
ಎನ್‌ಎಂಡಿಸಿ ಅಕ್ರಮ ಗಣಿಗಾರಿಕೆ ಆರೋಪ: ಕೇಂದ್ರ-ರಾಜ್ಯ ಸಂಘರ್ಷ; ತನಿಖೆಗೆ ಆದೇಶ
ಈ ಹಿಂದೆ ಬೆಂಗಳೂರಿನ ಎಚ್‌ಎಂಟಿ ಸಂಸ್ಥೆ ಆವರಣಕ್ಕೆ ಸಂಬಂಧಿಸಿದ ಅರಣ್ಯ ಭೂಮಿ ಬಳಕೆ ಸಂಬಂಧ ಎಚ್.ಡಿ. ಕುಮಾರಸ್ವಾಮಿ ಮತ್ತು ಈಶ್ವರ ಖಂಡ್ರೆ ನಡುವೆ ಪತ್ರಸಮರ ಮತ್ತು ತಿಕ್ಕಾಟ ನಡೆದಿತ್ತು.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿಮಲೈ ಬ್ಲಾಕ್‌ನಲ್ಲಿರುವ ಕೇಂದ್ರ ಸರ್ಕಾರ ಸ್ವಾಮ್ಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ(ಎನ್ ಎಂಡಿಸಿ) ಒಡೆತನದ ಕುಮಾರಸ್ವಾಮಿ ಕಬ್ಬಿಣದ ಅದಿರು ಗಣಿ (ಕೆಐಒಎಂ) ಪ್ರದೇಶದಿಂದ ಅಕ್ರಮವಾಗಿ ಅದಿರು ಸಾಗಣೆ ಪ್ರಕರಣವು ಕೇಂದ್ರ- ರಾಜ್ಯ ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.
ಎನ್ ಡಿಎಂಸಿ ವಿರುದ್ಧದ ಅಕ್ರಮ ಅದಿರು ಸಾಗಣೆ ಆರೋಪ ಸಂಬಂಧ ತನಿಖೆಗೆ ಆದೇಶಿಸಿರುವುದು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದೆ.
ಈ ಹಿಂದೆ ಬೆಂಗಳೂರಿನ ಎಚ್‌ಎಂಟಿ ಸಂಸ್ಥೆ ಆವರಣಕ್ಕೆ ಸಂಬಂಧಿಸಿದ ಅರಣ್ಯ ಭೂಮಿ ಬಳಕೆ ಸಂಬಂಧ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ನಡುವೆ ಪತ್ರಸಮರ. ಈಗ ಮತ್ತೆ ಅವರಿಬ್ಬರ ನಡುವೆ ಸಮರಕ್ಕೆ ಎನ್‌ಎಂಡಿಸಿ ಕಾರಣವಾಗುವ ಸಾಧ್ಯತೆ ಕಂಡುಬಂದಿದೆ.
ಇದೇನು ಪ್ರಕರಣ?
ಜ.16ರಂದು ಯಾವುದೇ ದಾಖಲೆಗಳಿಲ್ಲದೆ ಬಳ್ಳಾರಿ ಗಣಿ ಪ್ರದೇಶದಲ್ಲಿ ಸಾಗುತ್ತಿದ್ದ ಲಾರಿಯನ್ನು ಪೊಲೀಸರು ಪತ್ತೆ ಹಚ್ಚಿದಾಗ ಈ ಬೃಹತ್ ಜಾಲದ ಸುಳಿವು ಲಭ್ಯವಾಗಿದೆ ಎನ್ನಲಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಇದನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಆದೇಶಿಸಲಾಗಿದ್ದು, ಏಳು ದಿನಗಳಲ್ಲಿ ವರದಿ ನೀಡುವಂತೆ ಆದೇಶಿಸಿದ್ದಾರೆ.
ಪ್ರಕರಣವನ್ನು ಕೇವಲ ಒಂದು ಲಾರಿಯ ಅಕ್ರಮ ಸಾಗಾಟ ಎಂಬುದನ್ನು ಗಮನಿಸದೆ, ಇದರ ಹಿಂದೆ ವ್ಯವಸ್ಥಿತ ಜಾಲವಿರುವ ಸಂಶಯ ವ್ಯಕ್ತವಾಗಿದೆ. ಹೀಗಾಗಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ತ್ರಿಸದಸ್ಯ ತನಿಖಾ ತಂಡವನ್ನು ರಚಿಸಿದ್ದಾರೆ. ಅರಣ್ಯ ಕಾಯ್ದೆಗಳ ಉಲ್ಲಂಘನೆ, ಗಣಿ ಪ್ರದೇಶದ ಚೆಕ್ ಪೋಸ್ಟ್‌ಗಳಲ್ಲಿನ ವೈಫಲ್ಯ ಮತ್ತು ಅಧಿಕಾರಿಗಳ ಶಾಮೀಲಾಗಿ ರುವ ಬಗ್ಗೆಯೂ ತನಿಖೆ ನಡೆಯಲಿದೆ.
