋತ್ತರಗಳ ಮೇಲೆ ತಣ್ಣೀರು ಎರಚುವ ಭೀತಿ ಉಂಟಾಗಿದೆ.
ಆರ್ಥಿಕ ಇಲಾಖೆಯ ಮಾಹಿತಿ ಪ್ರಕಾರ 2025-26ನೇ ಸಾಲಿನಲ್ಲಿ ರಾಜ್ಯವು ಬರೋಬ್ಬರಿ 22 ಸಾವಿರ ಕೋಟಿ ರೂ.ಗಳ ರಾಜಸ್ವ ಸ್ವೀಕೃತಿಯ ಕೊರತೆಯನ್ನು ಎದುರಿಸುತ್ತಿದೆ. ಬಜೆಟ್‌ನಲ್ಲಿ ಅಂದಾಜಿಸಲಾಗಿದ್ದ 2,92,477 ಕೋಟಿ ರೂ.ಗಳ ರಾಜಸ್ವ ಸಂಗ್ರಹ ಗುರಿಯನ್ನು ತಲುಪುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಅಸಾಧ್ಯ ಎಂಬಂತಾಗಿದೆ.
ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ಪ್ರಮುಖ ತೆರಿಗೆ ಮೂಲಗಳಿಂದ ಬರಬೇಕಿದ್ದ ಆದಾಯದಲ್ಲಿ 14 ಸಾವಿರ ಕೋಟಿ ರೂ.ಗಳಷ್ಟು ಹಿನ್ನಡೆಯಾಗಿದೆ. ರಾಜಸ್ವ ಸಂಗ್ರಹದ ಗುರಿ ಸಾಧಿಸಲು ಸಾಧ್ಯವಾಗದೆ ಹಣಕಾಸು ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಬದ್ಧ ವೆಚ್ಚ, ಅಭಿವೃದ್ಧಿಗಾಗಿನ ಬಂಡವಾಳ ವೆಚ್ಚಕ್ಕೆ ಹಣ ಹೊಂದಿಸುವಲ್ಲಿ ಭಾರೀ ಏರುಪೇರಾಗುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 2026-27ನೇ ಸಾಲಿಗೆ ಕೊರತೆ ಬಜೆಟ್ ಮಂಡಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ಕೊರತೆ ಬಜೆಟ್‌ಗೆ ಪ್ರಮುಖ ಕಾರಣಗಳು
ಕೇಂದ್ರ ಸರ್ಕಾರವು ಜಿಎಸ್‌ಟಿ ದರಗಳನ್ನು ತರ್ಕಬದ್ಧಗೊಳಿಸಿದ್ದರಿಂದ ರಾಜ್ಯದ ಪಾಲಿನ ಸಂಗ್ರಹದಲ್ಲಿ ವಾರ್ಷಿಕ 9 ಸಾವಿರ ಕೋಟಿ ರೂ.ಗಳಷ್ಟು ಕಡಿತ ಉಂಟಾಗಿದೆ. ಗಣಿಗಾರಿಕೆಯ ಮೇಲೆ ತೆರಿಗೆ ವಿಧಿಸಿ 3 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ, ರಾಷ್ಟ್ರಪತಿಗಳಿಂದ ವಿಧೇಯಕಕ್ಕೆ ಇನ್ನೂ ಅಂಕಿತ ಸಿಗದ ಕಾರಣ ಈ ಆದಾಯ ಕೈತಪ್ಪಿದಂತಾಗಿದೆ.
ಪ್ರಮುಖ ವಲಯಗಳಲ್ಲಿನ ವ್ಯವಹಾರಿಕ ವಹಿವಾಟು ನಿರೀಕ್ಷಿತ ವೇಗ ಪಡೆದುಕೊಳ್ಳದಿರುವುದು ತೆರಿಗೆ ಸಂಗ್ರಹದ ಮೇಲೆ ಪರಿಣಾಮ ಬೀರಿದೆ. ನಿರೀಕ್ಷಿತ ಪ್ರಮಾಣದಲ್ಲಿ ರಾಜಸ್ವ ಸಂಗ್ರಹಣೆಯಾಗದಿರುವ ಹಿನ್ನೆಲೆಯಲ್ಲಿ 22 ಸಾವಿರ ಕೋಟಿ ರೂ. ಕೊರತೆಯಾಗಲಿವೆ ಎಂದು ಆರ್ಥಿಕ ಇಲಾಖೆ ಈಗಾಗಲೇ ಅಂದಾಜಿಸಿದೆ.
