
ಅಣೆಕಟ್ಟು ಸುರಕ್ಷತೆ: ಹಳೆಯ ವೈಫಲ್ಯಗಳ ಅಧ್ಯಯನದಿಂದ ಅನಾಹುತಗಳಿಗೆ ಬ್ರೇಕ್
ಅಣೆಕಟ್ಟು ಒಡೆಯುವ ಮುನ್ನವೇ ಪಕ್ಕದಲ್ಲಿ ಒಂದು ದೊಡ್ಡ ಕಾಲುವೆ( ಬೈಪಾಸ್ ಕೆನಾಲ್) ತೋಡಿ ನೀರನ್ನು ಸುರಕ್ಷಿತವಾಗಿ ಹೊರಬಿಡುವುದರಿಂದ ಅನಾಹುತ ತಪ್ಪಿಸಬಹುದು.
ದೇಶದ ಅಣೆಕಟ್ಟುಗಳ ಸುರಕ್ಷತೆ ಖಾತರಿಪಡಿಸಿಕೊಳ್ಳುವಲ್ಲಿ ಈ ಹಿಂದಿನ ಅಣೆಕಟ್ಟು ಅನಾಹುತಗಳ ಅಧ್ಯಯನ ಅತ್ಯಂತ ನಿರ್ಣಾಯಕ. ಕೇವಲ ಆಧುನಿಕ ತಂತ್ರಜ್ಞಾನದ ಮೇಲಷ್ಟೇ ಅವಲಂಬಿತವಾಗದೆ, ಹಿಂದಿನ ಘಟನೆಗಳಿಂದ ಕಲಿತರೆ ಭವಿಷ್ಯದ ದುರಂತಗಳನ್ನು ತಪ್ಪಿಸಬಹುದು ಎಂದು ಜಲ ಮತ್ತು ಅಣೆಕಟ್ಟು ಸುರಕ್ಷತೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಐಐಎಸ್‌ಸಿಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತೆಯ ಸಮ್ಮೇಳನದಲ್ಲಿ ನಡೆದ ʼಅಣೆಕಟ್ಟು ವೈಫಲ್ಯ ಪ್ರಕರಣದ ಅಧ್ಯಯನಗಳು: ಕಲಿತ ಪಾಠಗಳುʼ ಕುರಿತ ವಿಚಾರ ಸಂಕಿರಣದಲ್ಲಿ ಅಣೆಕಟ್ಟು ವೈಫಲ್ಯದ ಸಮಯದಲ್ಲಿ ದಾಖಲಾದ ಮಾಹಿತಿ ಬಳಸಿಕೊಂಡು, ಪ್ರಸ್ತುತ ಇರುವ ವಿಶ್ಲೇಷಣಾ ಮಾದರಿಗಳನ್ನು ಮತ್ತಷ್ಟು ಸುಧಾರಿಸಲು ಸಾಧ್ಯವಿದೆ. ಸಾಮಾನ್ಯವಾಗಿ ಅಣೆಕಟ್ಟುಗಳನ್ನು ಕಣ್ಣಿನಿಂದ ತಪಾಸಣೆ ಮಾಡಿದಾಗ ಎಲ್ಲವೂ ಸರಿಯಾಗಿ ಕಾಣಿಸಬಹುದು. ಆದರೆ, ಗಂಭೀರ ತಾಂತ್ರಿಕ ದೋಷಗಳು ಹೊರನೋಟಕ್ಕೆ ಕಾಣುವುದಿಲ್ಲ. ಇಂತಹ ಅದೃಶ್ಯ ದೋಷಗಳನ್ನು ಪತ್ತೆಹಚ್ಚಲು ಹಿಂದಿನ ಅನಾಹುತ ಪ್ರಕರಣಗಳ ಅಧ್ಯಯನವು ದಾರಿದೀಪ ಆಗಲಿದೆ ಎಂಬ ಸಲಹೆಗಳು ವ್ಯಕ್ತವಾದವು.