ಲಾರಿ ಚಾಲಕನ ಮಾಹಿತಿ ಮೇರೆಗೆ ಈಗಾಗಲೇ ಸುಮಾರು 2,500 ಮೆಟ್ರಿಕ್ ಟನ್ ಅದಿರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಇರುವ ಕಾರಣ ಎನ್‌ಎಂಡಿಸಿ ಒಡೆತನದ ಗಣಿ ಪ್ರದೇಶದಲ್ಲಿ ನಡೆದಿರುವ ಅಕ್ರಮ ಅದಿರು ಸಾಗಣೆ ಪ್ರಕರಣ ಆರೋಪದ ತನಿಖೆಗೆ ವಹಿಸಲಾಗಿದೆ.
ಪ್ರಕರಣದಲ್ಲಿ ಅರಣ್ಯ ಪ್ರದೇಶದಿಂದ ಕಬ್ಬಿಣದ ಅದಿರು ಅಕ್ರಮವಾಗಿ ಸಾಗಾಟವಾಗಿದೆಯೇ, ನಿಯಮಗಳ ಉಲ್ಲಂಘನೆ ಆಗಿದೆಯೇ ಎಂಬ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ. ಆರೋಪಿ ಲಾರಿ ಚಾಲಕ ನೀಡಿದ ಮಾಹಿತಿ ಆಧರಿಸಿ ಎರಡೂವರೆ ಸಾವಿರ ಟನ್ ಕಬ್ಬಿಣದ ಅದಿರನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.
ಅಕ್ರಮ ಕುರಿತು ಜನಸಂಗ್ರಾಮ ಪರಿಷತ್ ಹೋರಾಟ
ಅಕ್ರಮ ಕುರಿತು ಜನಸಂಗ್ರಾಮ ಪರಿಷತ್ ಹೋರಾಟಗಾರರ ವೇದಿಕೆಯ ಶ್ರೀಶೈಲ ಆಲದಳ್ಳಿ, ಟಿ.ಎಂ.ಶಿವಕುಮಾರ್, ಚಾಗನೂರು ಮಲ್ಲಿಕಾರ್ಜುನರೆಡ್ಡಿ ಅವರು ಅರಣ್ಯ ಸಚಿವರು ಮತ್ತು ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಪತ್ರದನ್ವಯ ಸಚಿವರು ತನಿಖೆಗೆ ಆಗ್ರಹಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿಮಲೈ ಬ್ಲಾಕ್‌ನಲ್ಲಿರುವ ಎನ್‌ಎಂಡಿಸಿ ಒಡೆತನದ ಕುಮಾರಸ್ವಾಮಿ ಕಬ್ಬಿಣ ಕಂಪನಿಯ (ಕೆಐಒಎಂ) ಗಣಿ ಗುತ್ತಿಗೆ ಸಂಖ್ಯೆ 1111 ರ ‘ಸಿ’ ಬ್ಲಾಕ್‌ನಿಂದ 20 ಟನ್ ಕಬ್ಬಿಣದ ಅದಿರು ತುಂಬಿದ್ದ ಲಾರಿಯು ಯಾವುದೇ ಪರವಾನಗಿ ಅಥವಾ ದಾಖಲೆಗಳಿಲ್ಲದೆ ಗಣಿ ಪ್ರದೇಶದ ಚೆಕ್ ಪೋಸ್ಟ್ ದಾಟಿ ಹೋಗಿತ್ತು. ಜ.16ರಂದು ಪೊಲೀಸ್ ತಪಾಸಣೆ ವೇಳೆ ಈ ಅಕ್ರಮ ಬೆಳಕಿಗೆ ಬಂದಿದೆ. ಲಾರಿ ಚಾಲಕ ನೀಡಿದ ಮಾಹಿತಿಯ ಆಧಾರದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಾರ್ಯಾಚರಣೆ ನಡೆಸಿ, ಸಾಯಿ ಬಾಲಾಜಿ ಸ್ಪಾಂಜ್ ಐರನ್ ಮತ್ತು ನೋಬಲ್ ಇಸ್ಮಾತ್ ಕಂಪನಿಗಳಿಗೆ ಸಾಗಿಸಲಾಗುತ್ತಿದ್ದ ಸುಮಾರು 2,500 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಜಪ್ತಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆಯೇನು?
