
ವಿದ್ಯಾರ್ಥಿಗಳ ಅಂಕಪಟ್ಟಿಯನ್ನು National Academic Depository (NAD) ಮತ್ತು DigiLocker ಮೂಲಕ ಒದಗಿಸಲು ನಿರ್ಧರಿಸಲಾಗಿದೆ.
ದ್ವಿತೀಯ ಪಿಯು ಫಲಿತಾಂಶ: ಈ ಬಾರಿ ರಿಸಲ್ಟ್ ದಿನವೇ ಡಿಜಿಲಾಕರ್‌ನಲ್ಲಿ ಅಂಕಪಟ್ಟಿ
ಡಿಜಿಲಾಕರ್ ಹೊಸ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ಯಾವುದೇ ಅಡೆತಡೆಯಿಲ್ಲದೆ, ತ್ವರಿತವಾಗಿ ಮತ್ತು ಸುರಕ್ಷಿತವಾಗಿ ತಮ್ಮ ಅಂಕಪಟ್ಟಿಯನ್ನು ತಮ್ಮ ಮೊಬೈಲ್‌ನಲ್ಲೇ ಡೌನ್‌ಲೋಡ್ ಮಾಡಿಕೊಳ್ಳಬಹುದು.
2025-26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಇದೇ ಮೊದಲ ಬಾರಿಗೆ, ಫಲಿತಾಂಶ ಪ್ರಕಟವಾದ ದಿನವೇ (ಏಪ್ರಿಲ್ 9) ವಿದ್ಯಾರ್ಥಿಗಳ ಅಂಕಪಟ್ಟಿಯನ್ನು National Academic Depository (NAD) ಮತ್ತು DigiLocker ಮೂಲಕ ಒದಗಿಸಲು ನಿರ್ಧರಿಸಲಾಗಿದೆ.
ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದಾಗ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿ ವಿದ್ಯಾರ್ಥಿಗಳು ಪರದಾಡಬೇಕಾಗುತ್ತಿತ್ತು. ಆದರೆ ಈ ಹೊಸ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳು ಯಾವುದೇ ಅಡೆತಡೆಯಿಲ್ಲದೆ, ತ್ವರಿತವಾಗಿ ಮತ್ತು ಸುರಕ್ಷಿತವಾಗಿ ತಮ್ಮ ಅಂಕಪಟ್ಟಿಯನ್ನು ತಮ್ಮ ಮೊಬೈಲ್‌ನಲ್ಲೇ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಮುಂದಿನ ವರ್ಷದಿಂದ ಕಾಗದದ ಅಂಕಪಟ್ಟಿ ಇರಲ್ಲ!
ಈ ವರ್ಷ ವಿದ್ಯಾರ್ಥಿಗಳಿಗೆ ಭೌತಿಕ ಅಂಕಪಟ್ಟಿಯ ಪ್ರತಿಯನ್ನು ನೀಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ, ಮುಂದಿನ ಶೈಕ್ಷಣಿಕ ಸಾಲಿನಿಂದ (2026-27) ಕಾಗದ ರೂಪದ ಭೌತಿಕ ಪ್ರತಿಗಳನ್ನು ವಿತರಿಸುವ ಪದ್ಧತಿಗೆ ಬ್ರೇಕ್ ಹಾಕಲಾಗುತ್ತಿದೆ. ಬದಲಿಗೆ, ವಿದ್ಯಾರ್ಥಿಗಳ ದಾಖಲೆಗಳನ್ನು APAAR (Automated Permanent Academic Account Registry) ಐಡಿ ಮೂಲಕ ಕಡ್ಡಾಯವಾಗಿ NAD-DigiLocker ನಲ್ಲೇ ಒದಗಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಉನ್ನತ ಶಿಕ್ಷಣ, ಉದ್ಯೋಗಕ್ಕೂ ಇದೇ ಅಧಿಕೃತ
ಡಿಜಿಲಾಕರ್‌ನಲ್ಲಿ ಲಭ್ಯವಾಗುವ ಅಂಕಪಟ್ಟಿಗಳು ಸಂಪೂರ್ಣವಾಗಿ ಡಿಜಿಟಲ್ ಎನ್‌ಕ್ರಿಪ್ಟ್ ಆಗಿದ್ದು, ಅತ್ಯಂತ ಸುರಕ್ಷಿತವಾಗಿರುತ್ತವೆ. ಉನ್ನತ ವ್ಯಾಸಂಗಕ್ಕಾಗಿ ರಾಜ್ಯದ ಒಳಗೆ ಹಾಗೂ ಹೊರಗೆ, ಜೊತೆಗೆ ವಿವಿಧ ಸರ್ಕಾರಿ ಹಾಗೂ ಖಾಸಗಿ ನೇಮಕಾತಿ ಪ್ರಕ್ರಿಯೆಗಳಲ್ಲಿ ಇದೇ ಡಿಜಿಲಾಕರ್ ಅಂಕಪಟ್ಟಿಯನ್ನು 'ದೃಢೀಕೃತ ಹಾಗೂ ಅಧಿಕೃತ ದಾಖಲೆ' ಎಂದು ಪರಿಗಣಿಸುವಂತೆ ಸರ್ಕಾರ ಎಲ್ಲಾ ಪ್ರಾಧಿಕಾರಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಏನಿದು NAD - DigiLocker?
ನ್ಯಾಷನಲ್ ಅಕಾಡೆಮಿಕ್ ಡೆಪಾಸಿಟರಿ (NAD) ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷಿ ಡಿಜಿಟಲ್ ಯೋಜನೆಯಾಗಿದೆ. ವಿದ್ಯಾರ್ಥಿಗಳ ಅಂಕಪಟ್ಟಿ, ಪದವಿ, ಮತ್ತು ಪ್ರಮಾಣಪತ್ರಗಳನ್ನು ಸುರಕ್ಷಿತವಾಗಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವುದು ಇದರ ಉದ್ದೇಶ. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ ಕಾರ್ಯನಿರ್ವಹಿಸುವ 'ಡಿಜಿಲಾಕರ್' ವೇದಿಕೆಯೊಂದಿಗೆ ಇದನ್ನು ಸಂಯೋಜಿಸಲಾಗಿದ್ದು, ವಿದ್ಯಾರ್ಥಿಗಳು 24x7 ಎಲ್ಲಿಂದಲಾದರೂ ತಮ್ಮ ದಾಖಲೆಗಳನ್ನು ಪಡೆಯಬಹುದು.
ಲಾಭಗಳೇನು?
- ಫಲಿತಾಂಶ ಬಂದ ಕ್ಷಣವೇ ಅಂಕಪಟ್ಟಿ ಕೈಸೇರುತ್ತದೆ.
- ಅಂಕಪಟ್ಟಿ ಕಳೆದುಹೋಗುವ, ಹರಿಯುವ ಭಯವಿರಲ್ಲ.
- ಶಾಲಾ-ಕಾಲೇಜುಗಳಿಗೆ ಅಲೆದಾಡುವುದು ತಪ್ಪುತ್ತದೆ.
- ನಕಲಿ ಅಂಕಪಟ್ಟಿಗಳ ಹಾವಳಿಗೆ ಬ್ರೇಕ್ ಬೀಳಲಿದೆ.
- ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ಸುಲಭ ಹಾಗೂ ಪಾರದರ್ಶಕವಾಗಲಿದೆ.