ನಾಲ್ಕು ಇಲಾಖೆಗಳಿಂದ ಗುರಿ ಮುಟ್ಟುವಲ್ಲಿ ವಿಫಲ
ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿರುವ ನಾಲ್ಕು ಪ್ರಮುಖ ಇಲಾಖೆಗಳು ಡಿಸೆಂಬರ್ ಅಂತ್ಯದ ವೇಳೆಗೆ ಗುರಿ ಮುಟ್ಟುವಲ್ಲಿ ವಿಫಲವಾಗಿವೆ. ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ಸಾರಿಗೆ ಇಲಾಖೆ ಮತ್ತು ಮುದ್ರಾಂಕ, ನೋಂದಣಿ ಇಲಾಖೆಯಿಂದ ನಿರೀಕ್ಷಿತಮಟ್ಟದಲ್ಲಿ ರಾಜಸ್ವ ಸ್ವೀಕಾರಗೊಂಡಿಲ್ಲ. ಈ ವಲಯಗಳಿಂದಲೇ ಒಟ್ಟು 13,728 ಕೋಟಿ ರೂ.ಗಳ ಕೊರತೆಯಾಗಿದೆ ಎಂಬುದು ಆರ್ಥಿಕ ಇಲಾಖೆಯ ಮೂಲಗಳು ಹೇಳಿವೆ.
ವಾಣಿಜ್ಯ ತೆರಿಗೆ ಇಲಾಖೆಯು ಆರ್ಥಿಕ ಇಲಾಖೆಗೆ ನೀಡಿರುವ ಮಾಹಿತಿ ಪ್ರಕಾರ, 1.20 ಲಕ್ಷ ಕೋಟಿ ರೂ.ಗಳ ವಾರ್ಷಿಕ ಗುರಿಯಲ್ಲಿ ಡಿಸೆಂಬರ್ ವೇಳೆಗೆ 90 ಸಾವಿರ ಕೋಟಿ ರೂ. ಸಂಗ್ರಹವಾಗಬೇಕಿತ್ತು. ಆದರೆ ಸಂಗ್ರಹವಾಗಿರುವುದು ಕೇವಲ 81,097 ಕೋಟಿ ರೂ. ಆಗಿದೆ. 8,903 ಕೋಟಿ ರೂ.ನಷ್ಟು ಕೊರತೆಯಾಗಿದೆ. ರಾಜ್ಯದ ಆದಾಯದ ಪ್ರಮುಖ ಮೂಲವಾದ ಅಬಕಾರಿ ಇಲಾಖೆಯು 40 ಸಾವಿರ ಕೋಟಿ ರೂ.ಗಳ ಗುರಿ ಹೊಂದಲಾಗಿತ್ತು. ಡಿಸೆಂಬರ್ ಅಂತ್ಯಕ್ಕೆ 30 ಸಾವಿರ ಕೋಟಿ ರೂ. ಬರಬೇಕಾಗಿತ್ತು. ಆದರೆ, 29,773 ಕೋಟಿ ರೂ. ಸಂಗ್ರಹವಾಗಿದೆ.
ಇಲ್ಲಿಯೂ 227 ಕೋಟಿ ರೂ. ಖೋತಾ ಆಗಿದೆ. ಸಾರಿಗೆ ಇಲಾಖೆಯಿಂದ 15 ಸಾವಿರ ಕೋಟಿ ರೂ.ಗಳ ಗುರಿ ಹೊಂದಲಾಗಿದ್ದು, ಡಿಸೆಂಬರ್ ವೇಳೆಗೆ 9,355 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಸುಮಾರು 1,895 ಕೋಟಿ ರೂ.ಗಳಷ್ಟು ಕೊರತೆಯಾಗಿದೆ.