2004-2009ರ ಅವಧಿಯಲ್ಲಿ ನಡೆದಿದ್ದ ಬೃಹತ್ ಗಣಿಗಾರಿಕೆ ಹಗರಣದ ಸಮಯದಲ್ಲಿಯೂ ಎನ್‌ಎಂಡಿಸಿ ಅಧಿಕಾರಿಗಳು ಅಕ್ರಮಕ್ಕೆ ಕುಮ್ಮಕ್ಕು ನೀಡಿದ್ದ ಆರೋಪ ಎದುರಿಸಿದ್ದರು. ಈಗ ಮತ್ತೆ ಅಂತಹದ್ದೇ ಘಟನೆ ಮರುಕಳಿಸಿರುವುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. ನವರತ್ನ ಕಂಪನಿಯೆಂದು ಕರೆಸಿಕೊಳ್ಳುವ ಎನ್‌ಎಂಡಿಸಿ 2014ರಲ್ಲಿ ಉಕ್ಕು ಕಾರ್ಖಾನೆ ಸ್ಥಾಪಿಸುವುದಾಗಿ ಹೇಳಿ ಸಾವಿರಾರು ಎಕರೆ ಭೂಮಿ ಪಡೆದಿದ್ದರೂ, ಈವರೆಗೂ ಕಾರ್ಖಾನೆ ಆರಂಭಿಸದೆ ಅದಿರನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದು ತನಿಖೆಯ ವ್ಯಾಪ್ತಿಗೆ ಬರಲಿದೆ.
ಇದೇ ವೇಳೆ, ಕೆಐಒಸಿಎಲ್ ಕಂಪನಿಗೆ ಸಂಡೂರಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ನೀಡಿರುವ ಅನುಮತಿಯನ್ನು ರದ್ದುಪಡಿಸುವಂತೆ ಪರಿಸರವಾದಿಗಳು ಮತ್ತು ಜನಸಂಗ್ರಾಮ ಪರಿಷತ್ ಒತ್ತಾಯಿಸಿದೆ. ಕೆಐಒಸಿಎಲ್ ಈ ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಪರಿಸರ ಕಾಯ್ದೆ ಉಲ್ಲಂಘಿಸಿ ಸರ್ಕಾರಕ್ಕೆ ದಂಡ ಬಾಕಿ ಉಳಿಸಿಕೊಂಡಿದೆ. ಈಗ ದೇವದಾರಿಯಲ್ಲಿ ಲಕ್ಷಾಂತರ ಮರಗಳನ್ನು ಕಡಿಯಲು ಅವಕಾಶ ನೀಡಿದರೆ, ಎನ್‌ಎಂಡಿಸಿ ಮಾದರಿಯಲ್ಲೇ ಅಕ್ರಮಗಳು ನಡೆಯಲಿವೆ" ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ವಿಐಎಸ್‌ಎಲ್ ಹಾಗೂ ಕೆಐಒಸಿಎಲ್ ಕಂಪನಿಗಳಿಗೆ ಬೇಕಾದ ಅದಿರನ್ನು ಹೊಸ ಗಣಿಗಾರಿಕೆ ನಡೆಸುವ ಬದಲಿಗೆ, ಎನ್‌ಎಂಡಿಸಿ ಉತ್ಪಾದಿಸುವ ಅದಿರಿನಿಂದಲೇ ಪೂರೈಸುವಂತೆ ನಿರ್ದೇಶನ ನೀಡಬೇಕೆಂದು ಸಚಿವರಿಗೆ ಮನವಿ ಸಲ್ಲಿಸಲಾಗಿತ್ತು.
ಎನ್‌ಎಂಡಿಸಿ ವಿರುದ್ಧ ತನಿಖೆಗೆ ಸ್ವಾಗತ
ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಕೇವಲ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿ ಕೈತೊಳೆದುಕೊಳ್ಳಲು ಯತ್ನಿಸುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ. ಅರಣ್ಯ ಸಚಿವರು ಅರಣ್ಯ ಕಾಯ್ದೆಯಡಿ ಎನ್‌ಎಂಡಿಸಿ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಲು ಸೂಚಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಪರಿಸರ ಪ್ರೇಮಿಗಳು ಹೇಳಿದ್ದಾರೆ.
ಸಂಡೂರಿನ ಈ ಅಕ್ರಮ ಅದಿರು ಸಾಗಣೆ ಪ್ರಕರಣವು ಕೇವಲ ಒಂದು ಲಾರಿಯ ಕಳ್ಳತನವಲ್ಲ, ಇದು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಅಡಗಿರುವ ಭ್ರಷ್ಟಾಚಾರದ ಸಂಕೇತವಾಗಿದೆ. ದೇವದಾರಿ ಅರಣ್ಯದ ರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಲೂಟಿಯನ್ನು ತಡೆಯಲು ಸರ್ಕಾರವು ಎನ್‌ಎಂಡಿಸಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಲಾಗಿದೆ.

