
ನಿಗಮಗಳಿದ್ದರೂ ನೀರು ತಲುಪುತ್ತಿಲ್ಲ : ಹಳ್ಳ ಹಿಡಿದ ಜಲಾನಯನ ಯೋಜನೆಗಳು..!
ರಾಜ್ಯದಲ್ಲಿ ಜಲ ಸಂಪನ್ಮೂಲಗಳ ನಿರ್ವಹಣೆಗಾಗಿ ಸ್ಥಾಪಿಸಲಾದ ಸಂಸ್ಥೆಗಳ ಕಾರ್ಯವೈಖರಿ, ನೀತಿಗಳ ಅನುಷ್ಠಾನ ಮತ್ತು ಇಲಾಖೆಗಳ ನಡುವಿನ ಸಮನ್ವಯದ ಕೊರತೆಯು ಗಂಭೀರ ಆತಂಕವನ್ನು ಸೃಷ್ಟಿಸಿದೆ.
ರಾಜ್ಯದಲ್ಲಿ ಜಲ ಸಂಪನ್ಮೂಲಗಳ ನಿರ್ವಹಣೆಗಾಗಿ ಸ್ಥಾಪಿಸಲಾದ ಸಂಸ್ಥೆಗಳ ಕಾರ್ಯವೈಖರಿ, ನೀತಿಗಳ ಅನುಷ್ಠಾನ ಮತ್ತು ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ನದಿ ಪಾತ್ರದ ಯೋಜನೆಗಳ ಅನುಷ್ಠಾನವು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ.
ರಾಜ್ಯದಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಕರ್ನಾಟಕ ನೀರಾವರಿ ನಿಗಮ ನಿಯಮಿತ (ಕೆಎನ್‌ಎನ್‌ಎಲ್), ಕಾವೇರಿ ನೀರಾವರಿ ನಿಗಮ ನಿಯಮಿತ (ಸಿಎನ್‌ಎನ್‌ಎಲ್), ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಬಿಜೆಎನ್‌ಎಲ್) ಅಂತಹ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಲಾಗಿದೆ. ಈ ನಿಗಮಗಳು ಮೂಲಭೂತವಾಗಿ ಬೃಹತ್ ಮೂಲಸೌಕರ್ಯ ನಿರ್ಮಾಣದ ಮೇಲೆ ಗಮನ ಕೇಂದ್ರೀಕರಿಸಿವೆ. ಆದರೆ, ಇವುಗಳಲ್ಲಿ ಹಲವು ಯೋಜನೆಗಳು ದಶಕಗಳಿಂದ ಬಾಕಿ ಉಳಿದಿವೆ. ಭೂಸ್ವಾಧೀನ ಪ್ರಕ್ರಿಯೆ, ಅರಣ್ಯ ಇಲಾಖೆಯ ಅನುಮತಿ ಮತ್ತು ಹಣಕಾಸಿನ ಅಸಮರ್ಪಕ ಹಂಚಿಕೆಯಿಂದಾಗಿ ಯೋಜನೆಗಳು ಹಳ್ಳ ಹಿಡಿದಿವೆ.
ಕೇವಲ ಕಾಲುವೆಯ ನಿರ್ಮಾಣ ಮಾಡುವುದು ಜಲಾನಯನ ನಿರ್ವಹಣೆಯಲ್ಲ. ನಿರ್ಮಿಸಿದ ಕಾಲುವೆಗಳ ಹೂಳು ತೆಗೆಯುವುದು, ಕಟ್ಟೆಗಳ ಬಲವರ್ಧನೆ ಮತ್ತು ನೀರಿನ ಸಮರ್ಪಕ ಹಂಚಿಕೆಯ ವಿಷಯದಲ್ಲಿ ಈ ಸಂಸ್ಥೆಗಳು ವಿಫಲವಾಗಿವೆ. ಇದರಿಂದಾಗಿ ಕಟ್ಟಕಡೆಯ ರೈತನಿಗೆ ನೀರು ತಲುಪದಿರುವುದು ರೈತರ ಆಕ್ರೋಶಕ್ಜೆ ಕಾರಣವಾಗಿದೆ.
