1500 ಕೋಟಿ ವೆಚ್ಚದಲ್ಲಿ ರಾಜ್ಯದ 58 ಅಣೆಕಟ್ಟುಗಳ ದುರಸ್ತಿಗೆ ಮಾಸ್ಟರ್‌ ಪ್ಲಾನ್‌
x
ಜಲಾಶಯ

1500 ಕೋಟಿ ವೆಚ್ಚದಲ್ಲಿ ರಾಜ್ಯದ 58 ಅಣೆಕಟ್ಟುಗಳ ದುರಸ್ತಿಗೆ ಮಾಸ್ಟರ್‌ ಪ್ಲಾನ್‌

ಇತ್ತೀಚೆಗಷ್ಟೇ ಸುಮಾರು 70 ವರ್ಷಗಳಷ್ಟು ಹಳೆಯದಾದ ತುಂಗಭದ್ರಾ ಅಣೆಕಟ್ಟಿನ 33 ಕ್ರೆಸ್ಟ್ ಗೇಟ್‌ಗಳನ್ನು ಅಂದಾಜು 53 ಕೋಟಿ ರೂ. ವೆಚ್ಚದಲ್ಲಿ ಬದಲಾಯಿಸಲಾಗುತ್ತಿದೆ.


ಕರ್ನಾಟಕದಲ್ಲಿ 25 ವರ್ಷಗಳಷ್ಟು ಹಳೆಯ 58 ಅಣೆಕಟ್ಟುಗಳ ಪುನಶ್ಚೇತನಕ್ಕೆ ಬೃಹತ್‌ ಯೋಜನೆ ರೂಪಿಸಲಾಗಿದೆ. ಕೇಂದ್ರ ಸರ್ಕಾರದ ಸಹಯೋಗದಲ್ಲಿ ಅಣೆಕಟ್ಟುಗಳ ಸುರಕ್ಷತೆಗಾಗಿ 1,500 ಕೋಟಿ ರೂ. ವೆಚ್ಚದ ಯೋಜನೆ ಜಾರಿಗೆ ತೀರ್ಮಾನಿಸಿದ್ದು, ಇದರಿಂದ ಶೇ 75ರಷ್ಟು ಅಣೆಕಟ್ಟುಗಳಿಗೆ ಕಾಯಕಲ್ಪ ಸಿಗಲಿದೆ.

ನೀರಾವರಿ ಜೊತೆಗೆ ವಿದ್ಯುತ್‌ ಉತ್ಪಾದನೆಗೆ ನೆರವಾಗುತ್ತಿರುವ ಅಣೆಕಟ್ಟುಗಳ ದುರಸ್ತಿ ಹಾಗೂ ನವೀಕರಣವು ಯೋಜನೆಯ ಭಾಗವಾಗಿದೆ. ಕೇಂದ್ರ ಸರ್ಕಾರವು ವಿಶ್ವಬ್ಯಾಂಕ್ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಸಹಯೋಗದೊಂದಿಗೆ ಅಣೆಕಟ್ಟುಗಳ ಪುನಶ್ಚೇತನಾ ಮತ್ತು ಸುಧಾರಣಾ ಯೋಜನೆಯ ಎರಡನೇ ಹಂತದಲ್ಲಿ ಅಣೆಕಟ್ಟುಗಳ ದುರಸ್ತಿ ಮುಂದಾಗಿದೆ. ಈಗಾಗಲೇ ಯೋಜನೆಯಡಿ ಕರ್ನಾಟಕದ 58 ಅಣೆಕಟ್ಟುಗಳನ್ನು ಆಯ್ಕೆ ಮಾಡಿದ್ದು, ದುರಸ್ತಿಗೆ 1,500 ಕೋಟಿ ರೂ. ಮೀಸಲಿಡಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಸುಮಾರು 70 ವರ್ಷಗಳಷ್ಟು ಹಳೆಯದಾದ ತುಂಗಭದ್ರಾ ಅಣೆಕಟ್ಟಿನ 33 ಕ್ರೆಸ್ಟ್ ಗೇಟ್‌ಗಳನ್ನು ಅಂದಾಜು 53 ಕೋಟಿ ರೂ. ವೆಚ್ಚದಲ್ಲಿ ಬದಲಾಯಿಸಲಾಗುತ್ತಿದೆ. ಅಣೆಕಟ್ಟುಗಳ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಕಾರ್ಯ ನಿರ್ವಹಿಸಲು ಇದೀಗ 58 ಅಣೆಕಟ್ಟುಗಳ ದುರಸ್ತಿ ಹಾಗೂ ನವೀಕರಣಕ್ಕೆ ಸರ್ಕಾರ ತೀರ್ಮಾನಿಸಿದೆ.

