Budget 26-27:  ಜಿಎಸ್‌ಟಿ ಸಮಸ್ಯೆ ಪರಿಹಾರ: ʼಕರ ಸಮಾಧಾನʼ ಮುಂದೂಡಲು ಸಿಎಂಗೆ ಒತ್ತಾಯ
x

Budget 26-27: ಜಿಎಸ್‌ಟಿ ಸಮಸ್ಯೆ ಪರಿಹಾರ: ʼಕರ ಸಮಾಧಾನʼ ಮುಂದೂಡಲು ಸಿಎಂಗೆ ಒತ್ತಾಯ

ಬಿಯಾಂಡ್‌ ಬೆಂಗಳೂರಿಗಾಗಿ ಪ್ರತ್ಯೇಕ ಎಂಎಸ್‌ಎಇ ನೀತಿ, ಸ್ವಾಯತ್ತ ಟೌನ್‌ಶಿಪ್‌, ಮೂಲಸೌಕರ್ಯಕ್ಕೆ 500 ಕೋಟಿ ರೂ.ಗಳ ವಿಶೇಷ ಅನುದಾನ ಸೇರಿದಂತೆ ಹಲವು ಅಂಶಗಳ ಮನವಿಯನ್ನು ಸಲ್ಲಿಕೆ ಮಾಡಲಾಗಿದೆ.


Click the Play button to hear this message in audio format

ತೆರಿಗೆ ವಿವಾದಗಳ ಇತ್ಯರ್ಥಕ್ಕೆ ಜಾರಿಯಲ್ಲಿರುವ ಕರ ಸಮಾಧಾನ ಯೋಜನೆಯನ್ನು ಡಿಸೆಂಬರ್ 2026ರವರೆಗೆ ವಿಸ್ತರಿಸಬೇಕು ಎಂದು ಕೈಗಾರಿಕಾ ಸಂಘಟನೆ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ಸೋಮವಾರ ಬಜೆಟ್‌ ಮಂಡನೆಗೆ ಸಿದ್ಧತೆ ಕಾರ್ಯ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಭೆಯಲ್ಲಿ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಒತ್ತಾಯಿಸಿದೆ.

ಜಿಎಸ್‌ಟಿ ಜಾರಿಗೆ ಬರುವ ಮುನ್ನ ಇದ್ದ ಹಳೆಯ ತೆರಿಗೆ ಬಾಕಿಗಳನ್ನು ಸುಲಭವಾಗಿ ತೀರಿಸಲು ರಾಜ್ಯ ಸರ್ಕಾರ ಈ ವಿಶೇಷ ಯೋಜನೆಯನ್ನು ತಂದಿತ್ತು. ಇದರ ಅಡಿಯಲ್ಲಿ ಕರ್ನಾಟಕ ಮೌಲ್ಯವರ್ಧಿತ ತೆರಿಗೆ (KVAT), ಕೇಂದ್ರ ಮಾರಾಟ ತೆರಿಗೆ (CST,) ಅಬಕಾರಿ ಮತ್ತು ಮನರಂಜನಾ ತೆರಿಗೆಗೆ ಸಂಬಂಧಿಸಿದ ಹಳೆಯ ವಿವಾದಗಳನ್ನು ಬಗೆಹರಿಸಿಕೊಳ್ಳಲು ಅವಕಾಶವಿದೆ. ಮುಖ್ಯವಾಗಿ, ಈ ಯೋಜನೆಯಲ್ಲಿ ಬಾಕಿ ಇರುವ ದಂಡ ಮತ್ತು ಬಡ್ಡಿಯ ಮೇಲೆ ಶೇ. 100 ರಷ್ಟು ರಿಯಾಯಿತಿ ಸಿಗಲಿದೆ. ಇದು ಸಣ್ಣ ಕೈಗಾರಿಕೆಗಳ ಆರ್ಥಿಕ ಸಮಸ್ಯೆಗಳಿಗೆ ಸಹಕಾರಿಯಾಗಿದ್ದು, ಈ ವರ್ಷವೂ ಈ ಯೋಜನೆಯನ್ನು ಮುಂದುವರಿಸಬೇಕೆಂಬುದು ಸಣ್ಣ ಕೈಗಾರಿಕೋದ್ಯಮಿಗಳ ಒತ್ತಾಯವಾಗಿದೆ.