ರಾಜ್ಯಮಟ್ಟದ ಜಲ ಯೋಜನೆ ಮತ್ತು ನೀತಿ ನಿರೂಪಣೆಯಲ್ಲಿ ಜಲಸಂಪನ್ಮೂಲ ಇಲಾಖೆಯ ಪಾತ್ರ ಬಹಳ ಸೀಮಿತವಾಗಿದೆ. ನೀರನ್ನು ಕೇವಲ ಒಂದು ಸಂಪನ್ಮೂಲವಾಗಿ ಬಳಸುವ ಕಡೆಗೆ ಗಮನವಿದೆಯೇ ಹೊರತು, ಅದನ್ನು ಕಾಯ್ದಿರಿಸುವ ಮತ್ತು ವೈಜ್ಞಾನಿಕವಾಗಿ ನಿರ್ವಹಿಸುವ ದೀರ್ಘಕಾಲದ ದೃಷ್ಟಿಕೋನ ಇಲಾಖೆಯಲ್ಲಿ ಕಂಡುಬರುತ್ತಿಲ್ಲ ಎಂದು ಹೇಳಲಾಗಿದೆ.
ಮರೀಚಿಕೆಯಾದ ಐಡಬ್ಲ್ಯೂಆರ್‌ಎಂ
ಸಮಗ್ರ ಜಲ ಸಂಪನ್ಮೂಲ ನಿರ್ವಹಣೆ (ಐಡಬ್ಲ್ಯೂಆರ್‌ಎಂ) ಸಮಿತಿಯು ವಿವಿಧ ಸಂಸ್ಥೆಗಳನ್ನು ಒಂದೆಡೆ ಸೇರಿಸಿ ಮಾಹಿತಿ ವಿನಿಮಯ ಮತ್ತು ಸಮನ್ವಯ ಸಾಧಿಸುವ ಗುರಿಯನ್ನು ಹೊಂದಿದೆ. ಮಾಹಿತಿ ಹಂಚಿಕೆ ಹಾಗೂ ಸಮನ್ವಯಕ್ಕಾಗಿ ಜಲ ಸಂಪನ್ಮೂಲದ ಮೇಲೆ ಪರಿಣಾಮ ಬೀರುವ ಚಟುವಟಿಕೆಗಳನ್ನು ಹೊಂದಿರುವ ಎಲ್ಲಾ ಸಂಸ್ಥೆಗಳನ್ನು ಒಟ್ಟುಗೂಡಿಸುವ ರಾಜ್ಯ ಐಡಬ್ಲ್ಯೂಆರ್‌ಎಂ ಸಮಿತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಅಗತ್ಯವಿದೆ. ಆದರೆ, ರಾಜ್ಯದ ನದಿಗಳನ್ನು ಕೇವಲ ನೀರು ಪೂರೈಸುವ ಮೂಲಗಳಾಗಿ ನೋಡಲಾಗುತ್ತಿದೆಯೇ ಹೊರತು, ಅವುಗಳನ್ನು ಒಂದು ಜೀವಂತ ವ್ಯವಸ್ಥೆಯಾಗಿ ಪರಿಗಣಿಸುತ್ತಿಲ್ಲ. ನದಿ ಪಾತ್ರದ ವ್ಯವಸ್ಥಾಪಕರಿಲ್ಲದ ಕಾರಣ, ನದಿಯ ಮೇಲ್ಭಾಗ ಮತ್ತು ಕೆಳಭಾಗದ ನೀರಿನ ಹಂಚಿಕೆ, ಮರಳು ಗಣಿಗಾರಿಕೆ ನಿಯಂತ್ರಣ ಮತ್ತು ಮಾಲಿನ್ಯ ತಡೆಗಟ್ಟುವಲ್ಲಿ ಯಾವುದೇ ಹೊಣೆಗಾರಿಕೆ ಇಲ್ಲದಂತಾಗಿದೆ. ನದಿಯಲ್ಲಿ ಹರಿಯುವ ನೀರಿನ ಪ್ರಮಾಣ, ಅಂತರ್ಜಲದ ಮಟ್ಟ ಮತ್ತು ಆವಿಯಾಗುವಿಕೆಯ ಬಗ್ಗೆ ನಿಖರವಾದ ದತ್ತಾಂಶ ಸಂಗ್ರಹಿಸಲು ಹಾಗೂ ವಿಶ್ಲೇಷಣೆ ಮಾಡಲು ತಜ್ಞರ ತಂಡದ ಅಗತ್ಯ ಇದೆ. ಇದು ಪ್ರಸ್ತುತ ವ್ಯವಸ್ಥೆಯಲ್ಲಿ ಮರೀಚಿಕೆಯಾಗಿದೆ ಎನ್ನಲಾಗಿದೆ.
