
PU Result: ನಗರವನ್ನೂ ಮೀರಿದ ಗ್ರಾಮೀಣ ಪ್ರತಿಭೆಗಳು: ಮರು ಪರೀಕ್ಷೆ ಯಾವಾಗ? ಇಲ್ಲಿದೆ ಎಲ್ಲ ಮಾಹಿತಿ
ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ಒಟ್ಟು ಶೇ. 86.48ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕಳೆದ ವರ್ಷಕ್ಕಿಂತ ಪ್ರಗತಿ ದಾಖಲಿಸಿದ್ದಾರೆ. ಕಳೆದ ವರ್ಷ ಶೇ. 73.45 ರಷ್ಟು ಫಲಿಂತಾಂಶ ಬಂದಿತ್ತು.
2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಿಸಿದ್ದು, ಈ ಬಾರಿ ರಾಜ್ಯದಲ್ಲಿ ಒಟ್ಟು ಶೇ. 86.48ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕಳೆದ ವರ್ಷಕ್ಕಿಂತ ಪ್ರಗತಿ ದಾಖಲಿಸಿದ್ದಾರೆ. ಕಳೆದ ವರ್ಷ ಶೇ. 73.45 ರಷ್ಟು ಫಲಿಂತಾಂಶ ಬಂದಿದ್ದು, ಈ ಬಾರಿ ಶೇ. 86.48 ರಷ್ಟು ಫಲಿತಾಂಶ ಹೊರಬಿದ್ದಿದ್ದೆ. ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ಸುಧಾರಣೆ ಕಂಡಿದ್ದು, ಬಾಲಕಿಯರು, ಗ್ರಾಮೀಣ ವಿದ್ಯಾರ್ಥಿಗಳು ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಬಾಲಕರಿಗಿಂತ ಬಾಲಕಿಯರೇ ಹೆಚ್ಚಿನ ಸಾಧನೆ ಮಾಡಿದ್ದಾ ರೆ. ಬಾಲಕಿಯರು ಶೇ. 88.70ರಷ್ಟು ಉತ್ತೀರ್ಣರಾಗಿದ್ದರೆ, ಬಾಲಕರು ಶೇ. 83.65ರಷ್ಟು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ. 87.62ರಷ್ಟು ಮತ್ತು ನಗರ ಭಾಗದಲ್ಲಿ ಶೇ. 85.95ರಷ್ಟು ಫಲಿತಾಂಶ ಬಂದಿದೆ. ಫೆ. 28ರಿಂದ ಮಾ. 17ರವರೆಗೆ ರಾಜ್ಯದ 1,217 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. 6,32,200 ವಿದ್ಯಾರ್ಥಿಗಳು ಹಾಜರಾಗಿದ್ದು, 5,46,698 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಭಾಗವಾರು ಫಲಿತಾಂಶ
ಪ್ರತಿ ವರ್ಷದಂತೆ ಈ ಬಾರಿಯೂ ವಿಜ್ಞಾನ ವಿಭಾಗವು ಅತಿ ಹೆಚ್ಚು ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗವು ಶೇ. 91.69ರಷ್ಟು ಫಲಿತಾಂಶ ಕಂಡರೆ, ವಾಣಿಜ್ಯ ವಿಭಾಗದಲ್ಲಿ ಶೇ. 88.04 ರಷ್ಟು ಫಲಿತಾಂಶ ಹೊರಬಿದ್ದಿದ್ದೆ. ಕಲಾ ವಿಭಾಗದಲ್ಲಿ ಶೇ. 72.86ರಷ್ಟು ಫಲಿತಾಂಶ ಬಂದಿದೆ.