ಅಲ್ಲದೆ, ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ) ಮೂಲಕ ನೀಡಲಾಗುವ ಶೇ. 5.5ರ ಬಡ್ಡಿ ಸಹಾಯಧನ ಯೋಜನೆಯನ್ನು ಸಾಮಾನ್ಯ ವರ್ಗದ ಕೈಗಾರಿಕೆಗಳಿಗೂ ಅನ್ವಯವಾಗುವಂತೆ ಎಂಟು ವರ್ಷಗಳ ಅವಧಿಗೆ ವಿಸ್ತರಿಸಬೇಕು ಎಂಬ ಬೇಡಿಕೆಯನ್ನೂ ಕಾಸಿಯಾ ಮಂಡಿಸಿದೆ.

ಪ್ರತ್ಯೇಕ ಎಂಎಸ್‌ಎಇ ನೀತಿ ಜಾರಿಗೆ ಎಫ್‌ಕೆಸಿಸಿಐ ಆಗ್ರಹ

2026-27ನೇ ಸಾಲಿನ ರಾಜ್ಯದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಡಾಲರ್ ಗುರಿಯತ್ತ ಕೊಂಡೊಯ್ಯಲು ಪೂರಕವಾದ ಅಂಶಗಳನ್ನು ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಎಫ್‌ಕೆಸಿಸಿಐ ಮನವಿ ಮಾಡಿದೆ. ಕೈಗಾರಿಕಾ ಚಟುವಟಿಕೆಗಳು ಕೇವಲ ಬೆಂಗಳೂರಿಗೆ ಸೀಮಿತವಾಗದೆ, ರಾಜ್ಯದ ಎರಡನೇ ಮತ್ತು ಮೂರನೇ ಹಂತದ ನಗರಗಳಿಗೂ ವಿಸ್ತರಿಸಬೇಕು. ಇದಕ್ಕಾಗಿ ಪ್ರತ್ಯೇಕ ಎಂಎಸ್‌ಎಂಇ ನೀತಿಯನ್ನು ಜಾರಿಗೆ ತರಬೇಕು ಹಾಗೂ ವಿಶೇಷ ಉತ್ತೇಜಕ ಕ್ರಮಗಳ ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆನೆಬಲ ನೀಡಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಆಗ್ರಹಿಸಿದೆ.

ರಾಜ್ಯದ ಎಲ್ಲಾ ಕೈಗಾರಿಕಾ ಎಸ್ಟೇಟ್‌ಗಳು ಮತ್ತು ಪಾರ್ಕ್‌ಗಳಲ್ಲಿ ರಸ್ತೆ, ನೀರು ಹಾಗೂ ವಿದ್ಯುತ್‌ನಂತಹ ಮೂಲಸೌಕರ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೆಚ್ಚಿಸಬೇಕು. ಕೈಗಾರಿಕಾ ಪ್ರದೇಶಗಳನ್ನು ಸ್ವಾಯತ್ತ ಟೌನ್‌ಶಿಪ್‌ಗಳಾಗಿ ಘೋಷಿಸಿ, ಅಲ್ಲಿನ ಆಡಳಿತವನ್ನು ಸರಳೀಕರಿಸಬೇಕು ಎಂಬುದು ಎಫ್‌ಕೆಸಿಸಿಐ ಪ್ರಮುಖ ಬೇಡಿಕೆಯಾಗಿದೆ. ಕೈಗಾರಿಕೆ ಮತ್ತು ಸೇವಾ ವಲಯದ ಉದ್ಯಮಗಳ ಮೇಲೆ ಹೇರಲಾಗುತ್ತಿರುವ ಆಸ್ತಿ ತೆರಿಗೆಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಅವುಗಳನ್ನು ತರ್ಕಬದ್ಧಗೊಳಿಸಬೇಕು. ಅತಿಯಾದ ತೆರಿಗೆ ಹೊರೆಯಿಂದ ಉದ್ಯಮಗಳು ನಲುಗದಂತೆ ರಕ್ಷಿಸುವುದು ಸರ್ಕಾರದ ಆದ್ಯತೆಯಾಗಬೇಕು. ಉದ್ಯಮಿಗಳು ಪರವಾನಗಿ ಮತ್ತು ನವೀಕರಣಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು 'ಏಕಗವಾಕ್ಷಿ' ಪದ್ಧತಿಯನ್ನು ಮತ್ತಷ್ಟು ಬಲಪಡಿಸಬೇಕು. ಅಪ್ರಸ್ತುತವಾಗಿರುವ ಮತ್ತು ಹಳೆಯದಾದ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಬೇಕು ಎಂದು ಒತ್ತಾಯಿಸಲಾಗಿದೆ.