ಇನ್ನು, ರಿಯಲ್ ಎಸ್ಟೇಟ್ ವಲಯದ ಮೇಲೆ ಅವಲಂಬಿತವಾಗಿರುವ ಮುದ್ರಾಂಕ ಮತ್ತು ನೋಂದಣಿ ಇಲಾಖೆಯು 28 ಸಾವಿರ ಕೋಟಿ ರೂ. ಗುರಿ ಹೊಂದಲಾಗಿತ್ತು. ಆದರೆ ಡಿಸೆಂಬರ್ ವೇಳೆಗೆ 18,297 ಕೋಟಿ ರೂ. ಸಂಗ್ರಹವಾಗಿದ್ದು, 2,703 ಕೋಟಿ ರೂ.ಗಳ ಹಿನ್ನಡೆ ಅನುಭವಿಸಿದೆ ಎಂದು ತಿಳಿದುಬಂದಿದೆ.
ಗ್ಯಾರಂಟಿ ಯೋಜನೆ, ಬದ್ಧ ವೆಚ್ಚದ ನಡುವಿನ ಸಂಘರ್ಷ
ರಾಜ್ಯ ಸರ್ಕಾರದ ಮುಂದಿರುವ ಅತಿ ದೊಡ್ಡ ಸವಾಲೆಂದರೆ ಬದ್ಧ ವೆಚ್ಚ ಹಾಗೂ ಗ್ಯಾರಂಟಿ ಯೋಜನೆಗಳ ನಿರ್ವಹಣೆಯಾಗಿದೆ. ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಮತ್ತು ಗೃಹಜ್ಯೋತಿ ಯೋಜನೆಗಳಿಗೆ ವಾರ್ಷಿಕವಾಗಿ ಸುಮಾರು 55 ಸಾವಿರ ಕೋಟಿ ರೂ. ನಿಂದ 60 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ಇದರೊಂದಿಗೆ ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತು ಸಾಲದ ಮೇಲಿನ ಬಡ್ಡಿ ಪಾವತಿಯಂತಹ ಬದ್ಧ ವೆಚ್ಚಗಳು ರಾಜ್ಯದ ಒಟ್ಟು ಬಜೆಟ್‌ನ ಬಹುಪಾಲನ್ನು ಆಕ್ರಮಿಸಿಕೊಳ್ಳುತ್ತವೆ.
ರಾಜಸ್ವ ಸಂಗ್ರಹದಲ್ಲಿ ಉಂಟಾಗಿರುವ 22 ಸಾವಿರ ಕೋಟಿ ರೂ.ಗಳ ಕೊರತೆಯು ನೇರವಾಗಿ ಬಂಡವಾಳ ವೆಚ್ಚದ ಮೇಲೆ ಪರಿಣಾಮ ಬೀರಲಿದೆ. ಅಂದರೆ ಹೊಸ ರಸ್ತೆಗಳು, ಮೇಲ್ಸೇತುವೆಗಳು, ನೀರಾವರಿ ಯೋಜನೆಗಳು ಮತ್ತು ಶಾಲೆ-ಆಸ್ಪತ್ರೆಗಳ ನಿರ್ಮಾಣಕ್ಕೆ ಹಣದ ಕೊರತೆ ಎದುರಾಗಲಿದೆ. ಇದು ರಾಜ್ಯದ ದೀರ್ಘಕಾಲದ ಅಭಿವೃದ್ಧಿಯ ದೃಷ್ಟಿಯಿಂದ ಆತಂಕಕಾರಿ ಸಂಗತಿಯಾಗಿದೆ ಎಂದು ಹೇಳಲಾಗಿದೆ.
