
ಅಣೆಕಟ್ಟುಗಳು ಆಧುನಿಕ ಭಾರತದ ದೇವಾಲಯಗಳು, ಅವುಗಳ ರಕ್ಷಣೆ ರಾಷ್ಟ್ರೀಯ ಭದ್ರತೆಯ ಸಂಕೇತ: ಸಿಎಂ
ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದಲ್ಲಿ ಮಾಜಿ ಪ್ರಧಾನಿ ನೆಹರೂ ಅವರ ಮಾತನ್ನು ಉಲ್ಲೇಖಿಸಿದ ಸಿಎಂ ನೀರಿನ ಸಂಗ್ರಹದ ಮಹತ್ವವನ್ನು ಒತ್ತಿ ಹೇಳಿದರು.
ಹವಾಮಾನ ಬದಲಾವಣೆಯಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ನೀರಿನ ಸಂರಕ್ಷಣೆ ಮತ್ತು ಅಣೆಕಟ್ಟುಗಳ ಸುರಕ್ಷತೆ ಅತ್ಯಂತ ನಿರ್ಣಾಯಕವಾಗಿದ್ದು, ಇದು ಕೇವಲ ಜಲಸಂಪನ್ಮೂಲದ ಪ್ರಶ್ನೆಯಲ್ಲದೆ ರಾಷ್ಟ್ರೀಯ ಭದ್ರತೆಯ ವಿಚಾರವೂ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು
ನಗರದಲ್ಲಿ ಐಐಎಸ್ಸಿ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದ್ದ 'ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ'ವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಅಣೆಕಟ್ಟುಗಳನ್ನು 'ಆಧುನಿಕ ಭಾರತದ ದೇವಾಲಯಗಳು' ಎಂದು ಕರೆದಿದ್ದರು. ಅವರ ಆಶಯದಂತೆ ಈ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಹಸ್ತಾಂತರಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ರಾಜ್ಯದ ಅಣೆಕಟ್ಟುಗಳ ಸ್ಥಿತಿಗತಿ ಮತ್ತು ನಿರ್ವಹಣೆ
ಕರ್ನಾಟಕವು ಅಣೆಕಟ್ಟುಗಳ ಸಂಖ್ಯೆಯಲ್ಲಿ ಇಡೀ ದೇಶದಲ್ಲೇ 6ನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿ ಒಟ್ಟು 230ಕ್ಕೂ ಹೆಚ್ಚು ಅಣೆಕಟ್ಟುಗಳಿವೆ. ಇವುಗಳ ಮೂಲಕ ಸುಮಾರು 4,800 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೆ, ರಾಜ್ಯದ ಶೇ.70 ರಷ್ಟು ಅಣೆಕಟ್ಟುಗಳು ನಿರ್ಮಾಣಗೊಂಡು ಈಗಾಗಲೇ 40 ವರ್ಷ ಕಳೆದಿವೆ. ಹಳೆಯದಾಗಿರುವ ಈ ಜಲಾಶಯಗಳನ್ನು ಕಾಲಕಾಲಕ್ಕೆ ಪರಿಶೀಲನೆ ನಡೆಸಿ, ಅವುಗಳ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಬದಲಾಗುತ್ತಿರುವ ಹವಾಮಾನ ವೈಪರೀತ್ಯಗಳ ನಡುವೆ ಸುದೀರ್ಘ ಕಾಲದವರೆಗೆ ನೀರನ್ನು ರಕ್ಷಿಸಿಟ್ಟುಕೊಳ್ಳಲು ದೂರದೃಷ್ಟಿಯ ಯೋಜನೆಗಳು ಅಗತ್ಯವಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ಜಲ ನಿರ್ವಹಣೆಯಲ್ಲಿ ಕರ್ನಾಟಕದ ಐತಿಹಾಸಿಕ ಸಾಧನೆ
ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಏಷ್ಯಾದಲ್ಲೇ ಮೊದಲ ಬಾರಿಗೆ 1902ರಲ್ಲಿ ಹೈಡ್ರೋ ಪವರ್ ಅಥವಾ ಜಲವಿದ್ಯುತ್ ಉತ್ಪಾದನೆ ಆರಂಭಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ ಎಂದು ಸ್ಮರಿಸಿದರು. ರಾಜ್ಯದ ಜಲ ನಿರ್ವಹಣೆ ಮತ್ತು ಇಂಜಿನಿಯರಿಂಗ್ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪ್ರಸ್ತುತ 2.5 ಲಕ್ಷಕ್ಕೂ ಹೆಚ್ಚು ಇಂಜಿನಿಯರ್‌ಗಳು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದ ಹಲವು ಅಣೆಕಟ್ಟುಗಳು 60 ರಿಂದ 70 ವರ್ಷ ಹಳೆಯದಾಗಿದ್ದು, ಹವಾಮಾನ ಬದಲಾವಣೆಗೆ ತಕ್ಕಂತೆ ಅವುಗಳಿಗೆ ರಕ್ಷಣೆ ಒದಗಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರಕ್ಕೆ ಡಿಸಿಎಂ ಮನವಿ
ಅಣೆಕಟ್ಟುಗಳ ಸುರಕ್ಷತೆ ಕೇವಲ ರಾಜ್ಯದ ವಿಷಯವಾಗಿರದೆ, ಇದೊಂದು ರಾಷ್ಟ್ರೀಯ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಕೂಡ ಹಣಕಾಸಿನ ನೆರವು ನೀಡಿದೆ. ಅಣೆಕಟ್ಟಿನ ಸುತ್ತಮುತ್ತಲಿನ 500 ಮೀಟರ್ ವ್ಯಾಪ್ತಿಯನ್ನು ಬ್ಲಾಕ್ ಮಾಡಲಾಗಿದ್ದು, ಈ ಕುರಿತು ಕೇಂದ್ರ ಸರ್ಕಾರವು ವಿಶೇಷ ಗಮನಹರಿಸಬೇಕು ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದರು. ಸುಸ್ಥಿರ ಅಭಿವೃದ್ಧಿಗೆ ನೀರಿನ ನಿರ್ವಹಣೆ ಅತ್ಯಗತ್ಯವಾಗಿದ್ದು, ಅಣೆಕಟ್ಟು ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.
ಸುಸ್ಥಿರ ಅಭಿವೃದ್ಧಿಯತ್ತ ಕೇಂದ್ರದ ಚಿತ್ತ
ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ಮಾತನಾಡಿ, ದೇಶದ ಬಹುತೇಕ ಅಣೆಕಟ್ಟುಗಳು ನಾಲ್ಕು ದಶಕಗಳನ್ನು ಪೂರೈಸಿವೆ. ಭೂ ಸ್ವಾಧೀನ ಮತ್ತು ಸಂತ್ರಸ್ತರಿಗೆ ಪರಿಹಾರ ನೀಡುವ ಸಂದರ್ಭದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು. ಹಣಕಾಸು ಮತ್ತು ಅಭಿವೃದ್ಧಿ ಸಂಸ್ಥೆಗಳು ಗುಣಮಟ್ಟವನ್ನು ಕಾಯ್ದುಕೊಂಡು ಕಾರ್ಯನಿರ್ವಹಿಸಬೇಕು ಹಾಗೂ ಇಂತಹ ಸಮ್ಮೇಳನಗಳಲ್ಲಿ ನಡೆಯುವ ಚರ್ಚೆಗಳು ಅಣೆಕಟ್ಟುಗಳ ಸುರಕ್ಷತೆಗೆ ಅಗತ್ಯವಾದ ಸಲಹೆಗಳನ್ನು ನೀಡುವಂತಾಗಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ದೆಹಲಿಯ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ವಿಶ್ವಬ್ಯಾಂಕ್ ಉಪಾಧ್ಯಕ್ಷ ಜೊಹನ್ನೆಸ್ ಕಾರ್ನೆಲ್ಸ್ ಮಾರಿಯಾ ಜಟ್, ಕೇಂದ್ರ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಸುಬೋಧ್ ಯಾದವ್, ಕೇಂದ್ರ ಜಲ ಆಯೋಗದ ಮುಖ್ಯಸ್ಥ ಅನುಪಮ್ ಪ್ರಸಾದ್, ಜಪಾನಿನ ಐಸಿಹೆಚ್‌ಎಆರ್‌ಎಂ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ತೊಶಿಯೋ ಕೊಯ್ಕೆ, ಭಾರತೀಯ ವಿಜ್ಞಾನ ಸಂಸ್ಥೆಯ ಡೀನ್ ಪ್ರೊ. ಸತ್ಯಂ ಸುವಾಸ್ ಸೇರಿದಂತೆ ದೇಶ-ವಿದೇಶಗಳ ಹಲವು ಗಣ್ಯರು ಮತ್ತು ತಜ್ಞರು ಉಪಸ್ಥಿತರಿದ್ದರು.