ಅಣೆಕಟ್ಟು ವೈಫಲ್ಯದ ಸಂದರ್ಭದಲ್ಲಿ ಉಂಟಾಗಬಹುದಾದ ಪ್ರವಾಹದ ನಕ್ಷೆ ತಯಾರಿಸಲು ಮತ್ತು ಸಂಭಾವ್ಯ ಜೀವಹಾನಿ ಅಂದಾಜು ಮಾಡಲು ಹಳೆಯ ದುರ್ಘಟನೆಗಳು ನೆರವಾಗಲಿದೆ. ಸ್ಪಿಲ್‌ವೇಗಳಲ್ಲಿ ಕಸ ತುಂಬಿಕೊಳ್ಳುವುದು, ಭೂಕುಸಿತ ಅಥವಾ ಕಾರ್ಯಾಚರಣೆಯಲ್ಲಾಗುವ ತಾಂತ್ರಿಕ ತಪ್ಪುಗಳನ್ನು ಗುರುತಿಸಲು ಈ ಅಧ್ಯಯನಗಳು ಸಹಾಯ ಮಾಡುತ್ತವೆ. ದೇಶ-ವಿದೇಶದಲ್ಲಿ ನಡೆದಿರುವ ಅಣೆಕಟ್ಟುಗಳ ವೈಫಲ್ಯಗಳಿಂದ ಪಾಠ ಕಲಿಯಬೇಕಾಗಿದೆ. ಇಲ್ಲದಿದ್ದರೆ ಸಾವಿರಾರು ಜನರ ಜೀವನ ಮತ್ತು ಅವರ ಆಸ್ತಿಪಾಸ್ತಿಗಳಿಗೆ ಹಾನಿಯಾಗಲಿದೆ. ಇಂತಹ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಇತ್ತೀಚೆಗಿನ ವರ್ಷದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಅನಿರೀಕ್ಷಿತ ಪ್ರವಾಹಗಳು ಸಂಭವಿಸುತ್ತಿವೆ. ಹಳೆಯ ಅಣೆಕಟ್ಟುಗಳು ಇಂತಹ ದೊಡ್ಡ ಪ್ರಮಾಣದ ನೀರನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆಯೇ ಎಂಬುದನ್ನು ಮರುಪರಿಶೀಲಿಸಬೇಕು. ಅತಿಯಾದ ಮಳೆಯಿಂದ ಅಣೆಕಟ್ಟು ಹಾನಿಯಾಗುವ ಅಪಾಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಬ್ಯಾಂಕ್ ಹಿರಿಯ ವಿಪತ್ತು ನಿರ್ವಹಣಾ ತಜ್ಞ ಅನೂಪ್ ಕಾರಂತ ಮಾತನಾಡಿ, ಅಣೆಕಟ್ಟು ಒಡೆದರೆ ಅಥವಾ ಹೆಚ್ಚಿನ ನೀರು ಬಿಟ್ಟರೆ, ಎಷ್ಟು ಹಳ್ಳಿಗಳು ಮುಳುಗಡೆಯಾಗಬಹುದು ಎಂಬುದನ್ನು ಉಪಗ್ರಹ ಚಿತ್ರಗಳ ಮೂಲಕ ಮೊದಲೇ ಗುರುತಿಸಬೇಕಾಗುತ್ತದೆ. ಅಣೆಕಟ್ಟಿನ ಕೆಳಭಾಗದ ಜನರಿಗೆ ತಕ್ಷಣ ಮಾಹಿತಿ ನೀಡಲು ಸೈರನ್ ಮತ್ತು ಮೊಬೈಲ್ ಸಂದೇಶ ವ್ಯವಸ್ಥೆ ಜಾರಿಗೆ ತರುವುದು ಅಗತ್ಯವಿದೆ. ಒಡಿಶಾ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕೈಗೊಂಡಿರುವ ಇಂತಹ ಸುರಕ್ಷತಾ ಕ್ರಮಗಳನ್ನು ಕೈಗೊಂಡಿವೆ. ತುರ್ತು ಕಾರ್ಯಾಚರಣೆ ಯೋಜನೆಯನ್ನು ಪ್ರತಿಯೊಂದು ರಾಜ್ಯಗಳು, ದೇಶಗಳು ಅಳವಡಿಕೆ ಮಾಡಿಕೊಳ್ಳಬೇಕು. ಅಣೆಕಟ್ಟು ನಿರ್ಮಾಣದ ಮೊದಲ ಹಂತದಿಂದ ಮುಕ್ತಾಯದ ಅಂತಿಮ ಹಂತದವರೆಗೆ ಪ್ರತಿಯೊಂದು ಸೂಕ್ಷ್ಮವಾಗಿ ಗಮನಹರಿಸಿ ನಿರ್ಮಾಣ ಮಾಡಬೇಕಿದೆ ಎಂದು ಹೇಳಿದರು.