ಬಜೆಟ್ ಮುಂದಿರುವ ಸವಾಲುಗಳು
ಸಿದ್ದರಾಮಯ್ಯ ಈ ಬಾರಿಯೂ ಉಳಿತಾಯದ ಬಜೆಟ್ ಮಂಡಿಸುವುದು ಅನುಮಾನವಾಗಿದೆ. ರಾಜ್ಯವು ಸಾಂಪ್ರದಾಯಿಕವಾಗಿ ಹಣಕಾಸು ಶಿಸ್ತನ್ನು ಪಾಲಿಸಿಕೊಂಡು ಬಂದ ರಾಜ್ಯವಾಗಿದ್ದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ವಿತ್ತೀಯ ಕೊರತೆಯ ಮಿತಿ ಮೀರುವ ಸಾಧ್ಯತೆಗಳಿವೆ. ರಾಜಸ್ವ ಕೊರತೆಯನ್ನು ನೀಗಿಸಲು ಸರ್ಕಾರ ಮತ್ತೆ ಮಾರುಕಟ್ಟೆಯಿಂದ ಹೆಚ್ಚಿನ ಸಾಲ ಪಡೆಯಬೇಕಾಗಬಹುದು. ಇದು ರಾಜ್ಯದ ಒಟ್ಟು ಸಾಲದ ಹೊರೆಯನ್ನು ಹೆಚ್ಚಿಸಲಿದೆ. ವಿವಿಧ ಇಲಾಖೆಗಳ ಅನುದಾನದಲ್ಲಿ ಕಡಿತಗೊಳಿಸುವುದು ಅನಿವಾರ್ಯವಾಗಬಹುದು. ಮೋಟಾರು ವಾಹನ ತೆರಿಗೆ, ಭೂ ಪರಿವರ್ತನೆ ಶುಲ್ಕ ಅಥವಾ ಸೆಸ್ಸುಗಳ ಮೂಲಕ ಹೆಚ್ಚುವರಿ ಆದಾಯ ಸಂಗ್ರಹಕ್ಕೆ ಸರ್ಕಾರ ಮುಂದಾಗಬಹುದು ಎನ್ನಲಾಗಿದೆ.
ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಸಾಧ್ಯತೆ?
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನಗಳಾದ ಗ್ಯಾರಂಟಿ ಯೋಜನೆಗಳಿಗೆ ಇರುವ ನಿಯಮಗಳನ್ನು ಕಠಿಣಗೊಳಿಸುವ ಸಾಧ್ಯತೆ ಇದೆ. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ಶ್ರೀಮಂತರು ಹೊಂದಿರುವ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವ ಮೂಲಕ ಸುಮಾರು 2 ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳನ್ನು ಕಡಿತಗೊಳಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಗ್ಯಾರಂಟಿಗಳಿಗೆ ವಾರ್ಷಿಕ 60 ಸಾವಿರ ಕೋಟಿ ರೂ. ವೆಚ್ಚವಾಗುತ್ತಿದೆ. ಇದನ್ನು 50 ಸಾವಿರ ಕೋಟಿ ರೂ.ಗಳಿಗೆ ಇಳಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಯೋಜನೆಗಳಿಗೆ ನಿಯಮಗಳನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆ ಮೂಲಕ ಜನಪ್ರಿಯತೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಒಂದಡೆಯಾದರೆ, ರಾಜ್ಯದ ಆರ್ಥಿಕತೆಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಮತ್ತೊಂದೆಡೆ ಇದೆ. 22 ಸಾವಿರ ಕೋಟಿ ರೂ.ಗಳ ರಾಜಸ್ವ ಕೊರತೆಯು ಕೇವಲ ಒಂದು ಅಂಕಿಅಂಶವಲ್ಲವಾಗಿರದೆ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುವ ಮುನ್ಸೂಚನೆಯಾಗಿದೆ. ಬಜೆಟ್‌ನಲ್ಲಿ ಸಿದ್ದರಾಮಯ್ಯ ಇದನ್ನು ಯಾವ ರೀತಿಯಲ್ಲಿ ಹೊಂದಾಣಿಕೆ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