ಕೇಂದ್ರ ಸರ್ಕಾರದ ಈ ಬೃಹತ್ ಅಭಿಯಾನದಡಿ ಈಗಾಗಲೇ ದೇಶದ 19 ರಾಜ್ಯಗಳಲ್ಲಿ 733 ಅಣೆಕಟ್ಟುಗಳನ್ನು ಗುರುತಿಸಲಾಗಿದೆ. ಇವುಗಳ ಒಟ್ಟು ಅಭಿವೃದ್ಧಿ ವೆಚ್ಚ ಸುಮಾರು 10,211 ಕೋಟಿ ರೂ.ಗಳಾಗಿದೆ. ಕರ್ನಾಟಕವು ತನ್ನ ಪಾಲಿನ ಅನುದಾನ ಬಳಸಿಕೊಂಡು ಅಣೆಕಟ್ಟುಗಳ ಒಟ್ಟಾರೆ ರಚನಾತ್ಮಕ ಸ್ಥಿರತೆ ಹೆಚ್ಚಿಸಲು ಮುಂದಾಗಿದೆ. ಅರಣ್ಯ ಮತ್ತು ನೀರಾವರಿ ಇಲಾಖೆಗಳು ಈಗಾಗಲೇ ಅಣೆಕಟ್ಟುಗಳ ಸಮೀಕ್ಷೆ ಪೂರ್ಣಗೊಳಿಸಿವೆ. ಹಳೆಯ ಗೇಟ್‌ಗಳ ಬದಲಾವಣೆ, ಬಿರುಕು ದುರಸ್ತಿ, ಹೂಳು ತೆಗೆಯುವ ಪ್ರಕ್ರಿಯೆ ಮತ್ತು ಆಧುನಿಕ ಸೆನ್ಸಾರ್‌ಗಳ ಅಳವಡಿಕೆಗೆ ಈ ಹಣವನ್ನು ಬಳಸಲು ನಿರ್ಧರಿಸಿದೆ.

ನಾಳೆ ಅಣೆಕಟ್ಟು ಸುರಕ್ಷತಾ ಸಮ್ಮೇಳನ

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ(ಫೆ.13) ಬೆಂಗಳೂರಿನಲ್ಲಿ ಎರಡು ದಿನಗಳ ಅಂತರರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ ಆಯೋಜಿಸಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಜೆ.ಟಾಟಾ ಸಭಾಂಗಣದಲ್ಲಿ ನಡೆಯುವ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಭಾರತದಲ್ಲಿ 6,628 ಅಣೆಕಟ್ಟುಗಳಿದ್ದು, ಕರ್ನಾಟಕ 231 ಅಣೆಕಟ್ಟುಗಳನ್ನು ಹೊಂದಿದೆ.

ಒಂದೂವರೆ ವರ್ಷಗಳ ಹಿಂದೆ ಜೈಪುರದಲ್ಲಿ ಅಣೆಕಟ್ಟುಗಳ ಸುರಕ್ಷತಾ ಸಮ್ಮೇಳನ ನಡೆದಿತ್ತು. ಈಗ ಬೆಂಗಳೂರಿನಲ್ಲಿ ಸಮ್ಮೇಳನ ನಡೆಯುತ್ತಿರುವುದು ವಿಶೇಷ. ಈ ಕಾರ್ಯಕ್ರಮವು ಜಲಶಕ್ತಿ ಸಚಿವಾಲಯ ಸಹಯೋಗದಲ್ಲಿ ನಡೆಯುತ್ತಿದೆ.

ಅಣೆಕಟ್ಟು ಸುರಕ್ಷತೆ ವಿಚಾರದಲ್ಲಿ 46 ಸಂಶೋಧನಾ ವರದಿಗಳನ್ನು ಸಮ್ಮೇಳನದಲ್ಲಿ ಮಂಡಿಸಲಾಗುವುದು. ಕೇಂದ್ರ ಸಚಿವರಾದ ವಿ. ಸೋಮಣ್ಣ, ರಾಜ್ ಭೂಷಣ್ ಚೌಧರಿ, ರಾಜ್ಯ ಸರ್ಕಾರದ ಸಣ್ಣ ನೀರಾವರಿ ಸಚಿವ ಬೋಸರಾಜು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 10 ದೇಶಗಳ 25 ಅಂತರರಾಷ್ಟ್ರೀಯ ತಜ್ಞರು ಸೇರಿದಂತೆ 400ಕ್ಕೂ ಹೆಚ್ಚು ಜನ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ನವದೆಹಲಿಯಲ್ಲಿ ತಿಳಿಸಿದ್ದಾರೆ.

“ರಾಜ್ಯದ ಹಿತಾಸಕ್ತಿ ಕಾಪಾಡಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇವೆ. ಅಣೆಕಟ್ಟುಗಳು ನೀರಾವರಿ, ಇಂಧನ ಉತ್ಪಾದನೆ, ಪ್ರವಾಹ ನಿಯಂತ್ರಣ, ನೀರು ಸರಬರಾಜು ಹಾಗೂ ಮಣ್ಣಿನ ಸಂರಕ್ಷಣೆಯ ಆಧಾರವಾಗಿವೆ. ಸುದೀರ್ಘ ಕಾಲದ ಯೋಜನೆ ಗಮನದಲ್ಲಿ ಇಟ್ಟುಕೊಂಡು ಸಮ್ಮೇಳನ ಆಯೋಜಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

Read More
Next Story