ಭವಿಷ್ಯದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಹಸಿರು ಇಂಧನ ಬಳಕೆಗೆ ಸರ್ಕಾರ ವಿಶೇಷ ರಿಯಾಯಿತಿ ನೀಡಬೇಕು. ಇದರೊಂದಿಗೆ, ಉದ್ಯಮಗಳಿಗೆ ಅಗತ್ಯವಿರುವ ನೈಪುಣ್ಯ ಹೊಂದಿದ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸಲು 'ಕೌಶಲ್ಯಾಭಿವೃದ್ಧಿ' ಕೇಂದ್ರಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಕೋರಲಾಗಿದೆ. ಕರ್ನಾಟಕದ ಪ್ರವಾಸೋದ್ಯಮವನ್ನು ಕೈಗಾರಿಕೆಯಾಗಿ ಪರಿಗಣಿಸಿ ವಿಶೇಷ ಸವಲತ್ತು ನೀಡಬೇಕು. ಅಲ್ಲದೆ, ಕೃಷಿ ಉತ್ಪಾದನಾ ವಲಯಕ್ಕೆ ವೇಗ ನೀಡುವ ಮೂಲಕ ರೈತರ ಆದಾಯ ಹೆಚ್ಚಿಸಲು ಮತ್ತು ಕೃಷಿ ಆಧಾರಿತ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಉತ್ಪಾದನಾ ವಲಯದಲ್ಲಿ ಉತ್ತಮ ಬೆಳವಣಿಗೆ ಸಾಧಿಸಲು ಬಂಡವಾಳ ಹೂಡಿಕೆಗೆ ರಿಯಾಯಿತಿ ನೀಡಬೇಕು. ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳಿಂದ ಕೈಗಾರಿಕಾ ವಲಯಕ್ಕೆ ಸುಲಭವಾಗಿ ಸಾಲ ಸಿಗುವಂತಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮೂಲಸೌಕರ್ಯಕ್ಕೆ 500 ಕೋಟಿ ರೂ.ಗಳ ವಿಶೇಷ ಅನುದಾನ - ಕಾಸಿಯಾ ಒತ್ತಾಯ