ಪ್ರಸ್ತುತ ಸಮಿತಿಯ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿಲ್ಲ. ಮಾಹಿತಿ ಹಂಚಿಕೆಯು ಕೇವಲ ಔಪಚಾರಿಕವಾಗಿದ್ದು, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಇದು ಪ್ರಭಾವಶಾಲಿಯಾಗಿಲ್ಲ. ವಿವಿಧ ಇಲಾಖೆಗಳು (ಕೃಷಿ, ಕೈಗಾರಿಕೆ, ಕುಡಿಯುವ ನೀರು) ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತಿಲ್ಲ. ಹೀಗಾಗಿ, ಮಾಹಿತಿ ಹಂಚಿಕೆ ಮತ್ತು ಸಮನ್ವಯಕ್ಕಾಗಿ ಜಲ ಸಂಪನ್ಮೂಲದ ಮೇಲೆ ಪರಿಣಾಮ ಬೀರುವ ಚಟುವಟಿಕೆಗಳನ್ನು ಹೊಂದಿರುವ ಎಲ್ಲಾ ಸಂಸ್ಥೆಗಳನ್ನು ಒಟ್ಟುಗೂಡಿಸುವ ಐಡಬ್ಲ್ಯೂಆರ್‌ಎಂ ಸಮಿತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಅಗತ್ಯವಿದೆ. ನದಿ ಜಲಾನಯನ ನಿರ್ವಹಣೆಗೆ ಸುಧಾರಿತ ಜವಾಬ್ದಾರಿಗಳನ್ನು ಒಳಗೊಂಡಂತೆ ರಾಜ್ಯ ಜಲ ಕಾನೂನಿನ ಅಗತ್ಯವನ್ನು ಪರಿಗಣಿಸಿ ರಾಜ್ಯವ್ಯಾಪಿ ದೃಷ್ಟಿಕೋನದಿಂದ ನೀರು ಸಂಬಂಧಿತ ನೀತಿಗಳು, ಕಾನೂನುಗಳು ಮತ್ತು ನಿಯಂತ್ರಣದ ಆಳವಾದ ಮೌಲ್ಯಮಾಪನವನ್ನು ಮಾಡಬೇಕಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಕಾನೂನುಗಳ ಸುಧಾರಣೆಯ ತುರ್ತು ಅಗತ್ಯ
ಪ್ರಸ್ತುತ ಇರುವ ನೀರಿನ ಸಂಬಂಧಿತ ಕಾನೂನುಗಳು ಹಳೆಯದಾಗಿವೆ. ಇಲಾಖೆಯ ಮೂಲಗಳ ಪ್ರಕಾರ ರಾಜ್ಯಾದಾದ್ಯಂತ ಅನ್ವಯವಾಗುವ ಸಮಗ್ರ 'ರಾಜ್ಯ ಜಲ ಕಾಯ್ದೆ' ಜಾರಿಗೆ ಬರಬೇಕು. ಇದು ನದಿ ಪಾತ್ರದ ನಿರ್ವಹಣೆಗೆ ಕಾನೂನಾತ್ಮಕ ಚೌಕಟ್ಟನ್ನು ಒದಗಿಸುತ್ತದೆ. ಆಳವಾದ ಮೌಲ್ಯಮಾಪನ, ನೀರಿನ ನೀತಿಗಳು, ಕಾನೂನುಗಳು ಮತ್ತು ನಿಬಂಧನೆಗಳ ಬಗ್ಗೆ ಸಮಗ್ರ ಮೌಲ್ಯಮಾಪನ ನಡೆಯಬೇಕಿದೆ. ಇದು ಕೇವಲ ಮೇಲ್ನೋಟದ ಸುಧಾರಣೆಯಾಗದೆ, ನದಿ ಪಾತ್ರದ ಪ್ರತಿಯೊಂದು ಹನಿ ನೀರಿಗೂ ಹೊಣೆಗಾರಿಕೆಯನ್ನು ನಿಗದಿಪಡಿಸುವಂತಿರಬೇಕು. ನದಿ ಪಾತ್ರಗಳ ಭೌಗೋಳಿಕ, ಜನಸಂಖ್ಯಾ ಹಂಚಿಕೆರಾಜ್ಯದ ಸಮೃದ್ಧಿಗೆ ಏಳು ಪ್ರಮುಖ ನದಿಗಳೇ ಆಧಾರವಾಗಿವೆ. ಆದರೆ, ರಾಜ್ಯದ ನೀರಿನ ಲಭ್ಯತೆ, ಜನರ ಅವಲಂಬನೆಯ ನಡುವೆ ಒಂದು ದೊಡ್ಡ ವ್ಯತ್ಯಾಸ ಇದೆ. ರಾಜ್ಯದ ಬಹುಪಾಲು ಜನರು ವಾಸಿಸುವ ಕೃಷ್ಣಾ ಮತ್ತು ಕಾವೇರಿ ನದಿ ಪಾತ್ರಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೆ, ಜನವಸತಿ ಕಡಿಮೆ ಇರುವ ಪಶ್ಚಿಮ ಘಟ್ಟಗಳ ಭಾಗದಲ್ಲಿ ನೀರಿನ ಹರಿವು ಹೆಚ್ಚಿದೆ.