ರಾಜ್ಯದ ಜಿಲ್ಲಾವಾರು ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳು ಪ್ರಾಬಲ್ಯ ಸಾಧಿಸಿದೆ. ಉಡುಪಿ ಜಿಲ್ಲೆಯು ಶೇ. 96.39 ರಷ್ಟು ಫಲಿತಾಂಶ ಪಡೆಯುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯು ಶೇ. 96.35 ರಷ್ಟು ಫಲಿತಾಂಶ ಪಡೆಯುವ ಮೂಲಕ ದ್ವಿತೀಯ ಸ್ಥಾನ ಗಳಿಸಿದೆ. ಕೊಡಗು ಜಿಲ್ಲೆಯು ಶೇ. 92.34 ರಷ್ಟು ಫಲಿತಾಂಶ ಬಂದಿದ್ದು, ತೃತೀಯ ಸ್ಥಾನ ಪಡೆದುಕೊಂಡಿದೆ. ಯಾದಗಿರಿ ಜಿಲ್ಲೆಯು ಶೇ. 71.21ರಷ್ಟು ಫಲಿತಾಂಶದೊಂದಿಗೆ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಮಾಧ್ಯಮವಾರು ಫಲಿತಾಂಶ
ಫಲಿತಾಂಶದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಿಕ್ಷಣ ಸಚಿವ ಮಧುಬಂಗಾರಪ್ಪ, ಇಂಗ್ಲೀಷ್ ಮಾಧ್ಯಮದ ಕಾಲೇಜುಗಳು ಶೇ. 90.63ರಷ್ಟು ಫಲಿತಾಂಶ ಕಂಡಿವೆ. ಕನ್ನಡ ಮಾಧ್ಯಮ ಕಾಲೇಜುಗಳು ಶೇ. 76.41ರಷ್ಟು ಫಲಿತಾಂಶ ಪಡೆದುಕೊಂಡಿವೆ. ವಸತಿ ಸಹಿತ ಪದವಿ ಪೂರ್ವ ಕಾಲೇಜುಗಳು ಶೇ. 93.99ರಷ್ಟು ಅತಿ ಹೆಚ್ಚು ಫಲಿತಾಂಶ ಪಡೆದಿದ್ದರೆ, ಸರ್ಕಾರಿ ಕಾಲೇಜುಗಳು ಶೇ. 78.72ರಷ್ಟು ಫಲಿತಾಂಶ ದಾಖಲಿಸಿವೆ. ಒಟ್ಟು 409 ಕಾಲೇಜುಗಳು ಶೇ. 100ರಷ್ಟು ಫಲಿತಾಂಶ ಪಡೆದಿವೆ ಎಂದು ಹೇಳಿದರು.
1,70,529 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣವಾಗಿದ್ದರೆ, 2,95,385 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಗಣಿತ ವಿಷಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದುಕೊಂಡಿದ್ದಾರೆ. 10,982 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದಾರೆ. ಉಳಿದಂತೆ ಕಂಪ್ಯೂಟರ್‌ನಲ್ಲಿ 6,232, ಸಂಸ್ಕೃತದಲ್ಲಿ 6,060 ಮತ್ತು ಕನ್ನಡದಲ್ಲಿ 5,228 ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ. ಒಟ್ಟು 1,213 ವಿಶೇಷ ಚೇತನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 927 ವಿದ್ಯಾರ್ಥಿಗಳು (ಶೇ. 76.42) ಉತ್ತೀರ್ಣರಾಗಿದ್ದಾರೆ ಎಂದರು.
ಮರುಮೌಲ್ಯಮಾಪನ ಹಾಗೂ ದ್ವಿತೀಯ ಪರೀಕ್ಷೆ-2
ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಥವಾ ಅಂಕ ಸುಧಾರಿಸಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಮಂಡಳಿಯು ಅವಕಾಶ ನೀಡಿದೆ. ಉತ್ತರ ಪತ್ರಿಕೆಯ ಪ್ರತಿಗಾಗಿ ಅರ್ಜಿ ಸಲ್ಲಿಸಲು ಏ.10 ರಿಂದ ಏ.15ರವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ವಿಷಯಕ್ಕೆ 530 ರೂ. ಶುಲ್ಕ ನಿಗದಿ ಮಾಡಲಾಗಿದೆ. ಮರುಮೌಲ್ಯಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಏ.13 ರಿಂದ ಏ.19 ರವರೆಗೆ ಅವಕಾಶ ಇದ್ದು, ಪ್ರತಿ ವಿಷಯಕ್ಕೆ 1,670 ರೂ. ನಿಗದಿ ಮಾಡಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ-2 ಏ. 30 ರಿಂದ ಮೇ 13 ರವರೆಗೆ ನಡೆಯಲಿದೆ. ಇದಕ್ಕೆ ನೋಂದಾಯಿಸಿಕೊಳ್ಳಲು ಏ.17 ಕೊನೆಯ ದಿನಾಂಕವಾಗಿದೆ ಎಂದು ತಿಳಿಸಿದರು.