ಕೇಂದ್ರ ಜಲ ಆಯೋಗದ ಮುಖ್ಯ ಕಾರ್ಯನಿರ್ವಾಹಕ ವಿವೇಕ್ ತ್ರಿಪಾಠಿ ಮಾತನಾಡಿ, ಮಧ್ಯಪ್ರದೇಶದ ಕರಂ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿದ್ದ ಅಣೆಕಟ್ಟು ತನ್ನ ಮೊದಲನೇ ಅತಿವೃಷ್ಟಿಯಲ್ಲೇ ಭಾರಿ ಸೋರಿಕೆ ಕಂಡಿತು. ಅಣೆಕಟ್ಟಿನ ಒಂದು ಭಾಗ ಕುಸಿಯಲು ಶುರುವಾದಾಗ ಕೆಳಭಾಗದ 18 ಹಳ್ಳಿಗಳ 40 ಸಾವಿರ ಜನರ ಜೀವಕ್ಕೆ ಅಪಾಯ ಎದುರಾಗಿತ್ತು. ಕರಂ ಅಣೆಕಟ್ಟಿನ ವಿಷಯದಲ್ಲಿ ವಿನ್ಯಾಸ ಅಥವಾ ನಿರ್ಮಾಣದ ಹಂತದಲ್ಲಿಯೇ ಲೋಪವಿತ್ತು. ಸರಿಯಾದ ರೀತಿಯಲ್ಲಿ ಮಣ್ಣನ್ನು ಪದರ ಪದರವಾಗಿ ಗಟ್ಟಿಗೊಳಿಸದಿದ್ದರೆ ಇಂತಹ ಸೋರಿಕೆ ಉಂಟಾಗುತ್ತದೆ ಎಂದು ಎಚ್ಚರಿಸಿದರು.
ಬೈಪಾಸ್ ಕೆನಾಲ್ ನಿರ್ಮಾಣ
ಅಣೆಕಟ್ಟು ದುರಂತಗಳಿಂದ ಕಲಿತ ಪಾಠವೆಂದರೆ ಬೈಪಾಸ್ ಕೆನಾಲ್‌ಗಳ ನಿರ್ಮಾಣ. ಅಣೆಕಟ್ಟು ಒಡೆಯುವ ಮುನ್ನವೇ ಪಕ್ಕದಲ್ಲಿ ಒಂದು ದೊಡ್ಡ ಕಾಲುವೆ ತೋಡಿ ನೀರನ್ನು ಸುರಕ್ಷಿತವಾಗಿ ಹೊರಬಿಡುವುದರಿಂದ ಅನಾಹುತ ತಪ್ಪಿಸಬಹುದು. ಕರಂ ಅಣೆಕಟ್ಟಿನ ವಿಷಯದಲ್ಲಿ ಈ ಪ್ರಯೋಗದಿಂದ ಜೀವಹಾನಿ ತಪ್ಪಿತು. ನಿರ್ಮಾಣ ಹಂತದಲ್ಲಿ ಕೇಂದ್ರ ಜಲ ಆಯೋಗದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಲಾಗಿದೆಯೇ ಎಂದು ಪರಿಶೀಲಿಸುವಲ್ಲಿ ವಿಳಂಬ ಮಾಡಲಾಯಿತು. ಅಣೆಕಟ್ಟು ನಿರ್ಮಿಸುವಾಗ ಬಳಕೆ ಮಾಡಿದ ಮಣ್ಣು, ಕಲ್ಲುಗಳ ಗುಣಮಟ್ಟದ ಮೇಲೆ ನಿರಂತರ ನಿಗಾ ಇಡುವುದು ಅತ್ಯಗತ್ಯ ಎಂದು ತಿಳಿಸಿದರು.
ತಮಿಳುನಾಡು ಜಲಸಂಪನ್ಮೂಲ ಇಲಾಖೆಯ ಎಂಜಿನಿಯರ್‌ಗಳಾದ ಲಾವಣ್ಯ ಮತ್ತು ಮಾಲಿನಿ ಮಾತನಾಡಿ, ಆನೈಕುಟ್ಟಂ ಅಣೆಕಟ್ಟು, ತಮಿಳುನಾಡಿನ ವಿರುದುನಗರ ಜಿಲ್ಲೆಯ ಅರ್ಜುನ ನದಿಗೆ ಅಡ್ಡಲಾಗಿ ಕಟ್ಟಲಾಗಿತ್ತು. ಆದರೆ, ಅಣೆಕಟ್ಟಿನ ಮಣ್ಣಿನ ಏರಿಯಲ್ಲಿ ತೀವ್ರತರವಾದ ಸೋರಿಕೆ ಕಾಣಿಸಿಕೊಂಡಿತು. ಅಣೆಕಟ್ಟಿನ ಹಿಂಭಾಗದ ಗೋಡೆಗಳಲ್ಲಿ ನೀರು ಜಿನುಗುತ್ತಿದ್ದುದನ್ನು ಗಮನಿಸಲಾಯಿತು. ನಂತರ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಯಿತು. ಅಣೆಕಟ್ಟಿನಲ್ಲಿ ಸಣ್ಣ ಸೋರಿಕೆ ಕಂಡರೂ ಅದನ್ನು ನಿರ್ಲಕ್ಷಿಸಬಾರದು. ತಂತ್ರಜ್ಞಾನದ ಬಳಕೆಯಿಂದ ಸದಾ ಗಮನಿಸುತ್ತಿರಬೇಕಾಗಿದೆ ಎಂದರು.