ಕೃಷ್ಣಾ, ಕಾವೇರಿಯಿಂದ ಶೇ.81 ರಷ್ಟು ಜನರಿಗೆ ನೀರು
ರಾಜ್ಯದ ಒಟ್ಟು ಭೂಭಾಗದಲ್ಲಿ ಕೃಷ್ಣಾ ಮತ್ತು ಕಾವೇರಿ ನದಿಗಳದ್ದೇ ದೊಡ್ಡ ಪಾಲು ಇದೆ. ರಾಜ್ಯದ ಒಟ್ಟು ಹರಿವಿನ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ ಶೇ. 60 ಭಾಗವನ್ನು ಕೃಷ್ಣಾ ನದಿ ಆವರಿಸಿದೆ. ರಾಜ್ಯದ ಸುಮಾರು ಅರ್ಧದಷ್ಟು ಜನ ಈ ನದಿ ಪಾತ್ರದಲ್ಲೇ ಬದುಕುತ್ತಿದ್ದಾರೆ. ಕಾವೇರಿ ನದಿ ರಾಜ್ಯದ ಶೇ. 20ರಷ್ಟು ಭಾಗವನ್ನು ಆವರಿಸಿದೆ. ಈ ಎರಡೇ ನದಿಗಳು ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 81 ರಷ್ಟು ಜನರಿಗೆ ನೀರು ಒದಗಿಸುತ್ತಿವೆ. ನದಿಗಳ ಹಂಚಿಕೆಯಲ್ಲಿ ನೆರೆ ರಾಜ್ಯಗಳಿಗಿಂತ ರಾಜ್ಯವು ಭೌಗೋಳಿಕವಾಗಿ ದೊಡ್ಡ ಪಾಲನ್ನು ಹೊಂದಿದೆ. ಕೃಷ್ಣಾ ಜಲಾನಯನ ಪ್ರದೇಶವು ನದಿಯ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕವು ಶೇ. 44 ರಷ್ಟು ದೊಡ್ಡ ಪಾಲನ್ನು ಹೊಂದಿದೆ. ಉಳಿದಂತೆ ಮಹಾರಾಷ್ಟ್ರ ಶೇ. 27, ತೆಲಂಗಾಣ ಶೇ.20 ಹಾಗೂ ಆಂಧ್ರಪ್ರದೇಶ ಶೇ. 10ರಷ್ಟು ಪಾಲನ್ನು ಹೊಂದಿವೆ. ಕಾವೇರಿ ಜಲಾನಯನ ಪ್ರದೇಶದ ನದಿ ಪಾತ್ರದಲ್ಲಿ ಕರ್ನಾಟಕವು ಶೇ. 42 ರಷ್ಟು ಭಾಗವನ್ನು ಹೊಂದಿದ್ದರೆ, ತಮಿಳುನಾಡು ಶೇ. 54 ರಷ್ಟು ದೊಡ್ಡ ಪಾಲನ್ನು ಹೊಂದಿದೆ. ಕೇರಳ ಮತ್ತು ಪುದುಚೇರಿ ಅತ್ಯಂತ ಕಡಿಮೆ ಪಾಲು ಹೊಂದಿವೆ. ಇಲ್ಲಿ ಗಮನಿಸಬೇಕಾದ ಪ್ರಮುಖಾಂಶವೆಂದರೆ ಎಲ್ಲಿ ಜನರು ಹೆಚ್ಚಿದ್ದಾರೋ ಅಲ್ಲಿ ನೈಸರ್ಗಿಕವಾಗಿ ಸಿಗುವ ನೀರಿನ ಪ್ರಮಾಣ ಕಡಿಮೆ ಇದೆ. ಶರಾವತಿ, ನೇತ್ರಾವತಿಯಂತಹ ನದಿಗಳು ಗಾತ್ರದಲ್ಲಿ ಸಣ್ಣದಾದರೂ, ರಾಜ್ಯದ ಒಟ್ಟು ನೀರಿನ ಹರಿವಿನಲ್ಲಿ ಅತಿ ಹೆಚ್ಚು ಅಂದರೆ ಶೇ. 58 ರಷ್ಟು ನೀರನ್ನು ಇವುಗಳೇ ನೀಡುತ್ತವೆ.