ರಾಜ್ಯದಲ್ಲಿನ ಕೆಐಎಡಿಬಿ, ಕೆಎಸ್‌ಎಸ್‌ಐಡಿಸಿ ಮತ್ತು ಖಾಸಗಿ ಕೈಗಾರಿಕಾ ವಸಾಹತುಗಳಲ್ಲಿ ಮೂಲಸೌಕರ್ಯಗಳು ಹದಗೆಟ್ಟಿವೆ. ಇವುಗಳ ಸಮಗ್ರ ಮೇಲ್ದರ್ಜೀಕರಣಕ್ಕಾಗಿ ಸರ್ಕಾರವು ಒಂದು ಬಾರಿಯ ಕ್ರಮವಾಗಿ 500 ಕೋಟಿ ರೂ.ಗಳ ವಿಶೇಷ ಅನುದಾನ ಮೀಸಲಿಡಬೇಕು. ಅಲ್ಲದೆ, ಖಾಸಗಿ ಕೈಗಾರಿಕಾ ಪ್ರದೇಶಗಳನ್ನು ಅಧಿಕೃತವಾಗಿ ಖಾಸಗಿ ಕೈಗಾರಿಕಾ ಪ್ರದೇಶಗಳು ಎಂದು ಘೋಷಿಸಬೇಕು. ಕೈಗಾರಿಕೆಗಳಿಂದ ಸಂಗ್ರಹವಾಗುವ ಆಸ್ತಿ ತೆರಿಗೆಯನ್ನು ಅದೇ ಪ್ರದೇಶದ ಅಭಿವೃದ್ಧಿಗೆ ಬಳಸುತ್ತಿಲ್ಲ. ಕೈಗಾರಿಕೆಗಳಿಂದ ವಸೂಲಾಗುವ ಆಸ್ತಿ ತೆರಿಗೆಯನ್ನು ಪ್ರತ್ಯೇಕಿಸಿ, ಅದರಲ್ಲಿ ಕನಿಷ್ಠ ಶೇ. 50ರಷ್ಟು ಹಣವನ್ನು ಕಡ್ಡಾಯವಾಗಿ ಆಯಾ ಕೈಗಾರಿಕಾ ಪ್ರದೇಶದ ರಸ್ತೆ, ಚರಂಡಿ ಹಾಗೂ ಇತರ ಸೌಲಭ್ಯಗಳ ಅಭಿವೃದ್ಧಿಗೇ ಬಳಸಬೇಕು ಎಂಬ ಪ್ರಸ್ತಾವನೆಯನ್ನು ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್. ಬಿರಾದರ, ಗೌರವ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಹುಸೇನ್ ಸಲ್ಲಿಕೆ ಮಾಡಿದರು.

ಜಿಎಸ್‌ಟಿ ನಿಯಮದಡಿ ವಿದ್ಯುತ್ ಮೇಲೆ ಇನ್‌ಪುಟ್ ಕ್ರೆಡಿಟ್ ಪಡೆಯಲು ಅವಕಾಶವಿಲ್ಲದ ಕಾರಣ, ಕೈಗಾರಿಕೆಗಳ ಮೇಲಿನ ವಿದ್ಯುತ್ ತೆರಿಗೆಯನ್ನು ಸಂಪೂರ್ಣ ಹಿಂಪಡೆಯಬೇಕು. ಇದರೊಂದಿಗೆ, ಸಾಲದ ಮೇಲಿನ ಮುದ್ರಾಂಕ ಶುಲ್ಕವನ್ನು ಪ್ರಸ್ತುತ ಇರುವ ಶೇ. 0.5 ರಿಂದ ಶೇ. 0.1ಕ್ಕೆ ಇಳಿಸಬೇಕು ಮತ್ತು ಅಡಮಾನ ಮೇಲಿನ ಗರಿಷ್ಠ ಮಿತಿಯನ್ನು 50 ಸಾವಿರ ರೂ.ಗಳಿಗೆ ನಿಗದಿಪಡಿಸಬೇಕು. ಸಣ್ಣ ಉದ್ದಿಮೆದಾರರು ಈಗಾಗಲೇ ಬ್ಯಾಂಕ್ ಸಾಲ ಪಡೆದು ಯಂತ್ರೋಪಕರಣ ಮತ್ತು ಕಟ್ಟಡಗಳ ಮೇಲೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಹೊಸ ವಿದ್ಯುತ್ ಸಂಪರ್ಕ ಪಡೆಯಲು ಆಕ್ಯುಪೆನ್ಸಿ ಸರ್ಟಿಫಿಕೇಟ್ (ಒಸಿ) ಮತ್ತು ಕಂಪ್ಲೀಷನ್ ಸರ್ಟಿಫಿಕೇಟ್ (ಸಿಸಿ) ಕಡ್ಡಾಯಗೊಳಿಸಿರುವುದು ಉದ್ಯಮಿಗಳಿಗೆ ಹೊರೆಯಾಗಿದೆ. ಹೀಗಾಗಿ, ಹೊಸ ಸಂಪರ್ಕಕ್ಕೆ ಇವುಗಳಿಂದ ಒಂದು ಬಾರಿಯ ವಿನಾಯಿತಿ ನೀಡದಿದ್ದರೆ ಅನೇಕ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ತಲುಪಲಿವೆ ಎಂದು ಎಂದು ತಿಳಿಸಿದ್ದಾರೆ.

Read More
Next Story