ರಾಜ್ಯದ ಶೇ. 81 ರಷ್ಟು ಜನ ಅವಲಂಬಿತವಾಗಿರುವ ಕೃಷ್ಣಾ ಮತ್ತು ಕಾವೇರಿ ನದಿಗಳಲ್ಲಿ ನೀರಿನ ಹರಿವು ಕಡಿಮೆ. ಕೃಷ್ಣಾ ನದಿಯಲ್ಲಿ ಶೇ. 28 ಮತ್ತು ಕಾವೇರಿ ನದಿಯಲ್ಲಿ ಕೇವಲ ಶೇ. 12 ರಷ್ಟು ಮಾತ್ರ ನೀರಿನ ಹರಿವಿದೆ. ಈ ದತ್ತಾಂಶವು ವಿಶಾಲವಾದ ಜಲಾನಯನ ಪ್ರದೇಶವನ್ನು ರಾಜ್ಯವು ರಕ್ಷಿಸುವ ಹಾಗೂ ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತಿದೆ. ಆದರೆ ನೀರಿನ ಹಂಚಿಕೆಯ ಕಾನೂನು ಹೋರಾಟಗಳಲ್ಲಿ ಸದಾ ಸಂಘರ್ಷಕ್ಕೆ ಕಾರಣವಾಗುತ್ತಿವೆ ಎಂದು ಜಲಸಂಪನ್ಮೂಲ ಇಲಾಖೆಯ ಮೂಲಗಳು ಹೇಳಿವೆ.
ದ ಫೆಡರಲ್ ಕರ್ನಾಟಕ ಜತೆ ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ಮಾತನಾಡಿ, ರಾಜ್ಯ ಜಲ ಕಾನೂನು ಅನ್ನು ಶೀಘ್ರವಾಗಿ ರೂಪಿಸಿ, ನೀರು ಬಳಸುವ ಪ್ರತಿಯೊಂದು ವಲಯವನ್ನೂ ಅದರ ವ್ಯಾಪ್ತಿಗೆ ತರಬೇಕು ಎಂದರು. "ಎಸಿಐಡಬ್ಲ್ಯೂಆರ್‌ಎಂ ಸಂಸ್ಥೆಯನ್ನು ಕೇವಲ ಅಧ್ಯಯನ ಕೇಂದ್ರವಾಗಿರಿಸದೆ, ನೀತಿ ನಿರ್ಧಾರಗಳಲ್ಲಿ ನಿರ್ಣಾಯಕ ಪಾತ್ರ ನೀಡಬೇಕು. ಸಂಸ್ಥೆಯ ದತ್ತಾಂಶಗಳನ್ನು ಬಳಸಿ ಪ್ರತಿ ವರ್ಷ ರಾಜ್ಯ ಜಲ ಆಯವ್ಯಯ ಸಿದ್ಧಪಡಿಸಬೇಕು. ಆಗ ಮಾತ್ರ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ. ರಾಜ್ಯದ ಎಲ್ಲಾ ನದಿ ಪಾತ್ರಗಳ ನೀರಿನ ಮಾಹಿತಿ ಒಂದೇ ಸೂರಿನಡಿ ಸಿಗುವಂತೆ ಡಿಜಿಟಲ್ ಪ್ಲಾಟ್‌ಫಾರ್ಮ್ ನಿರ್ಮಿಸಬೇಕಾಗಿದೆ. ಶೇ. 81 ಜನಸಂಖ್ಯೆಯ ಅಗತ್ಯಗಳನ್ನು ಪೂರೈಸಲು ಹನಿ ನೀರಾವರಿ ಮತ್ತು ನೀರಿನ ಮರುಬಳಕೆ ಯೋಜನೆಗಳನ್ನು ಕಡ್ಡಾಯಗೊಳಿಸಬೇಕು," ಎಂದು ಹೇಳಿದರು.

